ಲೇಖಾನುದಾನ ತೆಗೆದುಕೊಳ್ಳಿ

7

ಲೇಖಾನುದಾನ ತೆಗೆದುಕೊಳ್ಳಿ

Published:
Updated:

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು ಒಂದು ತಿಂಗಳು ರಾಜ್ಯದಾದ್ಯಂತ ಪ್ರವಾಸ ಮಾಡಿದ್ದಾರೆ. ಹೋದ ಕಡೆಗಳಲ್ಲೆಲ್ಲ ನೂರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಇಷ್ಟೊಂದು ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಸಿರುವುದನ್ನು ನೋಡಿದರೆ, ಇವುಗಳೆಲ್ಲ ಈ ವರ್ಷದ ಬಜೆಟ್‌ನಲ್ಲಿಯೇ ಮಂಜೂರಾದವೇ ಇಲ್ಲ ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆಂದು ಕಲ್ಲುಹಾಕಿದ್ದೋ ಎಂಬುದನ್ನು ತಿಳಿಯಬೇಕಿದೆ. ಬಜೆಟ್‌ನಲ್ಲಿ ಅನುಮೋದನೆ ಪಡೆದಿದ್ದರೆ ಚುನಾವಣೆ ಹತ್ತಿರ ಬರುವವರೆಗೆ ಏಕೆ ಕಾಯಬೇಕಾಯಿತು, ಇಷ್ಟು ಬೃಹತ್ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ವಿಳಂಬವೇಕಾಯಿತು, ಆರ್ಥಿಕ ವರ್ಷದ ಕೊನೆಯ ದಿನಗಳಲ್ಲಿ ವೆಚ್ಚ ಮಾಡುವ ಕೋಟ್ಯಂತರ ರೂಪಾಯಿ, ನಿಜಕ್ಕೂ ಉದ್ದೇಶಿತ ಕಾಮಗಾರಿಗಳಿಗೆ ಬಳಕೆ ಆಗಲಿದೆಯೇ... ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟನೆ ನೀಡುವುದು ಜನತಾಂತ್ರಿಕವಾದ ಕ್ರಮ.

ಇಂದಿರಾ ಕ್ಯಾಂಟೀನ್ ಮುಂತಾದ ಕೆಲವು ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿರುವುದನ್ನು ಸಿದ್ದರಾಮಯ್ಯನವರ ವಿರೋಧಿಗಳೂ ಮೆಚ್ಚಲೇಬೇಕು. ಆದರೆ ಈಗಿನ ಸರ್ಕಾರದ ಅವಧಿ ಇನ್ನು ಮೂರೂವರೆ ತಿಂಗಳು ಮಾತ್ರ ಇದೆ. ಇಷ್ಟು ಕಡಿಮೆ ಅವಧಿಯಲ್ಲಿ ಈಗ ಹಾಕಿರುವ ನೂರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಹಣ ಒದಗಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಜನಸಾಮಾನ್ಯರಿಗೆ ಕಾಡದೇ ಇರದು.

‘ಮುಖ್ಯಮಂತ್ರಿ ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದಾರೆ’ ಎಂಬ ಸುದ್ದಿ ಈಗ ಹರಿದಾಡುತ್ತಿದೆ. ಈ ಸರ್ಕಾರದ ಅವಧಿ ಮೇ ಮೊದಲ ವಾರದವರೆಗೆ ಇದೆ. ಇನ್ನು ಮೂರು ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಚುನಾವಣಾ ಆಯೋಗ ಕೂಡ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಮುಂದಿನ ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಘೋಷಣೆ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವಸ್ತುಸ್ಥಿತಿ ಹೀಗಿರುವಾಗ, ಮುಖ್ಯಮಂತ್ರಿ ಮತ್ತೊಂದು ಪೂರ್ಣಾವಧಿಗೆ ಬಜೆಟ್ ಮಂಡಿಸಲು ಬರುವುದಿಲ್ಲ. ಆದ್ದರಿಂದ ಅವರು ಆರು ತಿಂಗಳವರೆಗೆ ಸರ್ಕಾರ ನಡೆಯಲು ಬೇಕಾದ ಹಣಕ್ಕಾಗಿ ಲೇಖಾನುದಾನ ತೆಗೆದುಕೊಳ್ಳುವುದು ಸೂಕ್ತ.

ಹೊಸ ಬಜೆಟ್ ಸಿದ್ಧತೆ ಮತ್ತು ಮಂಡನೆಯನ್ನು ಮುಂದಿನ ಸರ್ಕಾರಕ್ಕೆ ಬಿಡಿ. ನಿಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಅಥವಾ ಬೇರೆ ಪಕ್ಷವೇ ಬರಲಿ, ಹೊಸ ಸರ್ಕಾರವು ಆ ಪಕ್ಷದ ಪ್ರಣಾಳಿಕೆಯಲ್ಲಿ ನೀಡುವ ಭರವಸೆಗಳ ಆದ್ಯತೆಯ ಮೇಲೆ ಹೊಸ ದೃಷ್ಟಿಕೋನದ ಬಜೆಟ್ ಮಂಡನೆ ಮಾಡಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry