ಕರಡಿ, ಚಿರತೆ ದಾಳಿಗೆ ಇಬ್ಬರು ಮಹಿಳೆಯರು ಬಲಿ

7

ಕರಡಿ, ಚಿರತೆ ದಾಳಿಗೆ ಇಬ್ಬರು ಮಹಿಳೆಯರು ಬಲಿ

Published:
Updated:

ರಾಮನಗರ: ಕರಡಿ ಮತ್ತು ಚಿರತೆ ದಾಳಿಗೆ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಗುರುವಾರ ಬಲಿಯಾಗಿದ್ದಾರೆ.

ಕನಕಪುರ ತಾಲ್ಲೂಕಿನ ಚೌಕಸಂದ್ರ ಗ್ರಾಮದಲ್ಲಿ ಮುಂಜಾನೆ ಮೂತ್ರ ವಿಸರ್ಜನೆಗೆಂದು ಬಯಲಿಗೆ ತೆರಳಿದ್ದ ಸುಮಾಬಾಯಿ (22) ಮೇಲೆ ಕರಡಿ ದಾಳಿ ನಡೆಸಿ ಕೊಂದುಹಾಕಿತು. ಸುಮಾ ಏಳು ತಿಂಗಳ ಗರ್ಭಿಣಿ ಆಗಿದ್ದು, ಮುಂಜಾನೆ 4ರ ಸುಮಾರಿಗೆ ಈ ಘಟನೆ ನಡೆದಿದೆ.

ಈ ಸಂದರ್ಭ ಹಿತ್ತಲಿನಲ್ಲಿ ಕುಳಿತಿದ್ದ ಕರಡಿ ಏಕಾಏಕಿ ದಾಳಿ ನಡೆಸಿ ಕುತ್ತಿಗೆ, ಮುಖ ಹಾಗೂ ಬೆನ್ನಿಗೆ ಗಾಯಗೊಳಿಸಿತು. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಹೊರಹೋದ ಮಹಿಳೆ ಒಂದು ಗಂಟೆಯಾದರೂ ವಾಪಸ್ ಬರದಿದ್ದರಿಂದ ಅನುಮಾನಗೊಂಡ ಕುಟುಂಬದವರು ಹುಡುಕಾಟ ನಡೆಸಿದಾಗ ಆಕೆಯ ಶವ ಪತ್ತೆಯಾಯಿತು.

ಚಿರತೆ ದಾಳಿ: ರಾಮನಗರ ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದ ಗುಡ್ಡದಲ್ಲಿ ದನ ಹಾಗೂ ಕುರಿಗಳನ್ನು ಮೇಯಿಸುತ್ತಿದ್ದ ಪುಟ್ಟಹಲಗಮ್ಮ (30) ಎಂಬುವವರ ಮೇಲೆ ಸಂಜೆ 5ರ ಸುಮಾರಿಗೆ ಚಿರತೆ ದಾಳಿ ಮಾಡಿ ಹೊತ್ತೊಯ್ಯಲು ಪ್ರಯತ್ನಿಸಿತು. ಪತ್ನಿಯ ಧ್ವನಿ ಕೇಳಿ ಸಮೀಪದಲ್ಲಿದ್ದ ಆಕೆಯ ಪತಿ ಪೀಯಪ್ಪ ನೆರವಿಗೆ ಧಾವಿಸುವ ವೇಳೆಗೆ ಆಕೆ ಮೃತಪಟ್ಟಿದ್ದರು. ಮಹಿಳೆಯ ಮುಖದ ಭಾಗವನ್ನು ಚಿರತೆ ತಿಂದುಹಾಕಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಎರಡೂ ಕಡೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾಡು ಪ್ರಾಣಿಗಳ ಕಾಟ ಮಿತಿಮೀರಿದ್ದರೂ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry