ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯದಿಂದ ಶ್ರಮಿಸಲು ಅಧಿಕಾರಿಗಳಿಗೆ ಸೂಚನೆ

ಕನಕ ನಡೆ ನುಡಿ: ಪೂರ್ವ ಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ
Last Updated 18 ಜನವರಿ 2018, 10:36 IST
ಅಕ್ಷರ ಗಾತ್ರ

ಹಾವೇರಿ: ‘ಕಾಗಿನಲೆಯಲ್ಲಿ ಜ.20ರಿಂದ 22ರ ವರೆಗೆ ‘ಕನಕ ನಡೆ ನುಡಿ’ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬರುವ 1,300ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ’ ಎಂದ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಹೇಳಿದರು.

‘ಕನಕ ನಡೆ ನುಡಿ’ ಸಾಂಸ್ಕೃತಿಕ ಮೇಳದ ಪೂರ್ವ ಸಿದ್ಧತೆ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಹೇಳಿದರು.

‘ಸಾಂಸ್ಕೃತಿಕ ಚಿಂತಕ, ಸಮಾನತೆಯ ಪ್ರತಿಪಾದಕ, ಭಕ್ತ ಶ್ರೇಷ್ಠ ಕನಕದಾಸರ ಬಹುಮುಖಿ ಚಿಂತನೆಗಳನ್ನು ವಿವಿಧ ತಲೆಮಾರುಗಳ ಚಿಂತಕರಿಂದ ಚರ್ಚೆ, ಸಂವಾದ, ವಿಚಾರ ವಿನಿಮಯದ ಮೂಲಕ ಕನ್ನಡ ಮತ್ತು ಕನಕ ಸಂಸ್ಕೃತಿಯನ್ನು ವಿಸ್ತರಿಸುವ ಕಾರ್ಯಕ್ರಮ ಇದಾಗಿದ್ದು, ಅತ್ಯಂತ ವ್ಯವಸ್ಥಿತ ಹಾಗೂ ಮಾದರಿಯಾಗಿ ನಡೆಸಲು ಎಲ್ಲ ಅಧಿಕಾರಿಗಳು ಸಮನ್ವಯದಿಂದ ಶ್ರಮಿಸಬೇಕು’ ಎಂದು ಅವರು ಸೂಚನೆ ನೀಡಿದರು.

‘ಭಾಗವಹಿಸುವ ಉಪನ್ಯಾಸಕರು, ಅತಿಥಿಗಳಿಗೆ ಬ್ಯಾಡಗಿ, ರಾಣೆಬೆನ್ನೂರು, ಹಾವೇರಿ ಹಾಗೂ ಕಾಗಿನೆಲೆಯಲ್ಲಿ ವಸತಿ ವ್ಯವಸ್ಥೆ ಕೈಗೊಳ್ಳಬೇಕು. ವಾಸ್ತವ್ಯದ ಸ್ಥಳಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ವಾಹನ ಸೌಕರ್ಯ ಕಲ್ಪಿಸಬೇಕು. ಪ್ರತಿ ವಾಸ್ತವ್ಯದ ಸ್ಥಳದಲ್ಲಿ ಉಸ್ತುವಾರಿ ಸಿಬ್ಬಂದಿ ನೇಮಿಸಿ, ಮುಂಜಾಗ್ರತೆ ವಹಿಸಬೇಕು’ ಎಂದು ವಸತಿ ಉಸ್ತುವಾರಿ ವಹಿಸಿಕೊಂಡ ಉಪ ವಿಭಾಗಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಸೂಚಿಸಿದರು.

ಹಾವೇರಿ, ರಾಣೆಬೆನ್ನೂರು ಹಾಗೂ ಬ್ಯಾಡಗಿ ಸೇರಿದಂತೆ ವಿವಿಧೆಡೆಯಿಂದ ವಿಶೇಷ ಸಾರಿಗೆ ಬಸ್‌ಗಳನ್ನು ಹೆಚ್ಚುವರಿಯಾಗಿ ಕಲ್ಪಿಸಬೇಕು ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅತಿಥಿಗಳಿಗೆ ಊಟದ ವ್ಯವಸ್ಥೆ, ಭದ್ರತಾ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ವ್ಯವಸ್ಥಿತವಾದ ಕಾರ್ಯಕ್ರಮ ನಿರ್ವಹಣೆಗೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಪ್ರಚಾರ ಮಳಿಗೆ ಸ್ಥಾಪಿಸುವ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಪ್ರಕಾಶನ ಸಂಸ್ಥೆಗಳನ್ನು ಆಹ್ವಾನಿಸಿ ಪುಸ್ತಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಟಿ.ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಮಲ್ಲೇಶಪ್ಪ ಹೊರಪೇಟೆ, ಕನಕ ಸಾಂಸ್ಕೃತಿಕ ಮೇಳದ ಸಂಚಾಲಕ ಕಾ.ತ.ಚಿಕ್ಕಣ್ಣ, ಸಾಹಿತಿ ಸತೀಶ ಕುಲಕರ್ಣಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT