ಕಾಂಕ್ರೀಟ್‌ ಕಾಡಿನಲ್ಲಿ ಬಿಚ್ಚಿಕೊಂಡ ಕಾನನ ಕಥನ

7

ಕಾಂಕ್ರೀಟ್‌ ಕಾಡಿನಲ್ಲಿ ಬಿಚ್ಚಿಕೊಂಡ ಕಾನನ ಕಥನ

Published:
Updated:
ಕಾಂಕ್ರೀಟ್‌ ಕಾಡಿನಲ್ಲಿ ಬಿಚ್ಚಿಕೊಂಡ ಕಾನನ ಕಥನ

ಬೆಂಗಳೂರು: ಇವರ ಮಾತುಕತೆಯ ನಡುವೆ ಪೂರ್ಣಚಂದ್ರ ತೇಜಸ್ವಿ ಬಂದು ಹೋದರು, ವೀರಪ್ಪನ್‌ ಇಣುಕಿ ಮರೆಯಾದ, ಚೆನ್ನ, ಕೃಷ್ಣ ಆಗಾಗ ಬರುತ್ತಿದ್ದರು. ಆದರೆ, ಇಡೀ ಮಾತಿನ ಜತೆಗೆ ಇದ್ದಿದ್ದು ಬೊಮ್ಮ ಮತ್ತು ಕಾಡು!

ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಜೋಡಿ ತಮ್ಮ ಅನುಭವಗಳ ಮೂಲಕ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕಾಡನ್ನೇ ಅನಾವರಣಗೊಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಕೃಪಾಕರ ಸೇನಾನಿ ತಮ್ಮ ಮಾತುಗಳ ಮೂಲಕ ಪ್ರೇಕ್ಷಕರನ್ನು ಕಾಡುಮೇಡಲ್ಲಿ ಅಲೆದಾಡಿಸಿದರು.

ಶ್ರೀರಂಗಪಟ್ಟಣದ ಬಳಿಯ ದರಸಗುಪ್ಪೆಯಿಂದ ಬಿಚ್ಚಿಕೊಂಡ ಈ ಜಗತ್ತು ಬಂಡೀಪುರ, ಮಧುಮಲೈ, ಕರ್ನಾಟಕದ ಬಯಲು ಸೀಮೆ, ಉತ್ತರ ಕರ್ನಾಟಕದಲ್ಲೆಲ್ಲಾ ಸುತ್ತಾಡಿ ಕೊನೆಗೆ ಗ್ರೀನ್‌ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗಳಕ್ಕೆ ಬಂದು ನಿಂತಿತು.

ಪಕ್ಷಿ ವೀಕ್ಷಣೆ, ಪಕ್ಷಿಗಳ ಛಾಯಾಗ್ರಹಣದಿಂದ ಆರಂಭಗೊಂಡ ವನ್ಯಜೀವಿ ಛಾಯಾಗ್ರಹಣದ ಹುಚ್ಚು ಹೇಗೆ ತೋಳಗಳ ಬೆನ್ನತ್ತುವರೆಗಿನ ಸುದೀರ್ಘ ಪಯಣವನ್ನು ಈ ಇಬ್ಬರು ರೋಚಕವಾಗಿ ತೆರೆದಿಟ್ಟರು.

‘ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರೆಲ್ಲರೂ ಹಕ್ಕಿ ಅಥವಾ ಯಾವುದೋ ಪ್ರಾಣಿಯ ಚಿತ್ರವನ್ನು ಕ್ಲಿಕ್ಕಿಸುವುದು ಸುಲಭ. ಆದರೆ, ಆ ಚಿತ್ರದ ಹಿಂದಿರುವ ಕಥೆ ಮತ್ತು ಜ್ಞಾನ ಮುಖ್ಯವಾಗುತ್ತದೆ’ ಎಂದು ಸೇನಾನಿ ಹೇಳಿದರು.

‘ಬುಡಕಟ್ಟು ಜನರ ಮುಗ್ಧತೆ, ಕಾಡಿನ ಜ್ಞಾನ ಅನನ್ಯವಾದುದು. ಸದ್ದುಗಳ ಮೂಲಕ ಕಾಡಿನಲ್ಲಿ ಸಂದೇಶಗಳನ್ನು ಗ್ರಹಿಸುವ ಶಕ್ತಿ ಬುಡಕಟ್ಟು ಜನರಿಗಿದೆ. ಆದರೆ, ಅವರೂ ಮನುಷ್ಯರು. ಮನುಷ್ಯರಿಗಿರುವ ಮಿತಿಗಳೆಲ್ಲವೂ ಅವರಿಗೂ ಇದೆ’ ಎಂದರು.

‘ನದೀ ಮೂಲಗಳನ್ನು ಗೌರವಿಸುವುದನ್ನು ನಾವು ಕಲಿಯಬೇಕು. ನದಿ ನೀರು ಸಮುದ್ರ ಸೇರಿ ಪೋಲಾಗುತ್ತದೆ ಎಂಬ ಮಾತೇ ತಪ್ಪು. ನದಿ ನೀರು ಸಮುದ್ರ ಸೇರುವ ಜಾಗ ಜೀವ ವೈವಿಧ್ಯದ ಅತ್ಯಂತ ಸೂಕ್ಷ್ಮವಾದ ಪ್ರದೇಶ. ನದಿ ತಿರುವು ಯೋಜನೆಗಳು ಈ ಜೀವ ವೈವಿಧ್ಯಕ್ಕೆ ಧಕ್ಕೆ ತರುತ್ತವೆ’ ಎಂದು ಕೃಪಾಕರ ತಿಳಿಸಿದರು.

‘ನಮ್ಮಲ್ಲಿರುವ ಅರಣ್ಯದ ಪ್ರಮಾಣ ತುಂಬಾ ಕಡಿಮೆ. ಕಾಡುಗಳು ದ್ವೀಪಗಳಂತಾಗಿವೆ. ದ್ವೀಪದಂತಾಗಿರುವ ಕಾಡುಗಳನ್ನು ಬೆಸೆಯುವ ಕೆಲಸವಾಗಬೇಕು. ಜೀವವೈವಿಧ್ಯದ ಸಮತೋಲನ ಕಾಪಾಡಲು ಹೆಚ್ಚಾಗಿರುವ ಪ್ರಾಣಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗತ್ತದೆ. ಧರ್ಮ, ರಾಜಕೀಯವನ್ನು ಬದಿಗಿಟ್ಟು ಸರ್ಕಾರಗಳು ಈ ಕೆಲಸ ಮಾಡಬೇಕು’ ಎಂದು ಹೇಳಿದರು.

ಬೊಮ್ಮ ಸಾಕಷ್ಟು ಬಾರಿ ನಮಗೆ ಕೈಕೊಟ್ಟಿದ್ದಾನೆ. ಆದರೆ, ಕಾಡಿನ ಬಗ್ಗೆ ಅವನು ನಮಗೆ ಕೊಟ್ಟ ಅಗಾಧ ಜ್ಞಾನವನ್ನು ನಾವೆಂದೂ ಮರೆಯುವುದಿಲ್ಲ

– ಕೃಪಾಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry