ಗಾಯನಕ್ಕೆ ಸಿದ್ಧವಾದ ರಾಮಕಥೆ

7

ಗಾಯನಕ್ಕೆ ಸಿದ್ಧವಾದ ರಾಮಕಥೆ

Published:
Updated:
ಗಾಯನಕ್ಕೆ ಸಿದ್ಧವಾದ ರಾಮಕಥೆ

ರಾಮನ ಕಥೆಯ ಎಲ್ಲ ವಿವರಗಳನ್ನೂ ಸಮಗ್ರವಾಗಿ ‘ಕಂಡಿದ್ದಾನೆ’ ಕವಿ ವಾಲ್ಮೀಕಿ; ಈಗ ನಡೆದಿರುವುದು ಮಾತ್ರವಲ್ಲ, ಮುಂದೆ ನಡೆಯಲಿರುವ ಸಂಗತಿಗಳು ಕೂಡ ಅವನಿಗೆ ಗೋಚರಿಸಿವೆ.

ಇದುವರೆಗೂ ನಾವು ನೋಡಿರುವುದು ರಾಮಾಯಣದ ಕೇವಲ ಮೂರು ಸರ್ಗಗಳನ್ನಷ್ಟೆ! ಈ ಮೂರು ಸರ್ಗಗಳಲ್ಲಿರುವ ಶ್ಲೋಕಗಳ ಸಂಖ್ಯೆ 182.  (ಎನ್‌. ರಂಗನಾಥಶರ್ಮಾ ಅವರು ಅನುಸರಿಸಿರುವ ಪಾಠದ ಪ್ರಕಾರ.) ಬಾಲಕಾಂಡದ ಮೂರನೆಯ ಸರ್ಗದಲ್ಲಿ ರಾಮಾಯಣದ ಎಲ್ಲ ವಿವರಗಳನ್ನೂ ಸಂಕ್ಷಿಪ್ತವಾಗಿಯೂ ಸಮಗ್ರವಾಗಿಯೂ ನಿರೂಪಿಸಲಾಗಿದೆ. ಈ ಮೂರು ಸರ್ಗಗಳಲ್ಲಿ ಎರಡು ಸಲ ರಾಮಾಯಣದ ಕಥೆ ಬಂದಿದೆ; ಅವುಗಳಲ್ಲಿಯ ಮುಕ್ಕಾಲು ಭಾಗ ಶ್ಲೋಕಗಳನ್ನು ಅದಕ್ಕಾಗಿಯೇ ಬಳಸಲಾಗಿದೆ. ಮೂರು ಸರ್ಗಗಳಲ್ಲಿ ಎರಡು ಬಾರಿ ರಾಮಾಯಣದ ಕಥೆ! ಇಲ್ಲಿ ನಾವು ಗಮನಿಸಬೇಕಾಗಿರುವುದು ಕವಿಯ ವಿಶ್ವಾಸ.

ಆಧುನಿಕ ಕಾಲದ ಕಥನಗಾರಿಕೆಯ ತಂತ್ರ ಎಂದರೆ ಕಥೆಯನ್ನು ಎಷ್ಟು ಕುತೂಹಲಕರವಾಗಿ, ಹೊಸ ಹೊಸ ತಿರುವುಗಳಿಂದ ನಿರೂಪಿಸುತ್ತಿದ್ದೇವೆ ಎನ್ನುವುದೇ ಆಗಿದೆಯಲ್ಲವೆ? ಮುಂದೆ ಏನಾಗುವುದೋ ಎಂಬ ನಿರೀಕ್ಷೆಯಲ್ಲಿ ಪ್ರತಿ ಕ್ಷಣವೂ ಓದುಗನನ್ನು ನಿಲ್ಲಿಸುವುದೇ ಕಥೆಗಾರ ಅಥವಾ ಕಾದಂಬರಿಕಾರನ ಪ್ರತಿಭೆಯ ಮಾನದಂಡ ಎನಿಸಿದೆ. ಆದರೆ ರಾಮಾಯಣದಂಥ ಅಭಿಜಾತಕಾವ್ಯದ (ಕ್ಲಾಸಿಕ್‌) ನಿಲುವು ಇದಕ್ಕಿಂತಲೂ ಬೇರೆಯೇ ಆಗಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವ ಕಥೆಯನ್ನೇ ಅದು ಆರಿಸಿಕೊಂಡು ಕಾವ್ಯವನ್ನು ಕಟ್ಟುವುದು ಅದರ ಸ್ವಭಾವವಾಗಿರುವಂತಿದೆ.

ರಾಮನು ವಾಲ್ಮೀಕಿಯ ಸಮಕಾಲೀನ; ಅವನ ಕಥೆಯು ಜನರಿಗೆ ಆಗಲೇ ತಿಳಿದಿತ್ತು ಎನ್ನುವ ಮಾಹಿತಿ ನಮಗೆ ಮೊದಲನೆಯ ಸರ್ಗದಲ್ಲಿಯೇ ತಿಳಿಯುತ್ತದೆ. ಈಗ ವಾಲ್ಮೀಕಿ 182 ಶ್ಲೋಕಗಳಲ್ಲಿ ರಾಮಾಯಣದ ಕಥೆಯನ್ನು ಎರಡು ಸಲ ಹೇಳಿದ್ದಾನೆ. ಇನ್ನುಳಿದ ಸುಮಾರು ಇಪ್ಪತ್ತಮೂರು ಸಾವಿರದ ಎಂಟನೂರು ಶ್ಲೋಕಗಳಲ್ಲಿ, ಈಗಾಗಲೇ ನಮಗೆ ಗೊತ್ತಿರುವ ಕಥೆಯನ್ನೇ ಅವನು ವಿವರಿಸಬೇಕಿದೆ! ವಾಲ್ಮೀಕಿಯ ಈ ಅಪೂರ್ವ ಕಥನಶಕ್ತಿಯ ರುಚಿಯ ಸವಿಯನ್ನು ತಿಳಿಯಬೇಕೆಂದರೆ ಮೂಲರಾಮಾಯಣದ ಅನುಸಂಧಾನವೇ ನಮಗೆ ಶರಣ್ಯ.

ಇಲ್ಲೊಂದು ಮಾತು ನೆನಪಾಗುತ್ತದೆ. ಸಂದರ್ಶನವೊಂದರಲ್ಲಿ  ಸಂಗೀತಗಾರ ಎಂ. ಬಾಲಮುರಳೀಕೃಷ್ಣ ‘ಕೇಳುಗರಿಗೆ ಅಪರಿಚಿತವಾದ ಕೃತಿಯೊಂದನ್ನು ಕಛೇರಿಯಲ್ಲಿ ಹಾಡಿ ಅವರಿಂದ ಪ್ರಶಂಸೆಯನ್ನು ಪಡೆಯುವುದು ಹೆಚ್ಚುಗಾರಿಕೆಯಲ್ಲ; ಅವರಿಗೆ ಚೆನ್ನಾಗಿಯೇ ಪರಿಚಯವಿರುವ, ‘‘ವಾತಾಪಿ ಗಣಪತಿಂ ಭಜೆ’’ಯಂಥ ಕೃತಿಯನ್ನು ಹಾಡಿ ಅವರಿಂದ ಮೆಚ್ಚುಗೆಯನ್ನು ಪಡೆಯುವುದೇ ಸಂಗೀತಗಾರನ ದಿಟವಾದ ಸಾಧನೆ’ ಎಂದಿದ್ದರು.

ಹೀಗೆ ಆರಂಭದಲ್ಲಿಯೇ ಕಥೆಯ ಸಾರಾಂಶವಷ್ಟನ್ನೂ ಹೇಳಿ, ನಮಗೆ ಈಗಾಗಲೇ ತಿಳಿದಿರುವ ಕಥೆಯ ವಿವರಗಳನ್ನು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಲ್ಲಿ ಕಂಡರಿಸಿ, ಆ ಕಾವ್ಯವನ್ನು ನಮ್ಮಿಂದ ಓದಿಸುತ್ತಾನೆ ಎನ್ನುವುದು ಸಾಮಾನ್ಯವಾದ ಸಂಗತಿಯಲ್ಲ. ‘ಕವಿಗಳಿಗೇ ಕವಿ’ ಎಂಬ ಒಕ್ಕಣೆ ಅವನಿಗೆ ಸರಿಯಾಗಿಯೇ ಒಪ್ಪುವಂಥದ್ದು. (ರಾಮಾಯಣವನ್ನು ಕಾಲಿದಾಸನು ‘ಕವಿಪ್ರಥಮಪದ್ಧತಿಮ್‌’ ಎಂದಿದ್ದಾನೆ; ಅದು ಮುಂದಿನ ಕವಿಗಳಿಗೆ ದಾರಿ ತೋರಿದ ಕೃತಿ ಎಂದು ಅದರ ಭಾವ.) ಕೇವಲ ರಾಮಾಯಣವನ್ನು ಓದಿನ ಕಾವ್ಯವನ್ನಾಗಿ ಮಾಡುವಲ್ಲಿ ಮಾತ್ರವೇ ವಾಲ್ಮೀಕಿ ಯಶಸ್ವಿಯಾಗಿಲ್ಲ; ಅದನ್ನು ಅವನು ಪಾರಾಯಣಗ್ರಂಥವನ್ನಾಗಿಯೂ ಮಾಡಿದ್ದಾನೆ ಎನ್ನುವುದನ್ನು ಮರೆಯುವಂತಿಲ್ಲ.

ಒಂದೇ ಪುಸ್ತಕವನ್ನು ಮತ್ತೆ ಮತ್ತೆ ಓದುವುದಕ್ಕೆ ‘ಪಾರಾಯಣ’ ಎಂದು ಕರೆಯುತ್ತಾರೆ. ಇದನ್ನು ‘ಗ್ರಂಥಜಪ’ ಎಂದೂ ಕರೆಯಲಾದೀತು. ಜಪದಲ್ಲಿ ದೇವರ ಹೆಸರನ್ನು ಹಲವು ಸಲ ಉಚ್ಚರಿಸುತ್ತೇವೆ; ಅಂತೆಯೇ ಪಾರಾಯಣಗ್ರಂಥವನ್ನು ಹಲವು ಸಲ ಓದುತ್ತಲೇ ಇರುತ್ತೇವೆ, ಒಂದು ಧಾರ್ಮಿಕವಿಧಿಯಂತೆ. ‘ಗ್ರಂಥ ಅಧಿಕೃತವಾಗಿದ್ದರೆ ಅಂದರೆ, ಅದರ ಧಾರ್ಮಿಕತೆ ಅಧಿಕೃತವಾಗಿದ್ದರೆ ಮಾತ್ರ ಅದರ ‘‘ಪಾರಾಯಣ’’ ಸಾಧ್ಯವಾಗುತ್ತದೆ’ ಎಂದಿದ್ದಾರೆ, ಕೀರ್ತಿನಾಥ ಕುರ್ತಕೋಟಿ.

ನಾವು ‘ಕ್ಲಾಸಿಕ್‌’ಗಳನ್ನು ಏಕೆ ಓದುತ್ತೇವೆ – ಎನ್ನುವುದರ ಬಗ್ಗೆ ಇತಾಲೋ ಕ್ಯಾಲ್ವೀನೋ (Italo Calvino) ಸ್ವಾರಸ್ಯಕರವಾದ ಚರ್ಚೆಯನ್ನು ಮಾಡಿದ್ದಾರೆ. (ನೋಡಿ: ‘Why Read the Classics?’ ಇಂಗ್ಲಿಷ್‌ ಅನುವಾದ: Martin McLaughlin) ‘The classics are those books about which you usually hear people saying: ‘I'm rereading...’, never ‘I'm reading’ (ಜನರು ‘ನಾನು ಓದುತ್ತಿರುವೆ’ ಎನ್ನದೆ, ‘ಇದೀಗ ಮತ್ತೊಮ್ಮೆ ಓದುತ್ತಿರುವೆ’ ಎಂದು ಯಾವ ಪುಸ್ತಕಗಳನ್ನು ಕುರಿತು ಯಾವಾಗಲೂ ಹೇಳುವರೋ ಅಂಥವೇ ಕ್ಲಾಸಿಕ್‌ಗಳು). ಜನರು ದಿಟವಾಗಿಯೂ ಕ್ಲಾಸಿಕ್‌ಗಳ ಮರು–ಓದಿನಲ್ಲಿ ತೊಡಗಿಕೊಂಡಿದ್ದಾರೋ ಇಲ್ಲವೋ, ಅದು ಬೇರೆ ಚರ್ಚೆಯ ವಿಷಯ; ಇಲ್ಲಿ ಗಮನಿಸಬೇಕಾದ್ದು ‘ಕ್ಲಾಸಿಕ್‌’ಗಳು ಮರು–ಓದನ್ನು ಅಪೇಕ್ಷಿಸುವಂಥ ಕೃತಿಗಳು. ಈ ವಿಶಾಲಾರ್ಥದಲ್ಲಿ ಎಲ್ಲ ‘ಕ್ಲಾಸಿಕ್‌’ಗಳು ಕೂಡ ಪಾರಾಯಣಗ್ರಂಥಗಳೇ ಹೌದು. ಭಾರತೀಯ ಸಂಸ್ಕೃತಿಯಲ್ಲಂತೂ ಪಾರಾಯಣದ ಪರಂಪರೆ ಸಾವಿರಾರು ವರ್ಷಗಳಿಂದಲೂ ಇದೆಯೆನ್ನಿ!

ರಾಮನಿಗೆ ಅಯೋಧ್ಯೆಯಲ್ಲಿ ಪಟ್ಟಾಭಿಷೇಕವಾಯಿತು. ಆ ಬಳಿಕ ವಾಲ್ಮೀಕಿಮುನಿ ಅವನ ಚರಿತೆಯನ್ನು ವಿರಚಿಸಿದ. ಅದು ವಿಸ್ಮಯಕರವೂ ಮಧುರವೂ ಆದ ಪದಗಳಿಂದ ತುಂಬಿತ್ತು. ಮೊದಲು ಆರು ಕಾಂಡಗಳನ್ನು ರಚಿಸಿದರು; ಅವುಗಳಲ್ಲಿ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿದ್ದವು. ಅನಂತರ ಏಳನೆಯ ಕಾಂಡವನ್ನೂ ರಚಿಸಿದ.

ರಾಮಾಯಣವೇನೋ ಸಿದ್ಧವಾಯಿತು. ಆದರೆ ಅದನ್ನು ಜನರಿಗೆ ಹೇಗೆ ತಲುಪಿಸುವುದು? ಅದನ್ನು ಚೆನ್ನಾಗಿ ಕಲಿತು, ಹಾಡುವುದೇ ಸರಿಯಾದೀತು – ಎಂದು ವಾಲ್ಮೀಕಿಗೆ ಅನಿಸಿತು. ಆದರೆ ಈ ಕಾವ್ಯವನ್ನು ಕಲಿತು ಹಾಡಬಲ್ಲವರು ಯಾರು? ಹೀಗೆ ಆಲೋಚಿಸುತ್ತಿದ್ದಾಗ ಅವನಲ್ಲಿಗೆ ಇಬ್ಬರು ಹುಡುಗರು ಬಂದರು; ಅವನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ನಿಂತರು. ಹಾಗೆ ಬಂದ ಆ ಕುಮಾರರೇ ಕುಶ–ಲವ.

ಕುಶ–ಲವ – ಈ ಇಬ್ಬರೂ ವಾಲ್ಮೀಕಿಯ ಆಶ್ರಮದಲ್ಲಿಯೇ ಇದ್ದವರು; ಅಣ್ಣತಮ್ಮಂದಿರು. ರಾಜಪುತ್ರರು. ಓದಿನಲ್ಲಿ ಚುರುಕಾಗಿದ್ದವರು. ಮೇಧಾವಿಗಳು. ವೇದಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ್ದವರು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅವರ ಕಂಠ ಚೆನ್ನಾಗಿತ್ತು; ಅವರು ಮಾತನಾಡುವುದನ್ನೇ ಕೇಳೋಣ – ಎನ್ನುವಷ್ಟು ಸಿಹಿಯಾದ ದನಿ ಅವರದ್ದು. ಇನ್ನು ಅವರು ಹಾಡಿದರೆ? ಅದೂ ರಾಮನ ಕಥೆಯನ್ನು! ವಾಲ್ಮೀಕಿಗೆ ಅವರಿಬ್ಬರನ್ನು ಕಂಡು ಸಂತೋಷವಾಯಿತು; ಅವನ ಪ್ರಶ್ನೆಗೆ ಉತ್ತರವಾಗಿದ್ದರು ಅವರಿಬ್ಬರು. ಕುಶ–ಲವರಿಗೆ ರಾಮಾಯಣವನ್ನು ಕಲಿಸಿದರು.

ಈ ರಾಮಾಯಣವಾದರೋ ಎಂಥದ್ದು? ವೇದದ ಸಾರವೇ ಅದರಲ್ಲಿ ಅಡಗಿದೆ (‘ವೇದೋಪಬೃಂಹಣಾರ್ಥಾಯ) ಎನ್ನುವುದನ್ನು ಕುಶ–ಲವರಿಗೆ ಬೋಧಿಸಿದ, ವಾಲ್ಮೀಕಿ. ಈ ರಾಮಾಯಣಕ್ಕೆ ಎಷ್ಟೊಂದು ಆಯಾಮಗಳಿವೆಯಲ್ಲ – ಎಂಬ ಅಚ್ಚರಿಯೂ ಆ ಬಾಲಕರಿಗೆ ಉಂಟಾಯಿತು. ಅದು ಕೇವಲ ಧರ್ಮವನ್ನು ಪ್ರತಿಪಾದಿಸಿದ ರಾಮನ ಪೂರ್ಣ ಕಥೆಯಷ್ಟೆ ಅಲ್ಲ; ಸೀತೆಯ ಮಹೋನ್ನತ ಸ್ವಭಾವವನ್ನು ವಿವರಿಸಿರುವ ಕಾವ್ಯವೂ ಹೌದು ಎನಿಸಿತು ಅವರಿಗೆ; ರಾವಣನಂಥವನ ಸಂಹಾರವನ್ನು ಜಗತ್ತಿಗೆ ಸಾರುವ ಕೃತಿಯೂ ಹೌದು ಎನ್ನುವುದೂ ಮನದಟ್ಟಾಯಿತು. ಮಾತ್ರವಲ್ಲ, ಅದರ ಕರ್ತೃ ಕೂಡ ಮಹಾತ್ಮನೇ ಆಗಿದ್ದಾನೆಂಬುದು ಅವರಿಗೆ ಅನುಭವದಿಂದಲೇ ತಿಳಿದಿತ್ತು.

ಕಾವ್ಯಂ ರಾಮಾಯಣಂ  ಕೃತ್ಸ್ನಂ ಸೀತಾಯಾಶ್ವರಿತಂ ಮಹತ್‌ |

ಪೌಲಸ್ತ್ಯವಧಮಿತ್ಯೇವ ಚಕಾರ ಚರಿತವ್ರತಃ ||

ಕಾವ್ಯವನ್ನು ಹಾಡಲು ಒದಗಿದ ಅವಕಾಶದಿಂದ ಕುಶ–ಲವರು ಸಂತಸಗೊಂಡಿದ್ದರು. ಅದನ್ನು ಓದುವಾಗಲೂ ಮಧುರವಾಗಿರುತ್ತದೆ, ಹಾಡುವಾಗಲೂ ಮಧುರವಾಗಿರುತ್ತದೆ. ಹೀಗೆ ರಚಿಸಿದ ವಾಲ್ಮೀಕಿಯ ಕುಶಲತೆಗೆ ಅವರು ಪ್ರತಿ ಸಲ ಅಭ್ಯಾಸಕ್ಕೆ ಕುಳಿತಾಗಲೂ ನಮಿಸುತ್ತಿದ್ದರು. ಆಹಾ! ವೀಣೆಯಲ್ಲಿ ನುಡಿಸಿದಾಗಲೂ ಅದರ ಲಯವಿಶಿಷ್ಟತೆಯೇ ತಲೆದೂಗಿಸುವುದಲ್ಲ – ಎಂದು ಸಂಭ್ರಮಿಸಿದರು. ಈ ಕಾವ್ಯವನ್ನು ಎಷ್ಟು ಸಲ ಹಾಡಿದರೂ, ಕೇಳಿದರೂ ‘ಸಾಕು’ ಎಂಬ ಬೇಸರವೇ ಹುಟ್ಟದಲ್ಲ – ಎಂದು ಬೆರಗಾದರು.

ಅದಕ್ಕೆ ಕಾರಣವನ್ನು ಅವರೇ ಶೋಧಿಸಿದರು. ‘ಇದರಲ್ಲಿ ಯಾವುದೋ ಒಂದು ರಸವಷ್ಟೇ ಇಲ್ಲ; ನವರಸಗಳೂ ಇರುವುದರಿಂದಲೇ ಏಕತಾನತೆ ಉಂಟಾಗುತ್ತಿಲ್ಲ’ ಎಂದು ತಿಳಿದು ಅಭ್ಯಾಸದಲ್ಲಿ ತೀವ್ರವಾಗಿ ತೊಡಗಿದರು. ಆಯಾ ಭಾವಸಂದರ್ಭಗಳಲ್ಲಿ ಹೇಗೆಲ್ಲ ಹಾಡಬಹುದು ಎಂದು ಪ್ರಯೋಗ ಮಾಡುತ್ತಿದ್ದರು. ಅವರಿಗೆ ಸಂಗೀತಶಾಸ್ತ್ರವೂ ತಿಳಿದಿತ್ತು; ಒಳ್ಳೆಯ ಗಾಯಕರೂ ಆಗಿದ್ದರು; ವೀಣೆ ಮುಂತಾದ ವಾದ್ಯಗಳನ್ನೂ ನುಡಿಸಬಲ್ಲವರಾಗಿದ್ದರು. ಮಾತ್ರವಲ್ಲ, ಅವರು ರೂಪವಂತರೂ ಆಗಿದ್ದರು. ಅಂಥವರು ರಾಮಾಯಣವನ್ನು ಹಾಡಿದರೆ ಜನರು ಆಲಿಸದಿರಲು ಸಾಧ್ಯವೆ? ಮೈಮರೆಯುತ್ತಾರಷ್ಟೆ!

ಇಷ್ಟಕ್ಕೂ ಈ ಕುಶ–ಲವರು ಯಾರು?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry