ಬಾಲರು ಯಾರು?

7

ಬಾಲರು ಯಾರು?

Published:
Updated:

ಶಿವರಾತ್ರಿಯಂದು ನಾವು ಜಾಗರಣೆ ಮಾಡುತ್ತೇವೆ, ಅಲ್ಲವೆ? ರಾತ್ರಿ ಮುಂದುವರೆದಂತೆ ನಮಗೆ ನಿದ್ರೆಯ ಸೆಳೆತ ಹೆಚ್ಚುತ್ತಹೋಗುವುದು ಸಹಜ. ಆಗ ‘ಈ ರಾತ್ರಿ ಇನ್ನೂ ಮುಗಿಯುತ್ತಲೇ ಇಲ್ಲ! ಯಾವಾಗ ರಾತ್ರಿ ಕಳೆಯುತ್ತದೆಯೋ’ ಎಂಬ ಕಳವಳ ಮೂಡುವುದೂ ಸಹಜ.

ಹೀಗೆಯೇ ನಾವು ಎಲ್ಲಿಗೋ ನಡೆದುಹೋಗುತ್ತಿದ್ದೇವೆ ಎಂದಿಟ್ಟುಕೊಳ್ಳೋಣ. ಇನ್ನೂ ಊಟ ಮಾಡಿಲ್ಲ; ಹಸಿವಿನ ಜೊತೆಗೆ ಆಯಾಸವೂ ಸೇರಿಕೊಂಡಿದೆ. ‘ಏನಪ್ಪಾ ಇದು! ದಾರಿ ಇನ್ನೂ ಮುಗಿಯುತ್ತಲೇ ಇಲ್ಲವಲ್ಲ’ ಎಂಬ ತಳಮಳ ಮನಸ್ಸಿನಲ್ಲಿ ಕುಣಿಯುತ್ತಿರುತ್ತದೆ.

ನಮ್ಮ ಈ ಮಾದರಿಯ ನಿತ್ಯಾನುಭವಗಳನ್ನೇ ಉಪಯೋಗಿಸಿಕೊಂಡು ‘ಧಮ್ಮಪದ’ವು ಬದುಕಿನ ಗಹನವಾದ ವಿಷಯಗಳ ಬಗ್ಗೆ ವಿವೇಕವನ್ನು ಒದಗಿಸುತ್ತದೆ. ಅಲ್ಲಿಯ ‘ಬಾಲವಗ್ಗ’ದಲ್ಲಿ ಬರುವ ಮೊದಲನೆಯ ಗಾಹೆಯೇ ಇದು:

ದೀಘಾ ಜಾಗರಿತೋ ರತ್ತಿ ದೀಘಙ್‌ ಸಂತಸ್ಸ ಯೋಜನಙ್ |

ದಿಘೋ ಬಾಲಾನಙ್‌ ಸಂಸಾರ ಸದ್ಧಮ್ಮ ಙ್‌ ಅವಿಜಾನತಮ್‌ ||

ಇದರ ಅರ್ಥ: ‘ಜಾಗರಣೆ ಮಾಡುವವನಿಗೆ ಒಂದು ರಾತ್ರಿಯೇ ಅತ್ಯಂತ ದೀರ್ಘವಾದ ರಾತ್ರಿ ಆಗಿರುವುದು; ಬಳಲಿಕೆಯಲ್ಲಿರುವವನಿಗೆ ಸ್ವಲ್ಪ ದೂರವೂ ಎಷ್ಟೋ ಮೈಲುಗಳು ಎಂದೆನಿಸುವುದು; ಅಂತೆಯೇ ಸದ್ಧರ್ಮದ ಸ್ವರೂಪವನ್ನು ಅರಿಯದ ತಿಳಿಗೇಡಿಗೆ ಸಂಸಾರ, ಎಂದರೆ ಜೀವನವೇ ಬಹಳ ದೀರ್ಘವಾದದ್ದು ಎಂದೆನಿಸುವುದು.

ಬಾಲರು, ಎಂದರೆ ಎಳೆಯರು ಯಾರು? ಈ ಪ್ರಶ್ನೆಗೂ ಉತ್ತರವನ್ನಾಗಿ ಮೇಲಣ ಗಾಹೆಯನ್ನು ನೋಡಬಹುದು.

ಸಾಮಾನ್ಯವಾಗಿ ಎಳೆಯರು ಎಂದರೆ ನಾವು ವಯಸ್ಸಿನಿಂದ ಎಣಿಸುತ್ತೇವೆ; ದೈಹಿಕವಾಗಿ ದುರ್ಬಲರಾಗಿರುವವರನ್ನು ‘ಮಕ್ಕಳು’, ‘ಬಾಲರು’, ‘ಎಳೆಯರು’ – ಎನ್ನುತ್ತೇವೆ. ಆದರೆ ಧಮ್ಮಪದ ಇಲ್ಲಿ ಅದಕ್ಕೆ ಬೇರೆಯದೇ ಅರ್ಥವನ್ನು ಒದಗಿಸಿದೆ.

ಯಾರು ಸದ್ಧರ್ಮವನ್ನು ತಿಳಿದಿಲ್ಲವೋ ಅವರೇ ಬಾಲರು; ಅಂಥವರು ಯಾವ ವಯಸ್ಸಿನವರೇ ಆಗಿದ್ದರೂ ಕೂಡ ಜೀವನದ ದೃಷ್ಟಿಯಿಂದ ಅವರು ಮಕ್ಕಳೇ ಸರಿ – ಎನ್ನುತ್ತಿದೆ, ಧಮ್ಮಪದ. ‘ಧಮ್ಮ’ ಎಂದರೆ ಬುದ್ಧನು ತೋರಿಸಿದ ಹಾದಿ. ಅದರ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ ಜೀವನ ತುಂಬ ಭಾರವಾಗುತ್ತದೆ. ಆಗ ‘ಇನ್ನೂ ಎಷ್ಟು ವರ್ಷ ಈ ಬದುಕು’ ಎಂಬ ಹತಾಶಭಾವ ನಮ್ಮನ್ನು ಕಾಡುವುದು ಸಹಜ.

ಬಾಲನ ಲಕ್ಷಣವನ್ನು ನಿರೂಪಿಸುವ ಮತ್ತೊಂದು ಗಾಹೆ ಕೂಡ ಸೊಗಸಾಗಿದೆ:

ಯೋ ಬಾಲೋ ಮಣ್ಣತೀ ಬಾಲ್ಯಙ್‌ ಪಂಡಿತೋ ವಾ ಪಿ ತೇನ ಸೋ |

ಬಾಲೋ ಚ ಪಂಡಿತಮಾನಿ ಸ ವೇ ಬಾಲೋ ತಿ ವುಚ್ಛತಿ ||

‘ಯಾವ ತಿಳಿಗೇಡಿಗೆ (ಎಂದರೆ ಬಾಲನಿಗೆ) ತನಗೇನೂ ತಿಳಿಯದು ಎಂಬ ಅರಿವಿದೆಯೋ ಅಲ್ಲಿಯ ತನಕ ಅವನು ಕೂಡ ಜ್ಞಾನಿಯೇ ಸರಿ. ಆದರೆ ತಾನು ಅವಿವೇಕಿಯಾದರೂ ತನ್ನನ್ನು ಜ್ಞಾನಿ ಎಂದು ಯಾವನು ತಿಳಿದುಕೊಳ್ಳುತ್ತಾನೋ ಅಂಥವನು ನಿಜವಾಗಿಯೂ ತಿಳಿಗೇಡಿ ಎಂದೆನಿಸಿಕೊಳ್ಳುತ್ತಾನೆ.’

ನಮಗೆ ಏನು ತಿಳಿದಿದೆ, ಏನು ತಿಳಿದಿಲ್ಲ – ಎಂಬ ಅರಿವು ತುಂಬ ಮುಖ್ಯ. ಈ ವಿವೇಕವನ್ನು ನಾವು ಕಳೆದುಕೊಂಡರೆ ಬದುಕಿನಲ್ಲಿ ಸಮತೋಲನವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಬೇಕಾಗಿರುವುದು ಪ್ರಾಮಾಣಿಕ ಆತ್ಮಾವಲೋಕನ. ಧಮ್ಮಪದ ನಮ್ಮನ್ನು ಇಂಥ ಮಾನಸಿಕತೆಗೆ ಸಿದ್ಧಗೊಳಿಸುತ್ತದೆ.

ನಮ್ಮ ಜೀವನದ ದಿಟವಾದ ಗುರಿಯನ್ನು ಕಂಡುಕೊಂಡು, ಅದರ ಕಡೆಗೆ ನಡೆ–ನುಡಿಗಳನ್ನು ರೂಪಿಸಿಕೊಳ್ಳಬೇಕೆಂಬುದೇ ಬುದ್ಧನ ಉಪದೇಶದ ಸಾರ. ಸರಿಯಾದ ತಿಳಿವಳಿಕೆಯೇ ಜೀವನಪ್ರಯಾಣದಲ್ಲಿ ಒದಗುವ ಬೆಳಕು ಎಂದಿದ್ದಾನೆ, ಬುದ್ಧ ಭಗವಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry