ಕೌನ್‌ ಬನೇಗಾ ಕರೋರ್‌ ಪತಿ ₹1.15 ಲಕ್ಷ ವಂಚನೆ

7

ಕೌನ್‌ ಬನೇಗಾ ಕರೋರ್‌ ಪತಿ ₹1.15 ಲಕ್ಷ ವಂಚನೆ

Published:
Updated:

ಬೆಂಗಳೂರು: ‘ಕೌನ್‌ ಬನೇಗಾ ಮಹಾ ಕರೋರ್‌ಪತಿ’ ಹೆಸರಿನಲ್ಲಿ ಕರೆ ಮಾಡಿದ್ದ ಅಪರಿಚಿತನೊಬ್ಬ, ಬಹುಮಾನದ ಆಮಿಷವೊಡ್ಡಿ ಗ್ಯಾರೇಜ್‌ ಮಾಲೀಕ ಇಸ್ಮಾಯಿಲ್‌ ಎಂಬುವರಿಂದ ₹1.15 ಲಕ್ಷ ಸುಲಿಗೆ ಮಾಡಿದ್ದಾನೆ.

ಸೈಬರ್‌ ಕ್ರೈಂ ಪೊಲೀಸರು ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆ ವಿವರ ಆಧರಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ನಗರದಲ್ಲಿ ಗ್ಯಾರೇಜ್‌ ಇಟ್ಟುಕೊಂಡು ಜೀವನ ನಡೆಸುತ್ತಿರುವ ಇಸ್ಮಾಯಿಲ್ ಅವರಿಗೆ ಜ. 1ರಂದು ಅಪರಿಚಿತನೊಬ್ಬ ಕರೆ ಮಾಡಿದ್ದ. ‘ನಿಮ್ಮ ಮೊಬೈಲ್‌ ಸಂಖ್ಯೆಯು ಕೌನ್‌ ಬನೇಗಾ ಮಹಾ ಕರೋರ್‌ಪತಿ ಕಾರ್ಯಕ್ರಮದ ಲಕ್ಕಿ ಡ್ರಾಗೆ ಆಯ್ಕೆ ಆಗಿದೆ. ನಿಮಗೆ ₹35 ಲಕ್ಷ ಬಹುಮಾನ ಬಂದಿದೆ’ ಎಂದಿದ್ದ.

ಬಳಿಕ ವಾಟ್ಸ್‌ಆ್ಯಪ್‌ಗೆ ಬಹುಮಾನದ ಪ್ರಮಾಣಪತ್ರ ಹಾಗೂ ಕಾರ್ಯಕ್ರಮದ ವಿಡಿಯೊವನ್ನು ಕಳುಹಿಸಿ, ‘ಹಣ ವರ್ಗಾವಣೆ ಮಾಡಬೇಕಾದರೆ ನೀವು ತೆರಿಗೆ ತುಂಬಬೇಕು’ ಎಂದು ಹೇಳಿದ್ದ. ಈ ಮಾತುಗಳನ್ನು ನಂಬಿದ ಇಸ್ಮಾಯಿಲ್‌, ಆರೋಪಿ ನೀಡಿದ್ದ ಸಿಂಡಿಕೇಟ್‌ ಬ್ಯಾಂಕ್‌ ಖಾತೆಗೆ ಎರಡು ಕಂತುಗಳಲ್ಲಿ ₹ 1.15 ಲಕ್ಷ ಜಮೆ ಮಾಡಿದ್ದರು.

ಆ ನಂತರವೂ ಆತ ಇನ್ನಷ್ಟು ತೆರಿಗೆ ಪಾವತಿಸುವಂತೆ ಹೇಳಿದ್ದ. ಇದರಿಂದ ಅನುಮಾನಗೊಂಡ ಇಸ್ಮಾಯಿಲ್, ‘ನನ್ನ ಹಣ ವಾಪಸ್‌ ಕೊಡಿ. ನನಗೆ ಯಾವ ಬಹುಮಾನವೂ ಬೇಡ’ ಎಂದಿದ್ದರು. ಆ ನಂತರ ಆರೋಪಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಸಾಲಗಾರರ ಕಾಟ: ತಮಗೆ ಬಹುಮಾನ ಬಂದಿರುವುದಾಗಿ ಹಲವರ ಬಳಿ ಹೇಳಿಕೊಂಡಿದ್ದ ಇಸ್ಮಾಯಿಲ್, ತೆರಿಗೆ ಕಟ್ಟಬೇಕೆಂದು ಸ್ನೇಹಿತರ ಬಳಿ ಸಾಲ ಮಾಡಿದ್ದರು.  ‘ಬಹುಮಾನದ ಆಸೆಗಾಗಿ ಮೈ ತುಂಬ ಸಾಲ ಮಾಡಿಕೊಂಡಿದ್ದೇನೆ. ಅವರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದೇನೆ. ದಯವಿಟ್ಟು ಆರೋಪಿಯನ್ನು ಪತ್ತೆ ಹಚ್ಚಿ ನನ್ನ ಹಣ ವಾಪಸ್‌ ಕೊಡಿಸಿ’ ಎಂದು ಇಸ್ಮಾಯಿಲ್‌ ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry