ಕೊಲ್ಲಾಪುರಕ್ಕೆ ಒಲಿದ ‘ಸುತ್ತೂರು ಕೇಸರಿ’

7
ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರೋಚಕ ಕುಸ್ತಿ ಪಂದ್ಯ

ಕೊಲ್ಲಾಪುರಕ್ಕೆ ಒಲಿದ ‘ಸುತ್ತೂರು ಕೇಸರಿ’

Published:
Updated:
ಕೊಲ್ಲಾಪುರಕ್ಕೆ ಒಲಿದ ‘ಸುತ್ತೂರು ಕೇಸರಿ’

ನಂಜನಗೂಡು: ಜಾತ್ರಾ ಮಹೋತ್ಸವ ಅಂಗವಾಗಿ ಸುತ್ತೂರಿನಲ್ಲಿ ಬುಧವಾರ ನಡೆದ ಮಾರ್ಫಿಟ್ (ಸೋಲು–ಗೆಲ್ಲುವ ತನಕ) ಕುಸ್ತಿ ಪಂದ್ಯದಲ್ಲಿ ಕೊಲ್ಲಾಪುರದ ಪೈಲ್ವಾನ್ ಸಿಕಂದರ್ ಶೇಕ್ ‘ಸುತ್ತೂರು ಕೇಸರಿ’ ಪ್ರಶಸ್ತಿ ಪಡೆದರು. ಗಂಜಾಂನ ಪ್ರವೀಣ್ ಚಕ್ರವರ್ತಿ ಅವರು ಸುತ್ತೂರು ಕುಮಾರ್ ಪ್ರಶಸ್ತಿಗೆ ಭಾಜನರಾದರು.

ವಿಜಯಪುರದ ರವಿಚಂದ್ರ ಅವರನ್ನು ಸಿಕಂದರ್ ಶೇಕ್ ದೋಭಿ ಶಾಟ್ ಪಟ್ಟಿನ ಮೂಲಕ ಚಿತ್ ಮಾಡಿ ಮಣಿಸಿ ಗದೆ ಹಾಗೂ ನಗದು ಪುರಸ್ಕಾರಕ್ಕೆ ಭಾಜನರಾದರು.

ಮೈಸೂರಿನ ಕಿಶೋರ್ ಪುರೋಹಿತ್ ಹಾಗೂ ಪ್ರವೀಣ್ ಚಕ್ರವರ್ತಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಿತು. ಕೊನೆಗೆ, ಕಿಶೋರ್ ಪುರೋಹಿತ್ ಗಾಯ ಗೊಂಡು ಪಂದ್ಯದಿಂದ ನಿವೃತ್ತರಾ ದ್ದರಿಂದ ತೀರ್ಪುಗಾರರು ಪೈ.ಪ್ರವೀಣ್ ಚಕ್ರವರ್ತಿಯವರು ಪಂದ್ಯದಲ್ಲಿ ಗೆದ್ದಿರುವುದಾಗಿ ಘೋಷಿಸಿದರು.

ರಮ್ಮನಹಳ್ಳಿಯ ರವಿ ಹಾಗೂ ಪಾಲಹಳ್ಳಿಯ ಗಿರೀಶ್ ನಡುವೆ ನಡೆದ ಪಂದ್ಯದಲ್ಲಿ ಸಮಬಲದ ಹೋರಾಟದಿಂದ ಫಲಿತಾಂಶ ದೊರಕದೆ ಪಂದ್ಯವನ್ನು ಸಮ ಎಂದು ಘೋಷಿಸಲಾಯಿತು.

ಮೈಸೂರಿನ ಛೋಟಾ ಫರ್ವೀಜ್ ಹಾಗೂ ಜಮಖಂಡಿಯ ಗಜಾನನ ಅವರ ನಡುವೆ ನಡೆದ ಬಿರುಸಿನ ಕುಸ್ತಿ ಪಂದ್ಯದಲ್ಲಿ ಗಜಾನನ ಅವರನ್ನು ಕೆಳಕ್ಕೆ ಕೆಡವಿದ ಛೋಟಾ ರಫೀಕ್ ಸಾವರಿ ಹಾಕಿ ಮಣಿಸಿ, ಪಂದ್ಯದಲ್ಲಿ ಜಯಗಳಿಸಿದರು.

ಜಾತ್ರೆಯ ಅಂಗವಾಗಿ 48 ಜೊತೆ ನಾಡ ಕುಸ್ತಿ ಪಂದ್ಯಾವಳಿ ಆಯೋಜಿ ಸಲಾಗಿತ್ತು. ಕೊಲ್ಲಾಪುರ, ಜಮಖಂಡಿ, ವಿಜಯಪುರ ಹಾಗೂ ದಾವಣಗೆರೆ, ತುಮಕೂರು, ಬೆಂಗಳೂರು, ಕನಕಪುರ, ಮೈಸೂರು, ಬಾಬುರಾಯನ ಕೊಪ್ಪಲಿನಿಂದ ಪೈಲ್ವಾನರು ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದರು.

ಪೈಲ್ವಾನರು ಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಕೆಡವುತ್ತಿದ್ದಂತೆ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಕುಸ್ತಿ ಪ್ರೇಮಿಗಳು ಹರ್ಷೋದ್ಗಾರರ ಮೂಲಕ ಪ್ರೋತ್ಸಾಹಿಸುತ್ತಿದ್ದರು.

ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಪಂದ್ಯದ ತೀರ್ಪುಗಾರರಾಗಿ ರಫೀಕ್, ಗಣೇಶ್, ದೇವಣ್ಣ, ಅಮೃತ್ ಪುರೋಹಿತ್ ಕಾರ್ಯನಿರ್ವಹಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ವಿಧಾನ ಪರಿಷತ್ತಿನ ಉಪ ಸಭಾಪತಿ ಮರಿತಿಬ್ಬೇಗೌಡ, ಬಿಜೆಪಿ ಮುಖಂಡ ಬಸವೇಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry