‘ಬಜಾರ್‌’ನಲ್ಲಿ ಪಾರಿವಾಳಗಳ ಬೆಟ್ಟಿಂಗ್

7

‘ಬಜಾರ್‌’ನಲ್ಲಿ ಪಾರಿವಾಳಗಳ ಬೆಟ್ಟಿಂಗ್

Published:
Updated:
‘ಬಜಾರ್‌’ನಲ್ಲಿ ಪಾರಿವಾಳಗಳ ಬೆಟ್ಟಿಂಗ್

ಪರದೆ ಮೇಲೆ ಮೂಡಿಬರುತ್ತಿದ್ದ ಟೀಸರ್‌ನಲ್ಲಿ ಪಾರಿವಾಳಗಳ ಗದ್ದಲ ಹೆಚ್ಚಿತ್ತು. ನಾಯಕ ಗೋಣಿಚೀಲದಲ್ಲಿ ಸುತ್ತಿದ್ದ ಮಚ್ಚು, ಲಾಂಗ್‌ಗಳನ್ನು ಒಮ್ಮೆಲೆ ನೆಲಕ್ಕೆ ಎಸೆದ. ಬಳಿಕ ಅವುಗಳನ್ನು ಬೈಕ್‌ ಹಿಂಭಾಗಕ್ಕೆ ಕಟ್ಟಿಕೊಂಡ. ಇನ್ನೇನು ಫೈಟಿಂಗ್‌ ಶುರುವಾಗಲಿದೆ ಎಂದು ನಿರೀಕ್ಷಿಸಿದ್ದ ಜನರಿಗೆ ಅಚ್ಚರಿ ಕಾದಿತ್ತು. ‘ನಾನು ರೌಡಿ ಆಗುವುದಕ್ಕೆ ಬಂದಿಲ್ಲ. ಆಯುಧ ಪೂಜೆಗೆ ಮಚ್ಚು ತಟ್ಟಿಸಿಕೊಂಡು ಬರುವಂತೆ ಮನೆಯಲ್ಲಿ ಹೇಳಿದ್ದಾರೆ’ ಎಂದ ನಾಯಕನ ಮಾತಿಗೆ ನೋಡುಗರು ಕಕ್ಕಾಬಿಕ್ಕಿ!

ಅದು ‘ಬಜಾರ್‌’ ಚಿತ್ರದ ಮುಹೂರ್ತ ಸಮಾರಂಭ. ‘ಆಪರೇಷನ್ ಅಲಮೇಲಮ್ಮ’ ಮತ್ತು ‘ಚಮಕ್‌’ ಚಿತ್ರ ಗೆದ್ದ ಖುಷಿಯಲ್ಲಿರುವ ನಿರ್ದೇಶಕ ಸಿಂಪಲ್‌ ಸುನಿ ಪಾರಿವಾಳದ ಬೆಟ್ಟಿಂಗ್, ರೌಡಿಸಂ ಸುತ್ತ ಹೆಣೆದಿರುವ ಕಥೆ ಹೇಳಲು ಹೊರಟಿದ್ದಾರೆ. ಪಾರಿವಾಳದಷ್ಟೇ ಕಥೆಯಲ್ಲಿ ಪಾರಿಜಾತ ಎಂಬ ಹುಡುಗಿ ಪಾತ್ರಕ್ಕೂ ಪ್ರಾಧಾನ್ಯವಿದೆಯಂತೆ.

ಚಿತ್ರಕ್ಕೆ ಬಂಡವಾಳ ಹೂಡಿರುವ ತಿಮ್ಮೇಗೌಡ ಅವರ ತಂದೆಗೆ ನಾಟಕಗಳ ಬಗ್ಗೆ ಅಪಾರ ಪ್ರೀತಿ ಇತ್ತಂತೆ. ಅಜ್ಜನ ಗುಣವೇ ಅವರ ಮಗನಲ್ಲೂ ಇದೆಯಂತೆ. ಹಾಗಾಗಿ, ಮಗನನ್ನೇ ನಾಯಕ ನಟನನ್ನಾಗಿ ಮಾಡಲು ಮುಂದಾದ್ದೇನೆ ಎಂದು ಗುಟ್ಟು ಬಿಟ್ಟುಕೊಟ್ಟರು ತಿಮ್ಮೇಗೌಡ.

ನಾಯಕ ಧನ್‌ವೀರ್‌ಗೆ ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೇ ನಾಟಕಗಳಲ್ಲಿ ಅಭಿನಯಿಸುವ ಗೀಳು ಆರಂಭವಾಯಿತಂತೆ. ಇದಕ್ಕೆ ತಕ್ಕಂತೆ ಅಪ್ಪನಿಂದಲೂ ಪ್ರೋತ್ಸಾಹ ಸಿಕ್ಕಿದೆ. ‘ಸಿನಿಮಾದಲ್ಲಿ ನಟಿಸಬೇಕೆಂಬುದು ನನ್ನ ಹಲವು ದಿನ ಕನಸಾಗಿತ್ತು. ಅದು ಈಗ ಈಡೇರಿದೆ. ಚಿತ್ರರಂಗಕ್ಕೆ ಹೊಸಬರ ಪ್ರವೇಶ ಹೆಚ್ಚುತ್ತಿದೆ. ನಾನೂ ಕೂಡ ಹೊಸಬ. ನನಗೂ ಪ್ರೇಕ್ಷಕರು ಆಶೀರ್ವದಿಸಬೇಕು’ ಎಂದು ಕೋರುವುದನ್ನು ಅವರು ಮರೆಯಲಿಲ್ಲ.

‘ಧೈರ್ಯಂ’ ಚಿತ್ರದ ಬಳಿಕ ಧಾರಾವಾಹಿಗೆ ಮರಳಿದ್ದ ನಟಿ ಅದಿತಿ ಪ್ರಭುದೇವ್‌ ಮತ್ತೆ ಹಿರಿತೆರೆ ಬಂದ ಖುಷಿಯಲ್ಲಿದ್ದರು. ‘ಪಾರಿವಾಳ ಮತ್ತು ಪಾರಿಜಾತಳಿಗೆ ಪ್ರೇಕ್ಷಕರು ಬೆಂಬಲ ನೀಡಬೇಕು’ ಎಂದು ಮಾತು ಮುಗಿಸಿದರು.

‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಚಿತ್ರಕ್ಕೆ ಕ್ಲಾಪ್‌ ಮಾಡಿ ಶುಭ ಕೋರಿದರು. ರವಿ ಬಸ್ರೂರು ಅವರ ಸಂಗೀತ ಈ ಚಿತ್ರಕ್ಕಿದೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಶಿವಧ್ವಜ್‌ ಶೆಟ್ಟಿ ಪ್ರೊಡಕ್ಷನ್‌ ಡಿಸೈನರ್‌ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry