ಅಧಿಕಾರಿಗಳ ಬೆನ್ನುಹತ್ತಿ ಕೆಲಸ ಮಾಡಿಸಿಕೊಳ್ಳಿ

7

ಅಧಿಕಾರಿಗಳ ಬೆನ್ನುಹತ್ತಿ ಕೆಲಸ ಮಾಡಿಸಿಕೊಳ್ಳಿ

Published:
Updated:

ಶಿಕಾರಿಪುರ: ರೈತರಿಗೆ ಭೂಮಿಯ ಹಕ್ಕುಪತ್ರ ವಿತರಿಸಲಾಗುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಕಿವಿಮಾತು ಹೇಳಿದರು.

ತಾಲ್ಲೂಕಿನ ಕಟ್ಟಿಗೆಹಳ್ಳ ಗ್ರಾಮದಲ್ಲಿ ಮಂಗಳವಾರ ಶರಾವತಿ ಜಲ ವಿದ್ಯುತ್‌ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಸಾಗುವಳಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಭೂಮಿ ಹಕ್ಕು ಪಡೆಯುವುದು ತುಂಬಾ ಕಷ್ಟದ ಕೆಲಸ. ಹಕ್ಕುಪತ್ರ ದೊರೆತ ಫಲಾನುಭವಿಗಳು ಸರ್ವೆ ಮಾಡುವವರನ್ನು ಕರೆದುಕೊಂಡು ಬಂದು ಭೂಮಿಯನ್ನು ಪಕ್ಕಾ ಪೋಡಿ ಮಾಡಿಸುವ ಬಗ್ಗೆ ಗಮನಹರಿಸಬೇಕು. ಅಧಿಕಾರಿಗಳ ಬೆನ್ನುಹತ್ತಿ ಕೆಲಸ ಮಾಡಿಸಿಕೊಳ್ಳಬೇಕು. ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.

‘ನಿಮಗೆ ಹಕ್ಕುಪತ್ರ ನೀಡಲು ಇದ್ದ ಸಮಸ್ಯೆಗಳನ್ನು ಬಗೆಹರಿಸಲು ಹಿಂದಿನ ಅರಣ್ಯ ಇಲಾಖೆ ಕಾರ್ಯದರ್ಶಿಯಾಗಿದ್ದ ಮದನ್‌ಗೋಪಾಲ್‌ ಸಹಕಾರ ನೀಡಿದ್ದರು. ಸಂಸದ ಬಿ.ಎಸ್‌.ಯಡಿಯೂರಪ್ಪ ಕೂಡ ಈ ಪ್ರದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ನಿಮ್ಮನ್ನು ಒಕ್ಕಲೆಬ್ಬಿಸದಂತೆ ರಕ್ಷಣೆ ನೀಡಿದ್ದಾರೆ’ ಎಂದು ಶ್ಲಾಘಿಸಿದ ಅವರು, ‘ಇಂದು ನಿಮಗೆ ಹಕ್ಕುಪತ್ರ ನೀಡಿದ್ದು ನನಗೆ ಸ್ವರ್ಗ ಸಿಕ್ಕಂತಾಗಿದೆ’

ಎಂದು ಹೇಳಿದರು.

ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿ, ‘ಪ್ರಸ್ತುತ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ದೊರೆಯಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಸಂಸದ ಬಿ.ಎಸ್‌.ಯಡಿಯೂರಪ್ಪ ಕಾರಣರಾಗಿದ್ದಾರೆ. ಈ ಗ್ರಾಮಗಳಿಗೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಶಾಸಕನಾಗಿ ಗಮನ ನೀಡುತ್ತಿದ್ದೇನೆ’ ಎಂದರು.

‘ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ಸರ್ಕಾರ ನಿಮಗೆ ಹಕ್ಕು ಪತ್ರ ನೀಡಿದೆ. ಹಕ್ಕುಪತ್ರ ಪರಭಾರೆ ಮಾಡಬೇಡಿ. ಹಕ್ಕುಪತ್ರ ದೊರೆಯದಿದ್ದವರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನೀವು ಸಾಗುವಳಿ ಮಾಡುತ್ತಿರುವ ಭೂಮಿಯಿಂದ ಒಕ್ಕಲೆಬ್ಬಿಸಲು ಅಧಿಕಾರಿಗಳಿಗೆ ಬಿಡುವು ದಿಲ್ಲ’ ಎಂದು ಭರವಸೆ ನೀಡಿದರು.

ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ ಮಾತನಾಡಿ, ‘ಶರಾವತಿ ಮುಳುಗಡೆ ಪ್ರದೇಶದಿಂದ ನೀವು ಈ ಕಾಡಿಗೆ ಬಂದು ಕಷ್ಟದ ಜೀವನ ನಡೆಸಿದ್ದೀರಿ. ಹಲವರು ಕಂದಾಯ ಮಂತ್ರಿಗಳಾದರೂ ನಿಮ್ಮ ಕಷ್ಟ ಪರಿಹಾರ ಮಾಡಲಿಲ್ಲ. ಆದರೆ, ಕಾಗೋಡು ತಿಮ್ಮಪ್ಪ ನಿಮಗೆ ಹಕ್ಕುಪತ್ರ ಕೊಡುವ ಸಂಕಲ್ಪ ಮಾಡಿದ್ದಾರೆ. ನಿಮ್ಮ ಬಾಳಿಗೆ ಬೆಳಕು ಹಾಗೂ ಭದ್ರತೆ ನೀಡಿದ್ದಾರೆ’ ಎಂದು ಶ್ಲಾಘಿಸಿದರು.

‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯೆ ಅರುಂಧತಿ ರಾಜೇಶ್‌, ಮಾಜಿ ಸದಸ್ಯ ಕೆ.ಹಾಲಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪರಮೇಶ್ವರಪ್ಪ, ತಾಲ್ಲೂಕು ಪಂಚಾಯ್ತಿ ಚೋರಡಿ ಕ್ಷೇತ್ರದ ಸದಸ್ಯ ಮಂಜುನಾಥ್‌, ಗ್ರಾಮ ಪಂಚಾಯ್ತಿ ಅಧ್ಯಕ್ಷ ದ್ಯಾವನಕೆರೆ ಮಂಜಪ್ಪ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಕಟ್ಟಿಗೆಹಳ್ಳ ರಘುಪತಿ, ಕೆಡಿಪಿ ಸದಸ್ಯ ಉಮೇಶ್‌ ಕೋಡಿಹಳ್ಳಿ, ಎಪಿಎಂಸಿ ಅಧ್ಯಕ್ಷ ಸತೀಶ್‌, ಕಂದಾಯ ಇಲಾಖೆ ಅಧಿಕಾರಿಗಳಾದ ಚೇತನ್‌, ಮಂಜುನಾಥ್‌, ಶಶಿಕುಮಾರ್‌ ಉಪಸ್ಥಿತರಿದ್ದರು. ಕಟ್ಟಿಗೆಹಳ್ಳದ 185 ಮಂದಿ, ಬ್ಯಾಡನಾಳದ 27 ರೈತರು, ಚೋಡನಾಳ ಗ್ರಾಮದ 96 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

* * 

ಅಧಿಕಾರಿಗಳಿಂದ ಕೆಲಸ ಮಾಡಿಸುವುದು ತುಂಬಾ ಕಷ್ಟ. ಎತ್ತಿಗೆ ಕಟ್ಟುವಂತೆ ಅಧಿಕಾರಿಗಳಿಗೆ ಲಾಳ ಕಟ್ಟಿ ಕೆಲಸ ಮಾಡಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry