ಹೈಕೋರ್ಟ್‌ಗೆ ವಿ.ನಾಗರಾಜ್‌ ಮನವಿ

7

ಹೈಕೋರ್ಟ್‌ಗೆ ವಿ.ನಾಗರಾಜ್‌ ಮನವಿ

Published:
Updated:

ಬೆಂಗಳೂರು: ‘ನನ್ನ ಮಗನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗಬೇಕಿದ್ದು ಪೊಲೀಸ್‌ ಠಾಣೆ ಹಾಜರಿಗೆ ವಿನಾಯ್ತಿ ನೀಡಿ’ ಎಂದು ಕೋರಿ ಮಾಜಿ ರೌಡಿ ಶೀಟರ್‌ ವಿ.ನಾಗರಾಜ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ನನ್ನ ಮಗ ಎನ್.ಗಾಂಧಿ ಮದುವೆ ಜ.18 ಮತ್ತು 19ರಂದು ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದೆ. ಜ.18ರಂದು ಬೆಳಗ್ಗೆ 6.30ಕ್ಕೆ ಆರತಕ್ಷತೆ ನಡೆಯಲಿದೆ. ಜ.19ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಮುಹೂರ್ತ ಇದೆ. ಮದುವೆ  ಸಂದರ್ಭದಲ್ಲಿ ನಾನು ಕಲ್ಯಾಣ ಮಂಟಪದಲ್ಲಿ ಇರಬೇಕಿದ್ದು ಇದೇ ದಿನ ಶ್ರೀರಾಮಪುರ ಠಾಣೆಗೆ ಹಾಜರಾಗಲು ಆಗುವುದಿಲ್ಲ. ಆದ್ದರಿಂದ ಠಾಣೆಗೆ ಹಾಜರಿಗೆ ವಿನಾಯ್ತಿ ನೀಡಬೇಕು’ ಎಂದು ನಾಗರಾಜ್ ಕೋರಿದ್ದಾರೆ.

ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಆದರೆ, ವಿಚಾರಣೆಗೆ ನಿರಾಕರಿಸಿದ ನ್ಯಾಯಮೂರ್ತಿಗಳು, ‘ಜಾಮೀನು ಮಂಜೂರು ಮಾಡಿದ್ದ ನ್ಯಾಯಪೀಠವೇ ಈ ಅರ್ಜಿಯನ್ನು ವಿಚಾರಣೆ ನಡೆಸಲಿ’ ಎಂದರು.

‘ಈ ಮೊದಲು ಜಾಮೀನು ಮಂಜೂರು ಮಾಡಿದ್ದ ನ್ಯಾಯಮೂರ್ತಿ ರತ್ನಕಲಾ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಯನ್ನು ನಿಗದಿಪಡಿಸಿ’ ಎಂದು ಕೋರ್ಟ್ ಸಿಬ್ಬಂದಿಗೆ ಬೂದಿಹಾಳ್ ನಿರ್ದೇಶಿಸಿದರು.

‘ನಾಗರಾಜ್‌ ಅವರ ಪುತ್ರ ಮದುಮಗ ಎನ್.ಗಾಂಧಿ ಹಾಗೂ ಮತ್ತೊಬ್ಬ ಪುತ್ರ ಶಾಸ್ತ್ರಿ ಕೂಡಾ, ಶ್ರೀರಾಮಪುರ ಠಾಣೆಗೆ ಹಾಜರಾಗುವುದರಿಂದ ವಿನಾಯ್ತಿ ನೀಡಬೇಕು’ ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಗುರುವಾರ (ಜ.18) ನ್ಯಾಯಮೂರ್ತಿ ರತ್ನಕಲಾ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ. 2016ರ ನ.8ರಂದು ಅಮಾನ್ಯಗೊಂಡಿದ್ದ ₹ 500 ಹಾಗೂ 1,000 ರು.ಮುಖಬೆಲೆ ನೋಟುಗಳನ್ನು ಅಕ್ರಮವಾಗಿ ಬದಲಿಸಿದ ಪ್ರಕರಣದಲ್ಲಿ ಈ ಮೂವರೂ ಆರೋಪಿಗಳಾಗಿದ್ದಾರೆ.

‘ತನಿಖೆ ಪೂರ್ಣವಾಗುವರೆಗೂ ಪ್ರತಿ ಗುರುವಾರ ಶ್ರೀರಾಂಪುರ ಪೊಲೀಸ್ ಠಾಣೆಗೆ (ಕೆಲಸದ ಅವಧಿಯಲ್ಲಿ) ಹಾಜರಾಗಬೇಕು’ ಎಂಬ ಷರತ್ತು ವಿಧಿಸಿ ಹೈಕೋರ್ಟ್ ಈ ಆರೋಪಿಗಳಿಗೆ ಜಾಮೀನು ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry