ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳುಬಿದ್ದ ಶಿಕ್ಷಕರ ವಸತಿ ಗೃಹ

Last Updated 17 ಜನವರಿ 2018, 7:23 IST
ಅಕ್ಷರ ಗಾತ್ರ

ಕಮಲನಗರ: ಸಮೀಪದ ಠಾಣಾಕುಶನೂರ್‌ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಿರುವ ಶಿಕ್ಷಕರ ವಸತಿ ಗೃಹ (ಗುರುಭವನ), ಈಗ ಹಾಳುಬಿದ್ದಿದೆ. ಆರು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಶಿಕ್ಷಕರು ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ.

2009–10ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ (ಎಸ್‌.ಡಿ.ಪಿ) ಯೋಜನೆ ಅಡಿ ₹ 47.68 ಲಕ್ಷ ವೆಚ್ಚದಲ್ಲಿ ರಾಯಚೂರು ಜಿಲ್ಲೆಯ ಶಕ್ತಿನಗರ ಕ್ಯಾಷ್‌ಟೆಕ್‌ ಸಂಸ್ಥೆಯು ಈ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಿದೆ.

‘ವಸತಿ ಗೃಹದಲ್ಲಿ ಎಲ್ಲ ಮೂಲಸೌಕರ್ಯಗಳಿವೆ. ವಸತಿ ಗೃಹದ ಪಕ್ಕದಲ್ಲಿ ಕೊಳವೆ ಬಾವಿ ತೊಡಿಲಾಗಿದೆ. ಕುಡಿಯುವ ನೀರಿಗಾಗಿ ಎರಡು ಟ್ಯಾಂಕ್‌ಗಳನ್ನು ಅಳವಡಿಸಲಾಗಿದೆ. ಪ್ರತೇಕ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿ ವಾಸಿಸುವ ಶಿಕ್ಷಕರಿಗಾಗಿ ಸುಸಜ್ಜಿತ ಕ್ರೀಡಾಂಗಣವೂ ಇದೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ಶಿಕ್ಷಕರು ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿರುವುದರಿಂದ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ’ ಎನ್ನುತ್ತಾರೆ ಸ್ಥಳೀಯರು.

ಗುರುಭವನ ಗ್ರಾಮದಿಂದ ಅರ್ಧ ಕಿಲೋ ಮೀಟರ್‌ ದೂರದಲ್ಲಿರುವ ಕಾರಣ ಹಾಗೂ ಸಂಬಳದ ಮೂಲ ವೇತನದಲ್ಲಿ ಮನೆ ಬಾಡಿಗೆ ಕಡಿಮೆಯಾಗುತ್ತದೆ ಎನ್ನುವ ಮತ್ತೊಂದು ಕಾರಣದಿಂದಲೂ ಯಾವ ಶಿಕ್ಷಕರು ಇಲ್ಲಿ ವಾಸಿಸಲು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ.

‘ಕಟ್ಟಡದ ಸುತ್ತ ಮುಳ್ಳುಕಂಟಿ ಬೆಳೆದಿವೆ. ಕೋಣೆಗಳಿಗೆ ಅಳವಡಿಸಿದ ಬೀಗ ಮುರಿಯಲಾಗಿದೆ. ಇಸ್ಪೀಟ್‌ ಎಲೆಗಳು, ಮದ್ಯದ ಖಾಲಿ ಬಾಟಲಿಗಳು,ಕಾಂಡೋಮ್‌ಗಳು ಕೋಣೆಗಳಲ್ಲಿ ಬಿದ್ದಿವೆ. ಕೆಲ ಕಿಡಿಗೇಡಿಗಳು ಕೋಣೆಗಳಲ್ಲಿ ಮಲ ವಿಸರ್ಜನೆ ಮಾಡುತ್ತಿದ್ದಾರೆ’ ಎಂದು ಮುಖಂಡ ಜಗನ್ನಾಥ ಜೀರ್ಗೆ ಹೇಳಿದರು.

‘ಕೋಣೆಗಳಿಗೆ ಕಲ್ಪಿಸಿದ್ದ ವಿದ್ಯುತ್‌ ವೈರ್‌, ವಿದ್ಯುತ್‌ ಮೀಟರನ್ನು ಕಿಡಿಗೇಡಿಗಳು ಕಿತ್ತುಹಾಕಿದ್ದಾರೆ. ಕುಡಿಯುವ ನೀರು ಪೂರೈಕೆಗಾಗಿ ಅಳವಡಿಸಿದ್ದ ಪೈಪ್‌ಗಳನ್ನು ಹಾಳು ಮಾಡಲಾಗಿದೆ. ಕಿಟಕಿ ಮತ್ತು ಬಾಗಿಲುಗಳನ್ನು ಮುರಿಯಲಾಗಿದೆ. ಹೀಗಾಗಿ ಇಲ್ಲಿನ ಕೋಣೆಗಳನ್ನು ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಇಲ್ಲಿನ ಗೋಡೆಗಳ ಮೇಲೆ ಅಶ್ಲೀಲ ಅಕ್ಷರ ಹಾಗೂ ಚಿತ್ರಗಳನ್ನು ಬಿಡಿಸಿ ಹಾಳು ಮಾಡಲಾಗಿದೆ. ಇಷ್ಟಾದರೂ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಹೇಶ್‌ ಬೋಚರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುಭವನದಲ್ಲಿ ಶಿಕ್ಷಕರು ವಾಸಿಸಲು ಕ್ರಮ ಕೈಗೊಂಡು, ಸರ್ಕಾರ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಿದ ಕಟ್ಟಡದ ಜೀರ್ಣೋದ್ಧಾರಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

* * 

ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಗುರುಭವನ ಉಪಯೋಗವಾಗುವಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು
ರಾಮಶೆಟ್ಟಿ ಪನ್ನಾಳೆ,
ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT