ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಲ್‌ ಸರ್ಕಾರ್’ ವಿರುದ್ಧ ಸಿಪಿಎಂ ಕೆಂಗಣ್ಣು

ಚಲನಚಿತ್ರ ನಿರ್ಮಾಣಕ್ಕೆ ಬಿಜೆಪಿ ನೆರವು– ಆರೋಪ
Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ:  ಹಿಂದಿ ಚಲನಚಿತ್ರ ‘ಲಾಲ್‌ ಸರ್ಕಾರ’ ಬಗ್ಗೆ ತ್ರಿಪುರಾದ ಆಡಳಿತಾರೂಢ ಸಿಪಿಎಂ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

ಫೆಬ್ರುವರಿ 18ರಂದು ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆಬ್ರುವರಿ ಮೊದಲ ವಾರದಲ್ಲೇ ಈ ಚಲನಚಿತ್ರವೂ ಬಿಡುಗಡೆಯಾಗಲಿದೆ. ಹೀಗಾಗಿ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಈ ಚಲನಚಿತ್ರವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸಿಪಿಎಂ ಆರೋಪಿಸಿದೆ.

ಈಶಾನ್ಯ ರಾಜ್ಯಗಳಲ್ಲಿ ಎಡಪಕ್ಷಗಳ ಆಡಳಿತದಲ್ಲಿ ನಡೆದಿದೆ ಎನ್ನಲಾದ ತಪ್ಪುಗಳನ್ನು ಆಧರಿಸಿ ಈ ಚಲನಚಿತ್ರ ನಿರ್ಮಿಸಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ.

ಸಾಕ್ಷ್ಯಚಿತ್ರ ನಿರ್ಮಾಪಕನೊಬ್ಬ ತ್ರಿಪುರಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತಾದ ಕಥೆಯನ್ನು ’ಲಾಲ್‌ ಸರ್ಕಾರ್‌’ ಚಲನಚಿತ್ರ ಹೊಂದಿದೆ. ಇದರಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ)  ಪ್ರಸ್ತಾಪವೂ ಇದೆ.

‘ಈ ಚಲನಚಿತ್ರ ನಿರ್ಮಾಣಕ್ಕೆ ಬಿಜೆಪಿಯೇ ನೆರವು ನೀಡಿದೆ. ಜತೆಗೆ ಈ ಚಲನಚಿತ್ರವನ್ನು ಚುನಾವಣೆ ಸಂದರ್ಭದಲ್ಲೇ ಬಿಡುಗಡೆ ಮಾಡುತ್ತಿರುವ ಉದ್ದೇಶವೇನು? ಪ್ರತಿ ಕ್ಷೇತ್ರದಲ್ಲೂ ಬೃಹತ್‌ ಪರದೆ ವ್ಯವಸ್ಥೆ ಹೊಂದಿರುವ ವಾಹನಗಳು ಸಂಚರಿಸುತ್ತಿವೆ’ ಎಂದು ಸಿಪಿಎಂ ತ್ರಿಪುರಾ ರಾಜ್ಯ ಕಾರ್ಯದರ್ಶಿ ಬಿಜನ್‌ ಧರ್‌ ತಿಳಿಸಿದ್ದಾರೆ.

‘ಉದ್ಯೋಗ ಖಾತರಿ ಯೋಜನೆಯಲ್ಲಿನ ಸಾಧನೆಗಾಗಿ ತ್ರಿಪುರಾ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಏಳು ಬಾರಿ ಪ್ರಶಸ್ತಿ ನೀಡಿದೆ. ಈ ಯೋಜನೆ ಅನುಷ್ಠಾನದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಆದರೆ, ನಿರ್ಮಾಪಕ ಮತ್ತು ಲೇಖಕ ಸುಶೀಲ್‌ ಶರ್ಮನ್‌ ಸಿಪಿಎಂ ಆರೋಪಗಳನ್ನು ತಳ್ಳಿ ಹಾಕಿದ್ದು, ‘ಬಿಜೆಪಿ ಅಥವಾ ವಿಧಾನಸಭೆ ಚುನಾವಣೆಗೂ ಮತ್ತು ಈ ಚಲನಚಿತ್ರಕ್ಕೂ ಯಾವುದೇ ರೀತಿ ಸಂಬಂಧವಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

‘ಬಿಜೆಪಿ ಸಂಸದ ಬಾಬುಲ್‌ ಸುಪ್ರಿಯೊ ಈ ಚಲನಚಿತ್ರದಲ್ಲಿ ಒಂದು ಹಾಡು ಹಾಡಿರುವುದು ನಿಜ. ಇದಕ್ಕೆ ಅವರು ಹಣ ಪಡೆದಿಲ್ಲ. ನನ್ನನ್ನು ಅವರ ಸಹೋದರ ರೀತಿ ಕಾಣುತ್ತಾರೆ. ನಮಗೆ ವೈಯಕ್ತಿಕವಾದ ಸಂಬಂಧಗಳಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಕಳೆದ ವರ್ಷ ಡಿಸೆಂಬರ್‌ನಲ್ಲೇ ಈ ಚಲನಚಿತ್ರ ಬಿಡುಗಡೆಯಾಗಬೇಕಾಗಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಯಿತು. ಕೆಲವು ವರ್ಷ
ಗಳ ಹಿಂದೆ ಸಾಕ್ಷ್ಯಚಿತ್ರ ತಯಾರಿಸಲು ತ್ರಿಪುರಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ಆಧರಿಸಿದ ಚಲನ
ಚಿತ್ರ ನಿರ್ಮಿಸುವ ಯೋಚನೆ ಬಂತು. ತ್ರಿಪುರಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಯಾರಿಗೂ ಗೊತ್ತಿಲ್ಲ. ಕೆಲವರು ತ್ರಿಪುರಾ ಎಲ್ಲಿದೆ ಎನ್ನುವ ಪ್ರಶ್ನೆ ಕೇಳುತ್ತಾರೆ’ ಎಂದು ತಿಳಿಸಿದ್ದಾರೆ.

ಬಿಜೆಪಿ ಸಹ ಸಿಪಿಎಂ ಆರೋಪಗಳನ್ನು ತಳ್ಳಿ ಹಾಕಿದೆ. ‘ಈ ಚಲನಚಿತ್ರದ ನಿರ್ಮಾಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ತ್ರಿಪುರಾದಲ್ಲಿ ಎಡಪಕ್ಷದ ಸರ್ಕಾರದ ಬಗ್ಗೆ ಸತ್ಯಸಂಗತಿಗಳು ಈ ಚಲನಚಿತ್ರದಲ್ಲಿದ್ದರೆ ಸ್ವಾಗತಿಸುತ್ತೇವೆ’ ಎಂದು ತ್ರಿಪುರಾದ ಬಿಜೆಪಿ ಉಸ್ತುವಾರಿ ಸುನೀಲ್‌ ದಿಯೋಧಾರ್‌ ತಿಳಿಸಿದ್ದಾರೆ.

* ನನ್ನ ಸ್ವಂತ ಹಣವನ್ನು ವೆಚ್ಚ ಮಾಡಿ ‘ಲಾಲ್‌ ಸರ್ಕಾರ’ ನಿರ್ಮಿಸಿದ್ದೇನೆ. ಬಿಜೆಪಿಗೂ ಇದಕ್ಕೂ ಸಂಬಂಧ ಇಲ್ಲ. ಆದರೆ, ವಾಸ್ತವ ಸಂಗತಿ ಆಧರಿಸಿದ ಚಲನಚಿತ್ರ

ಸುಶೀಲ್‌ ಶರ್ಮಾ, ನಿರ್ಮಾಪಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT