ಸರಳ ವ್ಯಕ್ತಿತ್ವದ ಕಾಶಿನಾಥ್‌ ನಿಧನಕ್ಕೆ ಚಿತ್ರೋದ್ಯಮದ ಕಂಬನಿ

7

ಸರಳ ವ್ಯಕ್ತಿತ್ವದ ಕಾಶಿನಾಥ್‌ ನಿಧನಕ್ಕೆ ಚಿತ್ರೋದ್ಯಮದ ಕಂಬನಿ

Published:
Updated:
ಸರಳ ವ್ಯಕ್ತಿತ್ವದ ಕಾಶಿನಾಥ್‌ ನಿಧನಕ್ಕೆ ಚಿತ್ರೋದ್ಯಮದ ಕಂಬನಿ

ಸರಳತೆಯೇ ಕಾಶಿನಾಥ್‌ ವ್ಯಕ್ತಿತ್ವದ ವಿಶೇಷವಾಗಿತ್ತು. ಯಾವುದೇ ಸಂದರ್ಭ ಬಂದರೂ ತುಂಬ ಸಂಯಮದಿಂದ ನಿರ್ವಹಿಸುತ್ತಿದ್ದರು. ನಾವು ಅವರ ಜತೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗಲೂ ನಾವೇನಾದರೂ ತಪ್ಪು ಮಾಡಿದಾಗ ಕೋಪ ಮಾಡಿಕೊಳ್ಳದೆ ಸಮಾಧಾನದಿಂದ ತಿಳಿವಳಿಕೆ ಹೇಳುತ್ತಿದ್ದರು. ತುಂಬ ಜನರಿಗೆ ಅವರು ಸಹಾಯ ಮಾಡಿದ್ದಾರೆ. ತಾವು ಮಾಡಿದ ಸಹಾಯವನ್ನು ಅವರು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ.

ಪ್ರಚಾರಪ್ರಿಯರಾಗಿರಲಿಲ್ಲ. ಪ್ರತಿಭಾವಂತರನ್ನು ಅವರು ಗುರ್ತಿಸಿ ಅವಕಾಶ ಕೊಡುತ್ತಿದ್ದರು. ನನಗೂ ಅದೇ ರೀತಿ ನನಗೂ ಅನುಭವ ಸಿನಿಮಾದಲ್ಲಿ ಹಾಡು ಬರೆಯಲು ಅವಕಾಶ ಕೊಟ್ಟು ಬೆಳೆಸಿದರು. ನಂತರ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಲು ಅವಕಾಶ ಕೊಟ್ಟರು. ನಾನು ಹಲವು ವರ್ಷ ಅವರ ಮನೆಯಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದೆ. ತಮ್ಮನ ಹಾಗೆ ನೋಡಿಕೊಳ್ಳುತ್ತಿದ್ದರು. ತುಂಬ ಸ್ವಾಭಿಮಾನಿ ಅವರು. ತಮ್ಮ ನೋವನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ.

-ವಿ. ಮನೋಹರ್‌, ನಟ, ಸಂಗೀತ ಸಂಯೋಜಕ

*ಕಾಶಿನಾಥ್‌ ನನ್ನ ಗುರುಗಳು, ಅಭಿನಯ ಹೇಳಿಕೊಟ್ಟವರು, ತಾಳ್ಮೆ ಎಂದರೆ ಏನು ಎನ್ನುವುದನ್ನು ತೋರಿಸಿಕೊಟ್ಟವರು. ಅವರ ಬದುಕಿನಲ್ಲಿ ಕೋಪ ಎನ್ನುವುದೇ ಇರಲಿಲ್ಲ. ಇತ್ತೀಚೆಗೆ ಒಂದು ರಿಯಾಲಿಟಿ ಷೋನಲ್ಲಿ ಅವರನ್ನು ಭೇಟಿಯಾಗಿದ್ದೆ. ತುಂಬ ಇಳಿದುಹೋಗಿದ್ದರು. ‘ಏನ್ಸಾರ್‌ ಹೀಗಾಗಿಬಿಟ್ಟಿದೀರಾ?’ ಎಂದು ಕೇಳಿದ್ದೆ. ‘ಏನಿಲ್ಲ ಚೆನ್ನಾಗಿಯೇ ಇದ್ದೀನಲ್ಲ’ ಎಂದು ಮಾತು ತೇಲಿಸಿದ್ದರು. ಅವರ ತಾಯಿ ತೀರಿಕೊಂಡ ಮೇಲೆ ತುಂಬ ಕೊರಗಿ ಕೊರಗಿ ಹೀಗಾಗಿದ್ದರಂತೆ. ತುಂಬ ಜನ ಒಳ್ಳೆಯ ಕಲಾವಿದರು, ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಅವರು.

-ಅಭಿನಯ, ನಟಿ

*ಇಂದು ಟ್ರೆಂಡ್‌ನಲ್ಲಿರುವ ಸೆಟಾರಿಕಲ್ ಕಾಮಿಡಿ, ಡಾರ್ಕ್‌ ಕಾಮಿಡಿ ಸಿನಿಮಾಗಳನ್ನು ಎಂಬತ್ತರ ದಶಕದಲ್ಲಿಯೇ ಪರಿಚಯಿಸಿದ್ದವರು ಕಾಶಿನಾಥ್‌. ಅವರ ಶಿಷ್ಯಬಳಗವನ್ನು ನೋಡಿದಾಗ ಅವರ ಗುರುಕುಲವನ್ನು ಕನ್ನಡ ಚಿತ್ರರಂಗದ ‘ಅನುಭವ ಮಂಟಪ’ ಎಂದು ಕರೆಯಬಹುದು. ನಾನು ಅವರ ಜತೆ ಒಡನಾಡಿದ್ದು ಕಡಿಮೆ. ‘ಚೌಕ’ ಸಿನಿಮಾದಲ್ಲಿ ನಾನು ಅವಳ ಮಗಳಾಗಿ ನಟಿಸಿದ್ದೆ. ತುಂಬ ಸೂಕ್ಷ್ಮ ಸಂವೇದನೆಯ ಮನುಷ್ಯ ಅವರು. ಸೆಟ್‌ನಲ್ಲಿ ತುಂಬ ಕಡಿಮೆ ಮಾತಾಡುತ್ತಿದ್ದರು. ಅವರ ಒಂದೊಂದು ಮಾತಿಗೂ ಗಹನವಾದ ಅರ್ಥ ಇರುತ್ತಿತ್ತು. ಏನೇನೋ ಮಾತಾಡುತ್ತ ಕಾಲಹರಣ ಮಾಡುತ್ತಿರಲಿಲ್ಲ.

‘ಚೌಕ’ ಚಿತ್ರದ ತಂದೆಯ ಪಾತ್ರ ಅವರೊಳಗಿನ ನಟನ ಇನ್ನೊಂದು ಆಯಾಮವನ್ನು ತೋರಿಸಿತು. ಅವರು ಇಂಥ ಭಾವನಾತ್ಮಕ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಬಲ್ಲರು ಎಂಬುದು ತಿಳಿಸಿಕೊಟ್ಟ ಚಿತ್ರ. ನಾವು ಒಬ್ಬ ಕಲಾವಿದನನ್ನು ಒಂದು ಚೌಕಟ್ಟಿಗೆ ಒಳಪಡಿಸಿಬಿಡುತ್ತೇವೆ. ಅವರ ಮೇಲೆ ಪ್ರಯೋಗವನ್ನೇ ಮಾಡುವುದಿಲ್ಲ. ಚೌಕಟ್ಟನ್ನು ಮೀರಿ ಪ್ರಯೋಗಕ್ಕೆ ಒಳಪಡಿಸಿದಾಗ ಕಲಾವಿನದ ಪ್ರತಿಭೆ ಹೊರಬರುತ್ತದೆ ಎನ್ನುವುದಕ್ಕೆ ‘ಚೌಕ’ ಸಿನಿಮಾದ ಕಾಶಿನಾಥ್‌ ಅವರ ಪಾತ್ರವೇ ಸಾಕ್ಷಿ. ಅವರು ಬದುಕಿರುವ ಸಮಯದಲ್ಲಿ ಅವರಿಂದ ಇಂಥ ಇನ್ನಷ್ಟು ಪಾತ್ರಗಳನ್ನು ಮಾಡಬಹುದಿತ್ತು. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅವರಿಂದ ಇನ್ನಷ್ಟು ಕೊಡುಗೆ ಸಿಗಬಹುದಿತ್ತು ಎಂದು ಈಗ ಅನಿಸುತ್ತಿದೆ.

-ಮಾನ್ವಿತಾ ಹರೀಶ್‌, ನಟಿ

*ಕಾಶಿನಾಥ್ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ನನಗೆ ತುಂಬ ಇತ್ತು. ಅವರ ಧ್ವನಿಯಲ್ಲಿಯೇ ಒಂದು ಮುಗ್ಧತೆ ಇತ್ತು. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾದದ್ದು. ಯಾವಾಗ ಭೇಟಿಯಾದರೂ ತುಂಬ ಪ್ರೀತಿ– ವಿಶ್ವಾಸದಿಂದ ಮಾತಾಡುತ್ತಿದ್ದರು.

-ಶಿವರಾಜ್‌ ಕುಮಾರ್‌, ನಟ

*ಕಾಶಿನಾಥ್‌ ತುಂಬಾ ಸಕಾರಾತ್ಮಕ ಚೈತನ್ಯ ಕೊಡುವಂಥ ವ್ಯಕ್ತಿಯಾಗಿದ್ದರು. ಒಂದು ಗಂಟೆ ಅವರ ಜತೆ ಮಾತಾಡಿದರೆ ಸಾಕಷ್ಟು ಉತ್ಸಾಹ ಮನಸ್ಸನ್ನು ತುಂಬಿಕೊಳ್ಳುತ್ತಿತ್ತು. ತುಂಬ ವಿಷಯಗಳನ್ನು ತಿಳಿದುಕೊಂಡಿದ್ದರು. ಯಾವಾಗಲೂ ಅವರು ನನಗೆ ಹೇಳುತ್ತಿದ್ದ ಮಾತು ‘ಪ್ರಯೋಗ ಮಾಡಲು ಹೆದರಬೇಡ. ಧೈರ್ಯವಾಗಿ ಮಾಡು. ಅದೇ ನಿನ್ನನ್ನು ಕಾಪಾಡುವುದು’.

ನನ್ನ ‘ಚೌಕ’ ಸಿನಿಮಾದಲ್ಲಿ ಅವರು ನಟಿಸಿದ್ದು ನನ್ನ ಅದೃಷ್ಟ. ಯಾರಿಗೆ ಕೇಳಿದಾಗಲೂ ಆ ಪಾತ್ರಕ್ಕೆ ಕಾಶಿನಾಥ್‌ ಬೇಡ ಎಂದೇ ಹೇಳುತ್ತಿದ್ದರು. ಆದರೆ ನನಗೆ ಅವರು ಚೆನ್ನಾಗಿ ಮಾಡಬಲ್ಲರು ಎಂಬ ನಂಬಿಕೆ ಇತ್ತು. ಅವರಿಗೆ ಹೇಳಿದಾಗಲೂ ಅವರು ‘ನಿನಗೆ ನಾನು ಈ ಪಾತ್ರ ಮಾಡುತ್ತೇನೆ ಎಂಬ ನಂಬಿಕೆ ಇದೆಯಾ?’ ಎಂದು ಕೇಳಿಯೇ ಒಪ್ಪಿಕೊಂಡಿದ್ದರು. ಅವರಿಗೂ ‘ತನ್ನನ್ನು ಒಂದೇ ರೀತಿಯ ಪಾತ್ರಗಳಿಗೆ ಬ್ರ್ಯಾಂಡ್‌ ಮಾಡಿದ್ದಾರೆ. ಬೇರೆ ಥರದ ಪಾತ್ರಗಳಲ್ಲಿ ನಟಿಸಬೇಕು’ ಎಂಬ ಆಸೆ ಇತ್ತು. ‘ಚೌಕ’ ಚಿತ್ರದ ತಂದೆಯ ಪಾತ್ರಕ್ಕೆಂದೇ ಹೊಸ ಹುಡುಗನ ರೀತಿ ತಯಾರಾದರು.

ಸಂಭಾಷಣೆ ತೆಗೆದುಕೊಂಡು ರಿಹರ್ಸಲ್‌ ಮಾಡಿಕೊಂಡರು. ನನಗೆ ಆ ಪಾತ್ರದ ಬಗ್ಗೆ ಒಂದಿಷ್ಟು ಒಳನೋಟಗಳನ್ನು ಕೊಟ್ಟರು. ಯಾವತ್ತೂ ಅವರು ಲುಕ್‌ ಬದಲಾವಣೆ ಮಾಡಿಕೊಂಡವರಲ್ಲ. ಈ ಪಾತ್ರಕ್ಕಾಗಿ ಲುಕ್‌ ಬದಲಿಸಿಕೊಂಡರು. ಅದರ ಪ್ರತಿಫಲವಾಗಿ ಒಳ್ಳೆಯ ಪ್ರತಿಕ್ರಿಯೆ ಆ ಸಿನಿಮಾಕ್ಕೆ ಸಿಕ್ಕಿತು. ಇನ್ನೂ ಎಷ್ಟೋ ಪ್ರತಿಭಾವಂತರಿಗೆ ಅವರ ಮಾರ್ಗದರ್ಶನ ಸಿಗುತ್ತಿತ್ತು. ಅವರ ಬಳಿ ಒಳ್ಳೊಳ್ಳೆ ಸ್ಕ್ರಿಫ್ಟ್‌ಗಳಿದ್ದವು. ಇತ್ತೀಚೆಗೆ ನಟನೆಯ ಅವಕಾಶಗಳೂ ಸಾಕಷ್ಟು ಬರುತ್ತಿದ್ದವು. ದರ್ಶನ್‌ ಅವರ ಮುಂದಿನ ಸಿನಿಮಾದಲ್ಲಿ ನಟಿಸಬೇಕಿತ್ತು. ಈ ಎಲ್ಲವನ್ನೂ ಬಿಟ್ಟು ಅವರು ಹೊರಟು ಹೋಗಿದ್ದು ತುಂಬಲಾರದ ನಷ್ಟ.

-ತರುಣ್‌ ಸುಧೀರ್‌, ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry