ಮನಸಿನಂತೆ ಕನಸು

7

ಮನಸಿನಂತೆ ಕನಸು

Published:
Updated:
ಮನಸಿನಂತೆ ಕನಸು

‘ಏನೇನೋ ಕನಸು ಬೀಳ್ತಿದೆ. ನೀನು ನನಗೆ ಮೋಸ ಮಾಡಿದಂತೆ, ಬೇರೆ ಯಾರ ಜೊತೆಗೋ ಇದ್ದಂತೆ, ಅಯ್ಯಪ್ಪಾ, ಥೂ...’

ಅವನು ನಾನ್‌ಸ್ಟಾಪ್ ಮಾತಾಡುತ್ತಲೇ ಇದ್ದ. ಅವನ ಮಾತು ಕೇಳಿ ನನಗೆ ನಗು ಬರ್ತಿತ್ತು. ‘ಈಗಲೇ ಇಷ್ಟು ಪೊಸೆಸಿವ್ ಆದ್ರೆ ಹೇಗೆ?’ ಎಂದು ಕಿಚಾಯಿಸಿದೆ ನೋಡಿ. ಸರಿಯಾಗಿ ಉ‍ರ‍್ಕೊಂಡು ಬಿಟ್ಟ. ಕಾಡುವ ಕನಸುಗಳ ಉಪದ್ರವ ಒಂದೆರೆಡಲ್ಲ. ಮನಸಿನ ಕಲ್ಪನೆಯಂತೆಯೇ ಅದಕ್ಕೂ ಯಾರ ಹಂಗೂ, ಯಾವ ಲಗಾಮೂ ಇಲ್ಲ. ಆದ್ರೂ ಇವನು ಪಾಪದವನು. ಒಂದಿಷ್ಟು ವಿವರಿಸಿ ಹೇಳೋಣ ಅನಿಸ್ತು.

ಮಲಗಿರುವಾಗ ನಮ್ಮ ಸುಪ್ತಪ್ರಜ್ಞೆಯಲ್ಲಿ ಕಾಡುತ್ತಿರುವ ವಿಚಾರಗಳು ಕನಸಿನ ರೂಪದಲ್ಲಿ ಕಣ್ಣೆದುರು ಬರುತ್ತವೆ. ಕೆಲವು ಸಲ ಇವು ನೀರಸವಾಗಿದ್ದರೆ, ಕೆಲವೊಮ್ಮೆ ನಿತ್ಯದ ಬದುಕಿನ ಅಸಂಭವ ಎನಿಸುವಂತಿರುವುದು ಕನಸಿನಲ್ಲಿ ಸಾಧ್ಯವಾಗಿರುತ್ತದೆ. ಕೆಲವಂತೂ ಎದ್ದ ಮೇಲೂ ಭಯ ಹುಟ್ಟಿಸುವಷ್ಟು ಭಯಾನಕ. ಕೆಲ ಕನಸುಗಳು ಕೆಲವೇ ಸೆಕೆಂಡುಗಳಲ್ಲಿ ಮುಗಿದು ಹೋದರೆ, ಕೆಲವು 20 ನಿಮಿಷಗಳಷ್ಟು ದೀರ್ಘ ಅವಧಿಗೆ ಸುರುಳಿ ಸುತ್ತಿ ಕಾಡುತ್ತವೆ.

ಮಲಗಿದ್ದಾಗ ಬೀಳುವ ಎಲ್ಲ ಕನಸುಗಳು ಎದ್ದ ಮೇಲೆ ನೆನಪಿರುವುದಿಲ್ಲ. ಹೀಗೆ ನೆನಪಿರುವ ಕನಸುಗಳನ್ನೇ ಆಧರಿಸಿ ಕನಸು ವಿಶ್ಲೇಷಕ ಮತ್ತು ಚಿಕಿತ್ಸಕ ಡೆಲ್ಫಿ ಎಲ್ಲಿಸ್ ಸಾಮಾನ್ಯ ಕನಸುಗಳು ಮತ್ತು ಅವುಗಳು ಸೂಚಿಸುವ ಅರ್ಥವನ್ನು ವಿವರಿಸಿದ್ದಾರೆ. ನಂಗೂ ಇದೇನೋ ಚೆನ್ನಾಗಿದೆ ಅನಿಸ್ತು. ಅಷ್ಟೆಲ್ಲಾ ಅನಿಸಿದ ಮೇಲೆ ಇಷ್ಟಾದರೂ ಬರೆಯದಿದ್ದರೆ ಹೇಗೆ?

ಬೆಚ್ಚಿ ಬೀಳುವುದು: ಕನಸಿನಲ್ಲಿ ಬೆಚ್ಚಿ ಬಿದ್ದಂತೆ ಅನುಭವವಾದರೆ ಇತ್ತೀಚೆಗೆ ಮಾಡಿದ ಸಾಹಸವೊಂದನ್ನು ಅದು ನೆನ‍ಪಿಸುತ್ತಿರುತ್ತದೆ. ಒಂದು ವೇಳೆ ಆ ಕನಸು ಭಯಾನಕವಾಗಿದ್ದರೆ ಅವಕಾಶಗಳು ನಿಮ್ಮ ಕೈತಪ್ಪಿ ಹೋದಂತೆ ಅಥವಾ ಮುಂದೇನು ಎಂಬ ಗೊಂದಲ ನಿಮ್ಮನ್ನು ಕಾಡುತ್ತಿರಬಹುದು ಎನ್ನುವುದರ ಸೂಚನೆ. ಭವಿಷ್ಯದಲ್ಲಿ ಆಗುವ ಮಹತ್ವದ ಬದಲಾವಣೆ ಅಥವಾ ಭವಿಷ್ಯದ ಬೆಳವಣಿಗೆ ಬಗ್ಗೆ ನಿಮ್ಮಲ್ಲಿರುವ ಅಭದ್ರತೆಯನ್ನು ಇಂಥ ಕನಸುಗಳು ಸಂಕೇತಿಸುತ್ತವೆ.

ಅಟ್ಟಾಡಿಸಿಕೊಂಡು ಬಂದಂತೆ: ನಿಮ್ಮನ್ನು ಏನಾದರೂ ಹಿಂಬಾಲಿಸಿಕೊಂಡು ಬಂದಂತೆ ಅನಿಸುತ್ತಿದೆಯೇ, ಅದು ನಿಮ್ಮನ್ನು ಕಾಡುವ ಆತಂಕ ಆಗಿರಬಹುದು. ಈ ಹಿಂದೆ ನೀವು ಮಾಡಿದ ಕೆಲಸಗಳು, ಅನುಭವಗಳು ವರ್ತಮಾನದ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು. ಯಾವುದಾದರೂ ವ್ಯಕ್ತಿಗೆ ಅರ್ಧದಲ್ಲಿ ಕೈಕೊಟ್ಟೆ ಎಂಬ ನೋವಿದ್ದವರಿಗೆ ಇಂಥ ಕನಸುಗಳು ಸಾಮಾನ್ಯ.

ಇನ್ನೊಂದು ಸಂಬಂಧ: ‘ಸಂಗಾತಿಯಿಂದ ನನಗೆ ಮೋಸವಾಗುತ್ತಿದೆ. ಈ ವಿಷಯವನ್ನು ಹೇಳುವುದು ಹೇಗೆ’ ಎಂದು ನೀವು ಮನಸಿನಲ್ಲಿಯೇ ಕೊರಗುತ್ತಿದ್ದೀರಾ? ವಿಷಯವನ್ನು ಪತಿ ಅಥವಾ ಪತ್ನಿ ಜೊತೆ ಹೇಗೆ ಮಾತನಾಡಲಿ ಎಂದು ಮನಸಿನಲ್ಲೇ ಕೊರಗುವವರಿಗೆ ತಮ್ಮ ಸಂಗಾತಿ ಇನ್ನೊಬ್ಬರೊಡನೆ ಸಂಬಂಧ ಇರಿಸಿಕೊಂಡಂತೆ ಕನಸುಗಳು ಬೀಳುತ್ತವೆ. ಈ ಕನಸುಗಳು ನಮ್ಮ ಮನಸ್ಸಿನ ಭಯವನ್ನು ಸಂಕೇತಿಸುತ್ತವೆಯೇ ಹೊರತು, ಸಂಗಾತಿ ನಿಜವಾಗಿ ಮೋಸ ಮಾಡುತ್ತಿದ್ದಾರೆ ಎಂದಲ್ಲ.

ಭಗ್ನಪ್ರೇಮ: ಹಿಂದೆಂದೋ ಇಷ್ಟಪಟ್ಟು ಜೊತೆಗೆ ತಿರುಗಾಡಿದ್ದ ಹುಡುಗನೋ, ಹುಡುಗಿಯೋ ಕೈಕೊಟ್ಟಿದ್ದಲ್ಲಿ ಅಂಥ ನೆನಪು ಸುಲಭಕ್ಕೆ ಮರೆಯದು. ಮುಂದೆಯೂ ಹೀಗೆ ಆಗಬಹುದು ಎಂಬ ಎಂಬ ಅಭದ್ರತೆ ಮನಸಿನಲ್ಲಿ ಮೂಡುತ್ತದೆ. ಇಂತಹ ಕನಸುಗಳು ಸಂಬಂಧಗಳು ಚೆನ್ನಾಗಿದ್ದ ಸಮಯದಲ್ಲೂ ಬೀಳುವುದು ಸಹಜ. ಅದನ್ನೇ ದೊಡ್ಡದು ಮಾಡಿಕೊಂಡು ಇರುವ ಸುಖ ಕಳೆದುಕೊಳ್ಳಬೇಡಿ.

ಹಲ್ಲು ಉದುರಿತೆ: ನಮ್ಮ ಹತ್ತಿರದ ಆತ್ಮೀಯ ವ್ಯಕ್ತಿಯನ್ನು ಅಥವಾ ಸಂಪತ್ತು ಕಳೆದುಕೊಳ್ಳುವ ಭಯ ಮನಸಿಲ್ಲಿದ್ದಾಗ ಹಲ್ಲು ಉದುರಿದಂತೆ ಕನಸು ಬೀಳುತ್ತದೆ. ಉದುರಿದ ಹಲ್ಲು ಬಾಯೊಳಗೇ ಇರುವಂತೆ ಕನಸು ಬಿತ್ತೇ? ನಿಮ್ಮ ಮನದ ಮಾತನ್ನು ಹೇಳಬೇಕಾದವರಿಗೆ ಹೇಳಿಲ್ಲ ಎಂದು ಅರ್ಥ.

ಮನೆ ಕನಸು: ಮನೆಯೊಳಗೆ ನಾನು ಮತ್ತು ನನ್ನ ಆಪ್ತರಷ್ಟೇ ಇರುವ, ನೆಮ್ಮದಿಯ ಭಾವ ಮೂಡಿಸುವ ಕನಸು ಬಿದ್ದರೆ ಅದು ನಿಮ್ಮ ಮನಸಿನ ಸಮಾಧಾನ ಸ್ಥಿತಿಯ ಪ್ರತೀಕ. ಮನೆಯ ಹೊರಭಾಗವೇ ಕನಸಿನಲ್ಲಿ ಹೆಚ್ಚಾಗಿ ಕಾಣಿಸಿದರೆ, ಬಾಹ್ಯ ಜಗತ್ತಿಗೆ ನಿಮ್ಮನ್ನು ನೀವು ತೆರೆದುಕೊಳ್ಳುವ ತಯಾರಿಯನ್ನು ಅದು ಸಂಕೇತಿಸುತ್ತದೆ. ಕನಸಿನಲ್ಲಿ ಕಂಡ ಮನೆಯ ಕಿಟಕಿಗಳು ಹಾಗೂ ಉದ್ಯಾನವನ ಸ್ವಚ್ಛವಾಗಿದೆಯೆಂದರೆ ನೀವು ಸಂಘಟನಾ ಮನೋಭಾವದವರು ಹಾಗೂ ಎಲ್ಲವೂ ನಿಮ್ಮ ನಿಯಂತ್ರಣದಲ್ಲಿರಬೇಕು ಎಂದು ಬಯಸುತ್ತೀರಿ ಎಂದು ಅರ್ಥ. ಮನೆಯಲ್ಲಿ ನೀವು ಬಚ್ಚಿಟ್ಟುಕೊಂಡಂತೆ ಕನಸು ಕಂಡರೆ ಭವಿಷ್ಯದಲ್ಲಿ ಒದಗುವ ಯಾವುದೋ ಒಂದು ಅವಕಾಶ ಅಥವಾ ಸವಾಲು ನಿಮಗಾಗಿ ಕಾಯುತ್ತಿದೆ ಎಂದು ನಿಮ್ಮ ಒಳಮನಸು ಸಂಕೇತಿಸುತ್ತಿದೆ ಎಂದು ಅರ್ಥಮಾಡಿಕೊಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry