ಗೆಲುವು ತಂದುಕೊಟ್ಟ ಚೆಟ್ರಿ

7
ಐಎಸ್‌ಎಲ್‌: ಬೆಂಗಳೂರು ಎಫ್‌ಸಿಗೆ ಗೆಲುವಿನ ಸಿಹಿ

ಗೆಲುವು ತಂದುಕೊಟ್ಟ ಚೆಟ್ರಿ

Published:
Updated:
ಗೆಲುವು ತಂದುಕೊಟ್ಟ ಚೆಟ್ರಿ

ಮುಂಬೈ: ನಾಯಕ ಸುನಿಲ್‌ ಚೆಟ್ರಿ, ಗುರುವಾರ ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ಮೋಡಿ ಮಾಡಿದರು. ಚೆಟ್ರಿ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ಬಲದಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿಯಿತು.

ಬೆಂಗಳೂರಿನ ತಂಡ 3–1 ಗೋಲುಗಳಿಂದ ಮುಂಬೈ ಸಿಟಿ ವಿರುದ್ಧ ಗೆದ್ದಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಬಿಎಫ್‌ಸಿಗೆ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಮುಂಬೈ ಸಿಟಿ ಪ್ರಬಲ ಪೈಪೋಟಿ ನೀಡಿತು. ಹೀಗಾಗಿ 42ನೇ ನಿಮಿಷದವರೆಗೂ ಜಿದ್ದಾಜಿದ್ದಿನ ಹೋರಾಟ ಕಂಡುಬಂತು.

43ನೇ ನಿಮಿಷದಲ್ಲಿ ಬಿಎಫ್‌ಸಿ, ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿಕೊಂಡಿತು. ಈ ಅವಕಾಶದಲ್ಲಿ ಚೆಟ್ರಿ ಮೋಡಿ ಮಾಡಿದರು. ಚೆಟ್ರಿ ಬಾರಿಸಿದ ಚೆಂಡು ಶರವೇಗದಲ್ಲಿ ಸಾಗಿ ಮುಂಬೈ ಗೋಲುಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಅಂಗಳದಲ್ಲಿ ಸಂಭ್ರಮ ಮೇಳೈಸಿತು.

ಇದರಿಂದ ಉತ್ಸಾಹ ಹೆಚ್ಚಿಸಿಕೊಂಡ ಚೆಟ್ರಿ ಪಡೆ, ದ್ವಿತೀಯಾರ್ಧದಲ್ಲೂ ಗುಣಮಟ್ಟದ ಆಟ ಮುಂದುವರಿಸಿತು. ನಿರಂತರವಾಗಿ ಎದುರಾಳಿ ತಂಡದ ಆವರಣ ಪ್ರವೇಶಿಸುವ ತಂತ್ರ ಅನುಸರಿಸಿದ ತಂಡಕ್ಕೆ 52ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು.

ಚೆಟ್ರಿ ಮತ್ತೊಮ್ಮೆ ಕಾಲ್ಚಳಕ ತೋರಿದರು. ಸಹ ಆಟಗಾರ ಒದ್ದು ಕಳುಹಿಸಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಸುನಿಲ್‌, ಅದನ್ನು ಲೀಲಾಜಾಲವಾಗಿ ಗುರಿ ಮುಟ್ಟಿಸಿ 2–0ರ ಮುನ್ನಡೆಗೆ ಕಾರಣರಾದರು.

63ನೇ ನಿಮಿಷದಲ್ಲಿ ಮಿಕು ಬಿಎಫ್‌ಸಿಯ ಸಂಭ್ರಮ ಇಮ್ಮಡಿಸುವಂತೆ ಮಾಡಿದರು. ವೆನಿಜುವೆಲಾದ ಆಟಗಾರ ಮಿಕು, ಅಮೋಘ ರೀತಿಯಲ್ಲಿ ಗೋಲು ದಾಖಲಿಸಿ ಅಭಿಮಾನಿಗಳ ಮನ ಗೆದ್ದರು. ಹೀಗಾಗಿ ಬಿಎಫ್‌ಸಿ, ಮುನ್ನಡೆಯನ್ನು 3–0ಗೆ ಹೆಚ್ಚಿಸಿಕೊಂಡು ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು.

76ನೇ ನಿಮಿಷದಲ್ಲಿ ಮುಂಬೈ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಬಿಎಫ್‌ಸಿಯ ರಕ್ಷಣಾ ಕೋಟೆ ಭೇದಿಸಿದ ಲಿಯೊ ಕೋಸ್ಟಾ ಚೆಂಡನ್ನು ಗುರಿ ತಲುಪಿಸಿ ತವರಿನ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry