ಸಮಸ್ಯೆ ಸೃಷ್ಟಿಸುವ ಕಸ ತುಂಬಿದ ಚರಂಡಿ

7
ಅರಣ್ಯರೋದನವಾಗುತ್ತಿರುವ ಮೂಗಿರೆಡ್ಡಿಪಲ್ಲಿ ಗ್ರಾಮಸ್ಥರ ಅಳಲು, ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನರು, ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಸಮಸ್ಯೆ ಸೃಷ್ಟಿಸುವ ಕಸ ತುಂಬಿದ ಚರಂಡಿ

Published:
Updated:
ಸಮಸ್ಯೆ ಸೃಷ್ಟಿಸುವ ಕಸ ತುಂಬಿದ ಚರಂಡಿ

ಚೇಳೂರು: ಮೂಗಿರೆಡ್ಡಿಪಲ್ಲಿ ಗ್ರಾಮದಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ಊರಿನಲ್ಲಿ ತ್ಯಾಜ್ಯ ನೀರು ಹರಿದು ಹೋಗದೆ ಮಡುಗಟ್ಟಿ ನಿಂತು, ಅಸಹ್ಯಕರ ವಾತಾವರಣದ ಜತೆಗೆ ಸಾಂಕ್ರಾಮಿಕ ರೋಗ ಭೀತಿ ಹುಟ್ಟು ಹಾಕುತ್ತಿದೆ.

ಮೊದಲೇ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿರುವ ಊರಿನಲ್ಲಿ ಇದೀಗ ಸ್ವಚ್ಛತೆ ಮರೀಚಿಕೆಯಾಗಿದ್ದು, ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತುಂಬಿ ನಿಂತ ಚರಂಡಿಗಳು ದಿನೇ ದಿನೇ ಸೃಷ್ಟಿಸುತ್ತಿರುವ ಸಮಸ್ಯೆಗಳಿಂದಾಗಿ ಜನರು ರೋಸಿ ಹೋಗಿದ್ದಾರೆ.

ಬೆಳಕು ಹರಿದರೆ ದುರ್ವಾಸನೆಗೆ ಮೂಗು ಸಿಂಡರಿಸುವ ಈ ಊರಿನ ಜನರಿಗೆ ಸಂಜೆಯಾದರೆ ಸೊಳ್ಳೆಗಳ ಕಾಟ ಬಾಧೆ ತಾಳಲಾರದಷ್ಟಿದೆ. ಇವತ್ತು ಈ ಊರಿನಲ್ಲಿ ಜನರು ಮೂಗು ಮುಚ್ಚಿಕೊಂಡು ವ್ಯವಹರಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಗಳು ಕೂಡ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರು ಆಕ್ರೋಶದ ದೂರು.

ಕೆಲವೆಡೆಯಂತೂ ಚರಂಡಿಗಳೇ ಇಲ್ಲದೆ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದು ಹರಿದು ಪಾಚಿಗಟ್ಟಿದೆ. ಜನರು ಗಲೀಜು ನೀರಿನಲ್ಲಿ ನಡೆದಾಡಬೇಕಾಗಿದೆ. ರಾತ್ರಿ ವೇಳೆ ಇದರಿಂದ ಕಾಲು ಜಾರಿ ಬಿದ್ದವರ ಸಂಖ್ಯೆ ಕೂಡ ಕಡಿಮೆ ಇಲ್ಲ.

‘ವಿದ್ಯಾರ್ಥಿಗಳು ರೊಚ್ಚು ನೀರು ತುಳಿದುಕೊಂಡೆ ನಡೆದಾಡಬೇಕಾಗಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಮನೆ ಹೊರಗೆ ಬಿಡಲು ಭಯವಾಗುತ್ತದೆ. ಕಟ್ಟಿಕೊಂಡ ಚರಂಡಿಯಿಂದಾಗಿ ಕ್ರಿಮಿಕೀಟಗಳು ಹೆಚ್ಚುತ್ತಿವೆ. ಗಬ್ಬು ವಾಸನೆಗೆ ಹೊಟ್ಟೆ ತೊಳೆಸಿದಂತಾಗುತ್ತಿದೆ. ಜನರಿಗೆ ಆಸ್ಪತ್ರೆಗೆ ಅಲೆದಾಡುವುದೇ ಕೆಲಸವಾಗಿದೆ’ ಎಂದು ಸ್ಥಳೀಯ ನಿವಾಸಿ ರಾಮಾ ನಾಯ್ಕ್ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಊರಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಗಳು, ತುಂಬಿದ ಚರಂಡಿಗಳನ್ನು ನೋಡುವಂತಾಗಿದೆ. ಗ್ರಾಮ ಪಂಚಾಯಿತಿಯವರ ಜಾಣ ಕುರುಡು ಪ್ರದರ್ಶನದಿಂದಾಗಿ ಜನರು ತೊಂದರೆ ಅನುಭವಿಸಬೇಕಾಗಿ ಬಂದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಊರಿನ ಹದಗೆಟ್ಟ ಸ್ಥಿತಿ ತೋರಿಸಿದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜವಾಬ್ದಾರಿ ಮೆರೆಯುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಕೂಡ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ನಾಳೆ ಊರಿನಲ್ಲಿ ರೋಗ ಉಲ್ಭಣಿಸಿ ಸಾವುಗಳು ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ನಾವು ಹೋರಾಟ ಹಾದಿ ತುಳಿಯುವುದು ಅನಿವಾರ್ಯವಾಗುತ್ತದೆ’ ಎಂದು ಸ್ಥಳೀಯ ಎನ್.ವೇಣುಗೋಪಾಲ ನಾಯ್ಕ್ ಹೇಳಿದರು.

**

ಹದಗೆಟ್ಟ ಊರಿನ ಸ್ಥಿತಿಯ ಬಗ್ಗೆ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ದೂರು ನೀಡಿದರೂ ಯಾರು ಕೂಡ ಗಮನ ಹರಿಸುತ್ತಿಲ್ಲ.

ಚಂದ್ರಾ ನಾಯ್ಕ್, ಮೂಗಿರೆಡ್ಡಿಪಲ್ಲಿ ನಿವಾಸಿ

**

ಸಿ.ಎಸ್.ವೆಂಕಟೇಶ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry