ಮೂರು ತಿಂಗಳಲ್ಲಿ 18 ಮಕ್ಕಳಿಗೆ ‘ಜೀವಹನಿ’

7
ಅವಧಿಪೂರ್ವ ಜನನಕ್ಕೆ ಅನುಕೂಲ

ಮೂರು ತಿಂಗಳಲ್ಲಿ 18 ಮಕ್ಕಳಿಗೆ ‘ಜೀವಹನಿ’

Published:
Updated:
ಮೂರು ತಿಂಗಳಲ್ಲಿ 18 ಮಕ್ಕಳಿಗೆ ‘ಜೀವಹನಿ’

ಬೆಂಗಳೂರು: ರಾಜ್ಯದ ಏಕೈಕ ಎದೆ ಹಾಲಿನ ಬ್ಯಾಂಕ್‌ ‘ಅಮಾರ’ ಪ್ರಾರಂಭವಾದ ಮೂರು ತಿಂಗಳಲ್ಲಿ 18 ಮಕ್ಕಳಿಗೆ ನೆರವಾಗಿದೆ.

ಅವಧಿಪೂರ್ವ ಪ್ರಸವ ಪ್ರಕರಣ ಗಳಲ್ಲಿ ತಾಯಂದಿರು ಶಿಶುವಿನ ಅಗತ್ಯ ಪೂರೈಸುವಷ್ಟು ಹಾಲನ್ನು ಹೊಂದಿರುವುದಿಲ್ಲ. ಅಂತಹವರಿಗೆ ಈ ಬ್ಯಾಂಕ್‌ನಿಂದ ಅನುಕೂಲವಾಗುತ್ತಿದೆ.

ನಗರದ ಅಣ್ಣಪ್ಪ ಮತ್ತು ಶ್ವೇತಾ ಕಾಮತ್‌ ದಂಪತಿಗೆ ನವೆಂಬರ್‌ 24 ರಂದು ತ್ರಿವಳಿ ಮಕ್ಕಳು ಜನಿಸಿದ್ದವು. ಅವರು ಈ ಬ್ಯಾಂಕ್‌ನ ಸಹಾಯ ಪಡೆದಿದ್ದಾರೆ. ‘ಮೂರು ಮಕ್ಕಳಿಗೆ 250 ಮಿಲಿಲೀಟರ್‌ ಹಾಲನ್ನು ಪ್ರತಿದಿನ ನೀಡಬೇಕಿತ್ತು. ಆಗ ಬ್ಯಾಂಕ್‌ ನೆರವಾಯಿತು’ ಎಂದು ಶ್ವೇತಾ ಕಾಮತ್‌ ತಿಳಿಸಿದರು.

‘7ನೇ ತಿಂಗಳಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದೆ. ನನ್ನ ಹಾಲು ಒಂದು ಮಗುವಿಗೆ ಮಾತ್ರ ಸಾಕಾಗುತ್ತಿತ್ತು. ಇದರಿಂ ದಾಗಿ ಸಾಕಷ್ಟು ಒತ್ತಡ ಆಗುತ್ತಿತ್ತು. ಮಗುವಿಗೆ ಉಣಿಸಲು ಸಾಕಷ್ಟು ಹಾಲನ್ನು ಹೊಂದಿರದ ಪ್ರತಿಯೊಬ್ಬ ತಾಯಿಯೂ ಇಂತಹ ಹಾಲಿನ ಬ್ಯಾಂಕ್‌ ಇರಬೇಕು ಎಂದು ಹಂಬಲಿಸುತ್ತಾರೆ’ ಎಂದು ದೀಪಿಕಾ ರಾಘವೇಂದ್ರ ಅನಿಸಿಕೆ ಹಂಚಿಕೊಂಡರು.

ಇದುವರೆಗೆ 20 ತಾಯಂದಿರು ಬ್ಯಾಂಕ್‌ಗೆ ಎದೆಹಾಲು ದಾನ ಮಾಡಿ ದ್ದಾರೆ. ಸುಮಾರು 50,000 ಮಿಲಿ ಲೀಟರ್‌ ಹಾಲು ಸಂಗ್ರಹವಾಗಿದೆ. ನಗರದ 8 ಆಸ್ಪತ್ರೆಗಳಿಗೆ ಹಾಲು ಪೂರೈಸಿದ್ದೇವೆ ಎಂದು ಬ್ಯಾಂಕ್‌ ಮುಖ್ಯಸ್ಥ ಡಾ. ಶ್ರೀನಾಥ್‌ ಮಣಿಕಾಂತಿ ತಿಳಿಸಿದರು.

‘ಶಿಶುವಿಗೆ ತಾಯಿಯ ಹಾಲು ಸಾಲದಿದ್ದರೆ ಹಾಲಿನ ಪುಡಿಯಿಂದ ತಯಾರಿಸಿದ ಮಿಶ್ರಣ ನೀಡುವಂತೆ ವೈದ್ಯರು ಸಲಹೆ ನೀಡುತ್ತಾರೆ. ಎದೆಹಾಲು ಕುಡಿಸುವುದರಿಂದ ಶಿಶುಗಳಿಗೆ ಅನಾರೋಗ್ಯ ಉಂಟಾಗುವ ಅಪಾಯ ಕಡಿಮೆ. ಅನೇಕ ತಾಯಂದಿರು ಹೆಚ್ಚಾದ ಹಾಲನ್ನು ಹಿಂಡಿ ಚೆಲ್ಲುತ್ತಾರೆ. ಹಾಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ‘ಎದೆ ಹಾಲು ಚೆಲ್ಲದೆ, ದಾನ ಮಾಡಿ’ ಎಂದು ಬಾಣಂತಿಯರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಎದೆಹಾಲಿನ ಮಹತ್ವವನ್ನು   ತಿಳಿಸಿ ಮಾಹಿತಿ ನೀಡುವಂತೆ ಶುಶ್ರೂಷಕಿ ಯರನ್ನು ಕೋರುತ್ತಿದ್ದೇವೆ’ ಎಂದರು.

ಹಾಲು ಪಡೆಯಲು ಭಯ ಬೇಡ: ‘ಧೂಮಪಾನ ಅಥವಾ ಮಾದಕ ವಸ್ತು ವ್ಯಸನ ಹೊಂದಿದ ತಾಯಂದಿರ ಹಾಲನ್ನು ನಾವು ಸ್ವೀಕರಿಸುವುದಿಲ್ಲ. ಹಾಲಿನಿಂ ದಲೂ ಕೆಲವು ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ದಾನಿಗಳನ್ನು ತಪಾಸಣೆಗೆ ಒಳಪಡಿಸಿದ ನಂತರವೇ ಹಾಲು ಪಡೆಯುತ್ತೇವೆ ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

‘ಎದೆ ಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಇದೇ ಪ್ರಮಾಣದಲ್ಲಿ ದಾನಿಗಳ ಸಂಖ್ಯೆಯೂ ಹೆಚ್ಚಬೇಕು. ತೀರಾ ಅಗತ್ಯವಿರುವ ಮಕ್ಕಳಿಗೆ ಮಾತ್ರ ಸದ್ಯ ಹಾಲು ಪೂರೈಸುತ್ತಿದ್ದೇವೆ. 26ನೇ ವಾರದಲ್ಲಿ, 28ನೇ ವಾರದಲ್ಲಿ  ಮತ್ತು 30 ನೇ ವಾರದಲ್ಲಿ ಹುಟ್ಟಿದ ಮಕ್ಕಳಿಗೆ ಏಕಕಾಲದಲ್ಲಿ ಬೇಡಿಕೆ ಬಂದಾಗ ನಾವು 26ನೇ ವಾರದಲ್ಲಿ ಹುಟ್ಟಿದ ಮಗುವಿಗೆ ಹಾಲು ಪೂರೈಸಲು ಆದ್ಯತೆ ನೀಡುತ್ತೇವೆ’ ಎಂದರು.

ಮನೆಯಿಂದಲೇ ಹಾಲು ಸಂಗ್ರಹ:  ತಾಯಂದಿರು ಹಾಲನ್ನು ನೀಡಲು ನಮ್ಮ ಕೇಂದ್ರಕ್ಕೆ ಬರುವ ಅಗತ್ಯವಿಲ್ಲ. ನಾವೇ ಮನೆಗೆ ಹೋಗಿ ರಕ್ತ ಪರೀಕ್ಷಿಸಿ ಹಾಲು ಸಂಗ್ರಹಿಸಲು ಪಂಪ್‌ಗಳನ್ನು ನೀಡುತ್ತೇವೆ. ‘ಮಗುವಿಗೆ ಹಾಲು ಕುಡಿಸಿದ ಬಳಿಕ ಹೆಚ್ಚುವರಿ ಹಾಲನ್ನು ಸಂಗ್ರಹಿಸಿ, ರೆಫ್ರಿಜರೇಟರ್‌ನಲ್ಲಿ ಇಡಬೇಕು. ಕರೆ ಮಾಡಿದರೆ ನಾವೇ ಸ್ಥಳಕ್ಕೆ ಹೋಗುತ್ತೇವೆ. ನಂತರ ಅದನ್ನು ಸಂಸ್ಕರಣೆಗೆ ಒಳಪಡಿಸಿ,ಶೇಖರಿಸಿಡುತ್ತೇವೆ’ ಎಂದರು.

ತೃಪ್ತಿ ಸಿಕ್ಕಿದೆ: ‘ನನ್ನ ಮಗುವಿಗೆ ಉಣಿಸಿದ ನಂತರವೂ ಹಾಲು ಸೋರುತ್ತಿತ್ತು. ಹಾಲನ್ನು ಹಿಂಡಿ ಹೊರ ಹಾಕುತ್ತಿದ್ದೆ. ಅಷ್ಟರಲ್ಲಿ ಶುಶ್ರೂಷಕಿಯೊಬ್ಬರು ಈ ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುವರಿ ಹಾಲನ್ನು ಚೆಲ್ಲುವ ಬದಲು ದಾನ ಮಾಡುವುದು ಒಳ್ಳೆಯದಲ್ಲವೇ ಎನ್ನಿಸಿತು. ಆಸ್ಪತ್ರೆಯಲ್ಲಿದ್ದಾಗ ದಿನಕ್ಕೆರಡು ಬಾರಿಯಂತೆ ಹತ್ತು ದಿನ ಹಾಲು ಕೊಟ್ಟಿದ್ದೇನೆ. ಇನ್ನೊಬ್ಬರ ಮಗುವಿಗೆ ನೆರವಾದ ತೃಪ್ತಿ ಸಿಕ್ಕಿದೆ’ ಎಂದು ದಾನಿಯೊಬ್ಬರು ಅನುಭವ ಹಂಚಿಕೊಂಡರು.

ಸರ್ಕಾರಿ ಆಸ್ಪತ್ರೆಗಳಿಗೆ ಉಚಿತ ಎದೆಹಾಲು

‘ಆಸ್ಪತ್ರೆಗಳಿಂದ ಬೇಡಿಕೆ ಬಂದರಷ್ಟೇ ಎದೆಹಾಲನ್ನು ನೀಡುತ್ತೇವೆ. ಪೋಷಕರಿಗೆ ನೇರವಾಗಿ ನೀಡುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ಒದಗಿಸುತ್ತೇವೆ. ಖಾಸಗಿ ಆಸ್ಪತ್ರೆಗಳಿಗೆ 130 ಎಂ.ಎಲ್‌ಗೆ ₹200 ದರ ವಿಧಿಸುತ್ತೇವೆ. ಹಾಲನ್ನು ಸಂಸ್ಕರಿಸಲು ತಗಲುವ ವೆಚ್ಚವನ್ನಷ್ಟೇ ಪಡೆಯುತ್ತೇವೆ’ ಎಂದು ಬ್ಯಾಂಕ್‌ನ ಸಹಸಂಸ್ಥಾಪಕ ಡಾ. ರಘುರಾಮ್‌ ಮಲ್ಲಯ್ಯ ತಿಳಿಸಿದರು.

‘ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಸೈಯದ್‌ ಅಜೀಜ್‌ ಅವರಮಗುವಿಗೆ 650 ಮಿ.ಲೀಟರ್‌ ಹಾಲನ್ನು ಉಚಿತವಾಗಿ ನೀಡಿದ್ದೇವೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry