ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ಇಲ್ಲ

7

ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ಇಲ್ಲ

Published:
Updated:
ಕಾಮಗಾರಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ಇಲ್ಲ

ದೊಡ್ಡಬಳ್ಳಾಪುರ: ಆರ್ಥಿಕ ಇಲಾಖೆಯ ಅನುಮೋದನೆ ಇಲ್ಲದೆ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಜನರು ಶಕುಸ್ಥಾಪನೆಗಳನ್ನು ನಂಬಿ ಮೋಸ ಹೋಗಬಾರದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಅವರು ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ 14ನೇ ಹಣಕಾಸು ಯೋಜನೆಯಲ್ಲಿ ರಾಜ್ಯಕ್ಕೆ ₹3 ಲಕ್ಷ ಕೋಟಿ ನೀಡಲಾಗಿದೆ. ಮುಖ್ಯಮಂತ್ರಿಗಳು ಎರಡುವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇಷ್ಟೆಲ್ಲ ಹಣ ಎಲ್ಲಿಗೆ ಹೋಗಿದೆ ಎನ್ನುವುದೇ ತಿಳಿಯುತ್ತಿಲ್ಲ. ರಾಜ್ಯ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ನೀಡಲಾಗಿದ್ದ ಶೇ 75ರಷ್ಟು ಹಣ ಇನ್ನೂ ಖರ್ಚಾಗಿಲ್ಲ ಎಂದರು.

ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ಬಿಜೆಪಿಗೆ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಆಶೀರ್ವಾದ ಇರುವುದರಿಂದ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಆಯ್ಕೆಯಾಗುವುದು ಖಚಿತ. ಇದರಿಂದ ಕಾರ್ಯಕರ್ತರಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಇದ್ದ ಗೊಂದಲಗಳು ನಿವಾರಣೆಯಾಗಿದೆ. ದೊಡ್ಡಬಳ್ಳಾಪುರ ಕ್ಷೇತ್ರದ ಯಾವುದೇ ಹಳ್ಳಿಗೆ ಹೋದರು ಕುಡಿಯುವ ನೀರು ದೊರೆಯದಿದ್ದರೂ ಮದ್ಯದ ಬಾಟಲಿಗಳು ದೊರೆಯುತ್ತಿವೆ. ಇದರಿಂದ ಮಹಿಳೆಯರು ನಿತ್ಯ ಕಣ್ಣೀರಿನಲ್ಲಿ ಬದುಕು ಸಾಗಿಸುವಂತಾಗಿದೆ ಎಂದರು.

ಶಾಸಕ ಆರ್‌.ಅಶೋಕ್‌ ಮಾತನಾಡಿ, ಗೌರಿಲಂಕೇಶ್‌, ಎಂ.ಎಂ.ಕಲಬುರ್ಗಿ ಸೇರಿದಂತೆ ಹಲವಾರು ಸಾಹಿತಿಗಳ, ಅಧಿಕಾರಿಗಳ ಹಾಗೂ ಹಿಂದು ಕಾರ್ಯಕರ್ತರ ಅತ್ಯೆಗಳು ನಡೆದಿವೆ. ಯಾವುದೇ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸಿಲ್ಲ. ಕೇಂದ್ರದ ತನಿಖೆಗೂ ಒಪ್ಪಿಸಿಲ್ಲ. ಇದರಿಂದ ಜನರಿಗೆ ರಾಜ್ಯದ ಪೊಲೀಸ್‌ ಇಲಾಖೆಯ ಮೇಲೆ ಇದ್ದ ನಂಬಿಕೆ ಹುಸಿಯಾಗಿದೆ ಎಂದರು.

ಬಿಜೆಪಿ ಹಿರಿಯ ಮುಖಂಡ ಜೆ.ನರಸಿಂಹಸ್ವಾಮಿ ಮಾತನಾಡಿ, ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಜಕ್ಕಲಮೊಡಗು ಯೋಜನೆ ಹಣಕಾಸಿನ ತೊಂದರೆಯಿಂದ ನಿಂತು ಹೋಗಿದ್ದಾಗ ₹5 ಕೋಟಿ ನೀಡಿ ಯೋಜನೆ ಪೂರ್ಣಗೊಳಿಸಿದ್ದು ಯಡಿಯೂರಪ್ಪ ಅವರು ಎಂದರು.

ಈಗಿನ ಕಾಂಗ್ರೆಸ್‌ ಶಾಸಕರು ನಗರಕ್ಕೆ ಕುಡಿಯುವ ನೀರು ತಂದಿದ್ದು, ನಾನೇ ಎಂದು ಸುಳ್ಳು ಹೇಳುವ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕ ಆರ್‌.ಎಸ್‌.ವಿಶ್ವನಾಥ್‌, ಬಿಜೆಪಿ ಮುಖಂಡರಾದ ಬಿ.ಎನ್‌.ಬಚ್ಚೇಗೌಡ, ಕುಮಾರ್‌ ಬಂಗಾರಪ್ಪ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ರೇಣುಕಾಚಾರ್ಯ, ಅಬ್ದುಲ್‌ ಅಜೀಂ, ನರೇಂದ್ರಬಾಬು, ಗೋವಿಂದ ಕಾರಜೋಳ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ, ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ನಗರ ಘಟಕದ ಅಧ್ಯಕ್ಷ ಕೆ.ಎಚ್‌.ರಂಗರಾಜು ಸೇರಿದಂತೆ ನಗರಸಭೆ ಸದಸ್ಯರು, ಪಂಚಾಯಿತಿ ಸದಸ್ಯರು ಇದ್ದರು.

ನೀರಾವರಿಗೆ ಕೇಂದ್ರದಿಂದ ₹1 ಲಕ್ಷ ಕೋಟಿ

ಬಿಎಸ್‌.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಮಹಿಳೆಯರು ಹಗಲಿನ ವೇಳೆಯಲ್ಲಿಯೇ ಒಂಟಿಯಾಗಿ ಓಡಾಡಲು ಸಾಧ್ಯ ಇಲ್ಲ. ಕಾಂಗ್ರೆಸ್‌ ಮನೆಗೆ ಹೋದ ಮೇಲೆ ರಾಜ್ಯದಲ್ಲಿ ಅಚ್ಛೆ ದಿನ್‌ ಬರಲಿದೆ ಎಂದರು.

ರಾಜ್ಯದ 194 ಕ್ಷೇತ್ರಗಳಲ್ಲಿ ಯಾತ್ರೆ ನಡೆಸಿದಾಗ ಕಂಡುಕೊಂಡಿರುವ ಜನರ ಸಮಸ್ಯೆಗಳನ್ನು ಫೆಬ್ರುವರಿ 4 ರಂದು ರಾಜ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿದಾಗ ಅವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುವುದು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ 1 ಲಕ್ಷ ಕೋಟಿ ಅನುದಾನ ತರಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry