ಇದು ‘ನಮ್ದುk’ ಜಮಾನ...

7

ಇದು ‘ನಮ್ದುk’ ಜಮಾನ...

Published:
Updated:
ಇದು ‘ನಮ್ದುk’ ಜಮಾನ...

ಇದು ಸಾಮಾಜಿಕ ಮಾಧ್ಯಮಗಳ ಭರಾಟೆಯ ಕಾಲ. ಈಗ ಅವಕಾಶಕ್ಕಾಗಿ ಕಾಯುವುದು ಮೂರ್ಖತನ. ಸಿನಿಮಾ, ಕಲೆ, ಸಂಗೀತದಲ್ಲಿ ಅಭಿರುಚಿ ಹೊಂದಿರುವವರು, ಏನಾದರೂ ಸಾಧನೆ ಮಾಡಿ ಸಮಾಜಕ್ಕೆ ತೋರಿಸಬೇಕು ಎಂಬ ಹಂಬಲ ಇರುವವರಿಗೆ ಸಾಮಾಜಿಕ ಮಾಧ್ಯಮಗಳು ಬಹುಮುಖ್ಯ ವೇದಿಕೆ. ಇವುಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ ಬೆಳ್ಳಿತೆರೆ ಅಥವಾ ಕಿರುತೆರೆಯ ಗಮನ ಸೆಳೆಯಬಹುದು. ಇಂತಹ ಪ್ರಯತ್ನಕ್ಕೆ ‘ನಮ್ದು ಕನ್ನಡ’ (ನಮ್ದುk) ಕೈ ಹಾಕಿದೆ.

ಪ್ರಾದೇಶಿಕ ಭಾಷೆಗಳಲ್ಲಿ ಯೂಟ್ಯೂಬ್‌ ಚಾನೆಲ್ ತೆರೆಯುವುದು ಇಂದಿನ ಟ್ರೆಂಡ್. ಮನರಂಜನೆ, ಕ್ರೀಡೆ, ತಂತ್ರಜ್ಞಾನ, ಸಾಹಿತ್ಯ, ರಾಜಕೀಯ, ಸಿನಿಮಾಗೆ ಸಂಬಂಧಿಸಿದಂತೆ ಲಕ್ಷಾಂತರ ಚಾನೆಲ್‌ಗಳು ಸಕ್ರಿಯವಾಗಿವೆ. ಆದರೆ ಮಾಮೂಲಿ ಸರಕಿಗಿಂತ ಸ್ವಲ್ಪ ಭಿನ್ನವಾಗಿ, ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದು ಕೆಲವೇ ಕೆಲವು ಚಾನೆಲ್‌ಗಳು. ಇವುಗಳಲ್ಲಿ ‘ನಮ್ದುk’ ಸಹ ಒಂದು.

ಈ ಚಾನೆಲ್‌ನ ಪೂರ್ತಿ ಹೆಸರು ‘ನಮ್ದು ಕನ್ನಡ ಚಾನೆಲ್’. ಇದನ್ನೇ ಸಿಂಪಲ್ಲಾಗಿ ‘ನಮ್ದುk’ ಎಂದು ಕರೆಯಲಾಗುತ್ತದೆ. ಮೂರು ವರ್ಷಗಳ ಹಿಂದೆ ಆರಂಭವಾದ ಚಾನೆಲ್‌ನಲ್ಲಿ ಅಣಕು, ವಿಡಂಬನೆ, ಹಾಸ್ಯ ವಿಡಿಯೊಗಳು ಸೇರಿದಂತೆ ಕಿರುಚಿತ್ರಗಳು ಮತ್ತು ಆಲ್ಬ್‌ಂ ಸಾಂಗ್‌ಗಳನ್ನು ಪೋಸ್ಟ್‌ ಮಾಡಲಾಗುತ್ತಿದೆ. ಯುವಕರಿಗೆ ಇಷ್ಟವಾಗುವ ರಂಜನೆ ಮತ್ತು ಹಾಸ್ಯವನ್ನು ಚಾನೆಲ್ ಉಣಬಡಿಸುತ್ತಿದೆ.

‘ನಮ್ದುk’ ಆರಂಭವಾಗಿದ್ದು 2014ರಲ್ಲಿ. ಇದರ ಸೂತ್ರಧಾರ ಶ್ರವಣ್ ನಾರಾಯಣ್ ಐತಾಳ್. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದಾರೆ. ತಮ್ಮ ಇತರೆ ಸಾಫ್ಟ್‌ವೇರ್‌ ಗೆಳೆಯರ ಜತೆಗೂಡಿ ಈ ತಂಡ ಕಟ್ಟಿದ್ದಾರೆ. ಬಿಡುವಿನ ವೇಳೆಯಲ್ಲಿ ಮಾತ್ರ ವಿಡಿಯೊ ಅಥವಾ ಕಿರುಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಅದು ಕೂಡ ಶೂನ್ಯ ಬಂಡವಾಳದಲ್ಲಿ ಎಂಬುದು ವಿಶೇಷ.

ರಜತ್, ಸಂದೀಪ್, ಗೌತಂ, ಅನೀಶ್, ಅರ್ಜುನ್, ವೀರೇಶ್, ಅನುಷಾ, ಸಚಿನ್, ಹಾಲೇಶ್ ಅವರು ಕಾರ್ಯಕ್ರಮಗಳ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಕಾರ್ತಿಕ್, ಭರತ್ ಹಾಗೂ ಮಾನಸ ಶರ್ಮಾ ಕ್ಯಾಮೆರಾ ನೋಡಿಕೊಂಡರೆ, ಸುನಿಲ್, ಆದಿತ್ಯ ಮಾರ್ಕೆಟಿಂಗ್ ಕೆಲಸ ಮಾಡುತ್ತಾರೆ.

ತಂಡದಲ್ಲಿ ಹವ್ಯಾಸಿ ಕಲಾವಿದರೇ ಇರುವುದರಿಂದ, ಬಿಡುವು ಸಿಕ್ಕಾಗ ಕಥೆ, ಚಿತ್ರಕಥೆ ಬರೆದುಕೊಂಡು ವಾರಾಂತ್ಯದಲ್ಲಿ ಚಿತ್ರಿಕರಣ ಮಾಡುತ್ತಾರೆ. ಸ್ವತಃ ಶ್ರವಣ್ ಅವರೇ ಲ್ಯಾಪ್‌ಟಾಪ್‌ನಲ್ಲಿ ಎಡಿಟಿಂಗ್ ಮಾಡುತ್ತಾರೆ. ರೂಮಿನಲ್ಲೇ ಡಬ್ಬಿಂಗ್ ಕೆಲಸ ಮಾಡಿ ಕಿರುಚಿತ್ರ ಸಿದ್ಧಪಡಿಸುತ್ತಾರೆ.

ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಹಾಸ್ಯಮಯ ಘಟನೆಗಳನ್ನು ಬಿಂಬಿಸುವ ‘ಪರೀಕ್ಷೆ’ ಕಿರುಚಿತ್ರ ಕಳೆದ ವರ್ಷ ವೈರಲ್ ಆಗಿತ್ತು. ಹಾಗೆಯೇ ‘ಬ್ಯಾಚುಲರ್ಸ್’, ‘spoof k ಟರ್ನ್’, ‘ನೋಡಿ ಸ್ವಾಮಿ ನಾವಿರೋದೆ ಹೀಗೆ’, ‘ಅಮಿಕೊಂಡಿರಪ್ಪ’, ‘ಅಗ್ನಿ ಜೆ2ಇಇ’  ಜನಪ್ರಿಯ ಕಿರುಚಿತ್ರಗಳು. ಇದರ ಜತೆಗೆ ಕೆಲ ಮ್ಯೂಸಿಕ್ ಆಲ್ಬ್‌ಂಗಳನ್ನು ಬಿಡುಗಡೆ ಮಾಡಲಾಗಿದೆ.

ಪೊಲೀಸ್‌ ಸ್ಟೋರಿ ಸಿನಿಮಾದ ಸಾಯಿಕುಮಾರ್ ಪಾತ್ರವನ್ನು ಅನುಕರಣೆ ಮಾಡಿ ‘ಅಗ್ನಿ ಜೆ2ಇಇ‘ ಕಿರುಚಿತ್ರ ನಿರ್ಮಿಸಲಾಗಿದೆ. ಸಾಫ್ಟ್‌ವೇರ್‌ ಕಂಪೆನಿಯೊಂದರ ಮುಖ್ಯಸ್ಥರು ಒಬ್ಬ ಪ್ರಾಮಾಣಿಕ ಉದ್ಯೋಗಿ (ಟೆಕಿ) ಮೇಲೆ ಆರೋಪ ಮಾಡಿದಾಗ ಆ ಎಂಜಿನಿಯರ್ ಹೇಗೆ ಪ್ರತ್ಯುತ್ತರ ನೀಡಬಹುದು ಎಂಬುದನ್ನು ಶ್ರವಣ್ ಈ ಕಿರುಚಿತ್ರದಲ್ಲಿ ತೋರಿಸಿದ್ದಾರೆ.ನಮ್ದುk ವಿಡಿಯೊಗಳನ್ನು ನೋಡಲು ಯುಟ್ಯೂಬ್‌ನಲ್ಲಿ Namdu K ಎಂದು ಹುಡುಕಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry