ಸಿರಿಧಾನ್ಯದ ನೂರು ಮುಖಗಳು

7

ಸಿರಿಧಾನ್ಯದ ನೂರು ಮುಖಗಳು

Published:
Updated:
ಸಿರಿಧಾನ್ಯದ ನೂರು ಮುಖಗಳು

ಸಿರಿಧಾನ್ಯದ ಚಾಕೊಲೇಟ್‌

ರೂಟ್ಸ್‌ ಗೂಡ್ಸ್

ಮನೆಯಲ್ಲಿ ಭತ್ತ, ರಾಗಿ, ಅಕ್ಕಿ, ಕೆಲ ಸಿರಿಧಾನ್ಯಗಳನ್ನು ಬಳಸುತ್ತೇವೆ. ಆದರೆ ಎಲ್ಲವೂ ಆಹಾರ ರೂಪದಲ್ಲಿಯೇ ಇರುತ್ತವೆ. ಇವೂ ನಾವಿಷ್ಟಪಡುವ ತಿಂಡಿ, ಅಂದರೆ ಚಾಕೊಲೇಟ್‌ ರೂಪದಲ್ಲಿ ಸಿಕ್ಕರೆ? ಇದೇ ಆಲೋಚನೆ ಹೊಳೆದದ್ದು ಶಿವಮೊಗ್ಗದ ಸಚಿನ್ ಅವರಿಗೆ.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮುಗಿಸಿ ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಸಚಿನ್ ಅವರು ಈ ಒಂದು ಹೊಸ ಆಲೋಚನೆಯನ್ನು ಪ್ರಯೋಗಕ್ಕೆ ಇಳಿಸಿ ತಿಂಗಳುಗಳಷ್ಟೇ ಕಳೆದಿವೆ. ಜರ್ಮನಿಯಲ್ಲಿ ಆನ್‌ಲೈನ್‌ ಬಿಸಿನೆಸ್‌ನಲ್ಲಿ ತೊಡಗಿಕೊಂಡಿರುವ ಅವರಿಗೆ, ಪರೋಕ್ಷವಾಗಿ ಈ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಮೇಲೂ ಆಸಕ್ತಿ ಮೂಡಿತ್ತು.

ಜರ್ಮನಿಯಲ್ಲೂ ಇಂಥದ್ದೇ ರೀತಿಯ ಉದ್ಯಮವನ್ನು ಕಂಡಿದ್ದ ಅವರು, ಇಲ್ಲೂ ಸಣ್ಣಮಟ್ಟದಲ್ಲಿ ಸಿರಿಧಾನ್ಯಗಳಿಂದ ಚಾಕೊಲೇಟ್ ರೂಪಿಸಲು ಆರಂಭಿಸಿದ್ದಾರೆ. ಜರ್ಮನಿಯ ಚಾಕೊಲೇಟ್‌ ರೆಸಿಪಿಯನ್ನೇ ಅನುಸರಿಸಿದ್ದಾರೆ. ಕೊಕೊ, ಸಕ್ಕರೆ, ಸಿರಿಧಾನ್ಯ ಬಳಸಿ ಚಾಕೊಲೇಟ್‌ಗಳನ್ನು ತಯಾರಿಸಲಾಗುತ್ತಿದೆ. ಸದ್ಯಕ್ಕೆ ಐದು ರೀತಿಯ ಚಾಕೊಲೇಟ್‌ಗಳನ್ನು ಪ್ರಯೋಗಿಸಲಾಗಿದೆ.

ಸಂಪರ್ಕಕ್ಕೆ: www.rootsgoods.com

***

ಕಾಲಕ್ಕೆ ತಕ್ಕಂತೆ ಆಹಾರ

ನ್ಯೂಟ್ರಿಬೀ

ಬೆಳಿಗ್ಗೆ ಎದ್ದಾಕ್ಷಣ ಕಾಫಿ ಜತೆ ಸ್ವಲ್ಪ ಬ್ರೆಡ್ ಅಥವಾ ರಸ್ಕ್ ಇದ್ದರೆ ಎಷ್ಟು ಚೆಂದ? ಆದರೆ ಅದರಲ್ಲೂ ಮೈದಾ ತುಂಬಿರುವುದರಿಂದ ಹೆಚ್ಚು ತಿನ್ನಲೂ ಆಗದು. ಹಾಗಿದ್ದರೆ ಆರೋಗ್ಯಕ್ಕೆ ತಕ್ಕಂತಿರುವ ಸಿರಿಧಾನ್ಯದಲ್ಲಿ ಏಕೆ ಈ ಆಹಾರ ಪದಾರ್ಥಗಳನ್ನು ತಯಾರಿಸಲು ಸಾಧ್ಯವಿಲ್ಲ?

ಎಂಬಿಎ ಓದಿರುವ ಬೆಂಗಳೂರಿನ ಪ್ರಿಯಾಂಕಾ ಅವರಿಗೆ ಈ ಪ್ರಶ್ನೆ ಸದಾ ಸುಳಿಯುತ್ತಲೇ ಇತ್ತು. ಜೊತೆಗೆ ಸ್ವಂತ ಉದ್ಯಮ ಕಟ್ಟಿಕೊಳ್ಳುವ ಹಂಬಲ. ತಮ್ಮ ತಾಯಿ ಲಾವಣ್ಯ ಅವರಿಗೂ ಸಿರಿಧಾನ್ಯದ ಬಗ್ಗೆ ಹೆಚ್ಚು ತಿಳಿದಿದ್ದರಿಂದ ಸಿರಿಧಾನ್ಯವನ್ನು ಬಳಸಿ, ಬ್ರೆಡ್, ರಸ್ಕ್‌ಗಳ ಉತ್ಪಾದನೆಗೆ ಮುಂದಾದರು ಪ್ರಿಯಾಂಕಾ. ಇದಕ್ಕೆ ಜೊತೆಯಾದರು ಲಾವಣ್ಯ.

ಮನೆಯಲ್ಲೇ ಸದಾ ಪ್ರಯೋಗಕ್ಕೆ ಇಳಿಯುತ್ತಿದ್ದ ಅವರು, ಪ್ರಯೋಗ ಪಕ್ಕಾ ಆದ ನಂತರ, ಎರಡು ವರ್ಷದ ಹಿಂದೆ ಈ ಪುಟ್ಟ ಕಂಪನಿ ಆರಂಭಿಸಿದ್ದಾರೆ.

‘ಮೈದಾ ಬಳಸುವುದಿಲ್ಲ, ಸಕ್ಕರೆ ಬಳಸುವುದಿಲ್ಲ. ಬೆಲ್ಲ, ಸಿರಿಧಾನ್ಯಗಳನ್ನು ಬಳಸಿಯಷ್ಟೇ ಮಾಡುವ ಥರಾವರಿ ಬ್ರೆಡ್‌ಗಳು, ಬನ್‌ಗಳು, ಕೇಕ್, ರಸ್ಕ್‌, ವೋಲ್‌ವೀಟ್‌ಗಳನ್ನು ಮಾರುತ್ತಿದ್ದಾರೆ. ಸಿರಿಧಾನ್ಯ ಎಂದಾಕ್ಷಣ ರುಚಿಯ ಪ್ರಶ್ನೆ ಎತ್ತುವವರಿಗೆಂದೇ ಕೆಲವು ಫ್ಲೇವರ್‌ಗಳನ್ನೂ ಇದರಲ್ಲಿ ನೀಡಿದ್ದಾರೆ.

ಸಂಪರ್ಕಕ್ಕೆ: 9986933939 http://www.nutribee.in

***

ಸ್ವಂತ ಉದ್ಯಮಕ್ಕೆ ಹಾದಿ

ಮಿಲೆಟ್‌ ಹೋಮ್

ತಾತ, ತಂದೆ ಕೃಷಿಕರು. ಮನೆಯಲ್ಲೂ ಸಿರಿಧಾನ್ಯಗಳ ವಹಿವಾಟು ಇತ್ತು. ಇದನ್ನೆಲ್ಲ ಕಂಡ ವಿಜಯಲಕ್ಷ್ಮಿ ಅವರಿಗೆ ತಾವೂ ಕೃಷಿ ಆಧಾರಿತ ಉದ್ಯಮ ಆರಂಭಿಸಬೇಕೆಂಬ ಕನಸು ಚಿಕ್ಕಂದಿನಿಂದಲೇ ಇತ್ತು.

ರಾಯಚೂರಿನಲ್ಲಿ ಬಿಎಸ್‌ಸಿ ಓದು ಮುಗಿಸಿದರು. ಮದುವೆ, ಮಕ್ಕಳ ನಡುವೆ ಅವಕಾಶ ಹುಡುಕುವುದು ಕಷ್ಟಕರವಾಗಿಯೇ ಇತ್ತು. ಆದರೆ ಅಚಾನಕ್ಕೆಂಬಂತೆ ಅವಕಾಶವೊಂದು ಸಿಕ್ಕಿತು. ಬೇಕರಿ ಉತ್ಪನ್ನ ತಯಾರಿಯ ತರಬೇತಿಯೊಂದಕ್ಕೆ ಹೋಗುವ ಅವಕಾಶವದು. ಅಲ್ಲಿಂದ ಕಲಿತು ಬಂದ ನಂತರ ಉದ್ಯಮದ ಹೊಳಹು ತೆರೆದುಕೊಂಡಿತು.

ಇದೀಗ ಅವರ ಉದ್ಯಮಕ್ಕೆ ನಾಲ್ಕು ವರ್ಷ ತುಂಬಿದೆ. ‘ಒಳ್ಳೆ ಆಹಾರ ಕೊಟ್ಟರೆ ಯಾರು ತಾನೆ ತೆಗೆದುಕೊಳ್ಳುವುದಿಲ್ಲ’ ಎಂಬ ಆತ್ಮವಿಶ್ವಾಸದೊಂದಿಗೆ ಮುಂದಡಿ ಇಟ್ಟು ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಮುಂದಾದರು. ರಾಗಿ ಮಾಲ್ಟ್, ನ್ಯೂಟ್ರಿ ಮಿಕ್ಸ್, ನವಣೆ ದೋಸೆ, ಬೇಬಿ ಫುಡ್, ಮಿಲೆಟ್ ದೋಸೆ ಹೀಗೆ ಸಂಖ್ಯೆ ಏರುತ್ತಲೇ ಹೋಯಿತು. ಈಗ ದೇವನಹಳ್ಳಿಯಲ್ಲಿ ಏಳೆಂಟು ಮಹಿಳೆಯರಿಗೆ ಕೆಲಸವನ್ನೂ ನೀಡಿದ್ದಾರೆ.

ಸಂಪರ್ಕಕ್ಕೆ: 9611943009

***

ಸಾವಯವದೆಡೆ ತಿರುಗಿ

ಟರ್ನ್‌ ಟು ಆರ್ಗ್ಯಾನಿಕ್

ಮನೆಯಲ್ಲೇ ಸಿರಿಧಾನ್ಯಗಳಿಂದ ಸಾಕಷ್ಟು ಪ್ರಯೋಗಗಳು ನಡೆದಿದ್ದವು. ಎರಡು ಮೂರು ವರ್ಷ ಹಾಗೇ ಕಳೆಯಿತು. ಆದರೆ ಆ ಪ್ರಯೋಗ ಮನೆಗೆ ಮಾತ್ರ ಸೀಮಿತವಾದರೆ ಸಾಕೆ? ಇದನ್ನೇ ಇನ್ನಷ್ಟು ವಿಸ್ತರಿಸಬಾರದೇಕೆ?

ಇದೇ ರಜನಿ ಅವರ ‘ರೆಡಿ ಟು ಕುಕ್’ ಉತ್ಪನ್ನಗಳ ತಯಾರಿಕೆಗೆ ಅಡಿಯಿಡುವಂತೆ ಮಾಡಿದ್ದು. ಮೊದಲಿನಿಂದಲೂ ಮನೆಯಲ್ಲಿ ಸಾವಯವ ಕೃಷಿಯನ್ನೇ ಕಂಡಿದ್ದವರು ತುಮಕೂರಿನ ರಜನಿ. ಅದೇ ಅವರ ಮನವನ್ನೂ ತುಂಬಿತ್ತು.

ಸಾಫ್ಟ್‌ವೇರ್ ಹಿನ್ನೆಲೆಯಿದ್ದರೂ, ಮನಸ್ಸು ಸೆಳೆದದ್ದು ಈ ಕಡೆಗೇ. ಎಂ.ಟೆಕ್ ಮಾಡಿರುವ ಸವಿತಾ ಪಾಟೀಲ್, ಸ್ವತಃ ರೈತರಾದ ಶಿವಾನಂದ ಅವರು ಕೈ ಜೋಡಿಸಿದ್ದಾರೆ. ಮೂರು ಜನರಿಗೂ ಕೃಷಿ ಹಿನ್ನೆಲೆಯಿರುವುದು ಇವರ ಉದ್ಯಮಕ್ಕೆ ಮತ್ತಷ್ಟು ಪ್ರೇರಣೆ ನೀಡಿದೆ.

ಎಲ್ಲರೂ ರೆಡಿ ಟು ಕುಕ್‌ ಇಷ್ಟಪಡುವುದ ರಿಂದ ತಮ್ಮ ಉದ್ಯಮಕ್ಕೂ ಅದೇ ಪರಿಕಲ್ಪನೆಯನ್ನೇ ಬಂಡವಾಳ ಮಾಡಿಕೊಂಡರು.

ಬಿಜಾಪುರ, ತುಮಕೂರಿನ ಕೆಲ ರೈತರಿಂದ ಸಿರಿಧಾನ್ಯಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಸ್ವತಃ ಕುಳಿತು, ಇವುಗಳಿಂದ ಉತ್ಪನ್ನಗಳನ್ನು ತಯಾರಿಸುತ್ತಾರೆ. ಸಿರಿಧಾನ್ಯಗಳು ಒರಟು ಧಾನ್ಯಗಳಾದ ಕಾರಣ ಮೈದಾದಷ್ಟು ಗರಿಗರಿಯಾಗಿರುವುದಿಲ್ಲ. ಆದರೆ ರುಚಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ.

ಬರಗು ಪಾಯಸ, ಮಲ್ಟಿಮಿಲೆಟ್ ಅಡೈ ದೋಸೆ, ನವಣೆ ಬಿಸಿ ಬೇಳೆ ಬಾತ್ ಹೀಗೆ ಒಂದೊಂದರಲ್ಲೂ ಒಂದೊಂದು ಪೌಷ್ಟಿಕಾಂಶಭರಿತ ಆಹಾರವನ್ನು ರುಚಿಯೊಂದಿಗೆ ನೀಡಬೇಕು ಎಂಬ ಉದ್ದೇಶ ಇವರದ್ದು. ಬೆಂಗಳೂರು ಅಷ್ಟೇ ಅಲ್ಲದೇ ದೆಹಲಿಗೂ ಇವರ ಉತ್ಪನ್ನ ರಫ್ತಾಗುತ್ತಿದೆ.

ಸಂಪರ್ಕಕ್ಕೆ: 9606452381

***

ಒಣಗಿಸಿ ತಿನ್ನುವ ತರಕಾರಿ

ದೇಸಿ ವಿದೇಸಿ

ಮುಂಬೈ ಮೂಲದ ದೇಸಿ ವಿದೇಸಿಯದ್ದು ಬೇರೆಯದ್ದೇ ರೀತಿ. 6 ತಿಂಗಳ ಹಿಂದೆ ಆರಂಭಗೊಂಡಿರುವುದಷ್ಟೆ. ಆರೋಗ್ಯಕರವಾಗಿ ತಿನ್ನುವುದು ಹೇಗೆ ಎಂಬುದನ್ನು ತಿಳಿಸುವ ಉದ್ದೇಶದಿಂದಲೇ ಈ ಕಂಪನಿ ಆರಂಭಿಸಿದ್ದಾಗಿ ಹೇಳುತ್ತಾರೆ ಬಿಸಿನೆಸ್ ಹೆಡ್‌ ಗೌರವ್.

‘ಈಗ ಮಾರುಕಟ್ಟೆಯಲ್ಲಿರುವುದೆಲ್ಲಾ ಫ್ರೈ ಮಾಡಿರುವಂಥವು. ಆ ಪ್ರಕ್ರಿಯೆಯಲ್ಲಿ ಆಹಾರದಲ್ಲಿನ ಎಲ್ಲಾ ಪೋಷಕಾಂಶಗಳು ಕಳೆದುಹೋಗುತ್ತವೆ. ಅದನ್ನು ತಿಂದು ಏನು ಪ್ರಯೋಜನ’ ಎಂದು ಪ್ರಶ್ನಿಸುತ್ತಾರೆ ಅವರು.

ರೋಸ್ಟ್ ಮಾಡದ, ಬೇಕ್ ಮಾಡದ, ಫ್ರೈ ಮಾಡದ, ಕೇವಲ ಸೋಲಾರ್ ಡ್ರೈ ಮಾಡಿದ ಉತ್ಪನ್ನಗಳನ್ನಷ್ಟೇ ತಯಾರಿಸುತ್ತಿದೆ. ರುಚಿಯಲ್ಲೂ ಕಡಿಮೆಯಾಗದಂತೆ ನೈಸರ್ಗಿಕ ಫ್ಲೇವರ್‌ಗಳನ್ನು ಬಳಸಲಾಗುತ್ತಿದೆ.

ಬೀಟ್‌ರೂಟ್, ಕ್ಯಾರೆಟ್, ಪಪ್ಪಾಯ, ಪೈನ್‌ಆಪಲ್, ಪಾಲಾಕ್, ಫ್ರೆಂಚ್ ಬೀನ್ ಗೆಣಸು, ಸಪೋಟ, ಕೋಕಂ, ಅಮ್ಲಾ ಹೀಗೆ ಒಟ್ಟು ಎಂಟು ಉತ್ಪನ್ನಗಳು ಇವೆ.

ಸಂಪರ್ಕಕ್ಕೆ: desivdesifoods.com

***

ಕುರುಕಲು ತಿಂಡಿಗೂ ಸೈ

ನ್ಯೂಟ್ರಿವೋರ್

ಅಮೆರಿಕದಲ್ಲಿ ಸಾಫ್ಟ್‌ವೇರ್‌ ಉದ್ಯೋಗದಲ್ಲಿದ್ದ ಈ ಸಮಾನಮನಸ್ಕ ಗೆಳೆಯರಿಗೆ, ಭಾರತದಲ್ಲಿ ಏನಾದರೂ ಹೊಸ ನಿಟ್ಟಿನೊಂದಿಗೆ ಉದ್ಯಮಕ್ಕೆ ಇಳಿಯಬೇಕೆಂಬ ಆಸೆ.

ಆಹಾರ ಎಂದಿಗೂ ಮುನ್ನಡೆಯಲ್ಲಿರುವ ಉದ್ಯಮ. ಆದರೆ ಅದನ್ನು ಉದ್ಯಮ ಎಂದಷ್ಟೇ ಪರಿಗಣಿಸದೆ, ಹೊಸ ಟ್ರೆಂಡ್ ಸೃಷ್ಟಿಸಬೇಕೆಂಬ ಹುರುಪು.

ಆ ಹುರುಪಿನಲ್ಲಿದ್ದವರಿಗೆ ಸೆಳೆದದ್ದೇ ಸಿರಿಧಾನ್ಯಗಳು. ವಿದೇಶಗಳಲ್ಲಿ ಈ ಬಗ್ಗೆ ಜನರಿಗೆ ಅರಿವಿದೆ. ಅಮೆರಿಕದಲ್ಲೂ ಇವರನ್ನು ಸೆಳೆದಿದ್ದು ಇದೇ ವಿಷಯ. ಭಾರತದಲ್ಲಿ ಇನ್ನೂ ಇದರ ಬಗ್ಗೆ ಜಾಗೃತಿ ಕಡಿಮೆ. ಇದ್ದರೂ ಸಿರಿಧಾನ್ಯಗಳಲ್ಲಿ ಆಯ್ಕೆಗಳು ಕಡಿಮೆ. ಕುರುಕಲು ತಿಂಡಿಗಳೂ ಹೇಳಿಕೊಳ್ಳುವಂತಿಲ್ಲ. ಆದ್ದರಿಂದಲೇ ‘ಸ್ನ್ಯಾಕ್‌ ಕೂಡ ಸಾವಯವ’ ಎನ್ನುವ ಪರಿಕಲ್ಪನೆಯಲ್ಲಿ ಬೆಂಗಳೂರಿನಲ್ಲಿ ಡಿಸೆಂಬರ್ 2015ರಲ್ಲಿ ಕಂಪನಿ ಆರಂಭಿಸಿದರು ಗೆಳೆಯರಾದ ನಾಗರಾಜ್, ಅವಿನಾಶ್, ಶಾಮ್, ಗಿರೀಶ್, ವರುಣ್.

ಒಂದು ವರ್ಷ ಪ್ರಾಸೆಸಿಂಗ್, ಲೈಸೆನ್ಸಿಂಗ್‌ಗೆ ಹಿಡಿಯಿತು. ಯುಎಸ್‌ಡಿ ಸರ್ಟಿಫಿಕೇಟ್ ಪಡೆದರು. ಬಗೆ ಬಗೆ ಕುರುಕಲು ತಿಂಡಿಗಳನ್ನು ಅನ್ವೇಷಿಸಿದರು. ಬಳಸುವ ತೈಲದಿಂದಿಡಿದು ಪ್ರತಿ ಹಂತವೂ ಆರೋಗ್ಯಕರವಾಗಿರುವಂತೆ ನೋಡಿಕೊಂಡರು.

ಇದೀಗ ಸಿಂಗಪುರ, ಅಮೆರಿಕಕ್ಕೂ ಇವರ ಉತ್ಪನ್ನಗಳು ರಫ್ತಾಗುತ್ತಿವೆ. ಮೂರರಿಂದ ಆರಂಭಗೊಂಡ ಇವರ ಉತ್ಪನ್ನಗಳ ಸಂಖ್ಯೆ ಈಗ 10ಕ್ಕೆ ಬಂದು ಮುಟ್ಟಿದೆ.

ಮಸಾಲ ಗೋಡಂಬಿ, ಖಾರಾ ಬೂಂದಿ, ಬಾಂಬೆ ಮಿಕ್ಸ್‌ಚರ್, ಓಂಪುಡಿ, ಮೂಂಗ್ ದಾಲ್, ರಾಗಿ ಮಿಲ್ಲೆಟ್ ಮಿಕ್ಸ್‌ಚರ್ ಹೀಗೆ ರುಚಿಯೊಂದಿಗೆ ಇವುಗಳ ಸಂಖ್ಯೆಯನ್ನೂ ಬೆಳೆಸುವ ಆಸೆ ಇವರದ್ದು...

ಸಂಪರ್ಕಕ್ಕೆ: 9620768081

***

ಸಿರಿಧಾನ್ಯ ಕ್ಯಾಲೆಂಡರ್

ಉಪಾಹಾರಕ್ಕೆ ಕೊರಲೆ ಹೆಸರುಕಾಳು ದೋಸೆ, ಸಾವೆ ಬೀಟ್ ರೂಟ್ ಪಡ್ಡು, ನವಣೆ ಶಾವಿಗೆ ಉಪ್ಪಿಟ್ಟು, ಹಾರಕದ ಈರುಳ್ಳಿ ದೋಸೆ, ಸಾವೆ ಕ್ಯಾರೆಟ್ ಇಡ್ಲಿ; ಊಟಕ್ಕೆ ಪುಳಿಯೋಗರೆ, ಊದಲು ನುಗ್ಗೆಸೊಪ್ಪಿನ ಬಾತ್, ಹಾರಕದ ಬಿರಿಯಾನಿ, ಮೊಸರನ್ನ; ಸಂಜೆ ಕುರುಕಲು ತಿಂಡಿಗೆ ಹಾರಕದ ವಡಾ, ಊದಲು ಚಕ್ಕುಲಿ, ರಾಗಿ ಖಾರಾ ಬೂಂದಿ; ಸಿಹಿಪ್ರಿಯರಿಗೆ ರಾಗಿ ಹಲ್ವಾ, ಊದಲು ಅಂಟಿನ ಉಂಡೆ, ಪಾನ್ ಕೇಕ್, ಕೊರಲೆ ರೋಸ್ ಫೆರ್ನಿ, ಸಜ್ಜೆ ಲಡ್ಡು... ಸಿರಿಧಾನ್ಯದ ತಿಂಡಿ ತಿನಿಸುಗಳ ಪಟ್ಟಿಗೆ ಮಿತಿಯೆಲ್ಲಿ?

ಜಂಕ್ ಫುಡ್‌ಗಳನ್ನು ತಿಂದು ಅನಾರೋಗ್ಯ ಆಹ್ವಾನಿಸಿಕೊಳ್ಳುವ ಬದಲಿಗೆ ಸಿರಿಧಾನ್ಯ ಸೇವನೆಯೇ ಒಳ್ಳೆಯದು ಎಂದು ಜನರು ಅವುಗಳತ್ತ ಹೊರಳುತ್ತಿದ್ದಾರೆ. ಈವರೆಗೆ ಕೆಲವೇ ತಿನಿಸುಗಳಿಗೆ ಸೀಮಿತವಾಗಿದ್ದ ಸಿರಿಧಾನ್ಯಗಳು ಈಗ ಬಗೆಬಗೆಯ ಸ್ವರೂಪ, ರುಚಿಯೊಂದಿಗೆ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಪೌಷ್ಟಿಕ ಸಿರಿಧಾನ್ಯಗಳ ಅಡುಗೆ ವಿಧಾನವನ್ನು ಪರಿಚಯಿಸುವ ಉದ್ದೇಶದಿಂದ ಸಹಜ ಸಮೃದ್ಧ ಬಳಗವು ನಬಾರ್ಡ್ ಹಾಗೂ ಸಹಜ ಆರ್ಗಾನಿಕ್ಸ್ ಜತೆಗೂಡಿ ಸಿರಿಧಾನ್ಯ ಕ್ಯಾಲೆಂಡರ್ 2018 ಹೊರತಂದಿದೆ. ಕೊರಲು, ಬರಗು, ಊದಲು, ನವಣೆ ಇತರ ಧಾನ್ಯಗಳ ಪರಿಚಯ ಹಾಗೂ ಅವುಗಳಿಂದ ಮಾಡಬಹುದಾದ ಅಪೂರ್ವ ತಿಂಡಿ- ತಿನಿಸುಗಳ ಪಾಕವಿಧಾನವನ್ನು ಈ ಕ್ಯಾಲೆಂಡರ್ ಒಳಗೊಂಡಿದೆ.

ಕೃಷಿಕರು ಹಾಗೂ ಗ್ರಾಹಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರೂಪಿಸಿದ 12 ಪುಟಗಳ ವರ್ಣರಂಜಿತ ಕ್ಯಾಲೆಂಡರ್ ಬೆಲೆ: ₹ 150 (ಅಂಚೆ ವೆಚ್ಚ ಸಹಿತ)

ವಿವರಗಳಿಗೆ: 8970798114

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry