ಗುಣಮಟ್ಟದ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡಿ

7
ಶಿಕಾರಿಪುರ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಬಿ.ವೈ. ರಾಘವೇಂದ್ರ ಕಿವಿಮಾತು

ಗುಣಮಟ್ಟದ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡಿ

Published:
Updated:

ಶಿಕಾರಿಪುರ: ತಾಲ್ಲೂಕಿನಲ್ಲಿ ಗುಣ ಮಟ್ಟದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಶಾಸಕ ಬಿ.ವೈ. ರಾಘವೇಂದ್ರ ಕಿವಿಮಾತು ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ನಡೆದ ಕೆಲವು ಕಾಮಗಾರಿಗಳು ಕಳಪೆಯಾಗಿವೆ ಎಂಬ ಆರೋಪವನ್ನು ಕೆಡಿಪಿ ಸದಸ್ಯರು ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಕಳಪೆ ಕಾಮಗಾರಿ ನಡೆಸಲು ಅಧಿಕಾರಿಗಳು ಅವಕಾಶ ನೀಡಬಾರದು' ಎಂದು ಎಚ್ಚರಿಸಿದರು.

‘ತಾಲ್ಲೂಕಿನಲ್ಲಿ ಹಲವು ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಅಧಿಕಾರಿಗಳು ಒಂದು ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಲು ₹ 30 ಲಕ್ಷ ಹಾಗೂ ₹ 50 ಲಕ್ಷ ವೆಚ್ಚ ತೋರಿಸಿದ್ದಾರೆ. ಆದರೆ ವೆಚ್ಚ ಮಾಡಿದ ಹಣಕ್ಕೆ ತಕ್ಕಂತೆ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ’ ಎಂದು ಕೆಡಿಪಿ ಸದಸ್ಯ ಉಮೇಶ್‌ ಕೋಡಿಹಳ್ಳಿ ಆರೋಪಿಸಿದರು.

‘ಕೆರೆಗಳ ಅಭಿವೃದ್ಧಿ ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ವೆಚ್ಚಕ್ಕೆ ತಕ್ಕಂತೆ ಅಭಿವೃದ್ಧಿಯಾಗದ ಕೆರೆಗಳಿಗೆ ಭೇಟಿ ಪರಿಶೀಲನೆ ನಡೆಸುತ್ತೇನೆ’ ಎಂದು ಶಾಸಕರು ಪ್ರತಿಕ್ರಿಯಿಸಿದರು.

‘ಸನ್ಯಾಸಿಕೊಪ್ಪ ಏತ ನೀರಾವರಿ ಯೋಜನೆಯ ನೀರು ಸಂಚರಿಸುವ ಕಾಲುವೆಗಳ ಕಾಮಗಾರಿ ಗುಣಮಟ್ಟ ಕಳಪೆಯಾಗಿದ್ದು,ಸಮರ್ಪಕವಾಗಿ ನೀರು ಹರಿಯುವುದಿಲ್ಲ’ ಎಂದು ಕೆಡಿಪಿ ಸದಸ್ಯ ಭಂಡಾರಿ ಮಾಲತೇಶ್‌ ಆರೋಪಿಸಿದರು.

‘ನೀರು ಕಾಲುವೆ ಮೂಲಕ ಸರಾಗವಾಗಿ ಹರಿಯುವಂತೆ ಕಾಲುವೆಗಳ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಬೇಕು’ ಎಂದು ಎಂಜಿನಿಯರ್‌ಗೆ ಶಾಸಕ ಸೂಚನೆ ನೀಡಿದರು.

ಅಂಜನಾಪುರ ಜಲಾಶಯ ಸಮೀಪದ ಉದ್ಯಾನ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಈ ತಿಂಗಳ ಅಂತ್ಯದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನೀರಾವರಿ ಇಲಾಖೆ ಎಂಜಿನಿಯರ್‌ ರಾಜ್‌ಕುಮಾರ್‌ ಅವರಿಗೆ ಸೂಚನೆ ನೀಡಿದರು.

ಪಟ್ಟಣದ ಬ್ರಾಂತೇಶ್‌ ಉದ್ಯಾನದಲ್ಲಿ ಸಂಗೀತ ಕಾರಂಜಿ ಮೂಲಕ ಪಾಚಿ ಗಿಡಗಳ ವಾಸನೆ ಬರುತ್ತಿದೆ. ಕಾಲ ಕಾಲಕ್ಕೆ ಕಾರಂಜಿ ನೀರು ಬದಲಿಸಬೇಕು. ಸಂಗೀತ ಕಾರಂಜಿ ಹಾಗೂ ಉದ್ಯಾನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಹೇಳಿದರು.

ಕೆಡಿಪಿ ಸಭೆಯನ್ನು ನಿಗದಿತ ಅವಧಿಗೆ ತಕ್ಕಂತೆ ಶಾಸಕರು ನಡೆಸಬೇಕು. ಈ ಬಾರಿ ಸಭೆ ವಿಳಂಬವಾಗಿದೆ  ಎಂದು ಕೆಡಿಪಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯದ ಒತ್ತಡ ಇದ್ದುದರಿಂದ ಸಭೆ ಕರೆಯಲು ವಿಳಂಬವಾಯಿತು. ಮುಂದಿನ ದಿನಗಳಲ್ಲಿ ನಿಗದಿತ ಅವಧಿಗೆ ಸಭೆ ನಡೆಸಲಾಗುವುದು ಎಂದು ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್‌.ಪಿ. ನರಸಿಂಗನಾಯ್ಕ, ರೇಣುಕಾ ಹನುಮಂತಪ್ಪ, ಮಮತಾಸಾಲಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎ. ಪರಮೇಶ್ವರಪ್ಪ, ಉಪಾಧ್ಯಕ್ಷೆ ರೂಪಾ ದಯಾನಂದ್, ಇಒ ಆನಂದ ಕುಮಾರ್‌, ಕೆಡಿಪಿ ಸದಸ್ಯರಾದ ಬುಡೇನ್‌ ಖಾನ್‌, ಕೋಮಲಮ್ಮ, ಮಲ್ಲೇನಹಳ್ಳಿ ಹನುಮಂತಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry