ರಾಜಕೀಯ ಸಂವಹನ: ಮಾತಿನ ದೂಳು

7

ರಾಜಕೀಯ ಸಂವಹನ: ಮಾತಿನ ದೂಳು

Published:
Updated:
ರಾಜಕೀಯ ಸಂವಹನ: ಮಾತಿನ ದೂಳು

ಮಾಗಿಯ ಬೆಳ್ಳಂಬೆಳಗಿನ ಹಿತಕರ ವಾತಾವರಣದಲ್ಲಿಯೂ ಪತ್ರಿಕೆ ಕೈಗೆತ್ತಿಕೊಂಡರೆ ರಾಜಕೀಯದ ಮಾತಿನ ದೂಳು ಕಣ್ಣಿಗೆರಾಚುತ್ತದೆ. ಭಾಷೆಯ ಸಭ್ಯತೆಯನ್ನು ಮೀರಿದ ರಾಜಕೀಯ ಧ್ವನಿಗಳು ಕಿವಿಗೆ ತೂತು ಹೊಡೆಯುತ್ತವೆ. ದುಃಖದ ವಿಷಯವೆಂದರೆ ಕೆಲವು ನೇತಾರರು ಇಂತಹ ಏರು ಮಾತುಗಳಿಂದಲೇ ಜನರಹೃದಯಗಳನ್ನು ತಟ್ಟಬಹುದೆಂದು ಭಾವಿಸಿದಂತಿದೆ. ನಿಜವಾಗಿಯೂ ಮಾತಿನ ಮೂಲಕ ಚರ್ಚಿಸಬೇಕಾಗಿರುವುದು ತತ್ವಗಳು ಮತ್ತು ಹೊಸ ವಿಚಾರಗಳ ಕುರಿತು. ಆದರೆ ಮಾತಿನ ಗದ್ದಲದಲ್ಲಿ ಜನರ ಮುಂದೆ ಹೇಳಬೇಕಾದ ತತ್ವಗಳು, ಚರ್ಚಿಸಬೇಕಾದ ವಿಷಯಗಳು ಕಳೆದುಹೋದಂತೆ ಅನಿಸುತ್ತವೆ. ‘ಹೇಳಲು ಒಳಗಿನ ಆಳದ ಮಾತುಗಳು ಇಲ್ಲದೇ ಹೋಗಿದ್ದರಿಂದ ಮಾತುಗಳು ಗದ್ದಲಗಳಾಗಿ ಮಾರ್ಪಟ್ಟಿವೆಯೇ’ ಎಂಬುದೂ ಮಹತ್ವದ ಪ್ರಶ್ನೆ. ಕೆಲವು ಬುದ್ಧಿಜೀವಿಗಳು ಸಹ ಮಾತಿನ ಕರ್ಕಶದಲ್ಲಿ ರಾಜಕಾರಣಿಗಳನ್ನು ಮೀರಿಸಿದ್ದಾರೆ.

ವಿಶ್ವದ ಶ್ರೇಷ್ಠ ರಾಜಕೀಯ ಸಂವಹನಕಾರರನ್ನು ಒಮ್ಮೆ ಗಮನಿಸಬೇಕು: ಗಾಂಧಿ ಮೆಲುದನಿಯಲ್ಲಿ ಮಾತನಾಡುತ್ತಿದ್ದರು. ‘ಕ್ವಿಟ್ ಇಂಡಿಯಾ’ ಎಂದು ಅವರು ಹೇಳಿದ್ದು ಸಹ ಮೃದು ಮಾತುಗಳಲ್ಲಿಯೇ. ನೆಹರೂ ಅವರು ಕಾವ್ಯಮಯ ಭಾಷೆಯಲ್ಲಿ, ಸಾಹಿತ್ಯ ಸಮ್ಮೇಳನದಲ್ಲಿ ಆಡುವಂತೆ ಮಾತನಾಡುತ್ತಿದ್ದರು. ಗಾಂಧಿ ನಿಧನರಾದಾಗ ನೆಹರೂ ಆಡಿರುವ, ‘ಬೆಳಕು ನಮ್ಮ ಜೀವನದಿಂದ ಹೊರಟು ಹೋಗಿದೆ. ಈಗ ಕೇವಲ ಅಂಧಕಾರದಲ್ಲಿ ನಾವು ತಡಕಾಡುತ್ತಿದ್ದೇವೆ’ ಎಂಬ ಮಾತುಗಳು ಅಜರಾಮರ. ಚರ್ಚಿಲ್ ಅವರ ಯುದ್ಧ ಸಮಯದ ಭಾಷಣಗಳಲ್ಲಿಯೂ ಕಾವ್ಯಾತ್ಮಕತೆ ಇರುತ್ತಿತ್ತು. ತಾವು ಜರ್ಮನಿಯ ವಿರುದ್ಧ ಎಲ್ಲ ರೀತಿಗಳಲ್ಲಿಯೂ ಹೋರಾಡುತ್ತೇವೆ ಎಂದು ಅವರು ಹೇಳಿದ್ದು ಹೀಗೆ: ‘ನಾವು ಬೀಚುಗಳಲ್ಲಿ ಹೋರಾಡುತ್ತೇವೆ, ನೀಲಿ ಆಗಸದಲ್ಲಿ ಹೋರಾಡುತ್ತೇವೆ. ಗಿರಿ ಕಾನನಗಳಲ್ಲಿ ಹೋರಾಡುತ್ತೇವೆ. ಎಂದೂಮಣಿಯುವುದಿಲ್ಲ. ಎಂದಿಗೂ ಇಲ್ಲ. ಎಂದೆಂದೂ ಇಲ್ಲ, ಎಂದೆಂದೂ... ಎಂದೆಂದೂ... ಎಂದೆಂದೂ...’ (ಈ ಭಾಷಣವನ್ನು ಯೂಟ್ಯೂಬ್‍ನಲ್ಲಿ ನೋಡಬಹುದು).

ಎರಡನೆಯ ಮಹಾಯುದ್ಧದ ಸಮಯದಲ್ಲಿಯೂ ಅವರು ಆಡಿದ ಭಾಷೆಯ ಲಯವನ್ನು, ಘನತೆಯನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ನೆಲ್ಸನ್‍ ಮಂಡೇಲಾ, ಮಾರ್ಟಿನ್ ಲೂಥರ್‌ಕಿಂಗ್‍ ಅವರ ಭಾಷಣಗಳನ್ನೂ ಕೇಳಬೇಕು. ಅಷ್ಟು ದೂರ ಹೋಗುವುದೇಕೆ; ಅಟಲ್ ಬಿಹಾರಿ ವಾಜಪೇಯಿ ಮತ್ತು ಇಂದಿರಾ ಗಾಂಧಿಯವರ ಭಾಷಾ ಬಳಕೆಯಲ್ಲೂ ಗಾಂಭೀರ್ಯ ಇತ್ತು. ಅವರ ಮಾತುಗಳ ಜೊತೆಗೆ ದೂಳು ಇರುತ್ತಿರಲಿಲ್ಲ. ಕರ್ಕಶತೆ ಇರಲಿಲ್ಲ. ಅವರಿಗೆಲ್ಲ ಸುದ್ದಿಯಲ್ಲಿರಲು ದಿನವೂ ಮಾತನಾಡಬೇಕು, ಏರುಧ್ವನಿಯಲ್ಲಿ ಮಾತನಾಡಬೇಕು ಎಂದೇನೂ ಇರಲಿಲ್ಲ. ಅವರ ಮಾತು, ವಿಚಾರಗಳು ಅನಕ್ಷರಸ್ಥರಿಗೂ, ರಾಜಕೀಯದ ಗಂಧ–ಗಾಳಿಯೇ ಇರದ ಮುಗ್ಧರಿಗೂ ಅರ್ಥವಾಗುತ್ತಿದ್ದವು. ಅವು ಜನರಿಗೆ ರಾಜಕೀಯದ, ಸಾರ್ವಜನಿಕ ಬದುಕಿನ ಪಾಠಗಳಾಗಿರುತ್ತಿದ್ದವು. ಈಗ ಹಲವು ಸಂದರ್ಭಗಳಲ್ಲಿ ಆಗುವಂತೆ, ಅವರ ಮಾತುಗಳು ದೂಳಾಗಿ, ಮೂಗಿನ ಮುಂದೆ ಹಿಡಿದರೆ ಕೆಮ್ಮು ತರಿಸುವ ಮೆಣಸಿನ ಪುಡಿಯಾಗಿ ಇರುತ್ತಿರಲಿಲ್ಲ.

ಹಾಗೆಂದು ಇಂದು ಗೌರವಾನ್ವಿತ ಭಾಷೆಯಲ್ಲಿ ಮಾತನಾಡುವ ರಾಜಕಾರಣಿಗಳು ಇಲ್ಲವೆಂದೇನೂ ಅಲ್ಲ. ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅವರ ಮಾತುಗಳು ರಾಜಕೀಯದ ದೂಳಿನಲ್ಲಿ ಮುಚ್ಚಿ ಹೋಗುತ್ತಿವೆ. ಅಪರೂಪಕ್ಕೊಮ್ಮೆ ಈ ದೂಳನ್ನು ಮೀರಿ ಜನರ ಹೃದಯಗಳನ್ನು ಮಿಡಿಯಬಲ್ಲಂತಹ ಮಾತುಗಳನ್ನಾಡುವ ನಾಯಕರು ಇಂದೂ ಇದ್ದಾರೆ.

ರಾಜಕೀಯ ಸಂವಹನ ಎಂದರೆ ಏನು ಎಂಬುದನ್ನು ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಇಂದು ಅರಿಯಬೇಕಾಗಿದೆ. ಕಿವಿಗಡಚಿಕ್ಕುವ ಮೈಕ್‌ನಲ್ಲಿ ದೊಡ್ಡ ಧ್ವನಿಯಲ್ಲಿ ಆಡುವ ಮಾತು ಸಂವಹನವಾಗುವುದಿಲ್ಲ. ರಾಜಕೀಯ ಸಂವಹನವು ಮೂಲದಲ್ಲಿ ಬೇಡುವುದು ಶ್ರೇಷ್ಠ ಮೌಲ್ಯಗಳಿಗೆ, ತತ್ವಗಳಿಗೆ ಬದ್ಧವಾದ ನಾಯಕನ ವ್ಯಕ್ತಿತ್ವ. ಅಂತಹ ವ್ಯಕ್ತಿತ್ವ ತನ್ನನ್ನು ತಾನು ಹಲವು ವಿಧಾನಗಳಲ್ಲಿ ಸಂಕೇತಗಳ ಮೂಲಕ ಪ್ರಚುರಪಡಿಸುತ್ತಿರುತ್ತದೆ. ಮೌಲ್ಯಗಳು ಸಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವಾಗಿರಬಹುದು. ಆ ಪ್ರಶ್ನೆ ಬೇರೆ. ಉದಾಹರಣೆಗೆ ಗಾಂಧೀಜಿ ‘ಶಾಂತಿ’ಯ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಹಿಟ್ಲರ್ ಹಿಂಸೆಯಲ್ಲಿ, ಸೇಡು ತೀರಿಸಿಕೊಳ್ಳುವುದರಲ್ಲಿ ನಂಬಿಕೆ ಹೊಂದಿದ್ದ. ವಿಶೇಷವೆಂದರೆ ಇಬ್ಬರೂ ಕೋಟ್ಯಂತರ ಜನರನ್ನು ಆಕರ್ಷಿಸಿದರು. ಗಾಂಧೀಜಿಯ ‘ಶಾಂತಿ ಮಂತ್ರ’ಗಳಂತೆ ಹಿಟ್ಲರನ ನಕಾರಾತ್ಮಾಕ ಮಾತುಗಳೂ ಹೃದಯಗಳನ್ನು ತೀವ್ರವಾಗಿ ಮುಟ್ಟಿದ್ದವು. ಗಾಂಧೀಜಿ ಮತ್ತು ಹಿಟ್ಲರ್‌ ಇಬ್ಬರಲ್ಲೂ ಮಾತಿನಂತೆಯೇ ಕೃತಿಯೂ ಇದ್ದುದು ಇದಕ್ಕೆ ಕಾರಣ. ಅವರು ಎಲ್ಲವನ್ನೂ ಮಾತಿನ ಮೂಲಕವೇ ಹೇಳುವ ಅಗತ್ಯವಿರಲಿಲ್ಲ. ಅವರ ಜೀವನ ವಿಧಾನ ಮತ್ತು ವ್ಯಕ್ತಿತ್ವಗಳೇ ಮಾತನಾಡುತ್ತಿದ್ದವು. ‘ಒಂದು ಹಿಡಿ ಉಪ್ಪನ್ನು ಕೈಯಲ್ಲಿ ಎತ್ತಿ ಹಿಡಿದು ಜೈಲಿಗೆ ಹೋಗುವುದು ಕಠೋರ ಮಾತುಗಳಿಂತಲೂ ಸಂವಹನ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿ’ ಎನ್ನುವುದು ಗಾಂಧೀಜಿಗೆ ಗೊತ್ತಿತ್ತು.

ಸಂವಹನದ ಸೂಕ್ಷ್ಮಗಳು ಭಾಷಣಗಳಿಗಿಂತ ಮೌಲ್ಯಗಳಿಗೆ ಬದ್ಧವಾದ ವ್ಯಕ್ತಿತ್ವವನ್ನೇ ಬೇಡುತ್ತವೆ ಎಂಬುದನ್ನು ಇಂದು ಕರ್ಕಶವಾಗಿ ಮಾತನಾಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕು. ‘ರಾಜಕಾರಣಿಯೊಬ್ಬ ನಿಜಕ್ಕೂ ಅಭಿವೃದ್ಧಿ ಪರವಾಗಿ ನಿಂತ ವ್ಯಕ್ತಿ, ನಮ್ಮ ನೋವು–ನಲಿವುಗಳನ್ನು ಪ್ರತಿಫಲಿಸುವವನು’ ಎಂದು ಒಂದು ಸಮುದಾಯ ಭಾವಿಸಿದರೆ,  ಅವರ ಭಾವನೆಗೆ ಚ್ಯುತಿ ಬಾರದಂತೆ ಆತ ನಡೆದುಕೊಂಡರೆ, ಆ ವ್ಯಕ್ತಿ ಬಹಳ ಮಾತನಾಡುವ ಅವಶ್ಯಕತೆ ಇರುವುದಿಲ್ಲ. ಆ ವ್ಯಕ್ತಿಯ ಮೌಲ್ಯ, ಸನ್ನಡತೆಗಳೇ ಜನರ ಹೃದಯಗಳನ್ನು ತಟ್ಟುತ್ತವೆ. ಅಂತಹ ವ್ಯಕ್ತಿ ನಕ್ಕಾಗ ಜನ ನಗುತ್ತಾರೆ, ಅತ್ತಾಗ ಜನ ಅಳುತ್ತಾರೆ ಅಥವಾ ಹಲವು ರೀತಿಗಳಲ್ಲಿ ಆತನೊಂದಿಗೆ ಸ್ಪಂದಿಸುತ್ತಾರೆ. ಅಂಥವರು ಮೆಲು ಧ್ವನಿಯಲ್ಲಿ ಮಾತನಾಡಿದರೂ ಜನರಿಗೆ ಕೇಳಿಸುತ್ತದೆ, ಅರ್ಥವಾಗುತ್ತದೆ.

1985ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ರಾಮಕೃಷ್ಣ ಹೆಗಡೆಯವರು ಪ್ರಚಾರ ಸಭೆಗಳಲ್ಲಿ ಆಡುತ್ತಿದ್ದುದು ಎರಡೋ ಮೂರೋ ವಾಕ್ಯಗಳನ್ನು ಮಾತ್ರ. ‘ನಿಮಗೆ ಎಲ್ಲ ವಿಷಯಗಳೂ ತಿಳಿದಿವೆ. ನಮ್ಮ ಪಕ್ಷವನ್ನು ಸೋಲಿಸಬೇಕೆಂದಿದ್ದರೆ ಸೋಲಿಸಿ. ನಾವು ಒಳ್ಳೆಯ ಕೆಲಸ ಮಾಡಿದ್ದೇವೆ, ನಮ್ಮಲ್ಲಿ ವಿಶ್ವಾಸ ಇಡಬಹುದು ಎಂದು ಅನಿಸಿದರೆ ನಮ್ಮನ್ನು ಆಶೀರ್ವದಿಸಿ. ನನಗೆ ಹೇಳಬೇಕಿರುವುದು ಇಷ್ಟೇ’ ಎನ್ನುತ್ತಿದ್ದರು. ಆ ಚುನಾವಣೆಗಳಲ್ಲಿ

ಹೆಗಡೆ ಯಾವ ರೀತಿಯ ಭಾವನಾತ್ಮಕ ಅಲೆ ಸೃಷ್ಟಿಸಿದ್ದರೆಂದರೆ ಅವರ ಪಕ್ಷ ಭಾರೀ ಬಹುಮತದಿಂದ ಜಯ ಗಳಿಸಿತ್ತು. ಜನರಿಗೆ ಎಲ್ಲವೂ ಅರ್ಥವಾಗಿ ಹೋಗಿತ್ತು.

ಚುನಾವಣೆ ಗೆಲ್ಲಲು ಪಕ್ಷಗಳು ಅಥವಾ ವ್ಯಕ್ತಿಗಳು ಮಾತಿನ ದೂಳೆಬ್ಬಿಸುವ ಅಗತ್ಯ ಇರುವುದಿಲ್ಲ. ಪಕ್ಷಗಳ, ರಾಜಕೀಯ ವ್ಯಕ್ತಿಗಳ ನಡೆ ನುಡಿಗಳನ್ನು ಜನ ಗಮನಿಸುತ್ತಲೇ ಇರುತ್ತಾರೆ. ಕೃತಕ ಪ್ರಚಾರವನ್ನು ಮೀರಿಯೂ ನಾಯಕನೊಬ್ಬನನ್ನು, ಪಕ್ಷವೊಂದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಜನರಲ್ಲಿ ಇರುತ್ತದೆ. ಕೆಲವೊಮ್ಮೆ ದೊಡ್ಡ ಧ್ವನಿಯಲ್ಲಿ ಮಾತನಾಡುವವನು, ಹೆಚ್ಚು ದೂಳೆಬ್ಬಿಸಿ ಮಾತನಾಡುವವನು ನಿಜವಾಗಿಯೂ ಸುಳ್ಳುಗಾರನಿರುತ್ತಾನೆ ಎನ್ನುವುದು ಅವರ ಹಾವಭಾವದ ಮೂಲಕ ಜನರಿಗೆ ತಿಳಿಯುತ್ತದೆ.

ರಾಜಕೀಯ ಸಂವಹನದಲ್ಲಿ ಮಹತ್ವವಾದದ್ದು ಮೌಲ್ಯಗಳೆಡೆಗಿನ ಬದ್ಧತೆ ಹಾಗೂ ಮಾತು ಮತ್ತು ಕೃತಿಗಳ ನಡುವೆ ಕಂದರವಿಲ್ಲದೇ ಇರುವುದು. ಇಂತಹ ಸಂವಹನ ಸಾಧ್ಯವಾದಾಗ ಆ ಪಕ್ಷದ, ವ್ಯಕ್ತಿಯ ಪರವಾಗಿ ರಾಜಕೀಯ ಅಲೆ ಸೃಷ್ಟಿಯಾಗುತ್ತದೆ. ಹಾಗಾಗಿ ರಾಜಕೀಯ ಸಂವಹನದ ಮೂಲದಲ್ಲಿ ಇರುವುದು ಮಾತಲ್ಲ; ಬಲವಾದ, ಮೌಲ್ಯಯುತವಾದ ಒಂದು ವ್ಯಕ್ತಿತ್ವ ಅಥವಾ ತತ್ವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry