ಮಣ್ಣು ಕುಸಿದು ಕಾರ್ಮಿಕ ಸಾವು

7

ಮಣ್ಣು ಕುಸಿದು ಕಾರ್ಮಿಕ ಸಾವು

Published:
Updated:

ಬೆಂಗಳೂರು: ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ತೋಡಿದ್ದ ಪಾಯದ ಮಣ್ಣು ಕುಸಿದು ಕಾರ್ಮಿಕ ಶಬರೀಷ್‌ (36) ಮೃತಪಟ್ಟಿದ್ದಾರೆ.

ಜೆಸಿಬಿ ಯಂತ್ರದ ಮೂಲಕ ಕೆಲ ದಿನಗಳ ಹಿಂದಷ್ಟೇ ಪಾಯ ತೊಡಲಾಗಿತ್ತು. ಗುರುವಾರ ಬೆಳಿಗ್ಗೆ ಶಬರೀಷ್, ಅವರ ಪತ್ನಿ ಶಂಕರಮ್ಮ, ಸಿಂಹಾದ್ರಿ, ಅವರ ಪತ್ನಿ ಪದ್ಮಮ್ಮ ಆ ಪಾಯದ ಗುಂಡಿಯೊಳಗೆ ನಿಂತು ಕೆಲಸ ಮಾಡುತ್ತಿದ್ದರು.

ಈ ವೇಳೆ ಸಡಿಲಗೊಂಡ ಪಾಯದ ಮಣ್ಣು ಕಾರ್ಮಿಕರ ಮೇಲೆ ಬಿದ್ದಿತು. ಶಬರೀಷ್‌ ಹಾಗೂ ಶಂಕರಮ್ಮ ಮಣ್ಣಿನಲ್ಲಿ ಸಿಲುಕಿಕೊಂಡರೆ, ಸಿಂಹಾದ್ರಿ– ಪದ್ಮಮ್ಮ ದಂಪತಿ ಮಣ್ಣು ಸರಿಸಿ ಹೊರಗಡೆ ಬಂದರು.

ಅವರ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಮಣ್ಣನ್ನು ಸರಿಸಿ ಶಬರೀಷ್–ಶಂಕರಮ್ಮ ದಂಪತಿಯನ್ನೂ ಹೊರತಂದರು. ಅಷ್ಟರಲ್ಲಾಗಲೇ ಶಬರೀಷ್ ಕೊನೆಯುಸಿರೆಳೆದಿದ್ದರು.

ಮಾಲೀಕ, ಗುತ್ತಿಗೆದಾರರ ವಿರುದ್ಧ ಪ್ರಕರಣ: ‘ನಾಲ್ವರು ಕಾರ್ಮಿಕರು ಆಂಧ್ರಪ್ರದೇಶದವರು. ಕೆಲಸಕ್ಕಾಗಿ ಕೆಲ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ಅವರು, ಬಾಬುಸಾಪಾಳ್ಯದಲ್ಲಿ ಶೆಡ್‌ ನಿರ್ಮಿಸಿಕೊಂಡು ವಾಸವಿದ್ದರು’ ಎಂದು ಶಂಕರಪುರ ಪೊಲೀಸರು ತಿಳಿಸಿದರು.

‘ಈ ಕಾರ್ಮಿಕರನ್ನು ಗುತ್ತಿಗೆದಾರನೊಬ್ಬ ಕೆಲಸಕ್ಕೆ ಕರೆದುಕೊಂಡು ಬಂದಿದ್ದ. ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಂಡಿರಲಿಲ್ಲ. ಹೀಗಾಗಿ, ನಿರ್ಲಕ್ಷ್ಯ (ಐಪಿಸಿ 304ಎ) ಆರೋಪದಡಿ ಜಾಗದ ಮಾಲೀಕ ಹಾಗೂ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಅವರು ತಲೆಮರೆಸಿಕೊಂಡಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry