ಅತ್ಯಾಧುನಿಕ ಆಸ್ಪತ್ರೆ ಶೀಘ್ರ: ಶರಣಪ್ರಕಾಶ್‌ ಪಾಟೀಲ

7

ಅತ್ಯಾಧುನಿಕ ಆಸ್ಪತ್ರೆ ಶೀಘ್ರ: ಶರಣಪ್ರಕಾಶ್‌ ಪಾಟೀಲ

Published:
Updated:
ಅತ್ಯಾಧುನಿಕ ಆಸ್ಪತ್ರೆ ಶೀಘ್ರ: ಶರಣಪ್ರಕಾಶ್‌ ಪಾಟೀಲ

ಮೈಸೂರು: ನಗರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದರು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುರುವಾರ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆ.ಆರ್.ಆಸ್ಪತ್ರೆ ಆವರಣ, ಕೆಆರ್‌ಎಸ್‌ ರಸ್ತೆ ಸೇರಿದಂತೆ ಮೂರರಿಂದ ನಾಲ್ಕು ಸ್ಥಳಗಳು ಪರಿಶೀಲನೆಯಲ್ಲಿವೆ. ಶೀಘ್ರವೇ ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ತುರ್ತು ಘಟಕಗಳನ್ನು ಹೊಂದಿರುವ ಜಯದೇವ ಆಸ್ಪತ್ರೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಉದ್ಘಾಟನೆ ಮಾಡಲಾಗುವುದು. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನೌಕರರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ಒಂದು ತಿಂಗಳಿಂದ ಬ್ರೆಡ್ ನೀಡುತ್ತಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು ಸಂಬಂಧಪಟ್ಟ ವೈದ್ಯರನ್ನು ಸ್ಥಳಕ್ಕೆ ಕರೆಸಿದರು. ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಪಾವತಿಯಾಗದ ಕಾರಣ ಬ್ರೆಡ್‌ ನಿಲ್ಲಿಸಲಾಗಿದೆ ಎಂದು ವೈದ್ಯರು ಹೇಳಿದರು. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕೆ.ಆರ್.ಆಸ್ಪತ್ರೆಯಲ್ಲಿ ಹೆರಿಗೆ ತುರ್ತು ಚಿಕಿತ್ಸಾ ಘಟಕ ಹಾಗೂ ನರರೋಗ ಚಿಕಿತ್ಸಾ ವಿಭಾಗದ ನಿರ್ಮಾಣ ಕಾರ್ಯ ಮುಗಿದಿದೆ. ಸದ್ಯದಲ್ಲೇ ಅದನ್ನು ಚಿಕಿತ್ಸೆಗೆ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.

ಶಾಸಕ ವಾಸು ಮಾತನಾಡಿ, ‘ಕೆ.ಆರ್.ಆಸ್ಪತ್ರೆ ಮೇಲೆ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ ಅಗಾಧ ಒತ್ತಡ ಇದೆ. ಅಲ್ಲಿನ ಸಾರ್ವಜನಿಕರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಆಸ್ಪತ್ರೆಯನ್ನು ಉನ್ನತೀಕರಿಸಲು ಯೋಜನೆ ರೂಪಿಸಲು ಮನವಿ ಮಾಡಲಾಗಿದೆ’ ಎಂದರು. ಸಚಿವರು ಸ್ಯಾನಿಟೋರಿಯಂ ಆಸ್ಪತ್ರೆಗೂ ತೆರಳಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry