ಕ್ರಿಯಾಶೀಲವಾಗುತ್ತೇನೆ

7

ಕ್ರಿಯಾಶೀಲವಾಗುತ್ತೇನೆ

Published:
Updated:
ಕ್ರಿಯಾಶೀಲವಾಗುತ್ತೇನೆ

ಸದಾ ಓಡುತ್ತಿರುವ ನಮಗೆ, ಅರೆಕ್ಷಣ ನಿಂತು, ಎಲ್ಲಿಗೆ ಹೋಗಬೇಕಿತ್ತು? ಹೊರಟಿರುವುದೆತ್ತ? ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಪರ್ವಕಾಲ ಹೊಸವರ್ಷ ಎಂದರೆ ತಪ್ಪಿಲ್ಲ.

ಸಾಕಷ್ಟು ಮಂದಿಯಂತೆ ನಾನೂ ಹೊಸ ವರ್ಷಕ್ಕೆ ಪ್ರತಿಜ್ಞೆ ಕೈಗೊಂಡು ಈಡೇರಿಸಲಾಗದ ಅನೇಕ ಉದಾಹರಣೆಗಳಿವೆ. ಈ ವರ್ಷ ಹಾಗೆ ಆಗಬಾರದೆಂಬ ಹೊಸ ಪ್ರತಿಜ್ಞೆ ನನ್ನದು.

ಸುಮ್ಮನೆ ಕವಿತೆ ಗೀಚುವ ಹವ್ಯಾಸ ನನಗಿದೆ. ಆ ಹವ್ಯಾಸವನ್ನು ಮತ್ತಷ್ಟು ಒರೆಗೆ ಹಚ್ಚುವ ಕೆಲಸ ಈ ವರ್ಷ ಆಗಬೇಕಿದೆ. ಹಲವು ಪುಸ್ತಕಗಳನ್ನು ಓದಬೇಕೆಂದಿರುವೆ.

ಕೆಲಸ, ಮನೆ, ಜವಾಬ್ದಾರಿ, ಸಮಯವೇ ಸಿಗುತ್ತಿಲ್ಲ ಎಂಬ ನೆಪ ಹೇಳದೆ ಸಿಕ್ಕ ಸಮಯದಲ್ಲಿ ಹೆಚ್ಚು ಓದಬೇಕೆಂಬುದಕ್ಕೆ ಮನಸನ್ನು ಸಿದ್ಧಗೊಳಿಸಿದ್ದೇನೆ.

‘ಕಾಲಾಯ ತಸ್ಮೈ ನಮಃ’ ಎಂಬಂತೆ ಬಂದುದನ್ನು ನಗುತ್ತ ಸ್ವೀಕರಿಸಬೇಕೆಂಬ ಸಂಕಲ್ಪ ಕೂಡ ಇದೆ. ಬಿಡುವೇ ಇಲ್ಲ, ಸಾಕಾಗಿದೆ ಎಂಬುದನ್ನು ಬದಿಗಿಟ್ಟು ಇನ್ನಷ್ಟು ಕ್ರಿಯಾಶೀಲವಾಗಲು ಹಾಗೂ ಮಾಡುವ ಕೆಲಸವನ್ನು ಖುಷಿಯಿಂದ ಮಾಡಬೇಕು ಎಂದುಕೊಂಡಿದ್ದೇನೆ. ‘ಬಾರದು ಬಪ್ಪದು ಬಪ್ಪದು ತಪ್ಪದು’ ಎಂದರಿತು ಭೂತ ಭವಿಷ್ಯದ ಚಿಂತೆ ಬಿಟ್ಟು, ಇಂದು ಒಂದಡಿಯಾದರೂ ಮುಂದಿಡಬೇಕೆಂಬ ಮನಸ್ಥಿತಿಯಿಂದ ನಡೆಯಬೇಕೆಂದಿದ್ದೇನೆ.

-ಮಲ್ಲಮ್ಮ ಜೆ. ಬಾಗಲಕೋಟ

*

ಬದುಕು ಬದಲಿಸಬೇಕು

ಈ ವರ್ಷ ನನ್ನ ಬದುಕಿನ ಸುವರ್ಣ ಕ್ಷಣಗಳೆನಿಸಿದ್ದ ವಿದ್ಯಾರ್ಥಿ ಜೀವನ ಅಂತ್ಯಗೊಳ್ಳಲಿದೆ. 14 ವರ್ಷಗಳ ಹಾಸ್ಟೆಲ್ ಜೀವನದಿಂದ ಮುಕ್ತಿ ಪಡೆಯುತ್ತಿರುವೆ. ಆದ್ದರಿಂದ ಈ ಬಾರಿ ಹೆಚ್ಚು ಸವಾಲುಗಳೂ ನನ್ನೆದುರು ಇರಲಿವೆ. ಈ ವರ್ಷದ ಮಧ್ಯದಲ್ಲಿ ವೃತ್ತಿ ಆರಂಭಿಸಬೇಕೆಂದು ನಿರ್ಧರಿಸಿರುವೆ. ಎಂದಿನಂತೆ ಆರಂಭಶೂರತ್ವ ತೋರಿಸಬಾರದು ಎಂಬುದೇ ನನ್ನ ಮೊದಲ ನಿರ್ಧಾರ.

ಪದವಿ ಕೊನೆಯ ಸೆಮಿಸ್ಟರ್‌ನಲ್ಲಿರುವುದರಿಂದ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಡುವೆ. ನನ್ನ ವೃತ್ತಿಬದುಕಿಗೆ ಬೇಕಾದ ಎಲ್ಲ ಕೌಶಲಗಳ ಕಲಿಕೆಗೆ ಒತ್ತು ನೀಡುತ್ತೇನೆ. ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಳ್ಳಬೇಕೆಂದುಕೊಂಡಿದ್ದೇನೆ. ಅನಿಯಮಿತ ಆಹಾರ ಸೇವನೆ, ಅತಿ ನಿದ್ರೆಯಿಂದಾಗಿ ಅನಾರೋಗ್ಯದಿಂದ ಬಳಲಿ ಸಮಯದ ನಷ್ಟ ಅನುಭವಿಸಿರುವುದನ್ನು ನಾನು ಮರೆತಿಲ್ಲ. ಆದ್ದರಿಂದ ಈ ಬಾರಿ ಆರೋಗ್ಯಕ್ಕೆ ಹೆಚ್ಚಿನ ನಿಗಾ ಕೊಡುವೆ. ಪ್ರತಿದಿನ ಮಿತಿಮೀರಿ ವ್ಯಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಬಳಕೆಯಿಂದ ಹೆಚ್ಚಿನ ಸಮಯವನ್ನು ಕಳೆದದ್ದು ಚೆನ್ನಾಗಿ ನೆನಪಿದೆ.

ಸಾಮಾಜಿಕ ಜಾಲತಾಣಗಳನ್ನು ಎಷ್ಟು ಬೇಕೋ ಅಷ್ಟೇ ಬಳಸುತ್ತೇನೆ. ಅವುಗಳಿಗೆ ವ್ಯಸನವಾಗದಂತೆ ನನ್ನ ಮೇಲೆ ನಿರ್ಬಂಧ ಹೇರಿಕೊಂಡಿದ್ದೇನೆ. ಪ್ರತಿದಿನ ವ್ಯಾಯಾಮದಿಂದ ದೇಹವನ್ನು ಹುರಿಗೊಳಿಸುವ ಪ್ರತಿಜ್ಞೆ ಮಾಡಿದ್ದೇನೆ. ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡುವ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳುತ್ತೇನೆ.

ಈ ವರ್ಷ, ಒಂದಷ್ಟು ಸಮಯವನ್ನು ಹೊಸ ಜನರು, ಹೊಸ ಸ್ಥಳಗಳನ್ನು ಭೇಟಿ ಮಾಡಲು ಮೀಸಲಿಡುತ್ತೇನೆ. ಒಟ್ಟಿನಲ್ಲಿ ಸಮಯವನ್ನು ವ್ಯರ್ಥ ಮಾಡದೇ ನನ್ನ ಬದುಕನ್ನು ಬದಲಿಸಿಕೊಳ್ಳಬೇಕು ಎಂಬುದೇ ಈ ವರ್ಷದ ನಿರ್ಣಯ.

-ಹನಮಂತ ಕೊಪ್ಪದ ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry