ಕೆನಡಾದ ಸಿರಿಯನ್ ಹೋಟೆಲ್‌ಗಳು ಹೇಳುವ ಕಥೆ

7

ಕೆನಡಾದ ಸಿರಿಯನ್ ಹೋಟೆಲ್‌ಗಳು ಹೇಳುವ ಕಥೆ

Published:
Updated:
ಕೆನಡಾದ ಸಿರಿಯನ್ ಹೋಟೆಲ್‌ಗಳು ಹೇಳುವ ಕಥೆ

ಎರಡು ವರ್ಷಗಳಿಂದೀಚೆಗೆ, ಕೆನಡಾದಲ್ಲಿ ಸಿರಿಯಾದ 50 ಸಾವಿರಕ್ಕೂ ಹೆಚ್ಚಿನ ನಿರಾಶ್ರಿತರಿಗೆ ನೆಲೆ ಕಲ್ಪಿಸಿದ ನಂತರ ಟೊರಾಂಟೊದಲ್ಲಿ ಸಿರಿಯನ್‌ ಖಾದ್ಯಗಳು ದೊರೆಯುವುದು ಹೆಚ್ಚಾಗುತ್ತಿದೆ. ಟೊರಾಂಟೊದಲ್ಲಿರುವ ಸಿರಿಯನ್ ರೆಸ್ಟೊರೆಂಟ್‌ಗಳು ಸಿರಿಯಾ ನಿರಾಶ್ರಿತರಲ್ಲಿ ಇರುವ ವೈವಿಧ್ಯವನ್ನು ತೋರಿಸಿಕೊಡುತ್ತಿವೆ.  ಸಿರಿಯಾದಲ್ಲಿನ ಪರಿಸ್ಥಿತಿ ತೀರಾ ದುರದೃಷ್ಟಕರ ಆಗಿದ್ದರೂ, ಈ ನಗರದಲ್ಲಿ ಮೈದಳೆಯುತ್ತಿರುವ ಸಿರಿಯನ್ ಅಡುಗೆ ಶೈಲಿಯು ವಲಸೆ ಬಂದ ಸಮುದಾಯವೊಂದು ಇತರ ಸಮುದಾಯಗಳ ಜೊತೆ ಸೇರಿಕೊಳ್ಳುವ ಪ್ರಕ್ರಿಯೆಯನ್ನು ತೋರಿಸುತ್ತಿದೆ. ಹೊಸದೊಂದು ಜೀವನಕ್ಕೆ ಆಹಾರವು ಹೇಗೆ ನೆರವಾಗಬಲ್ಲದು ಎಂಬುದನ್ನು ಕಟ್ಟಿಕೊಡುತ್ತದೆ ಈ ಪ್ರತ್ಯಕ್ಷ ವರದಿ. ನಿರಾಶ್ರಿತ ಬದುಕಿನ ತಲ್ಲಣಗಳ ನಡುವೆಯೂ ಇಲ್ಲಿ ಬದುಕು ಅರಳುತ್ತಿರುವ ಪರಿ ಅನನ್ಯ

**

ಫಾಸ್ಟ್‌ಫುಡ್‌ ಮಳಿಗೆ ಹಾಗೂ ಮಾಮೂಲಿ ಹೋಟೆಲ್‌ಗಳ ಸ್ವರೂಪ ಬೇರೆ ಬೇರೆ. ಟೊರಾಂಟೊದ ಹೃದಯ ಭಾಗದಲ್ಲಿ ಈ ಎರಡು ಬಗೆಗಳ ನಡುವೆ ನಿಲ್ಲಬಹುದಾದ ರೆಸ್ಟೊರೆಂಟ್ ಒಂದಿದೆ. ಅದರ ಹೆಸರು ಸೌಫಿ. ಈ ರೆಸ್ಟೊರೆಂಟ್‌ನ ಒಳಾಂಗಣವು ಇನ್‌ಸ್ಟಾಗ್ರಾಮ್‌ಗೆ ಹೇಳಿ ಮಾಡಿಸಿದಂತೆ ಇದೆ. ಶ್ವೇತವರ್ಣದ ಟೈಲ್ಸ್‌, ಹಳೆಯ ಕಾಲದ ಚಿತ್ರಪಟಗಳು... ಖಾದ್ಯಗಳ ಹೆಸರುಗಳನ್ನು ಚಾಕ್‌ ಪೀಸು ಬಳಸಿ ಬರೆದಿರುವ ಒಂದು ಫಲಕ ಮತ್ತು ಕೆಲವು ಆಲಂಕಾರಿಕ ವಸ್ತುಗಳು ಅಲ್ಲಿವೆ. ಇವುಗಳನ್ನೆಲ್ಲ ಅಲ್ಲಿ ಜೋಡಿಸಿದ್ದು ರೆಸ್ಟೊರೆಂಟ್‌ನ ಒಡತಿ ಜಲಾ ಅಲ್‌ಸೌಫಿ. ಇವರು ಮನಃಶಾಸ್ತ್ರ ಮತ್ತು ವಾಸ್ತುಶಾಸ್ತ್ರದಲ್ಲಿ ಈಚೆಗಷ್ಟೇ ಪದವಿ ಪಡೆದಿದ್ದಾರೆ.

ಈಕೆಯ ತಮ್ಮ ಆಲಾ ಅಲ್ಲಿಗೆ ಬಂದವರ ಟೇಬಲ್‌ಗೆ ಖಾದ್ಯಗಳನ್ನು ತಂದುಕೊಡುವ ಕೆಲಸ ಮಾಡುತ್ತಾರೆ. ಇವರು ಹೇಗೇಗೋ ಗಡ್ಡ ಬಿಟ್ಟುಕೊಂಡಿದ್ದಾರೆ, ಈ ರೆಸ್ಟೊರೆಂಟ್  ಇರುವ ಕ್ವೀನ್ ಸ್ಟ್ರೀಟ್‌ನ ಬೇರೆ ಬೇರೆ ರೆಸ್ಟೊರೆಂಟ್‌ಗಳ ಕೆಲಸಗಾರರಂತೆ ಇವರು ಕೂಡ ಬ್ಲ್ಯೂ ಜೇ ರೀತಿಯ ಟೋಪಿ ಧರಿಸುತ್ತಾರೆ. ಆದರೆ ಸೌಫಿ ರೆಸ್ಟೊರೆಂಟ್‌ನಲ್ಲಿ ಊಟ ಮಾತ್ರವಲ್ಲದೆ ಇನ್ನೂ ಏನೋ ಸಿಗುತ್ತದೆ ಎಂಬ ಸೂಚನೆ ದೊರೆಯುತ್ತದೆ. ‘ಇನ್ನೂ ಏನೋ’ ಎಂಬ ಪಟ್ಟಿಯಲ್ಲಿ ಹಳೆಯ ಅರೇಬಿಕ್ ಪಾಪ್‌ ಹಾಡುಗಳ ಮಾಧುರ್ಯ, ಕೆಲವು ಸಸ್ಯಗಳ ಪರಿಮಳ ಹಾಗೂ ಅಲ್ಲಿನ ಸಿಬ್ಬಂದಿಯ ಅರಿಸಿನ ಮತ್ತು ಕಪ್ಪು ಬಣ್ಣದ ಟಿ-ಷರ್ಟ್‌ಗಳ ಮೇಲಿರುವ ‘ಫ್ರಂ ಸಿರಿಯಾ, ವಿತ್ ಲವ್’ (ಸಿರಿಯಾದಿಂದ, ಪ್ರೀತಿಯಿಂದ) ಎಂಬ ಬರಹ ಸೇರಿದೆ.

ತೀರಾ ಈಚಿನವರೆಗೆ ಸಿರಿಯನ್ ಆಹಾರವನ್ನು ಟೊರಾಂಟೊದಲ್ಲಿ ಕಾಣುವುದು ಕಷ್ಟವೇ ಆಗಿತ್ತು. ಇಲ್ಲಿದ್ದ ಸಿರಿಯನ್‌ ಜನರ ಸಂಖ್ಯೆ ತಮ್ಮದೇ ಆದ ಒಂದು ರೆಸ್ಟೊರೆಂಟ್  ಸಲಹುವಷ್ಟು ದೊಡ್ಡದಿರಲಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಈಚೆಗೆ, ಕೆನಡಾದಲ್ಲಿ ಸಿರಿಯಾದ 50 ಸಾವಿರಕ್ಕೂ ಹೆಚ್ಚಿನ ನಿರಾಶ್ರಿತರಿಗೆ ನೆಲೆ ಕಲ್ಪಿಸಿದ ನಂತರ ಟೊರಾಂಟೊದಲ್ಲಿ ಸಿರಿಯನ್‌ ಖಾದ್ಯಗಳು ದೊರೆಯುವುದು ಹೆಚ್ಚಾಗುತ್ತಿದೆ. ಟೊರಾಂಟೊದಲ್ಲಿ 11 ಸಾವಿರಕ್ಕೂ ಹೆಚ್ಚು ಜನ ಸಿರಿಯನ್ನರು ನೆಲೆ ಕಂಡುಕೊಂಡಿದ್ದಾರೆ.

ಇಂತಹ ರೆಸ್ಟೊರೆಂಟ್‌ಗಳನ್ನು ಆರಂಭಿಸಿರುವ ಉದ್ಯಮಿಗಳು ಸಿರಿಯಾ ನಿರಾಶ್ರಿತರಲ್ಲಿ ಇರುವ ವೈವಿಧ್ಯವನ್ನೂ ತೋರಿಸಿಕೊಡುತ್ತಿದ್ದಾರೆ. ಈ ಉದ್ಯಮಿಗಳಲ್ಲಿ 17 ವರ್ಷ ವಯಸ್ಸಿನ ತರುಣರೂ ಇದ್ದಾರೆ, 70 ವರ್ಷ ವಯಸ್ಸಿನ ವೃದ್ಧರೂ ಇದ್ದಾರೆ, ರೈತರೂ ಇದ್ದಾರೆ, ಪ್ರಾಧ್ಯಾಪಕರೂ ಇದ್ದಾರೆ. ಅವರು ತಮ್ಮನ್ನು ತಾವು ಶಿಯಾ, ಸುನ್ನಿ, ಡ್ರೂಜ್, ಕುರ್ದ್‌, ಅಲಾವೈತ್, ಕ್ರೈಸ್ತ ಎಂದು ಗುರುತಿಸಿಕೊಳ್ಳುತ್ತಾರೆ. ಕೆಲವರು ತಮ್ಮನ್ನು ‘ಸಿರಿಯನ್’ ಎಂದಷ್ಟೇ ಗುರುತಿಸಿಕೊಳ್ಳುತ್ತಾರೆ. ಈಗ ಇಲ್ಲಿ ರೆಸ್ಟೊರೆಂಟ್ ಆರಂಭಿಸಿರುವ ಕೆಲವರು ಈ ಹಿಂದೆ ತಮ್ಮ ದೇಶದಲ್ಲೂ ಆಹಾರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಕೆಲವರು ಈ ಹಿಂದೆ ಅಡುಗೆಯನ್ನೇ ಮಾಡದಂಥವರು!

ವಲಸಿಗರ ಆಹಾರ ಕ್ರಮವು ಟೊರಾಂಟೊ ನಗರದ ಆಹಾರ ವೈವಿಧ್ಯಕ್ಕೆ ತಮ್ಮದೇ ಆದ ವ್ಯಾಖ್ಯಾನ ನೀಡಿದೆ (ಟೊರಾಂಟೊ ನಗರದ ಅರ್ಧಕ್ಕಿಂತ ಹೆಚ್ಚು ಜನ ಬೇರೆ ದೇಶಗಳಲ್ಲಿ ಜನಿಸಿದವರು). ಈ ನಗರದಲ್ಲಿ ಈಗ ಮೈದಳೆಯುತ್ತಿರುವ ಸಿರಿಯನ್ ಅಡುಗೆ ಶೈಲಿಯು ವಲಸೆ ಬಂದ ಸಮುದಾಯವೊಂದು ಇತರ ಸಮುದಾಯಗಳ ಜೊತೆ ಸೇರಿಕೊಳ್ಳುವ ಪ್ರಕ್ರಿಯೆಯನ್ನು ತೋರಿಸುತ್ತಿದೆ. ಹೊಸದೊಂದು ಜೀವನಕ್ಕೆ ಆಹಾರವು ಹೇಗೆ ನೆರವಾಗಬಲ್ಲದು ಎಂಬುದನ್ನೂ ಹೇಳುತ್ತಿದೆ.

ಸಿರಿಯನ್ ಸಮುದಾಯ ಈ ನಗರಕ್ಕೆ ಬಂದಿರುವ ಸಂದರ್ಭವು ಇನ್ನೊಂದು ಸಂಗತಿಯನ್ನೂ ಹೇಳುತ್ತಿದೆ. ‘ಮೊದಲು ಬಂದಾಗ ಇದ್ದ ಸಂದರ್ಭಕ್ಕೂ ಈಗ ಸಿರಿಯನ್ನರು ಬರುತ್ತಿರುವ ಸಂದರ್ಭಕ್ಕೂ ಬಹಳ ವ್ಯತ್ಯಾಸ ಇದೆ’ ಎನ್ನುತ್ತಾರೆ ಸುರೇಶ್ ದಾಸ್. ಇವರು ಖಾದ್ಯಗಳ ಬಗ್ಗೆ ವರದಿ ಬರೆಯುವ ಪತ್ರಕರ್ತ. ನಗರದಲ್ಲಿರುವ ವಲಸಿಗರ ಅಂಗಡಿಗಳು, ರೆಸ್ಟೊರೆಂಟ್‌ಗಳು ಹಾಗೂ ಹೊರವಲಯದ ಚಿಕ್ಕ ಮಾಲ್‌ಗಳಲ್ಲಿ ಸಿಗುವ ಖಾದ್ಯಗಳ ಬಗ್ಗೆ ದಾಸ್ ವರದಿ ಮಾಡುತ್ತಾರೆ.

ದಾಸ್ ಅವರು ಶ್ರೀಲಂಕಾ ಮೂಲದ ತಮಿಳು ಕುಟುಂಬಕ್ಕೆ ಸೇರಿದವರು. ಶ್ರೀಲಂಕಾದ ತಮಿಳರು ಹಾಗೂ ಫಿಲಿಪ್ಪೀನ್ಸ್‌ನ ಜನ ಇಲ್ಲಿ ವಲಸಿಗರ ಕುಟುಂಬಗಳು ವಾಸಿಸುವ ಪ್ರದೇಶದ ಸಮೀಪ ರೆಸ್ಟೊರೆಂಟ್‌ಗಳನ್ನು ನಡೆಸುತ್ತಾರೆ. ತಮ್ಮ ದೇಶದ ಜನರಿಗೆ ಆಹಾರ ಪೂರೈಸುವುದು ಅವುಗಳ ಮುಖ್ಯ ಕೆಲಸ. ಆದರೆ ಸಿರಿಯನ್ನರು ತಮ್ಮ ವಹಿವಾಟನ್ನು ಟೊರಾಂಟೊದ ಆದ್ಯಂತ ವಿಸ್ತರಿಸಿದ್ದಾರೆ. ತಿನ್ನುವಂತಹ ಯಾವುದೇ ವಸ್ತುವಿನ ಬಗ್ಗೆ ಈ ನಗರ ಮೋಹ ಬೆಳೆಸಿಕೊಳ್ಳುತ್ತಿರುವ ಹೊತ್ತಲ್ಲೇ ಸಿರಿಯನ್ನರು ತಮ್ಮ ವಹಿವಾಟು ವಿಸ್ತರಿಸುವ ಕೆಲಸ ಮಾಡಿದ್ದಾರೆ.

ಅವರು ಇನ್‌ಸ್ಟಾಗ್ರಾಂನಂತಹ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮಲ್ಲಿ ಲಭ್ಯವಿರುವ ಆಹಾರದ ಬಗ್ಗೆ ಹೆಚ್ಚಿನ ಜನರಿಗೆ ತಿಳಿಸಬಹುದು. ಬಗೆಬಗೆಯ ಖಾದ್ಯಗಳ ಫೋಟೊ ನೋಡಿ ಅವುಗಳನ್ನು ತಿನ್ನಲು ಬರುವವರನ್ನು ಆ ಮೂಲಕ ತಮ್ಮೆಡೆ ಸೆಳೆಯಬಹುದು. ಟೊರಾಂಟೊದ ಜನರಿಗೆ ಸಿಗುವ ಅತ್ಯಂತ ಹೊಸ ರೀತಿಯ, ಮಸಾಲೆಯಿಂದ ತುಂಬಿರುವ ಮತ್ತು ಸಿರಿಯಾದ ಅಧಿಕೃತ ರುಚಿಯ ಆಹಾರ ಈ ರೆಸ್ಟೊರೆಂಟ್‌ಗಳಲ್ಲಿ ಸಿಗುತ್ತದೆ ಎಂದು ದಾಸ್ ಹೇಳುತ್ತಾರೆ.

ಸಿರಿಯಾದ ನಿರಾಶ್ರಿತರನ್ನು ಕೆನಡಾ ದೇಶ ಬರಮಾಡಿಕೊಂಡಿರುವ ರೀತಿ ಗಮನಿಸಿದರೆ, ಸಿರಿಯಾದವರಿಗೆ ಇಲ್ಲಿ ಸೆಲೆಬ್ರಿಟಿಗಳಿಗೆ ಸಿಗುವಂತಹ ಮರ್ಯಾದೆ ಸಿಕ್ಕಿದೆ ಎನ್ನಬಹುದು. ಈ ಪರಿಸ್ಥಿತಿಯು ಖಾದ್ಯ ವಸ್ತುಗಳ ಮಾರಾಟ ಹೆಚ್ಚಿಸುವಲ್ಲಿ, ದೂರಗಾಮಿ ಯಶಸ್ಸು ಕಾಣುವಲ್ಲಿ ನೆರವು ನೀಡಬಹುದು.‘ಈ ನಗರಕ್ಕೆ ಹೊಸದಾಗಿ ಬಂದವರು ಹೊಸದಾಗಿ ಆರಂಭಿಸುತ್ತಿರುವ ಉದ್ಯಮಕ್ಕೆ ಇಲ್ಲಿ ಬಹಳಪೂರಕ ವಾತಾವರಣ ಇದೆ’ ಎಂದರು 23 ವರ್ಷ ವಯಸ್ಸಿನ ಜಲಾ ಅಲ್‌ಸೌಫಿ.

ಸೌಫಿ ರೆಸ್ಟೊರೆಂಟ್‌ ಅನ್ನು ಅಲ್‌ಸೌಫಿ ತನ್ನ ಪಾಲಕರಾದ ಶಹನಾಜ್ ಮತ್ತು ಹುಸಾಂ, ಸಹೋದರ ಆಲಾ ಜೊತೆ ಜೊತೆ ಸೇರಿ ಆಗಸ್ಟ್‌ನಲ್ಲಿ ಆರಂಭಿಸಿದರು. ಇನ್ನೊಬ್ಬ ಸಹೋದರ ಆಯ್‌ಹಾಂ ಈಗ ಪ್ರೌಢಶಾಲೆಯಲ್ಲಿ ಓದುತ್ತಿದ್ದಾನೆ. ಟೊರಾಂಟೊದ ಸುತ್ತಮುತ್ತಲಿನ ಪ್ರದೇಶದಲ್ಲಿ ಈಚಿನ ವರ್ಷಗಳಲ್ಲಿ ಒಟ್ಟು ಅರ್ಧ ಡಜನ್ ಸಿರಿಯನ್ ಹೋಟೆಲ್‌ಗಳು ಆರಂಭವಾಗಿವೆ.

ಇವರ ಕುಟುಂಬದ ಮೂಲ ಇರುವುದು ಡಮಾಸ್ಕಸ್‌ನಲ್ಲಿ. ಆದರೆ ಇವರು ಸೌದಿ ಅರೇಬಿಯಾದಲ್ಲಿ ಎರಡು ದಶಕಗಳ ಕಾಲ ವಾಸವಿದ್ದರು. ಅಲ್ಲಿ ಹುಸಾಂ ಸಿವಿಲ್ ಎಂಜಿನಿಯರ್ ಆಗಿ, ಶಹನಾಜ್ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಸಿರಿಯಾದಿಂದ ಕೆನಡಾಕ್ಕೆ ಈಚಿನ ದಿನಗಳಲ್ಲಿ ಬರುತ್ತಿರುವ ನಿರಾಶ್ರಿತರಂತಲ್ಲ ಇವರು. ಜಲಾ ಅವರು ಮೊದಲ ಬಾರಿಗೆ, ಅಂದರೆ 2012ರಲ್ಲಿ ಟೊರಾಂಟೊ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಇಲ್ಲಿಗೆ ಬಂದರು. ಇದಾದ ಮೂರು ವರ್ಷಗಳ ನಂತರ ಅವರ ಕುಟುಂಬ ಕೂಡ ಇಲ್ಲಿಗೆ ಬಂತು. ಹುಸಾಂ ಅವರು ಹೊಂದಿದ್ದ ಎಂಜಿನಿಯರಿಂಗ್ ಪದವಿಗೆ ಕೆನಡಾದಲ್ಲಿ ಮಾನ್ಯತೆ ಇರಲಿಲ್ಲ. ಟೊರಾಂಟೊದಲ್ಲಿ ಸಿರಿಯನ್ ಖಾದ್ಯಗಳ ಪೂರೈಕೆಯು ಬೇಡಿಕೆಗೆ ತಕ್ಕಂತೆ ಇಲ್ಲ ಎಂಬುದನ್ನು ಈ ಕುಟುಂಬ ಮನಗಂಡಿತು. ಟೊರಾಂಟೊದಲ್ಲಿ ಸಿರಿಯನ್ ರೆಸ್ಟೊರೆಂಟ್ ಆರಂಭಿಸಲು ಅವರು ತೀರ್ಮಾನಿಸಿದರು.

‘ಮಧ್ಯಪ್ರಾಚ್ಯದ ಅಡುಗೆಗಳ ಭರಾಟೆಯಲ್ಲಿ ಕಳೆದುಹೋಗಿದ್ದ ಸಿರಿಯನ್ ಅಡುಗೆಗಳಿಗೆ ಆದ್ಯತೆ ನೀಡುವುದು ನಮ್ಮ ಉದ್ದೇಶವಾಗಿತ್ತು’ ಎನ್ನುತ್ತಾರೆ ಜಲಾ. ಹೆಚ್ಚಿನ ಜನರನ್ನು ಆಕರ್ಷಿಸಲಿ ಎಂಬ ಉದ್ದೇಶದಿಂದ ಲೆಬನಾನ್‌ ಮತ್ತು ಅರಬ್ ಮೂಲದ ಇತರ ರೆಸ್ಟೊರೆಂಟ್‌ಗಳು ‘ಮೆಡಿಟರೇನಿಯನ್’ ಎಂಬ ಹೆಸರು ಹೊತ್ತುಕೊಳ್ಳುತ್ತಿದ್ದವು ಎಂದೂ ಅವರು ಹೇಳುತ್ತಾರೆ.

ಸೌಫಿ ರೆಸ್ಟೊರೆಂಟ್ ಅನ್ನು ಹಟಹೊತ್ತು ‘ಸಿರಿಯನ್ ರೆಸ್ಟೊರೆಂಟ್’ ಎಂದು ಬ್ರ್ಯಾಂಡ್ ಮಾಡಲಾಯಿತು. ‘ಸಿರಿಯನ್ನರು ನಿರಾಶ್ರಿತರು ಮಾತ್ರವೇ ಅಲ್ಲ. ಅವರಲ್ಲಿಯೂ ಸಾಮರ್ಥ್ಯ ಇದೆ ಎಂಬುದನ್ನು ತೋರಿಸುವ ಉದ್ದೇಶ ನಮ್ಮಲ್ಲಿತ್ತು’ ಎನ್ನುತ್ತಾರೆ ಶಹನಾಜ್. ಅವರು ಅರೇಬಿಕ್ ಭಾಷೆಯಲ್ಲಿ ಆಡಿದ ಮಾತುಗಳನ್ನು ಮಗಳು ಇಂಗ್ಲಿಷ್‌ಗೆ ಅನುವಾದಿಸಿದರು. ‘ಒಳ್ಳೆಯ ಸಂಗತಿಗಳನ್ನು ಇಲ್ಲಿ ಪ್ರದರ್ಶಿಸಬೇಕು ಎಂದು ತೀರ್ಮಾನಿಸಿದ್ದೆವು. ಸಿರಿಯಾದಲ್ಲಿನ ಪರಿಸ್ಥಿತಿ ತೀರಾ ದುರದೃಷ್ಟಕರ ಆಗಿದ್ದರೂ, ನಾವು ಇಲ್ಲಿ ಸಿರಿಯಾದ ಸಂಸ್ಕೃತಿ, ಸಂಗೀತ ಮತ್ತು ಕಲೆಯನ್ನು ಜನರಿಗೆ ತೋರಿಸುವುದು ಮುಖ್ಯ’ ಎಂದರು ಜಲಾ.

ಅಲ್‌ಸೌಫಿ ಕುಟುಂಬವು ತನ್ನ ಮಾಲೀಕತ್ವದ ರೆಸ್ಟೊರೆಂಟ್‌ನಲ್ಲಿ ಸಾಂಪ್ರದಾಯಿಕ ಸಿರಿಯನ್ ಆಹಾರ ಮತ್ತು ಕೆನಡಾದ ಸಮಕಾಲೀನ ಖಾದ್ಯಗಳ ನಡುವೆ ಉದ್ದೇಶಪೂರ್ವಕವಾಗಿ ಸಮತೋಲನ ಕಾಯ್ದುಕೊಂಡಿದೆ. ಸೌಫಿ ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುವವರು ಯುವಕರು, ಸಿರಿಯನ್ ನಿರಾಶ್ರಿತರು. ಅವರಲ್ಲಿ ಕೆಲವರು ತಲೆ ಪೂರ್ತಿಯಾಗಿ ಮುಚ್ಚುವಂತೆ ಟೋಪಿ ಧರಿಸಿರುತ್ತಾರೆ, ದಾಡಿ ಬಿಟ್ಟಿರುತ್ತಾರೆ. ಇನ್ನು ಕೆಲವರು ಬಿಗಿಯಾದ ಜೀನ್ಸ್‌ ಪ್ಯಾಂಟ್‌, ಮಡಚಿದ ತೋಳುಗಳ ಅಂಗಿ ಧರಿಸುತ್ತಾರೆ. ಅಲ್ಲಿ ಹಲಾಲ್‌ ಮಾಂಸ ದೊರೆಯುತ್ತದೆ, ಜೊತೆಗೆ ಬಿಯರ್‌ ಕೂಡ ಸಿಗುತ್ತದೆ. ಹಾಗೆಯೇ ಸಲಿಂಗಿಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಳಿಗೆ ಬೆಂಬಲ ಸೂಚಿಸುವ ಪತ್ರವೊಂದನ್ನು ಮುಂಬಾಗಿಲಿಗೆ ಅಂಟಿಸಲಾಗಿದೆ. ಸಿರಿಯಾದ ಬೀದಿಗಳಲ್ಲಿ ಸಿಗುವ ವಿವಿಧ ಖಾದ್ಯಗಳನ್ನು ಈ ರೆಸ್ಟೊರೆಂಟ್‌ನ ಮೆನು ಪ್ರತಿನಿಧಿಸುತ್ತದೆ.

ಟೊರಾಂಟೊದಲ್ಲಿ ಸಿರಿಯಾದ ಆಹಾರ ಮಾರಾಟ ಮಾಡಿ ಹೆಸರು ಗಳಿಸಿದ ಮೊದಲ ಅಂಗಡಿ ‘ಕ್ರೌನ್ ಪೇಸ್ಟ್ರೀಸ್’. ಇದೊಂದು ಚಿಕ್ಕ ಬೇಕರಿ.  ಒಂದು ಚಿಕ್ಕ ಮಾಲ್‌ನಲ್ಲಿ ಸಹೋದರರಾದ ಇಸ್ಮಾಯಿಲ್ ಮತ್ತು ರಸೌಲ್ ಅಲ್ಸಲ್ಹಾ ಇದನ್ನು 2015ರಲ್ಲಿ ಆರಂಭಿಸಿದರು.

ಈ ಸಹೋದರರು 2009ರಲ್ಲಿ ಅಲೆಪ್ಪೊದಿಂದ ಕೆನಡಾಕ್ಕೆ ಆಶ್ರಯ ಬೇಡಿ ಬಂದವರು. ಅಲೆಪ್ಪೊದಲ್ಲಿ ಆಗ ಪರಿಸ್ಥಿತಿ ಅಪಾಯಕಾರಿ ಆಗಿತ್ತು ಎಂದು ಅವರು ಹೇಳುತ್ತಾರೆ. ಆದರೆ ಆ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಅವರು ನಿರಾಕರಿಸುತ್ತಾರೆ. ಇಸ್ಮಾಯಿಲ್ ಅವರು ಪ್ರೌಢಶಾಲೆವರೆಗಿನ ಶಿಕ್ಷಣ ಪೂರ್ಣಗೊಳಿಸಿದವರು. ರಸೌಲ್ ಅವರು ಲೆಬನಾನ್ ಮೂಲದವರ ಬೇಕರಿಗಳಲ್ಲಿ ಬೆಳಗಿನಿಂದ ಸಂಜೆಯವರೆಗೆ ದುಡಿಯುತ್ತಿದ್ದರು. ಹೀಗಿದ್ದರೂ ಅವರಿಬ್ಬರ ಗುರಿ ಸಿರಿಯನ್ ಬೇಕರಿಯೊಂದನ್ನು ಆರಂಭಿಸಬೇಕು ಎಂಬುದಾಗಿತ್ತು.

‘ಅರಬ್ ಮೂಲದ ಇತರ ಬೇಕರಿಗಳಲ್ಲಿ ನಿಮಗೆ ಬೆಣ್ಣೆ ಅಥವಾ ಗೋಡಂಬಿ, ವಾಲ್ನಟ್‌ನಂಥವುಗಳ ರುಚಿ ಸಿಗುವುದಿಲ್ಲ. ಅಲ್ಲಿ ಸಿಗುವುದು ಸಕ್ಕರೆಯ ರುಚಿ ಮಾತ್ರ’ ಎನ್ನುತ್ತಾರೆ ರಸೌಲ್. ಇವರಿಬ್ಬರ ತಾತ ಅಲೆಪ್ಪೊ ಹಳೆಯ ನಗರದಲ್ಲಿ 1980ರಿಂದ ‘ಕ್ರೌನ್ ಪೇಸ್ಟ್ರೀಸ್’ ಎಂಬ ಹೆಸರಿನಲ್ಲಿ ಬೇಕರಿ ನಡೆಸುತ್ತಿದ್ದರು. 2011ರಲ್ಲಿ ಜನಾಂಗೀಯ ಕಲಹ ಆರಂಭವಾಗುವತನಕ ಅದು ನಡೆಯುತ್ತಿತ್ತು. ಈ ಸಹೋದರರು ಬೇಕರಿ ವಹಿವಾಟಿನ ಪಟ್ಟುಗಳನ್ನು ಕಲಿತುಕೊಂಡಿದ್ದು ಅಲ್ಲೇ.

ಸಿರಿಯನ್ ಖಾದ್ಯಗಳಿಗೆ ಬೇಕಿರುವ ಸಾಮಗ್ರಿಗಳು ಕೆನಡಾದಲ್ಲಿ ಸಿಗುವುದು ಕಷ್ಟ. ಅದರಲ್ಲೂ, ಸಿರಿಯಾದಲ್ಲಿ ಯುದ್ಧ ಮುಂದುವರಿಯುತ್ತಿರುವ ಕಾರಣ ಅವುಸಿಗುವುದು ಈಗ ಮತ್ತಷ್ಟು ಕಷ್ಟ. ‘ಕ್ರೌನ್ ಪೇಸ್ಟ್ರೀಸ್‌’ ಬೇಕರಿಯು ಪ್ರತಿ ಆರು ತಿಂಗಳಿಗೆಒಮ್ಮೆ 500 ಡಾಲರ್‌ಗಿಂತ ಹೆಚ್ಚು (₹ 31,867ಕ್ಕಿಂತ ಹೆಚ್ಚು) ಪಾವತಿಸಿ ಒಂದು ಬಾಟಲ್‌ ಸಿರಿಯನ್ ರೋಸ್‌ ವಾಟರ್‌ ತರಿಸುತ್ತದೆ. ಈ ರೋಸ್‌ ವಾಟರ್‌ಅನ್ನು ಸಿರಿಯಾದಿಂದ ಟರ್ಕಿಗೆ ಕಳ್ಳಸಾಗಣೆ ಮಾಡಿ ಅಲ್ಲಿಂದ ಟೊರಾಂಟೊಕ್ಕೆ ತರಲಾಗುತ್ತದೆ. ಸಿರಿಯನ್‌ ರೋಸ್‌ ವಾಟರ್‌ ಕೊಡುವ ರುಚಿಯನ್ನು ಬೇರೆ ಯಾವುದೂ ಕೊಡಲಾರದು ಎಂಬುದು ಇಸ್ಮಾಯಿಲ್ ಅವರ ನಂಬಿಕೆ.

ಟೊರಾಂಟೊ ನಗರಕ್ಕೆ ಬಂದ ಆರಂಭದಲ್ಲಿ ರಸೌಲ್ ಅವರು ತಮ್ಮದೇ  ಬೇಕರಿ ಆರಂಭಿಸಲು ಮೂವತ್ತು ವರ್ಷ ಬೇಕಾಗಬಹುದು ಎಂದು ಭಾವಿಸಿದ್ದರು. ಆದರೆ ಅವರ ಬೇಕರಿ ಈಗಾಗಲೇ ಅದೆಷ್ಟು ಜನಪ್ರಿಯವಾಗಿದೆ ಅಂದರೆ, ಅವರು ಅದನ್ನು ವಿಸ್ತರಿಸುವ ಆಲೋಚನೆ ಶುರು ಮಾಡಿದ್ದಾರೆ.

ಸಿರಿಯಾದ ನಿರಾಶ್ರಿತರಿಗೆ ಕೆನಡಾ ನೀಡಿದ ಬೆಚ್ಚನೆಯ ಸ್ವಾಗತವು, 2015ರಲ್ಲಿ ಜಸ್ಟಿನ್ ಟ್ರುಡೊ ಅವರು ಕೆನಡಾದ ಪ್ರಧಾನಿಯಾಗಿ ಆಯ್ಕೆಯಾದುದ್ದಕ್ಕೆ ನೀಡಿದ ಪ್ರಶಂಸೆಯಂತೆ ಇತ್ತು. ಅಲ್ಲದೆ, ಹಲವರ ಪಾಲಿಗೆ ಈ ಸ್ವಾಗತವು ಟೊರಾಂಟೊ ನಗರದ ಸಾಂಸ್ಕೃತಿಕ ಬಹುತ್ವದ ದ್ಯೋತಕವೂ ಹೌದು (ಈ ನಗರದ ಧ್ಯೇಯವಾಕ್ಯ ‘ಬಹುತ್ವ ನಮ್ಮ ಶಕ್ತಿ’ ಎಂಬುದು). ಸಿರಿಯನ್ ಆಹಾರ ಉದ್ಯಮವು ಇಲ್ಲಿನ ಮಾಧ್ಯಮಗಳ ಪಾಲಿಗೂ ಆಕರ್ಷಣೆಯ ಕೇಂದ್ರವಾಯಿತು. ಈ ಉದ್ಯಮವು ಮಧ್ಯಪ್ರಾಚ್ಯದ ಜನರನ್ನು ಮಾತ್ರವಲ್ಲದೆ, ಬೇರೆ ಬೇರೆ ಪ್ರದೇಶಗಳ ಗ್ರಾಹಕರನ್ನೂ ಗಳಿಸಿಕೊಂಡಿದೆ.

‘ಮಾಧ್ಯಮಗಳ ಗಮನ ನಮ್ಮ ಮೇಲೆ ಯಾವತ್ತಿಗೂ ಹೆಚ್ಚೇ ಆಗಿದೆ’ ಎನ್ನುತ್ತಾರೆ ಅಮೀರ್ ಫತಲ್. 27 ವರ್ಷ ವಯಸ್ಸಿನ ಅಮೀರ್ 2016ರಲ್ಲಿ ಅಲೆಪ್ಪೊದಿಂದ ಇಲ್ಲಿಗೆ ಬಂದವರು. ಇವರು ತಮ್ಮ ಪತ್ನಿ ನೂರ್ ಅಮಮ್ಮನಾ ಜೊತೆ ಸೇರಿ ಬೀದಿ ಬದಿಯ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

ಇವರ ಪ್ರಯತ್ನಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕೂಡ ಚೇತೋಹಾರಿ ಆಗಿದೆ. ನಗರದ ಸಿಟಿ ಹಾಲ್‌, ಟೊರಾಂಟೊ ವಿಶ್ವವಿದ್ಯಾಲಯ ಮತ್ತು ಉಬರ್‌ ಕಂಪನಿಯ ಸ್ಥಳೀಯ ಕಚೇರಿಯಲ್ಲಿ ಆಹಾರ ಪೂರೈಕೆ ಮಾಡಲು ಇವರನ್ನು ಆಹ್ವಾನಿಸಲಾಗಿದೆ.

ಅಲೆಪ್ಪೊ ನಗರದ ಪಾಕ ಪರಂಪರೆಯ ಬಗ್ಗೆ ಹೇಳಿಕೊಳ್ಳಲು ಹೆಮ್ಮೆಪಡುವ ಫತಲ್ ಅವರು, ಸಿರಿಯನ್ ನಿರಾಶ್ರಿತರಿಗೆ ಕೆನಡಾದ ಜನ ಅಗತ್ಯಕ್ಕಿಂತ ಹೆಚ್ಚಾಗಿ ಗೌರವ ನೀಡುತ್ತಿದ್ದಾರಾ ಎಂಬ ಪ್ರಶ್ನೆಯನ್ನೂ ಮುಂದಿಡುತ್ತಾರೆ. ‘ನಿರಾಶ್ರಿತರು ಬೇರೆಯವರೂ ಇದ್ದಾರೆ. ಅವರಿಗೂ ಅವಕಾಶಗಳು ಸಿಗಬೇಕು’ ಎನ್ನುತ್ತಾರೆ ಫತಲ್.

ಚಿಕ್ಕ ಕೆಫೆಯೊಂದರಲ್ಲಿ ಸಿರಿಯಾದ ಸಾಂಪ್ರದಾಯಿಕ ಊಟ ಸಿದ್ಧಪಡಿಸುವ ‘ನ್ಯೂಕಮರ್ ಕಿಚನ್’ ಎಂಬ ಲಾಭದ ಉದ್ದೇಶವಿಲ್ಲದ ಮಹಿಳೆಯರ ಗುಂಪು ಸೆಳೆದಿರುವಷ್ಟು ಗಮನವನ್ನು ಸಿರಿಯಾದ ಇತರ ಯಾವ ಹೋಟೆಲ್ ಅಥವಾ ರೆಸ್ಟೊರೆಂಟ್ ಉದ್ಯಮವೂ ಸೆಳೆದಿಲ್ಲ.

ಸಿರಿಯಾದಿಂದ ಆಗಷ್ಟೇ ಕೆನಡಾಕ್ಕೆ ಬಂದು, ವಿಮಾನ ನಿಲ್ದಾಣದ ಹೋಟೆಲ್‌ಗಳಲ್ಲಿ ತಾತ್ಕಾಲಿಕವಾಗಿ ಉಳಿದುಕೊಂಡಿದ್ದ ನಿರಾಶ್ರಿತರಿಗೆ ಅಡುಗೆ ಮಾಡಲು ಒಂದು ಅವಕಾಶ ನೀಡುವ ಉದ್ದೇಶದಿಂದ ‘ನ್ಯೂಕಮರ್ ಕಿಚನ್’ 2016ರಲ್ಲಿ ಆರಂಭವಾಯಿತು. ಈಗ ಅದರಲ್ಲಿ ಒಟ್ಟು 60 ಜನ ಬಾಣಸಿಗರು ಇದ್ದಾರೆ.

ಈ ಗುಂಪಿನ ಬಗ್ಗೆ ವಿಶ್ವದಾದ್ಯಂತ ಡಜನ್‌ಗಟ್ಟಲೆ ವರದಿಗಳು ಬಂದಿವೆ. ಇವರ ಕುರಿತು ಒಂದು ಸಾಕ್ಷ್ಯಚಿತ್ರ ಕೂಡ ಸಿದ್ಧವಾಗುತ್ತಿದೆ. ಪ್ರಧಾನಿ ಟ್ರುಡೊ ಅವರು ಒಂದು ವರ್ಷದ ಹಿಂದೆ ಪತ್ರಿಕಾ ಪ್ರತಿನಿಧಿಗಳ ಜೊತೆ ಈ ಗುಂಪನ್ನು ಭೇಟಿ ಮಾಡಿದ್ದರು. ಟ್ರುಡೊ ಅವರು ಮುಗುಳ್ನಗುತ್ತಿರುವ ಭಾವಚಿತ್ರವನ್ನು ಈ ಗುಂಪಿನ ಅಡುಗೆ ಮನೆಯಲ್ಲಿ ಹಾಕಲಾಗಿದೆ. ಹೀಗಿದ್ದರೂ, ಈ ಗುಂಪಿನ ಆಡಳಿತಾತ್ಮಕ ವೆಚ್ಚಗಳಿಗೆ ಸರ್ಕಾರದ ನೆರವು ಸಿಗಬಹುದು ಎಂಬ ನಿರೀಕ್ಷೆಗಳು ಫಲ ನೀಡಿಲ್ಲ. ಹಾಗಾಗಿ, ‘ನ್ಯೂಕಮರ್ ಕಿಚನ್’ ಗುಂಪು ಈ ಚಳಿಗಾಲದಲ್ಲಿ ಸಾರ್ವಜನಿಕರಿಂದ ಹಣಕಾಸಿನ ಸಹಾಯ ಕೋರಿದೆ. ಈ ಗುಂಪಿನ ಭವಿಷ್ಯ ದುರ್ಬಲವಾಗಿ ಕಾಣುತ್ತಿದೆ.

‘ನನಗೆ ಅಡುಗೆಯನ್ನು ವೃತ್ತಿಯಾಗಿ ನಡೆಸಿದ ಅನುಭವವೇ ಇರಲಿಲ್ಲ. ಆದರೆ ಅಡುಗೆ ಮಾಡುವುದು ಇಷ್ಟದ ಕೆಲಸವಾಗಿತ್ತು’ ಎನ್ನುತ್ತಾರೆ 26 ವರ್ಷ ವಯಸ್ಸಿನ ರಹಾಫ್ ಅಲಕ್ಬಾನಿ. ಈಕೆ ಇಂಗ್ಲಿಷ್‌ ಸಾಹಿತ್ಯವನ್ನು ವ್ಯಾಸಂಗ ಮಾಡಿದವಳು. ಸಿರಿಯಾದ ದಕ್ಷಿಣ ಭಾಗಕ್ಕೆ ಸೇರಿದವಳು. ಇಲ್ಲಿರುವ ಬಹುತೇಕ ಹೆಣ್ಣುಮಕ್ಕಳಂತೆ ಈಕೆ ಅಡುಗೆಯನ್ನು ಅಮ್ಮನಿಂದ ಕಲಿತವಳು.

‘ನ್ಯೂಕಮರ್ ಕಿಚನ್’ ಎಂಬುದು ಒಂದು ಸಾಮಾಜಿಕ ಪ್ರಯೋಗವೂ ಹೌದು. ‘ಇದು ಜನರನ್ನು ಒಂದೆಡೆ ಸೇರಿಸಿ, ಈ ಹೆಣ್ಣುಮಕ್ಕಳಲ್ಲಿ ಇರುವ ಅಡುಗೆ ಸಂಪ್ರದಾಯವನ್ನು ಒಂದು ಮಟ್ಟಿಗೆ ಕಾಪಾಡುವ ಬಗ್ಗೆ ಮಾತುಕತೆ ನಡೆಸುವ ವೇದಿಕೆಯೂ ಹೌದು’ ಎನ್ನುತ್ತಾರೆ ಕಾರಾ ಬೆಂಜಮಿನ್ ಪೇಸ್. ಇವರು ಸಾಫ್ಟ್‌ವೇರ್‌ ಉದ್ಯಮಿಯಾಗಿದ್ದವರು.

ದಿ ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry