‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

7

‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

Published:
Updated:
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

ಬೆಂಗಳೂರು ವಿಶ್ವವಿದ್ಯಾಲಯವನ್ನು ಎರಡು ವರ್ಷದ ಹಿಂದೆ ಮೂರು ಭಾಗಗಳಾಗಿ ವಿಂಗಡಿಸಲಾಯಿತು. ಅದರಲ್ಲಿ ಬೆಂಗಳೂರು ಸೆಂಟ್ರಲ್‌ ವಿ.ವಿ.ಯೂ ಒಂದು. ಸೆಂಟ್ರಲ್ ಕಾಲೇಜಿನ ಪಾರಂಪರಿಕ ಕಟ್ಟಡಗಳೇ ಇದರ ಕೇಂದ್ರ. ಕಾನೂನು ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಸ್. ಜಾಫೆಟ್ ಅವರನ್ನು ಈ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ನೇಮಿಸಲಾಗಿದೆ. ಪ್ರಗತಿಪರ ಚಿಂತಕರಾದ ಜಾಫೆಟ್‌, ಈ ವಿ.ವಿ.ಯನ್ನು ವಿಶಿಷ್ಟವಾಗಿ ರೂಪಿಸುವ ಕನಸು ಹೊತ್ತಿದ್ದಾರೆ.

ವಿಶ್ವವಿದ್ಯಾಲಯದ ಭವಿಷ್ಯ ಹೇಗಿರಬೇಕು; ಇದನ್ನುಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಲು ರೂಪಿಸಿರುವ ಯೋಜನೆಗಳು ಯಾವುವು; ಮುಂದಿನ ಮಾಸ್ಟರ್‌ ಪ್ಲಾನ್ ಏನು ಎಂಬ ಬಗ್ಗೆ ಜಾಫೆಟ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯವನ್ನು ಹೇಗೆ ರೂಪಿಸಲು ಉದ್ದೇಶಿಸಿದ್ದೀರಿ? ನಿಮ್ಮ ಪರಿಕಲ್ಪನೆ ಏನು?

ಬೆಂಗಳೂರು ಜಾಗತಿಕ ನಗರ. ವಿಜ್ಞಾನ– ತಂತ್ರಜ್ಞಾನದ ಬೆಳವಣಿಗೆ ಜೊತೆಗೆ ಕಾಸ್ಮೋಪಾಲಿಟನ್‌ ಗುಣವನ್ನು ಅಂತರ್ಗತಗೊಳಿಸಿಕೊಂಡಿದೆ. ಬಹು ಸಂಸ್ಕೃತಿ, ಬಹು ಭಾಷೆ ಮಾತನಾಡುವ ಬೇರೆ ಬೇರೆ ರಾಜ್ಯಗಳ ಜನ ಇಲ್ಲಿ ವಾಸವಾಗಿದ್ದಾರೆ. ಈ ನಗರದ ಯುವಕ– ಯುವತಿಯರಿಗೆ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಇದು ಹತ್ತರ ಜೊತೆ ಹನ್ನೊಂದು ಖಂಡಿತಾ ಆಗುವುದಿಲ್ಲ. ಕನ್ನಡತನ, ಜಾಗತಿಕ ಒಳನೋಟ ಹೊಂದಿದ ವಿದ್ಯಾರ್ಥಿಗಳನ್ನು ರೂಪಿಸುವುದು ನಮ್ಮ ಗುರಿ.

ವಿಶ್ವದಲ್ಲಿ ಅತ್ಯುನ್ನತ ವಿಶ್ವವಿದ್ಯಾಲಯವೆಂದು ಹೆಸರು ಮಾಡಿರುವ ‘ನ್ಯೂಯಾರ್ಕ್‌ ಯುನಿವರ್ಸಿಟಿ’ ಅಥವಾ ‘ಷಿಕಾಗೊ ಯುನಿವರ್ಸಿಟಿ’ ಮಾದರಿಯಲ್ಲಿ ರೂಪಿಸುವುದು ನನ್ನ ಕನಸು. ನಗರದ 13 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ, ಮಾನ್ಯತೆ ಹೊಂದಿದ 250 ಕಾಲೇಜುಗಳನ್ನು ವಿ.ವಿ. ಒಳಗೊಂಡಿದೆ. ಸೆಂಟ್ರಲ್‌ ಕಾಲೇಜು ಆವರಣ ಈ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನ. ಈ ಸ್ಥಳ ಶೈಕ್ಷಣಿಕ, ಸಾಂಸ್ಕೃತಿಕ, ಬೌದ್ಧಿಕ ಚಟುವಟಿಕೆಗಳ ತಾಣವಾಗಿ ಕಳೆದ ಒಂದೂವರೆ ಶತಮಾನದಿಂದ ಬೆಳೆದು ಬಂದಿದೆ. ಇತಿಹಾಸ– ಪರಂಪರೆ ಇಲ್ಲಿನ ಒಂದೊಂದು ಕಟ್ಟಡಕ್ಕೂ ಇದೆ. ದೇಶದ ಸಾಕಷ್ಟು ಮಹಾನ್‌ ವ್ಯಕ್ತಿಗಳು ಒಂದೋ, ಇಲ್ಲಿ ಶಿಕ್ಷಣ ಪಡೆದಿದ್ದಾರೆ, ಇಲ್ಲವೇ ಪಾಠ ಮಾಡಿದ್ದಾರೆ. ಅಂತಹ ಸ್ಥಳವನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಆಯ್ಕೆ ಮಾಡಿರುವುದೇ ನನ್ನನ್ನು ಪುಳಕಿತನನ್ನಾಗಿ ಮಾಡಿದೆ. ಆ ಉತ್ಕೃಷ್ಟ ಮಟ್ಟಕ್ಕೆ ಬೆಳೆಸುವ ಜವಾಬ್ದಾರಿ ನನಗೆ ಸಿಕ್ಕಿದೆ. ಅದಕ್ಕಾಗಿ ಒಂದು ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಿದ್ದೇನೆ.

* ಬೇರೆ ವಿಶ್ವವಿದ್ಯಾಲಯಗಳಿಗಿಂತ ಈ ವಿಶ್ವವಿದ್ಯಾಲಯ ಹೇಗೆ ಭಿನ್ನವಾಗಿರುತ್ತದೆ?

ಈ ವಿಶ್ವವಿದ್ಯಾಲಯವನ್ನು ನಾನು ‘ಗ್ಲೋಕಲ್‌’ ಎಂದು ಪರಿಭಾವಿಸಿದ್ದೇನೆ. ಅಂದರೆ ವಿದ್ಯಾರ್ಥಿಗಳು ಏಕ ಕಾಲಕ್ಕೆ ‘ಗ್ಲೋಬಲ್‌’ ಮತ್ತು ‘ಲೋಕಲ್’ ಎರಡರ ಜೊತೆಗೂ ಅನುಸಂಧಾನ ನಡೆಸುವ ಮೂಲಕ ಕಲಿಯುತ್ತಾರೆ. ಪದವಿ ಪಡೆಯುವುದೇ ವಿದ್ಯಾರ್ಥಿಗಳ ಏಕಮೇವ ಗುರಿಯಾಗಿರುವುದಿಲ್ಲ. ಬೆಂಗಳೂರಿನ ವಿದ್ಯಮಾನಗಳ ಜೊತೆಗೆ ಜಾಗತಿಕ ವಿದ್ಯಮಾನಗಳ ಬಗ್ಗೆಯೂ ಅರಿವು ಹೊಂದಿರುತ್ತಾರೆ. ಇಲ್ಲಿನ ಕೊಳೆಗೇರಿ ಸಮಸ್ಯೆಗಳಿಂದ ಹಿಡಿದು ಜಾಗತಿಕ ಸಮಸ್ಯೆಗಳವರೆಗೂ ಕಲಿಯುತ್ತಾರೆ.  ಸಮಾಜ ವಿಜ್ಞಾನ, ಮಾನವಿಕ ಅಧ್ಯಯನ, ವಾಣಿಜ್ಯ ಮತ್ತು ವಿಜ್ಞಾನದ ವಿಷಯಗಳು ಸಮಸ್ಯೆಗಳ ಜಾಡನ್ನು ಹಿಡಿದು ಅಧ್ಯಯನ ಮತ್ತು ಸಂಶೋಧನೆ ಮಾಡುವ ಗುರಿ ಹೊಂದಿರುತ್ತವೆ. ಅದಕ್ಕೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತದೆ.

ಸಾರಿಗೆ, ಮೂಲಸೌಕರ್ಯ, ಮಾಲಿನ್ಯ, ತ್ಯಾಜ್ಯ ನಿರ್ವಹಣೆ ಬಗ್ಗೆ ಅಧ್ಯಯನ ಮತ್ತು ಪರಿಹಾರದ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಬೇಕಾಗುತ್ತದೆ. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ಬೇರೆಯವರ ಮುಂದೆ ಕೈ ಕಟ್ಟಿ ನಿಲ್ಲಬೇಕಾಗಿಲ್ಲ. ಬೆಂಗಳೂರಿನಲ್ಲಿ ಐಐಎಸ್‌ಸಿ, ಐಐಎಂ, ನಿಯಾಸ್‌ನಂತಹ ಹಲವು ಪ್ರತಿಷ್ಠಿತ ಸಂಸ್ಥೆಗಳಿವೆ. ಇವು ಬಾಹ್ಯಮುಖಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ವಿಶ್ವವಿದ್ಯಾಲಯ ಅಂತರ್‌ಮುಖಿಯಾಗಿ ಮತ್ತು ಬಾಹ್ಯಮುಖಿಯಾಗಿ ಕಾರ್ಯ ನಿರ್ವಹಿಸುತ್ತದೆ. ‘ಶಕ್ತಿಕೇಂದ್ರ’(ವಿಧಾನಸೌಧ)ದ ಸಮೀಪವೇ ವಿಶ್ವವಿದ್ಯಾಲಯದ ‘ಬೌದ್ಧಿಕ ಕೇಂದ್ರ’ ಆಗಬೇಕು. ಜಾಗತಿಕ ರಾಜಕೀಯ ನಾಯಕರು, ನೊಬೆಲ್‌ ವಿಜೇತರು, ಚಿಂತಕರು ಇಲ್ಲಿಗೆ ಬಂದು ವಿಶೇಷ ಉಪನ್ಯಾಸ ನೀಡುವಂತಾಗಬೇಕು.

* ಕನಸು ದೊಡ್ಡದೇ ಇದೆ, ಸವಾಲುಗಳೂ ದೊಡ್ಡವೇ ಇವೆ. ಹೇಗೆ ಸಾಕಾರಗೊಳಿಸುತ್ತೀರಿ?

ನಿಜ, ಇದನ್ನು ಹೆಮ್ಮೆಯ, ಮಾದರಿ ವಿಶ್ವವಿದ್ಯಾಲಯವಾಗಿ ರೂಪಿಸುವ ಚಾರಿತ್ರಿಕ ಅವಕಾಶ ನನಗೆ ಸಿಕ್ಕಿದೆ ಎಂದು ಭಾವಿಸಿದ್ದೇನೆ. ಆ ನಿಟ್ಟಿನಲ್ಲಿ ಶ್ರಮ ಹಾಕುತ್ತೇನೆ. ಈ ವಿಶ್ವವಿದ್ಯಾಲಯ ಸ್ಥಳದ ಗುಣ ಎನ್ನಿ, ಮಹಿಮೆ ಎನ್ನಿ ಒತ್ತಡ ಇದ್ದೇ ಇರುತ್ತದೆ. ನಗರದ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವಿಶಿಷ್ಟತೆಯೇ ವಿಶ್ವವಿದ್ಯಾಲಯವನ್ನು ಭಿನ್ನವಾಗಿ ರೂಪಿಸಲು ಕಾರಣವಾಗುತ್ತದೆ. ಸ್ಥಿತಿವಂತರಿಗೆ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಿವೆ.

ವಿವಿಧ ಕಡೆಗಳಿಂದ ವಲಸೆ ಬಂದ ಕೂಲಿ ಕಾರ್ಮಿಕರು ಮತ್ತು ಕೆಳ ಹಂತದ ಕೆಲಸದಲ್ಲಿ ತೊಡಗಿರುವ ಪರಿಶಿಷ್ಟ ಜಾತಿ ಪಂಗಡಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಈ ವಿಶ್ವವಿದ್ಯಾಲಯ ಶ್ರೇಷ್ಠ ಗುಣಮಟ್ಟದ ವಿಶ್ವವಿದ್ಯಾಲಯವಾಗಲಿದೆ. 2020ರ ವೇಳೆಗೆ ಈ ವರ್ಗಕ್ಕೆ ಸೇರಿದ ಶೇ 25 ರಷ್ಟು ಯುವಕ– ಯುವತಿಯರು ಉನ್ನತ ಶಿಕ್ಷಣ ಪಡೆಯಲು ಮುಂದಾಗುತ್ತಾರೆ.  ಈ ಹಿನ್ನೆಲೆಯಲ್ಲಿ ಸಾಮಾಜಿಕ– ಆರ್ಥಿಕ ವ್ಯವಸ್ಥೆಯ ಅಧ್ಯಯನವನ್ನು ನಡೆಸಿದ್ದು, ಅದಕ್ಕಾಗಿ ‘ವಿಷನ್‌ ಡಾಕ್ಯುಮೆಂಟ್‌’ವೊಂದನ್ನು ಸಿದ್ಧಪಡಿಸಿದ್ದೇವೆ. ಮಾಸ್ಟರ್‌ ಪ್ಲಾನ್‌ ಕೂಡ ಸಿದ್ಧಪಡಿಸಿದ್ದೇವೆ.

* ವಿಜ್ಞಾನ ಮತ್ತು ತಂತ್ರಜ್ಞಾನ ಈ ಹೊತ್ತಿನ ಅತ್ಯಂತ ಬೇಡಿಕೆಯ ಕೋರ್ಸ್‌ಗಳಾಗಿವೆ. ಇಲ್ಲಿ ಜಾಗತಿಕ ಗುಣಮಟ್ಟವನ್ನು ಹೇಗೆ ತರುತ್ತೀರಿ. ಈ ಬಗ್ಗೆ ಏನೆಲ್ಲ ಯೋಜನೆಗಳನ್ನು ಹಾಕಿಕೊಂಡಿದ್ದೀರಿ?

ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ ಹಿಂದಿನಿಂದಲೂ ವಿಜ್ಞಾನಕ್ಕೆ ಹೆಸರಾಗಿದೆ. ಸರ್‌.ಎಂ. ವಿಶ್ವೇಶ್ವರಯ್ಯ, ಸಿ.ವಿ. ರಾಮನ್‌ ಅವರಿಂದ ಮೊದಲ್ಗೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಕಷ್ಟು ದಿಗ್ಗಜರು ಸೆಂಟ್ರಲ್‌ ಕಾಲೇಜಿನಲ್ಲೇ ಓದಿದವರು. ಇಂದಿನ ಅಗತ್ಯಕ್ಕೆ ಅನುಗುಣವಾಗಿ ವಿಜ್ಞಾನದ ಕೋರ್ಸ್‌ಗಳನ್ನು ರೂಪಿಸಲು ಪ್ರತಿಷ್ಠಿತ ವಿಜ್ಞಾನಿಗಳನ್ನು ಒಳಗೊಂಡ ಎಂಟು ಜನರ ತಂಡವೊಂದನ್ನು ರಚಿಸಿದ್ದೇನೆ. ಅಲ್ಲದೆ, ಈಗ ಬೋಧಿಸುತ್ತಿರುವ ಕೋರ್ಸ್‌ಗಳನ್ನು ಹೇಗೆ ಮಾರ್ಪಾಡು ಮಾಡಬಹುದು ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಪಿಯುಸಿ ಬಳಿಕ ಐದು ವರ್ಷಗಳ ಏಕೀಕೃತ ಎಂಎಸ್ಸಿ ಕೋರ್ಸ್‌ಗಳಿರುತ್ತವೆ.

ಪದವಿ, ಸ್ನಾತಕೋತ್ತರ ಮುಗಿಸಿ ಹೋಗಬಹುದು. ಜೀವವಿಜ್ಞಾನ, ರಸಾಯನ ವಿಜ್ಞಾನ, ಭೌತ ವಿಜ್ಞಾನ, ಗಣಿತ ಕ್ಷೇತ್ರಗಳ ಹಲವು ಹೊಸ ಶಾಖೆಗಳಿಗೆ ಆದ್ಯತೆ ನೀಡಲಾಗುತ್ತದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಕಲಾ ವಿಷಯದ ವಿದ್ಯಾರ್ಥಿಗಳು ವಿಜ್ಞಾನದ ವಿಷಯವನ್ನೂ, ವಿಜ್ಞಾನದ ವಿಷಯದ ವಿದ್ಯಾರ್ಥಿಗಳು ಮಾನವಿಕ ವಿಷಯಗಳನ್ನೂ ಸ್ವಲ್ಪ ಮಟ್ಟಿಗೆ ಕಲಿಯಬೇಕಾಗುತ್ತದೆ. ಅಂದರೆ ಅಂತರ್‌ಶಿಸ್ತೀಯ ಕಲಿಕೆಯ ಜೊತೆಗೆ ಬಹು ಶಿಸ್ತೀಯ ಕಲಿಕೆಗೆ ಒತ್ತು ನೀಡಲಾಗುತ್ತದೆ. ಇದರಿಂದ ಶಿಕ್ಷಣದಲ್ಲಿ ಪರಿಪೂರ್ಣತೆ ಪಡೆಯಲು ಸಾಧ್ಯ. ಅತ್ಯುತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಸಾಧ್ಯ. ವಿಜ್ಞಾನದ ವಿಷಯಗಳಿಗೆ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ, ನಿಯಾಸ್‌, ಐಸಾಕ್‌, ಐಐಎಂಗಳ  ಸಹಯೋಗವನ್ನು ಪಡೆಯಲಾಗುತ್ತದೆ. ಇದಕ್ಕೆ ಬಹುತೇಕ ಸಂಸ್ಥೆಗಳು ಒಪ್ಪಿಗೆ ನೀಡಿವೆ. ಬೋಧನೆಗೆ ದೇಶ– ವಿದೇಶಗಳ ಶ್ರೇಷ್ಠ ಬೋಧಕರನ್ನು ಕರೆಸುತ್ತೇವೆ.

* ವಿಶಿಷ್ಟ ಕೋರ್ಸ್‌ಗಳು ಏನಿವೆ?

ತತ್ತ್ವಶಾಸ್ತ್ರ ಮತ್ತು ಅಂತರ್‌ ಧರ್ಮಗಳ ತೌಲನಿಕ ಅಧ್ಯಯನಕ್ಕೆ ಸ್ನಾತಕೋತ್ತರ ಕೋರ್ಸ್‌, ಕನ್ನಡ ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರ, ಕಾನೂನು ಮತ್ತು ಸಾರ್ವಜನಿಕ ನೀತಿ ನಿರೂಪಣೆ ಅಧ್ಯಯನ, ನಗರ ಅಧ್ಯಯನ ಮತ್ತು ಮಾಸ್ಟರ್‌ ಪ್ಲಾನಿಂಗ್‌, ನಗರ ಪರಿಸರ ಅಧ್ಯಯನ, ಸಿನಿಮಾ ಮತ್ತು ಡಿಜಿಟಲ್‌ ಮೀಡಿಯಾ ಅಧ್ಯಯನ ಕೇಂದ್ರ ಪ್ರಮುಖವಾದವು. ವಿದ್ಯಾರ್ಥಿ ಯಾವುದೇ ಕೋರ್ಸ್‌ ತೆಗೆದುಕೊಳ್ಳಲಿ ವಿಶ್ವವಿದ್ಯಾಲಯ ಬಿಟ್ಟು ಹೊರ ಹೋಗುವಾಗ ಆತ ಉದ್ಯಮಶೀಲತೆ ಕೌಶಲವನ್ನು ಕಲಿತಿರುತ್ತಾನೆ. ವಿಷಯ ಜ್ಞಾನದ ಜೊತೆಗೆ ಕೌಶಲ ಅಗತ್ಯ. ಆಗ ಮಾತ್ರ ಸ್ವಾವಲಂಬಿಯಾಗಲು ಸಾಧ್ಯ.

* ವಿಶ್ವವಿದ್ಯಾಲಯಕ್ಕೆ ಸಂಪನ್ಮೂಲ ಹೇಗೆ ಕ್ರೋಡೀಕರಿಸುತ್ತೀರಿ? ಕಾರ್ಪೊರೇಟ್‌ ನೆರವು ಪಡೆಯುವ ಉದ್ದೇಶವಿದೆಯೇ?

ಮುಖ್ಯಮಂತ್ರಿಯವರಿಗೆ ₹ 350 ಕೋಟಿ ಪ್ರಸ್ತಾವ ಸಲ್ಲಿಸಿದ್ದೇನೆ. ಬಜೆಟ್‌ನಲ್ಲಿ ಎಷ್ಟು ಅನುದಾನ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ನೀಡುವ ಉದ್ದೇಶ ನಮ್ಮದು. ಅದರಲ್ಲೂ ಚಾರಿತ್ರಿಕವಾಗಿ ತುಳಿತಕ್ಕೊಳಗಾದವರಿಗೆ ಉಚಿತ ಶಿಕ್ಷಣ ನೀಡಬೇಕು. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಅನುದಾನ ನೀಡಬೇಕು.

ಹಣ ಕಡಿಮೆ ಆದರೆ ಕಾರ್ಪೊರೇಟ್‌ ವಲಯದಿಂದ ಸಿಎಸ್‌ಆರ್‌ ನಿಧಿಯಿಂದ ನೆರವು ಪಡೆಯುವ ಬಗ್ಗೆ ಚಿಂತನೆ ಇದೆ. ಹಾಗೆಂದು ನೇರವಾಗಿ ಹಣ ಪಡೆಯುವುದಿಲ್ಲ. ಪ್ರಾಯೋಜಕತ್ವ ಕೇಳುತ್ತೇವೆ. ನಮ್ಮ ಉದ್ದೇಶ ಉತ್ತಮವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪ್ರಾಯೋಜಕತ್ವ ನೀಡುವವರು ಸಾಕಷ್ಟು ಜನ ಇದ್ದೇ ಇರುತ್ತಾರೆ. ವಿಶ್ವವಿದ್ಯಾಲಯಕ್ಕೆ ಸರಿಯಾದ ರೀತಿಯಲ್ಲಿ ತಳಪಾಯ ಹಾಕಬೇಕು. ಹೀಗಾದರೆ ಮಾತ್ರ ಮುಂದಿನ 50 ಅಥವಾ 100 ವರ್ಷಗಳಲ್ಲಿ ಸದೃಢ ವಿಶ್ವವಿದ್ಯಾಲಯವಾಗಿ ಬೆಳೆಯುತ್ತದೆ. ಈ ಕಾರಣಕ್ಕೆ ನಾಳಿನ ಅಥವಾ ‘ಭವಿಷ್ಯದ ವಿಶ್ವವಿದ್ಯಾಲಯ’ ಎಂದು ಕರೆಯಲು ಬಯಸುತ್ತೇನೆ.

* ಕೆಲವು ಹೊಸ ವಿಶ್ವವಿದ್ಯಾಲಯಗಳು ಹುಟ್ಟಿಕೊಳ್ಳುವಾಗಲೇ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗುತ್ತವೆ. ಇದನ್ನು ತಡೆಯಲು ಪಾರದರ್ಶಕ ವ್ಯವಸ್ಥೆ ಮಾಡಿಕೊಂಡಿದ್ದೀರೆ?

ಹೌದು, ಹಣಕಾಸಿನ ವಿಚಾರದಲ್ಲಿ ಮತ್ತು ವಿಶ್ವವಿದ್ಯಾಲಯದ ಆಡಳಿತದಲ್ಲಿ ಪಾರದರ್ಶಕತೆ ಇರುತ್ತದೆ. ಎಲ್ಲ ಖರ್ಚು–ವೆಚ್ಚಗಳ ಮಾಹಿತಿಯನ್ನು ವೆಬ್‌ಸೈಟ್‌ಗೆ ಹಾಕಲಾಗುವುದು. ಇದಕ್ಕಾಗಿ ಡಿಜಿಟಲ್‌ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ವ್ಯವಸ್ಥೆ ರೂಪಿಸಲು ಪರಿಣಿತರ ಒಂದು ತಂಡ ಕೆಲಸ ಮಾಡುತ್ತಿದೆ.

* ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿ ಎಂತಹ ವಾತಾವರಣ ರೂಪಿಸಲು ಬಯಸಿದ್ದೀರಿ?

ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಬೌದ್ಧಿಕ ಚಟುವಟಿಕೆಗಳಿಗೂ ಅವಕಾಶವಿರುತ್ತದೆ. ಯಾವುದೇ ವಿಷಯದ ಕುರಿತು ಚರ್ಚೆ, ಸಂವಾದಗಳನ್ನು ನಡೆಸಬಹುದು. ಜೆಎನ್‌ಯು, ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಇರುವಂತೆ ಮುಕ್ತ ಚಿಂತನೆಗೆ ಅವಕಾಶ ಇರಲಿದೆ. ಎಡ, ಬಲ ಮತ್ತು ಮಧ್ಯಮ ಮಾರ್ಗದವರು ಆರೋಗ್ಯಕರವಾಗಿ ಚರ್ಚೆಗೆ ತೆರೆದುಕೊಳ್ಳಬಹುದು. ಆದರೆ, ಈ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಬಾರದು ಅಷ್ಟೆ. ಚಿತ್ರಸಂತೆ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಟುವಟಿಕೆಗಳಿಗೂ ಅವಕಾಶವಿರುತ್ತದೆ. ಶೇ 60 ರಷ್ಟು ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆ ಮಾಡುವ ಉದ್ದೇಶವಿದೆ. ಯುವಕರಿಗೆ, ಯುವತಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ಇರುತ್ತದೆ. ಇದಕ್ಕೆ ತಲಾ ₹ 30 ಕೋಟಿ ವೆಚ್ಚ ಮಾಡಲಾಗುತ್ತದೆ.

* ನಿಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕಾಲೇಜುಗಳ ಜೊತೆಗಿನ ಸಂಬಂಧ ಹೇಗಿರುತ್ತದೆ? ಉತ್ತಮ ಸಂಬಂಧಕ್ಕಾಗಿ ಏನು ಮಾಡುತ್ತೀರಿ?

ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸಾಕಷ್ಟು ಪ್ರತಿಷ್ಠಿತ ಕಾಲೇಜುಗಳೂ ಬರುತ್ತವೆ. ಇವುಗಳೊಂದಿಗೆ ಸತತ ಸಂಪರ್ಕ ಇಟ್ಟುಕೊಳ್ಳುತ್ತೇವೆ. ಎಲ್ಲ ಕಾಲೇಜುಗಳು ನಮ್ಮ ಮಾಲೀಕರು ಎಂಬ ಭಾವನೆ ಹೊಂದಿರುತ್ತೇವೆ. ಅವುಗಳ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆ. ಕಾಲೇಜುಗಳೂ ವಿಶ್ವವಿದ್ಯಾಲಯದ ಬಗ್ಗೆ ಅದೇ ಭಾವನೆ ಹೊಂದಬೇಕು. ನಮ್ಮ ಮತ್ತು ಅವರ ಸಂಬಂಧ ಕೇವಲ ಪರೀಕ್ಷೆ ನಡೆಸುವುದಕ್ಕೆ ಸೀಮಿತವಾಗಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry