ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ ಪ್ರವೇಶಿಸಿದ ಭಾರತ

ನ್ಯೂಜಿಲೆಂಡ್‌ ವಿರುದ್ಧ ಗೆದ್ದ ತಂಡ: ಮಿಂಚಿದ ದಿಲ್‌ಪ್ರೀತ್‌
Last Updated 20 ಜನವರಿ 2018, 19:34 IST
ಅಕ್ಷರ ಗಾತ್ರ

ತೌರಾಂಗ, ನ್ಯೂಜಿಲೆಂಡ್‌: ರಕ್ಷಣೆ ಮತ್ತು ಮುಂಚೂಣಿ ವಿಭಾಗಗಳಲ್ಲಿ ಅಮೋಘ ಸಾಮರ್ಥ್ಯ ತೋರಿದ ಭಾರತ ತಂಡದವರು ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಬ್ಲೇಕ್‌ ಪಾರ್ಕ್‌ನಲ್ಲಿ ಶನಿವಾರ ನಡೆದ ರೌಂಡ್‌ ರಾಬಿನ್‌ ಹಂತದ ತನ್ನ ಕೊನೆಯ ಹಣಾಹಣಿಯಲ್ಲಿ ಭಾರತ 3–1 ಗೋಲುಗಳಿಂದ ನ್ಯೂಜಿಲೆಂಡ್‌ ತಂಡವನ್ನು ಪರಾಭವಗೊಳಿಸಿತು.

ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಭಾರತ ತಂಡ ಬಲಿಷ್ಠ ಬೆಲ್ಜಿಯಂ ವಿರುದ್ಧ ಸೆಣಸಲಿದೆ.

ದಿನದ ಇನ್ನೊಂದು ರೌಂಡ್‌ ರಾಬಿನ್‌ ಲೀಗ್‌ ಪಂದ್ಯದಲ್ಲಿ ಬೆಲ್ಜಿಯಂ 4–1 ಗೋಲುಗಳಿಂದ ಜಪಾನ್‌ ತಂಡದ ಸವಾಲು ಮೀರಿತು.

ಹಿಂದಿನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಸೋತಿದ್ದ ಭಾರತ ತಂಡದವರು ಕಿವೀಸ್‌ ನಾಡಿನ ವಿರುದ್ಧದ ಹಣಾಹಣಿಯಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದರು. ತಂಡದ ಈ ತಂತ್ರಕ್ಕೆ ಎರಡನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಸೊಗಸಾದ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆ ತಂದುಕೊಟ್ಟರು.

ಆ ನಂತರ ಆತಿಥೇಯ ಆಟಗಾರರು ಸಮಬಲದ ಗೋಲು ದಾಖಲಿಸಲು ಸಾಕಷ್ಟು ಪರಿಶ್ರಮ ಪಟ್ಟರು. ಆದರೆ ಭಾರತದ ರಕ್ಷಣಾಕೋಟೆ ಭೇದಿಸಲು ಆಗಲಿಲ್ಲ.

20ನೇ ನಿಮಿಷದವರೆಗೂ ಭಾರತ ಮುನ್ನಡೆ ಕಾಯ್ದುಕೊಂಡಿತ್ತು. 21ನೇ ನಿಮಿಷದಲ್ಲಿ ದಿಲ್‌ಪ್ರೀತ್‌ ಸಿಂಗ್‌ ಮೋಡಿ ಮಾಡಿದರು. ಸಹ ಆಟಗಾರ ತಮ್ಮತ್ತ ಬಾರಿಸಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಅವರು ಅದನ್ನು ಚುರುಕಾಗಿ ಎದುರಾಳಿ ತಂಡದ ಗೋಲುಪೆಟ್ಟಿಗೆಯೊಳಗೆ ತೂರಿಸಿದರು. ಹೀಗಾಗಿ ಪ್ರವಾಸಿ ತಂಡದ ಮುನ್ನಡೆ 2–0ಗೆ ಹೆಚ್ಚಿತು.

42ನೇ ನಿಮಿಷದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಇದನ್ನು ಗೋಲಾಗಿ ಪರಿವರ್ತಿಸಿದ ಕೇನ್‌ ರಸೆಲ್‌ ತಂಡದ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಸಮಯ ಉಳಿಯಲು ಮನದೀಪ್‌ ಸಿಂಗ್‌ ಬಿಡಲಿಲ್ಲ. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಎದುರಾಳಿ ಆವರಣದಲ್ಲಿದ್ದ ಅವರು 30 ಗಜ ದೂರದಿಂದ ನೇರವಾಗಿ ಗುರಿಯೆಡೆಗೆ ಬಾರಿಸಿ ಭಾರತದ ಆಟಗಾರರ ಸಂಭ್ರಮಕ್ಕೆ ಕಾರಣರಾದರು.

ಆ ನಂತರ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ರಕ್ಷಣಾ ವಿಭಾಗದಲ್ಲಿ ಎಚ್ಚರಿಕೆಯ ಆಟ ಆಡಿದ ಭಾರತ ತಂಡದವರು ಎದುರಾಳಿ ಆಟಗಾರರು ಆವರಣ ಪ್ರವೇಶಿಸದಂತೆ ತಡೆಯುವಲ್ಲಿ ಸಫಲರಾದರು.

‘ನ್ಯೂಜಿಲೆಂಡ್‌ ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಬೇಕೆಂಬ ತಂತ್ರ ರೂಪಿಸಿದ್ದೆವು. ಆಟಗಾರರು ಯೋಜನೆಗೆ ಅನುಗುಣವಾಗಿ ಆಡಿದ್ದರಿಂದ ಗೆಲುವು ಗಳಿಸಲು ಸಾಧ್ಯವಾಯಿತು. ಹಿಂದಿನ ಪಂದ್ಯಗಳಿಗೆ ಹೋಲಿಸಿದರೆ ಈ ಪಂದ್ಯದಲ್ಲಿ ನಮ್ಮವರಿಂದ ಶ್ರೇಷ್ಠ ಆಟ ಮೂಡಿಬಂದಿದೆ. ಮುಂದಿನ ಪಂದ್ಯದಲ್ಲೂ ಇದೇ ಸಾಮರ್ಥ್ಯದೊಂದಿಗೆ ಆಡಲು ಶ್ರಮಿಸುತ್ತೇವೆ’ ಎಂದು ಭಾರತ ತಂಡದ ಕೋಚ್‌ ಶೋರ್ಡ್‌ ಮ್ಯಾರಿಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT