ಇಲಿ ಬಂತು ಇಲಿ!

7

ಇಲಿ ಬಂತು ಇಲಿ!

Published:
Updated:
ಇಲಿ ಬಂತು ಇಲಿ!

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಇಲಿ ಬೇಟೆ ಇನ್ನೂ ಜೀವಂತವಾಗಿದೆ. ಇಲ್ಲಿ ಬಿಲ ಅಗೆದು ಇಲಿ ಹಿಡಿದು ತಿನ್ನುವುದು ಯಾವುದೇ ಒಂದು ಸಮುದಾಯಕ್ಕೆ ಮೀಸಲಾಗಿಲ್ಲ. ಬಹುತೇಕ ಮಾಂಸಾಹಾರಿಗಳು ಇಲಿ ಮಾಂಸವೆಂದರೆ ಬಾಯಲ್ಲಿ ನೀರೂರಿಸಿಕೊಳ್ಳುತ್ತಾರೆ.

ಇಲ್ಲಿ ಇಲಿ ಎಂದರೆ ಮನೆ ಇಲಿಯಲ್ಲ. ಕಾಡು–ಮೇಡು, ಹೊಲ–ಗದ್ದೆಗಳಲ್ಲಿ ವಾಸಿಸುವ ಇಲಿ. ಈ ಇಲಿ ಗಾತ್ರದಲ್ಲಿ ಮನೆ ಇಲಿಗಿಂತ ದೊಡ್ಡದು. ಕೂದಲಿನ ಬಣ್ಣ ಕೆಂಚು. ಕೆಲವು ಇಲಿಗಳಿಗೆ ಬಾಲದ ಕೊನೆಯಲ್ಲಿ ಬಿಳಿ ಕೂದಲು ಇರುತ್ತದೆ. ಇದನ್ನು ಸ್ಥಳೀಯವಾಗಿ ‘ಯಲ್ಲೆಲಕ’ ಎಂದು ಕರೆಯುತ್ತಾರೆ.

ಹಿಂದೆ ಇಲಿ ಬೇಟೆ ಭೋವಿ ಜನಾಂಗಕ್ಕೆ ಮಾತ್ರ ಸೀಮಿತವಾಗಿತ್ತು. ಅನುಭವದಿಂದ ಇಲಿ ಇರುವ ಬಿಲವನ್ನು ಗುರುತಿಸಿ ಸನಿಕೆಯಿಂದ ಅಗೆದು ಹಿಡಿಯುತ್ತಿದ್ದರು. ಇದು ಇಲಿ ಹಿಡಿಯುವ ಒಂದು ವಿಧಾನವಷ್ಟೆ. ಇನ್ನೂ ಹಲವು ವಿಧಾನಗಳಿವೆ. ಇಲಿ ಇರುವ ಬಿಲವನ್ನು ಗುರುತಿಸಿ, ಬಿಲಕ್ಕೆ ನೀರು ಸುರಿಯುವುದು. ಮಡಿಕೆಯಲ್ಲಿ ಬೆರಣಿ ತುಂಬಿ, ಬೆಂಕಿ ಹೊತ್ತಿಸಿ ಬಿಲದೊಳಕ್ಕೆ ಹೊಗೆ ನುಗ್ಗಿಸುವುದು, ಬಿಲದ ಸುತ್ತಲಿನ ಇತರ ಬಿಲ ಹಾಗೂ ಹುತ್ತಗಳನ್ನು ಮುಚ್ಚಿ, ಎಲ್ಲ ಇಲಿಗಳೂ ಒಂದೇ ಬಿಲದೊಳಗೆ ಹೋಗುವಂತೆ ಮಾಡುವುದು. ರಾತ್ರಿ ಹೊತ್ತು ಬ್ಯಾಟರಿ ಬೆಳಕಲ್ಲಿ ಇಲಿಗಳನ್ನು ಹೊಡೆದು ಕೊಲ್ಲುವುದು. ಬಿಲ ಅಗೆಯುವಾಗ ತಪ್ಪಿಸಿಕೊಂಡು ಓಡುವ ಇಲಿಗಳನ್ನು ಬಲೆಗೆ ಬೀಳಿಸುವುದು. ಹೀಗೆ ಅನೇಕ ವಿಧಾನಗಳುಂಟು.ಭರ್ಜರಿ ಬೇಟೆ

ಇಲಿ ಬೇಟೆಯಲ್ಲಿ ಇಷ್ಟೇ ಜನ ಇರಬೇಕೆಂಬ ನಿಯಮವಿಲ್ಲ. ಬೇಟೆ ವಿಧಾನಕ್ಕೆ ಅನುಗುಣವಾಗಿ ಹತ್ತಾರು ಜನ ಇರಬಹುದು. ಒಬ್ಬರು ಬಿಲ ಅಗೆದರೆ ಉಳಿದವರು ಸುತ್ತಲೂ ಕೋಲು ಹಿಡಿದು ಕಾಯುತ್ತಾರೆ. ಇಲಿ ಬಿಲದಿಂದ ಹೊರಗೆ ಬಂದರೆ ‘ಇಲಿ ಬಂತು ಇಲಿ’ ಎಂದು ಕೂಗುತ್ತಾ ಕೋಲು ಬೀಸಿ ಕೊಲ್ಲುತ್ತಾರೆ.

ಭೋವಿ ಜನಾಂಗದಿಂದ ಪ್ರಭಾವಿತರಾದ ಇತರ ಮಾಂಸಾಹಾರಿ ಜನಾಂಗದವರು ಇಲಿ ಬೇಟೆಯ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ಇಲಿ ಬೇಟೆಗೆ ಹೋಗುತ್ತಾರೆ. ಸಿಕ್ಕಿದ ಇಲಿಗಳನ್ನು ಸುಟ್ಟು ತಿನ್ನುತ್ತಾರೆ ಅಥವಾ ಸಾಂಬಾರು ತಯಾರಿಸಿ ಮುದ್ದೆಯೊಂದಿಗೆ ಸವಿಯುತ್ತಾರೆ.ಬೇಟೆಗಾಗಿ ಹರಡಿದ ಬಲೆ

ಮಾಂಸಪ್ರಿಯರು ಕುರಿ ಮಾಂಸಕ್ಕಿಂತ ಟಗರಿನ ಮಾಂಸವನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗೆಯೇ ಇಲ್ಲಿ, ಇಲಿ ಮಾಂಸಪ್ರಿಯರು ಗಂಡಿಲಿ ಮಾಂಸವನ್ನು ಹೆಚ್ಚಾಗಿ ಬಯಸುತ್ತಾರೆ. ಗಂಡು ಇಲಿಯನ್ನು ಸ್ಥಳೀಯವಾಗಿ ‘ವಟ್ಲೆಲಕ’ (ಬೀಜದ ಇಲಿ) ಎಂದು ಕರೆಯುತ್ತಾರೆ. ಗಂಡಿಲಿಯ ಮಹತ್ವ ಸಾರುವ ಗಾದೆಯ ಮಾತೊಂದು ಈ ಕಡೆ ಪ್ರಚಲಿತದಲ್ಲಿದೆ. ಒಂಗಿ ದೆಂಗಲಾಪಕಪೋಯಿನ ಅಮ್ಮಾ ವಟ್ಲೆಲಕ ಅನ್ನೆಂಟ (ಬಾಗಿ ಕೆಲಸ ಮಾಡಲು ಆಗದಿದ್ರೂ, ಅಮ್ಮಾ ಬೀಜದಿಲಿ ಬೇಕು ಅಂದ್ನಂತೆ). ಇಲ್ಲಿ ಕೆಲಸ ಎಂದರೆ ಕಷ್ಟಪಟ್ಟು ಇಲಿಯ ಬಿಲ ಅಗೆಯುವುದು ಎಂಬುದು ತೆಲುಗು ಗಾದೆಯ ಅರ್ಥ.

ಇಲಿ ಬೇಟೆ, ಹುಲಿ ಬೇಟೆಯಷ್ಟು ಕಷ್ಟದ ಕೆಲಸವಲ್ಲದಿದ್ದರೂ, ಸುಲಭದ ಮಾತಂತೂ ಅಲ್ಲ. ಇಲಿ ಬಿಲ ಅಗೆಯುವ ಮೊದಲು ಮುಖ್ಯ ಬಿಲದ ಗುಪ್ತ ದ್ವಾರಗಳನ್ನು ಪತ್ತೆ ಹಚ್ಚಿ ಮುಚ್ಚಬೇಕು. ಅನಂತರ ಸನಿಕೆ ಹಿಡಿದು ಬಿಲ ಹೋದಷ್ಟು ದೂರ ಆಳಕ್ಕೆ ಅಗೆಯಬೇಕು. ಶತ್ರುವಿನ ದಿಕ್ಕು ತಪ್ಪಿಸಲು ಇಲಿಗಳು ಬಿಲಕ್ಕೆ ಮಣ್ಣಿನ ಮುದ್ರೆ ಹಾಕುತ್ತವೆ. ಪಳಗಿದ ಬೇಟೆಗಾರನಿಗೆ ಮಾತ್ರ ಅದು ಗೊತ್ತಾಗುತ್ತದೆ. ಹೊಸಬರಾದರೆ ಬಿಲ ತಪ್ಪಿತೆಂದು ತಿಳಿದು ಅಗೆಯುವುದನ್ನು ಬಿಟ್ಟು ಹೊರಡುತ್ತಾರೆ.ಬಿಲದೊಳಗಿನ ಮುದ್ರೆಯನ್ನು ಪತ್ತೆ ಹಚ್ಚಿದಾಗ...

ಹೀಗೆ ಬಿಲ ಅಗೆಯುವಾಗ ಕೆಲವೊಮ್ಮೆ ಹಾವುಗಳು ಕಾಣಿಸಿಕೊಳ್ಳುವುದುಂಟು. ಇಲಿ ಬೇಟೆ ಸಂದರ್ಭದಲ್ಲಿ ಹಾವು ಕಡಿತದಿಂದ ಸತ್ತಿರುವ ಉದಾಹರಣೆಗಳೂ ಇವೆ. ಆದರೂ ಬೇಟೆ ಮಾತ್ರ ನಿಂತಿಲ್ಲ. ಇಲಿ ಮಾಂಸದ ರುಚಿ ಹಾಗೂ ಇಲಿ ಮಾಂಸ ಸೇವನೆಯಿಂದ ಶಕ್ತಿ ಬರುತ್ತದೆ, ಬಾಣಂತಿಯರಲ್ಲಿ ಹಾಲಿನ ಉತ್ಪಾದನೆ ಹೆಚ್ಚುತ್ತದೆ ಎಂಬ ನಂಬಿಕೆ ಇದಕ್ಕೆ ಕಾರಣವಾಗಿದೆ.ಬಯಲು ಇಲಿ ಬೇಟೆ ಹೆಚ್ಚಿದ ಪರಿಣಾಮವಾಗಿ, ಅವುಗಳ ಸಂತತಿ ಕುಸಿಯುತ್ತಿದೆ. ಹಿಂದಿನಷ್ಟು ಬಿಲಗಳು ಇಂದು ಕಂಡುಬರುತ್ತಿಲ್ಲ. ಹಾಗಾಗಿ ಇಲ್ಲಿನ ಇಲಿ ಮಾಂಸಪ್ರಿಯರು, ವಾಹನಗಳಲ್ಲಿ ದೂರದ ಪ್ರದೇಶಗಳಿಗೆ ಹೋಗಿ ಇಲಿ ಹಿಡಿದು ತರುತ್ತಾರೆ. ಇಲಿ ಬೇಟೆಗೆ ಯಾವುದೇ ಅಡ್ಡಿ ಇಲ್ಲದಿರುವುದರಿಂದ, ನಿರಾತಂಕವಾಗಿ ನಡೆಯುತ್ತಿದೆ.ಬಲೆಗೆ ಬಿದ್ದ ಇಲಿಗಳನ್ನು ಕೊಂದು ಚೀಲಕ್ಕೆ ಸೇರಿಸುತ್ತಿರುವ ಬೇಟೆಗಾರ

ಇಲಿಗಳು ಸುಗ್ಗಿ ಕಾಲದಲ್ಲಿ ಭತ್ತ ಹಾಗೂ ರಾಗಿ ತೆನೆಯನ್ನು ಕತ್ತರಿಸಿ ಬಿಲಗಳಲ್ಲಿ ತುಂಬಿರುತ್ತವೆ. ಕೆಲವರು ಸುಗ್ಗಿ ಕಾಲದಲ್ಲಿ ಕೊಯಿಲು ಮುಗಿದ ಹೊಲ ಗದ್ದೆಗಳಲ್ಲಿ ಸುತ್ತಾಡಿ ಇಲಿ ಬಿಲಗಳನ್ನು ಅಗೆದು ತೆನೆಯನ್ನು ಹೊರತೆಗೆದು ಕಾಳು ಮಾಡಿಕೊಳ್ಳುತ್ತಾರೆ. ತೆನೆ ಕೂಡಿಡುವ ಇಲಿಯನ್ನು ‘ಕುಕ್ಕೆಲಕ’ ಎಂದು ಕರೆಯುತ್ತಾರೆ. ಇದು ಬಣ್ಣದಲ್ಲಿ ತುಸು ಕಪ್ಪಾದರೂ ದಪ್ಪವಾಗಿ ಕೊಬ್ಬಿರುತ್ತದೆ. ಬಿಲದಿಂದ ತೆನೆ ತೆಗೆದ ಮೇಲೆ ಇಲಿಯನ್ನು ಹಿಡಿದು ಕೊಲ್ಲಲಾಗುತ್ತದೆ. ಸುಟ್ಟು ಉಪ್ಪು ಖಾರ ಸವರಿ ಭಕ್ಷಿಸಲಾಗುತ್ತದೆ.

ದೇಶದಲ್ಲಿ ಬೆಳೆಯುವ ಕೃಷಿ ಉತ್ಪನ್ನದಲ್ಲಿ ಶೇ 10ರಿಂದ 15ರಷ್ಟು ಭಾಗ ಬೆಳೆಯ ವಿವಿಧ ಹಂತಗಳಲ್ಲಿ ಇಲಿಗಳ ಪಾಲಾಗುತ್ತದೆ. ಇಲಿಗಳನ್ನು ಕೊಲ್ಲುವುದರಿಂದ ಅಷ್ಟು ಪ್ರಮಾಣದ ಆಹಾರ ಪದಾರ್ಥ ಮಾನವನ ಬಳಕೆಗೆ ಸಿಗುತ್ತದೆ. ಆ ದೃಷ್ಟಿಯಿಂದ ಇಲಿ ಬೇಟೆ ಹೆಚ್ಚು ಲಾಭದಾಯಕವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry