ಟೊಮೆಟೊ ಸುರಿದು ರೈತರ ಪ್ರತಿಭಟನೆ

7

ಟೊಮೆಟೊ ಸುರಿದು ರೈತರ ಪ್ರತಿಭಟನೆ

Published:
Updated:
ಟೊಮೆಟೊ ಸುರಿದು ರೈತರ ಪ್ರತಿಭಟನೆ

ದಾವಣಗೆರೆ: ಸರ್ಕಾರ ಕೂಡಲೇ ಟೊಮೆಟೊ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಗುರುವಾರ ನಗರದ ರೈತ ಭವನದ ಎದುರು ಬೆಳೆಗಾರರು ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ತಾಲ್ಲೂಕುಗಳಿಂದ ಬೆಳೆಗಾರರು ಭಾಗವಹಿಸಿದ್ದರು. ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌ ಮಾತನಾಡಿ, ‘ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

ಖರೀದಿ ಕೇಂದ್ರ ತೆರೆಯುವಂತೆ ನಿರಂತರ ಹೋರಾಟಗಳನ್ನು ಮಾಡಿದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ಜಿಲ್ಲೆಯಲ್ಲಿ ಶೀತಲೀಕರಣ ಘಟಕ ನಿರ್ಮಾಣ ಮಾಡಬೇಕು ಎಂದು ಮಂಜುನಾಥ್‌ ಒತ್ತಾಯಿಸಿದರು.

ರೈತ ಮುಖಂಡ ಗುಮ್ಮನೂರು ಬಸವರಾಜ್‌ ಮಾತನಾಡಿ, ಖರೀದಿ ಕೇಂದ್ರ ತೆರೆಯದಿದ್ದರೆ ವಿಧಾನಸೌಧದ ಎದುರು ಲೋಡ್‌ಗಟ್ಟಲೆ ಟೊಮೆಟೊ ಸುರಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.‌

‘ದಲ್ಲಾಳಿಗಳು ರೈತರಿಂದ ಕೆಜಿಗೆ ₹ 1ರಂತೆ ಖರೀದಿ ಮಾಡುತ್ತಿದ್ದಾರೆ. ಲಾಭದ ಮಾತಿರಲಿ, ಕೊಯ್ಲಿನ ಕೂಲಿಯೂ ಗಿಟ್ಟುತ್ತಿಲ್ಲ. ಹೊಲಕ್ಕೆ ಜಾನುವಾರುಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ’ ಎಂದು ಬಸವರಾಜ್‌ ನೋವು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry