ಪ್ರೀ ಕ್ವಾರ್ಟರ್‌ಗೆ ಬೆಂಗಳೂರು

6
ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಟೂರ್ನಿ

ಪ್ರೀ ಕ್ವಾರ್ಟರ್‌ಗೆ ಬೆಂಗಳೂರು

Published:
Updated:
ಪ್ರೀ ಕ್ವಾರ್ಟರ್‌ಗೆ ಬೆಂಗಳೂರು

ಮೈಸೂರು: ದಾವಣಗೆರೆ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ ತಂಡಗಳು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಕೊಕ್ಕೊ ಚಾಂಪಿಯನ್‌ಷಿಪ್‌ನ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿದವು.

ಮೈಸೂರು ವಿಶ್ವವಿದ್ಯಾನಿಲಯ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಗುರುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಉತ್ತಮ ಆಟವಾಡಿದ ದಾವಣಗೆರೆ ವಿ.ವಿ ತಂಡ 10–6 ರಲ್ಲಿ ಚೆನ್ನೈನ ಅಣ್ಣಾ ವಿ.ವಿ ತಂಡವನ್ನು ಮಣಿಸಿತು.

ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ವಿ.ವಿ ತಂಡ 15–14 ರಲ್ಲಿ ಗುಂಟೂರಿನ ನಾಗಾರ್ಜುನ ವಿ.ವಿ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು. ಸಾಕಷ್ಟು ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ಎದುರಾದ ಒತ್ತಡವನ್ನು ಮೆಟ್ಟಿನಿಂತ ಬೆಂಗಳೂರು ತಂಡದವರು ಗೆಲುವು ಒಲಿಸಿಕೊಂಡರು.

ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ ತಂಡ 11–9 ರಲ್ಲಿ ಕಣ್ಣೂರು ವಿ.ವಿ ತಂಡದ ಮೇಲೂ, ಬೆಳಗಾವಿಯ ವಿಟಿಯು 14–9 ರಲ್ಲಿ ಮಹಾತ್ಮಗಾಂಧಿ ವಿ.ವಿ ಎದುರೂ, ತುಮಕೂರು ವಿ.ವಿ 12–6 ರಲ್ಲಿ ತಿರುಚಿರಾಪಳ್ಳಿಯ ಭಾರತೀದಾಸನ್ ವಿ.ವಿ ವಿರುದ್ಧವೂ ಜಯಿಸಿದವು.

ಮೂರನೇ ಸುತ್ತಿನ ಇತರ ಪ್ರಮುಖ ಪಂದ್ಯಗಳಲ್ಲಿ ವಿಶಾಖಪಟ್ಟಣದ ಆಂಧ್ರ ವಿ.ವಿ ತಂಡ 12–11 ರಲ್ಲಿ ಕೇರಳ ವಿ.ವಿ ಮೇಲೂ, ಮದ್ರಾಸ್‌ ವಿ.ವಿ ತಂಡ 14–13 ರಲ್ಲಿ ಆಂಧ್ರ ಪ್ರದೇಶದ ಆದಿಕವಿ ನಾಣಯ್ಯ ವಿ.ವಿ. ಮೇಲೂ ಗೆಲುವು ದಾಖಲಿಸಿದವು. ಈ ಎರಡೂ ಪಂದ್ಯಗಳು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿತು. ನಾಲ್ಕು ನಿಮಿಷ 50 ಸೆಕೆಂಡು ಆಡಿದ ಧರಣೇಶ್ವರ್ ಅವರು ಮದ್ರಾಸ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೈದರಾಬಾದ್‌ನ ಒಸ್ಮಾನಿಯ ವಿ.ವಿ ತಂಡ 10–6 ರಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿ.ವಿ ತಂಡವನ್ನು ಪರಾಭವಗೊಳಿಸಿ 16ರ ಘಟ್ಟ ಪ್ರವೇಶಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry