ಮತ್ತೆ ಕಾಂಗ್ರೆಸ್‌ಗೆ ಅಧಿಕಾರ: ವಿಶ್ವಾಸ

7

ಮತ್ತೆ ಕಾಂಗ್ರೆಸ್‌ಗೆ ಅಧಿಕಾರ: ವಿಶ್ವಾಸ

Published:
Updated:
ಮತ್ತೆ ಕಾಂಗ್ರೆಸ್‌ಗೆ ಅಧಿಕಾರ: ವಿಶ್ವಾಸ

ಆನೇಕಲ್‌: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು ಹಾಗೂ ಯೋಜನೆಗಳಿಂದ ಜನರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿದ್ದು ಮುಂಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ನೀಡಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲರೆಡ್ಡಿ ತಿಳಿಸಿದರು. ತಾಲ್ಲೂಕಿನ ಹುಲಿಮಂಗಲದಲ್ಲಿ ‘ಮನೆ ಮನೆ ಬಾಗಿಲಿಗೆ ಕಾಂಗ್ರೆಸ್’ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಸಲುವಾಗಿ ಮನೆ ಮನೆ ಬಾಗಿಲಿಗೆ ಕಾಂಗ್ರೆಸ್‌ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 20 ವರ್ಷಗಳಿಂದ ಬಿಜೆಪಿ ಶಾಸಕರಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.

ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಐಟಿಐ ಕಾಲೇಜು, ಸುಸಜ್ಜಿತ ಆಸ್ಪತ್ರೆಗಳಿಲ್ಲ. ಇಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕುಡಿಯುವ ನೀರಿನ ಸಮಸ್ಯೆಯಿದೆ. ನಿರುದ್ಯೋಗ ಸಮಸ್ಯೆಯಿದೆ. ಸೂರಿಲ್ಲದವರಿಗೆ ಸೂರು ಕಲ್ಪಿಸಿಲ್ಲ ಎಂದರು. ಯಾವುದೇ ಉಚಿತ ನಿವೇಶನಗಳ ಹಕ್ಕುಪತ್ರ ನೀಡಿಲ್ಲ. ಜಿಗಣಿ ಹೋಬಳಿ ಹಾಗೂ ಉತ್ತರಹಳ್ಳಿ ಹೋಬಳಿಯ ರಸ್ತೆಗಳು ಬಹುತೇಕ ಹದಗೆಟ್ಟಿವೆ ಎಂದು ತಿಳಿಸಿದರು.

ರಾಜ್ಯದಲ್ಲಿನ ಕಾಂಗ್ರೆಸ್‌ ಪಕ್ಷದ ಸಾಧನೆಗಳ ಪ್ರಚಾರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಮನೆ ಮನೆ ಬಾಗಿಲಿಗೆ ಕಾಂಗ್ರೆಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಆನೇಕಲ್ ತಾಲ್ಲೂಕಿನ ಪ್ರಾಚೀನ ಚಂಪಕಧಾಮ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಜ.21ರಂದು ಚಾಲನೆ ನೀಡಲಾಗುವುದು ಎಂದರು. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 150ಕ್ಕೂ ಹೆಚ್ಚು ಮಹಿಳಾ ಸಂಘಗಳು ಪಾಲ್ಗೊಳ್ಳಲಿವೆ. ಕಾರ್ಯಕ್ರಮದ ಅಂಗವಾಗಿ ಬೈಕ್‌ ರ‍್ಯಾಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಗ್ರಾಮಗಳಲ್ಲೂ ಜಾಗೃತಿ ಜಾಥಾ ನಡೆಸುವ ಮೂಲಕ ಪಕ್ಷದ ಸಂಘಟನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಮುಖಂಡರು, ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ 10ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಭಾಗಿಗಳಾಗುತ್ತಿದ್ದಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಾಬು ಮಾತನಾಡಿ ಕಾಂಗ್ರೆಸ್ ಮುಖಂಡರಾದ ಎಚ್.ಪಿ.ರಾಜಗೋಪಾಲರೆಡ್ಡಿ ಅವರು ಹಲವಾರು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ಸಾಮೂಹಿಕ ವಿವಾಹ, ಶಿಕ್ಷಣ, ಆರೋಗ್ಯ, ವಸತಿ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದು ಈ ಭಾಗದಲ್ಲಿ ಸುಷ್ಮಾ ರಾಜಗೋಪಾಲರೆಡ್ಡಿ ಅವರ ನೇತೃತ್ವದಲ್ಲಿ ಮಹಿಳಾ ಸಂಘಗಳು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿದ್ದಾರೆ ಎಂದರು. ಮುಖಂಡರಾದ ಚಿನ್ನಪ್ಪ, ಮುನಿನಾರಾಯಣ, ವಿಘ್ನೇಶ್‌ಗೌಡ, ಲಕ್ಷ್ಮೀ, ಸವಿತಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry