ಸಣ್ಣ ಓದು, ನಿದ್ದೆಗೆ ಈ ಬಾರ್

7

ಸಣ್ಣ ಓದು, ನಿದ್ದೆಗೆ ಈ ಬಾರ್

Published:
Updated:
ಸಣ್ಣ ಓದು, ನಿದ್ದೆಗೆ ಈ ಬಾರ್

ಮಧ್ಯಾಹ್ನ ಹೊಟ್ಟೆ ತುಂಬಾ ಊಟವಾದ ನಂತರ ಕಣ್ಣಿಗೆ ಸಣ್ಣದಾಗಿ ಜೋಂಪು ಆವರಿಸುತ್ತದೆ. ಕೆಲಸಕ್ಕೆ ಹೋಗುವವರಿಗಂತೂ ಅತಿಯಾಗಿ ಕಾಡುವ ಈ ತೂಕಡಿಕೆ ತಡೆಯುವುದು ಭಾರಿ ತ್ರಾಸದಾಯಕ. ಒಂದೇ ಒಂದು ಸಣ್ಣ ನಿದ್ದೆಗೆ ಎಷ್ಟೆಲ್ಲಾ ಕಷ್ಟ!

ಆದರೆ, ‘ಪ್ರಪಂಚದಲ್ಲಿ ಎಲ್ಲರೂ ಅತಿ ಪ್ರೀತಿಸುವ ಸಂಗತಿ ಎಂದರೆ ನಿದ್ದೆ. ಆ ಪ್ರೀತಿಯನ್ನು ಬೇಕಿದ್ದ ಜನರಿಗೆ ಹಂಚಬೇಕಿದೆ’ ಎನ್ನುತ್ತಲೇ ನಿದ್ದೆ ಮಾಡುವವರಿಗೆಂದೇ ಒಂದು ಜಾಗವನ್ನು ರೂಪಿಸಲಾಗಿದೆ. ಮೊಟ್ಟ ಮೊದಲ ಬಾರಿಗೆ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಿದ್ದೆಗೆಂದೇ ‘ನ್ಯಾಪ್ ಬಾರ್’ ತೆರೆಯಲಾಗಿದೆ.

ಇದರ ಹೆಸರು ಸೀಸ್ಟ ಅಂಡ್ ಗೋ. ನಿದ್ದೆಯ ಅವಶ್ಯಕತೆ, ಪ್ರಾಮುಖ್ಯವನ್ನು ಗಂಭೀರವಾಗಿ ಕಂಡುಕೊಂಡು ಈ ಬಾರ್‌ ಅನ್ನು ರೂಪಿಸಲಾಗಿದೆಯಂತೆ.

ನಿದ್ದೆ ಎಂದರೆ ಖುಷಿ, ನೆಮ್ಮದಿ. ಆದ್ದರಿಂದ ಈ ಪುಟ್ಟ ಸಂತೋಷವನ್ನು ನೀಡುವ ಕಾಯಕವನ್ನು ಈ ಬಾರ್ ಮಾಡುತ್ತಿದೆಯಂತೆ. ಆದರೆ ಈ ಸಂತೋಷಕ್ಕೆ ಭಾರೀ ಬೆಲೆಯನ್ನೂ ತೆರಬೇಕಿದೆ.

ಒಟ್ಟು 19 ಬೆಡ್‌ಗಳು ಈ ಬಾರ್‌ನಲ್ಲಿವೆ. ನಿಮ್ಮ ಹಣಕ್ಕೆ ಹಾಗೂ ಮನಸ್ಥಿತಿಗೆ ಅನುಗುಣವಾಗಿ ರೂಮನ್ನು ಖಾಸಗಿ ಅಥವಾ ಹಂಚಿಕೆ ಮಾಡಿಕೊಳ್ಳಬಹುದು. ಮಲಗಲು ಮನಸ್ಸಿಲ್ಲ, ಓದಬೇಕು ಎಂದರೆ ಅದಕ್ಕೂ ‘ರೀಡಿಂಗ್ ಸ್ಪೇಸ್’ ಇದೆ. ಸುಮ್ಮನೆ ಕೂರಬೇಕೆಂದು ಬಯಸುವವರಿಗೆ ಆರ್ಮ್ ಚೇರ್‌ಗಳಿವೆ. ಕೆಲಸ ಮಾಡಬೇಕು ಎನ್ನುವವರಿಗೆ ಪುಟ್ಟ ಜಾಗವನ್ನೂ ಬಾಡಿಗೆಗೆ ನೀಡಲಾಗುತ್ತದೆ. ಕಾಫಿ, ಬುಕ್, ಉಚಿತ ವೈಫೈ ಅನ್ನೂ ನೀಡುತ್ತಾರೆ. ಮುಂಚೆಯೇ ಬುಕ್ ಮಾಡುವ ಆಯ್ಕೆಯಿದೆ.

ಈಗಾಗಲೇ ಇದರ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಸ ಮಾಡುವವರು ಇಲ್ಲಿಗೆ ಬಂದು, ಸಣ್ಣ ನಿದ್ದೆಯನ್ನು ಕಣ್ತುಂಬ ತುಂಬಿಕೊಂಡು ಹೋಗುತ್ತಿದ್ದಾರಂತೆ.

ಲಂಡನ್, ಬ್ರಸಲ್, ಟೋಕಿಯೊ, ಇನ್ನಿತರ ನಗರಗಳಲ್ಲಿ ನ್ಯಾಪ್‌ ಬಾರ್ ಪರಿಕಲ್ಪನೆ ಗರಿಗೆದರುತ್ತಿದ್ದು, ಮೊದಲ ಬಾರಿಗೆ ಸ್ಪೇನ್‌ನಲ್ಲಿ ಪರಿಚಯಿಸಲಾಗಿದೆ.

ಆದರೆ ಕೆಲಸ ಮಾಡುವವರು ಇಲ್ಲಿಗೆ ಬಂದು ಅಪ್ಪಿತಪ್ಪಿ ಭಾರೀ ನಿದ್ದೆಯಲ್ಲಿ ತೇಲಿಹೋದರೆ ಮುಗಿಯಿತು! ಬೆಲೆ ಕೇಳಿಯೇ ನಿದ್ದೆ ಹಾರಿಹೋದರೂ ಹೋದೀತು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry