ಮುಂಬೈನಿಂದ ಬಂದವು ವಿಶೇಷ ಯಂತ್ರ

7

ಮುಂಬೈನಿಂದ ಬಂದವು ವಿಶೇಷ ಯಂತ್ರ

Published:
Updated:
ಮುಂಬೈನಿಂದ ಬಂದವು ವಿಶೇಷ ಯಂತ್ರ

ಉಡುಪಿ: ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ತಮ್ಮ ಪರ್ಯಾಯ ಅವಧಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದ್ದಾರೆ. ಮಠದ ಒಳಾಂಗಣ ಮತ್ತು ಹೊರಾಂಗಣವೂ ಸದಾ ಶುಚಿಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ರೋಡ್‌ ಸ್ವೀಪರ್‌ ಮತ್ತು ಫ್ಲೋರ್‌ ಸ್ಕೃಬ್ಬರ್ ಎಂಬ ಯಂತ್ರವನ್ನು ಮುಂಬೈನಿಂದ ಉಡುಪಿಗೆ ತಂದಿದ್ದಾರೆ.

ಉಡುಪಿ ಶ್ರೀಕೃಷ್ಣಮಠ ನಾಡಿನ ಪ್ರಮುಖ ಪುಣ್ಯಕ್ಷೇತ್ರ. ಇತ್ತೀಚಿನ ವರ್ಷಗಳಲ್ಲಂತೂ ಇಲ್ಲಿಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಅತ್ಯಧಿಕ. ಮಠದ ಒಳಾಂಗಣ ಮತ್ತು ಹೊರಾಂಗಣ ಶುಚಿಯಾಗಿದ್ದರೆ ಭಕ್ತರಿಗೂ ಪ್ರಶಾಂತವಾದ ವಾತಾವರಣ ದೊರೆಯುತ್ತದೆ ಎಂಬ ದೃಷ್ಟಿಯಿಂದ ನೈರ್ಮಲ್ಯಕ್ಕೆ ತುಸು ಹೆಚ್ಚಿನ ಪ್ರಾಧಾನ್ಯತೆ ಇಲ್ಲಿ ದೊರೆಯಲಿದೆ.

‘ಉಡುಪಿಯ ಅಷ್ಟಮಠಾಧೀಶರೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಪೇಜಾವರ ಪರ್ಯಾಯ ಅವಧಿಯಲ್ಲೂ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಲಾಗಿತ್ತು. ಆದರೆ, ಈ ಬಾರಿ ಮುಂಬೈನಿಂದ ವಿಶೇಷ ಯಂತ್ರಗಳನ್ನು ತಂದು ಆ ಮೂಲಕ ಮಠದ ಒಳಾಂಗಣ ಮತ್ತು ಹೊರಾಂಗಣವನ್ನು ದೂಳು, ಕಸ, ಕಡ್ಡಿ, ಪ್ಲಾಸ್ಟಿಕ್‌ಗಳಿಂದ ಮುಕ್ತಗೊಳಿಸಿ ಪರಿಸರವನ್ನು ಇನ್ನಷ್ಟು ಭಕ್ತರಿಗೆ ಇಷ್ಟವಾಗುವ ರೀತಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್‌ ಹೇಳಿದರು.

‘ಪಲಿಮಾರು ಮಠದ ಮುಂಬೈ ಮೀರಾರೋಡ್‌ ಶಾಖೆಯಲ್ಲಿ ಸ್ವಚ್ಛತೆಗಾಗಿ ಹಲವು ವರ್ಷಗಳಿಂದ ರೋಡ್‌ ಸ್ವೀಪರ್‌ ಮತ್ತು ಫ್ಲೋರ್‌ ಸ್ಕೃಬ್ಬರ್ ಬಳಸಲಾಗುತ್ತಿದೆ. ಆ ಯಂತ್ರದ ಮೂಲಕ ತ್ವರಿತವಾಗಿ ಶುಚಿಗೊಳಿಸಲು ಸಾಧ್ಯವಾಗುತ್ತದೆ. ಅದನ್ನು ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ, ಉಡುಪಿಗೂ ತರಲು ಸೂಚಿಸಿದ್ದರು. ಅದರಂತೆ ಸ್ವಚ್ಛತೆಗಾಗಿ ಹಲವು ಉಪಕರಣಗಳನ್ನು ಮುಂಬೈನಿಂದ ತರಲಾಗಿದೆ’ ಎನ್ನುತ್ತಾರೆ ಮುಂಬೈ ಶಾಖಾ ಮಠದ ವ್ಯವಸ್ಥಾಪಕ ರಾಧಾಕೃಷ್ಣ ಭಟ್‌.

‘ರೋಡ್‌ ಸ್ವೀಪರ್‌ ಪೆಟ್ರೋಲ್‌ಚಾಲಿತವಾಗಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಕುರಿತು ಆಪರೇಟ್‌ ಮಾಡುತ್ತಾನೆ. ಉಡುಪಿ ಮಠದ ರಥಬೀದಿಯನ್ನು ಈ ಯಂತ್ರದ ಮೂಲಕ ಕೇವಲ ಒಂದು ಗಂಟೆಯಲ್ಲಿ ಶುಚಿ ಮಾಡಬಹುದು. ದೂಳು, ಮಣ್ಣು ಸೇರಿದಂತೆ ಎಲ್ಲ ರೀತಿಯ ಕಸವನ್ನು ಈ ಯಂತ್ರ ಹೀರಿಕೊಳ್ಳುತ್ತದೆ. ಉಡುಪಿಗೆ ಒಂದು ಯಂತ್ರ ತರಲಾಗಿದ್ದು, ಇನ್ನೊಂದು ಯಂತ್ರವನ್ನು ಶೀಘ್ರದಲ್ಲಿ ತರಲಾಗುತ್ತದೆ’ ಎಂದು ಹೇಳಿದರು.

ಫ್ಲೋರ್‌ ಸ್ಕೃಬ್ಬರ್ ವಿದ್ಯುತ್‌ ಚಾಲಿತವಾಗಿದ್ದು, ಒಬ್ಬ ವ್ಯಕ್ತಿ ಇದನ್ನು ಕೈಯಲ್ಲಿ ಹಿಡಿದು ಆಪರೇಟ್‌ ಮಾಡಬೇಕು. ಇದರಲ್ಲಿ ಸಾಬೂನಿನ ನೀರನ್ನು ಬಳಸಲಾಗುತ್ತದೆ. ಮನುಷ್ಯ ನೆಲವನ್ನು ಒರೆಸಿದಂತೆ ಈ ಯಂತ್ರವು ಕೆಲಸ ಮಾಡುತ್ತದೆ. ಸುಮಾರು 2 ಸಾವಿರ ಮಂದಿ ಕುಳಿತು ಊಟ ಮಾಡಬಹುದಾದ ಮಧ್ವಾಂಗಣವನ್ನು ಈ ಯಂತ್ರದ ಮೂಲಕ ಅರ್ಧ ಗಂಟೆಯಲ್ಲಿ ಶುಚಿ ಮಾಡಬಹುದು. ಎರಡು ಯಂತ್ರವನ್ನು ಈಗಾಗಲೇ ಉಡುಪಿಗೆ ತಂದಿದ್ದು, ಇನ್ನೂ ಮೂರು ತರಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry