‘ಬಣವೆಗೆ ಬೆಂಕಿ ಹಚ್ಚಿ ಕೊಳ್ಳೆ ಹೊಡೆಯುವ ಕಳ್ಳರು’

7

‘ಬಣವೆಗೆ ಬೆಂಕಿ ಹಚ್ಚಿ ಕೊಳ್ಳೆ ಹೊಡೆಯುವ ಕಳ್ಳರು’

Published:
Updated:
‘ಬಣವೆಗೆ ಬೆಂಕಿ ಹಚ್ಚಿ ಕೊಳ್ಳೆ ಹೊಡೆಯುವ ಕಳ್ಳರು’

ದಾವಣಗೆರೆ: ‘ಹಿಂದೆ, ಕಳ್ಳರೆಲ್ಲ ಸೇರಿ ಊರ ಹೊರಗಿನ ಬಣವೆಗೆ ಬೆಂಕಿ ಹಚ್ಚುತ್ತಿದ್ದರು. ಜನರೆಲ್ಲ ಬೆಂಕಿ ನಂದಿಸಲು ಹೋದಾಗ ಕಳ್ಳರು ಊರನ್ನು ಕೊಳ್ಳೆ ಹೊಡೆಯುತ್ತಿದ್ದರು. ಇವತ್ತಿನ ರಾಜಕೀಯ ಪರಿಸ್ಥಿತಿಯೂ ಹಾಗೆಯೇ ಇದೆ’ ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯರೂ ಆದ ದೇವನೂರ ಮಹಾದೇವ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ನಡೆದ ಸ್ವರಾಜ್‌ ಇಂಡಿಯಾ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಜಾತಿ–ಜನಾಂಗಗಳು, ಧರ್ಮಗಳು, ರಾಜ್ಯ–ರಾಜ್ಯಗಳ ನಡುವೆ ವಿವಾದಗಳ ಬೆಂಕಿ ಹಚ್ಚಲಾಗುತ್ತಿದೆ. ಈ ಮೂಲಕ ಭ್ರಷ್ಟಾಚಾರ, ಹಗರಣಗಳನ್ನು ಮರೆಗೆ ಸರಿಸಿ ಜನರ ಗಮನವನ್ನು ಭಾವನಾತ್ಮಕವಾಗಿ ಸೆಳೆಯಲಾಗುತ್ತಿದೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಚುನಾವಣೆ ಗಾಳಿ ಬೀಸುತ್ತಿದೆ. ಎಲ್ಲರೂ ಮಾತಿನಲ್ಲಿ ಮನೆಕಟ್ಟಲು ಶುರುಮಾಡಿದ್ದಾರೆ. ಭರವಸೆಗಳನ್ನು ಸುರಿಸುತ್ತಿದ್ದಾರೆ. ಪ್ರಜ್ಞಾವಂತರಾದ ನಾವು ಎಚ್ಚೆತ್ತುಕೊಳ್ಳಬೇಕಿದೆ. ಹಿಂದೆ ಕೊಟ್ಟಿದ್ದ ಭರವಸೆಗಳು ಈಡೇರಿವಿಯೇ ಎಂಬ ಬಗ್ಗೆ ಪ್ರಶ್ನಿಸಬೇಕು. ಪ್ರಶ್ನಿಸದಿದ್ದರೆ ಉಳಿಗಾಲವಿಲ್ಲ’ ಎಂದರು.

ರಾಜಕೀಯ ವ್ಯವಸ್ಥೆ ದಿಗ್ಭ್ರಾಂತಗೊಳಿಸಿದೆ. ರಾಜಕೀಯ ಅಡುಗೆ ಮನೆ ಪ್ರವೇಶಿಸಿ ತಿನ್ನುವ ಅನ್ನದಲ್ಲಿ ಸೇರಿಕೊಂಡಿದೆ. ಗಂಡ–ಹೆಂಡತಿ ನಡುವಿನ ಸಂಬಂಧದ ಮಧ್ಯೆಯೂ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಸ್ವರಾಜ್‌ ಇಂಡಿಯಾ ಪಕ್ಷ ಶ್ರಮಿಸುತ್ತಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲಾಗದಿದ್ದರೂ ಮುಂದಿನ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷ ಯಶಸ್ಸು ಸಾಧಿಸಲಿದೆ. ರೈತಸಂಘ, ಜನಾಂದೋಲನ ಮಹಾಮೈತ್ರಿ, ಸಮಾನಮನಸ್ಕ ಸಂಘಟನೆಗಳ ಜತೆಗೂಡಿ ರಾಜಕೀಯ ಬದಲಾವಣೆ ತರುವುದಾಗಿ ದೇವನೂರು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry