ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌: ಹೂವಿನ ಲೋಕದಲ್ಲಿ ಬಾಹುಬಲಿ ಸ್ಮರಣೆ

Last Updated 19 ಜನವರಿ 2018, 19:24 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲೀಗ ಭಕ್ತಿ, ಭಾವ ಮಿಳಿತದ ಕಂಪು ಆವರಿಸಿದೆ. ಹೂವುಗಳ ಮಧ್ಯೆ ಸ್ಥಾಪಿತವಾಗಿರುವ ಶಾಂತಮೂರ್ತಿ ಬಾಹುಬಲಿಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಗೆ ಫೆಬ್ರುವರಿಯಲ್ಲಿ 88ನೇ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಈ ವಿಚಾರವನ್ನೇ ಆಯ್ಕೆ ಮಾಡುವ ಮೂಲಕ ತೋಟಗಾರಿಕೆ ಇಲಾಖೆ ಬಾಹುಬಲಿಗೆ ನಮನ ಸಲ್ಲಿಸಿದೆ.

ಗಾಜಿನ ಮನೆಯಲ್ಲಿ ಬಣ್ಣಬಣ್ಣದ ಹೂವುಗಳ ಮಧ್ಯೆ ಬೆಟ್ಟದ ಮೇಲೆ ನಿಂತ 15 ಅಡಿ ಎತ್ತರದ ಗೊಮ್ಮಟೇಶ್ವರ ಮೂರ್ತಿಯನ್ನು ನೋಡಲು ಜೈನ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿ ಲಾಲ್‌ಬಾಗ್‌ಗೆ ಭೇಟಿ ನೀಡುತ್ತಿದ್ದಾರೆ. ಕೆಲವು ವೀಕ್ಷಕರು ಗಾಜಿನ ಮನೆ ಪ್ರವೇಶಿಸುವ ಮುನ್ನವೇ ಕೈಮುಗಿದು ವಿನೀತ ಭಾವದಿಂದ ಒಳಗೆ ಹೋಗುತ್ತಿದ್ದರು. ‌ಈ ದೃಶ್ಯಗಳು ಕುವೆಂಪು ಅವರ ‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ’ ಎಂಬ ಸಾಲುಗಳನ್ನು ನೆನಪಿಸಿದವು. ಗಾಜಿನಮನೆಯಿಂದ ಹೊರಬರುತ್ತಿದ್ದ ಎಲ್ಲರ ಮುಖದಲ್ಲೂ ಬಾಹುಬಲಿಯ ಜೀವನ ವೃತ್ತಾಂತವನ್ನು ತಿಳಿದ ಧನ್ಯತಾ ಭಾವ ತುಂಬಿತ್ತು.

ಮಸ್ತಕಾಭಿಷೇಕ: ಗೊಮ್ಮಟಗಿರಿಯ ಪ್ರತಿಕೃತಿಯ ಎಡಭಾಗದಲ್ಲಿ 11 ಅಡಿಯ ಗೋಮಟ್ಟೇಶ್ವರ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಕೆಂಪು, ಹಳದಿ ಮತ್ತು ಬಿಳಿ ನೀರಿನ ಮಸ್ತಕಾಭಿಷೇಕ ನಡೆಯುತ್ತಿತ್ತು. ಮಹಾಮಸ್ತಕಾಭಿಷೇಕ ಮಹೋತ್ಸವದ ಲಾಂಛನ ಎಲ್ಲರ ಗಮನ ಸೆಳೆಯಿತು.

ಭರತ–ಬಾಹುಬಲಿ ನಡುವೆ ನಡೆದ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ, ಚಕ್ರರತ್ನ ಪ್ರಯೋಗ, ವೈರಾಗ್ಯವನ್ನು ತಾಳಿ ತಪಸ್ಸಿಗೆ ನಿಂತ ಬಾಹುಬಲಿ ಪ್ರತಿರೂಪಗಳು ಜೀವನ ಚರಿತ್ರೆಯ ಕಥೆಯನ್ನು ವಿಸ್ತೃತವಾಗಿ ವಿವರಿಸುತ್ತಿತ್ತು. ಉತ್ತರಕರ್ನಾಟಕ ಕಲಾವಿದ ಶಿವಲಿಂಗಪ್ಪ ಎಸ್.ಬಡಿಗೇರ್‌ ಅವರು ಸಿರಿಧಾನ್ಯಗಳಿಂದ ನಿರ್ಮಿಸಿದ ಬಾಹುಬಲಿಯ ಪುತ್ಥಳಿ ಪ್ರದರ್ಶನದ ಆಕರ್ಷಣೆಗಳಲ್ಲಿ ಒಂದಾಗಿತ್ತು.

ಇದು ಹೂವುಗಳ ಲೋಕ: ಸಿಕ್ಕಿಂ ಹಾಗೂ ಡಾರ್ಜಲಿಂಗ್‌ನ ಚಳಿಗಾಲದ ಅಪರೂಪದ ಹೂವುಗಳಾದ ಪ್ರಿಮುಲ್ಲಾ, ವಲ್‌ಗ್ಯಾರಿಸ್‌, ಕ್ಯಾಲಾಂಕೋ, ಬ್ಲಾಸ್ಟಿಡಿನಾ,  ಸಿನಿರೇರಿಯಾ ಈ ಭಾರಿಯ ವಿಶೇಷ. ಇವುಗಳಲ್ಲದೆ, ವಿದೇಶಿ ಹೂವುಗಳಾದ ಹೈಪರಿಕಂ, ಪಿನ್‌ಕುಷನ್‌, ಲ್ಯೂಕೊಡೆಂಡ್ರಾನ್‌, ಬಾಕ್ಸಿಯಾ, ವ್ಯಾಕ್ಸ್‌ ಫವರ್‌, ನೇರಳೆ, ಹಳದಿ, ಬಿಳಿ, ಕೇಸರಿ ಗುಲಾಬಿ ಗಿಡಗಳು, ಅಕಿಮಿನೋಸ್‌, ಆಂಟೀರಿಯನಂ, ಕೋಳಿಜುಟ್ಟು, ಪ್ಯಾನ್ಸಿ, ಸಾಲ್ವಿಯಾ, ಬಗೆ ಬಗೆಯ ಸೇವಂತಿ, ಬಿಗೋನಿಯಾ, ಹೆಲಿಯುಟ್ರೊಪಿಯಂ, ಆಂಜಿಲೋನಿಯಾ, ಹೆಲಿಕ್ರೈಸಂ, ಸಿಲೋಷಿಯ, ಪ್ಲಾಕ್ಸ್‌ ಸಾಲ್ವಿಯಾ, ಜಿನಿಯ ಜಾತಿಯ ಹೂಗಳು ಇಲ್ಲಿ ನಳನಳಿಸುತ್ತಿವೆ.

ಬಾಹುಬಲಿ ಸಂದೇಶಗಳ ಪುಸ್ತಕ ವಿತರಣೆ: ಬಾಹುಬಲಿಯ ಕತೆ ಹಾಗೂ ಪೂರ್ಣ ವಿವರವನ್ನು ಒಳಗೊಂಡ ಕಿರುಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಜೊತೆಗೆ ಬಾಹುಬಲಿ ಸಂದೇಶಗಳ ಪುಸ್ತಕಗಳ ಮಾರಾಟವೂ ಇಲ್ಲಿತ್ತು.

ಮಾರಾಟ ಮಳಿಗೆಗಳು: ಹೂವಿನ ಗಿಡಗಳು, ಸಿರಿಧಾನ್ಯಗಳು, ಸೊಪ್ಪು ತರಕಾರಿ ಬೀಜಗಳು, ತೋಟಗಾರಿಕಾ ಉಪಕರಣಗಳು, ಸಾವಯವ ಗೊಬ್ಬರ, ತೋಟಗಾರಿಕಾ ಉತ್ಪನ್ನಗಳ ಮಾರಾಟ ಮಳಿಗೆಗಳೂ ಇವೆ. ಅಂಗಾಶ ಕೃಷಿಯ ಮೂಲಕ ಬೆಳೆಸಿದ ಸಣ್ಣ ಗಾತ್ರದ ಆಲಂಕಾರಿಕಾ ಗಿಡಗಳೂ ಮಾರಾಟಕ್ಕಿವೆ.

ಪ್ರದರ್ಶನ ಉದ್ಘಾಟನೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ತೋಟಗಾರಿಕೆ ಇಲಾಖೆಯ ಮಾಹಿತಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಪ್ರತಿ ಬಾರಿಯೂ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುತ್ತೇವೆ. ತುಂಬಾ ಚೆನ್ನಾಗಿ ಆಯೋಜಿಸುತ್ತಾರೆ. ಗಾಜಿನ ಮನೆಯಲ್ಲಿ ಹೂವುಗಳಿಂದ ಅರಳಿರುವ ಕಲಾಕೃತಿಗಳನ್ನು ನೋಡುವುದೇ ಚೆಂದ
– ಶಿವರಾಮಯ್ಯ, ವಿಜಯನಗರ

ಶ್ರವಣಬೆಳಗೊಳಕ್ಕೆ ಹೋಗದಿದ್ದವರಿಗೆ ಇಲ್ಲಿ ನಿರ್ಮಿಸಿರುವ ಪ್ರತಿಕೃತಿಗಳ ಅಂದ ನೋಡಿದರೆ,  ಖಂಡಿತಾ  ಒಮ್ಮೆಯಾದರೂ ಗೊಮ್ಮಟಗಿರಿಯನ್ನು ಕಣ್ತುಂಬಿಕೊಳ್ಳಬೇಕು ಎನಿಸುತ್ತದೆ
–ಸುಚಿತ್ರಾ, ಪದ್ಮನಾಭನಗರ

ಮೊದಲ ದಿನವೇ ಬಂದರೆ ಹೂವುಗಳು ನಳನಳಿಸುತ್ತಿರುತ್ತವೆ. ಫಲಪುಷ್ಪ ಪ್ರದರ್ಶನದ ಸಂದರ್ಭದಲ್ಲಿ ಲಾಲ್‌ಬಾಗ್ ಮದುವಣಗಿತ್ತಿಯಂತೆ ಗೋಚರಿಸುತ್ತದೆ
–ಮೋಹನ ಕುಮಾರಿ, ವಿಜಯನಗರ

ಪ್ರತಿ ವರ್ಷವೂ ಶ್ರವಣಬೆಳಗೊಳಕ್ಕೆ ಹೋಗುತ್ತೇವೆ. ಈ ಭಾರಿ ಅಲ್ಲಿ ಮಹಾಮಸ್ತಕಾಭಿಷೇಕ ಇದೆ. ಅದಕ್ಕೂ ಮುನ್ನ ಇಲ್ಲೊಂದು ಮಸ್ತಕಾಭಿಷೇಕ ನೋಡಿ ಖುಷಿಯಾಯಿತು
–ಸುಜಾತಾ ಜೈನ್‌, ಬ್ಯಾಂಕ್‌ ಕಾಲೊನಿ

ಗಾಜಿನ ಮನೆಯಲ್ಲಿರುವುದು ಗೊಮ್ಮಟಗಿರಿಯ ಪ್ರತಿಕೃತಿಯೆಂದು ಗೊತ್ತಿದ್ದರೂ ಕೈಮುಗಿಯಬೇಕೆನಿಸುವಷ್ಟು ಆರಾಧನಾ ಭಾವವನ್ನು ಉಕ್ಕಿಸುತ್ತದೆ
–ಪದ್ಮಶ್ರೀ, ಬನಶಂಕರಿ

ಫಲಪುಷ್ಪ ಪ್ರದರ್ಶನವನ್ನು ತಪ್ಪಿಸುವುದಿಲ್ಲ. ಆದರೆ, ಹಿಂದಿನ ಎಲ್ಲಾ ಪ್ರದರ್ಶನಕ್ಕಿಂತ ಈ ಬಾರಿ ಹೂವಿನ ಅಲಂಕಾರ ಕಡಿಮೆಯಾಗಿದೆ ಅನ್ನಿಸುತ್ತದೆ
–ನಿತ್ಯಾ, ಬೆಂಗಳೂರು

ಶಸ್ತ್ರಗಳಿಲ್ಲದ ಜಗತ್ತನ್ನು ಕಲ್ಪಿಸಿದ ಬಾಹುಬಲಿ ಸಂದೇಶ ಇಂದಿಗೆ ಪ್ರಸ್ತುತವಾಗಿದೆ. ಯುದ್ಧದ ದನಿ ಕೇಳುತ್ತಿರುವಾಗ ಶಾಂತಿ ಪ್ರತಿಪಾದಿಸಿದ ಬಾಹುಬಲಿಯ ಮಾರ್ಗದಲ್ಲಿ ನಡೆಯುವ ಅಗತ್ಯವಿದೆ
–ಹಂಪ ನಾಗರಾಜಯ್ಯ, ಹಿರಿಯ ಸಾಹಿತಿ

ಬಾಹುಬಲಿ ಸಂದೇಶಗಳ ಸರಮಾಲೆ

ತೋಟಗಾರಿಕಾ ಇಲಾಖೆ ಹಾಗೂ ಮೈಸೂರು ಉದ್ಯಾನಕಲಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿಡುವ ಈ ಫಲಫುಷ್ಪ ಪ್ರದರ್ಶನದಲ್ಲಿ ಬಣ್ಣಬಣ್ಣದ ಹೂಗಳ ಸೊಬಗಿನ ನಡುವೆಯ ಬಾಹುಬಲಿ ಸಂದೇಶಗಳನ್ನು ಕಾಣಬಹುದು...

ಬಾಹುಬಲಿ ಕುರಿತು ಕುವೆಂಪು ಸಾಲುಗಳು

ಅರ್ಹಂತ ಗುರುದೇವ, ಓ ‌ಗೊಮ್ಮಟೇಶ್ವರನೆ,

ನಗ್ನತೆಗೆ ನಾಚದಿಹೆ; ಬತ್ತಲೆಗೆ ಬೆದರದಿಹೆ. ಹುಸಿ ನಾಗರಿಕ

ವೇಷದಿಂದಲ್ಪತೆಯ ಮುಚ್ಚಿ ಮೆರುಗು ಬೆರಗಿನ ಮೋಸಗೈಯದಿಹೆ.

ಮುಚ್ಚು ಮರೆ ತಾನೇಕೆ ಅಲ್ಪತಾ ಲವಲೇಶವಿಲ್ಲದೆಯೆ

ಸರ್ವತ್ರ ಸರ್ವದರೊಳುಂ ಭೂಮನಾಗಿರುವ ಮಹತೋ

ಮಹೀಯನಿಗೆ ನಿನಗೆ? ಗುಟ್ಟಿನ ರಟ್ಟು ಕೇಡು ನೀಚತೆ ಹೀನತೆಯ

ಹೊತ್ತಗೆಗೆ ಬೇಕು; ಗಗನ ವಿಸ್ತಾರದೌದಾರ್ಯಕದು ಬೇಕೆ? ಸಾಕೆ?

ನಿಜ ಮಹಿಮೆ ನಗ್ನತೆಗೆ ಅಳುಕಬೇಕಾಗಿಲ್ಲ ಬಡಕಲಿಗುಡುಗೆ ಬೇಕು,

ಕಲಿಯ ಮೈಗೇತಕದು?

‘ಸಿಲಿಕಾನ್‌ ಸಿಟಿ ಮತ್ತೆ ಉದ್ಯಾನ ನಗರಿ ಆಗಲಿ’

‘ಬೆಂಗಳೂರಿಗೆ ಹಿಂದೆ ಪುಷ್ಪನಗರಿ ಎಂಬ ಹೆಸರಿತ್ತು. ಈಗ ಅದು ಸಿಲಿಕಾನ್‌ ಸಿಟಿ ಎಂಬ ಹೆಸರು ಪಡೆದಿದೆ. ನಾವು ಮತ್ತೆ ಬೆಂಗಳೂರನ್ನು ಉದ್ಯಾನನಗರಿಯನ್ನಾಗಿ ಮಾಡುವ ಅಗತ್ಯವಿದೆ. ಎಲ್ಲಾ ಕಟ್ಟಡಗಳಲ್ಲಿಯೂ ಕೈದೋಟ ಬೆಳಸಬೇಕು ಎಂದು ಕಾನೂನು ಮಾಡಿದರೆ ಮಾತ್ರ ಅದು ಸಾಧ್ಯವಾಗುತ್ತದೆ’ ಎಂಬ ಆಶಯವನ್ನು ವಿರೇಂದ್ರ ಹೆಗ್ಗಡೆ ವ್ಯಕ್ತಪಡಿಸಿದರು.

‘50 ವರ್ಷಗಳ ಹಿಂದೆ ನಾನು ಶ್ರೀಸಾಮಾನ್ಯನಾಗಿ ಲಾಲ್‌ಬಾಗ್‌ಗೆ ಬರುತ್ತಿದ್ದೆ. ಆಗ ಉದ್ಯಾನವನ್ನು ಸಾವಧಾನದಿಂದ ನೋಡಲು ಸಾಧ್ಯವಾಗುತ್ತಿತ್ತು. ಈಗ ವಿ.ಐ.ಪಿ. ಆಗಿ ಬಂದು ನೂಕುನುಗ್ಗಲಿನಲ್ಲಿ, ಸಾಕಷ್ಟು ಹೊಡೆತಗಳನ್ನು ತಿಂದು ಪುಷ್ಪಗಳನ್ನು ನೋಡುವಂತಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT