ಸಂಪತ್ತಿನ ಅಸಮಾನತೆ ಹೆಚ್ಚಳ

7

ಸಂಪತ್ತಿನ ಅಸಮಾನತೆ ಹೆಚ್ಚಳ

Published:
Updated:
ಸಂಪತ್ತಿನ ಅಸಮಾನತೆ ಹೆಚ್ಚಳ

ದಾವೋಸ್‌: ಭಾರತದಲ್ಲಿ ಸಂಪತ್ತಿನ ಅಸಮಾನ ಹಂಚಿಕೆ ಹೆಚ್ಚುತ್ತಿದ್ದು, ಕಳೆದ ವರ್ಷ ಸೃಷ್ಟಿಯಾದ ಸಂಪತ್ತಿನ ಬಹುಭಾಗವು (ಶೇ 73), ಶೇ 1ರಷ್ಟಿರುವ ಆಗರ್ಭ ಶ್ರೀಮಂತರ ಪಾಲಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಇದೇ ಅವಧಿಯಲ್ಲಿ, ಒಟ್ಟು ಜನಸಂಖ್ಯೆಯಲ್ಲಿನ ಬಡವರು ಒಳಗೊಂಡ 67 ಕೋಟಿ ಜನರ ಸಂಪತ್ತು ಕೇವಲ 1ರಷ್ಟು ಮಾತ್ರ ಹೆಚ್ಚಳಗೊಂಡಿದೆ ಎಂದು ಅಂತರ ರಾಷ್ಟ್ರೀಯ ಹಕ್ಕುಗಳ ಸಂಘಟನೆ ಆಕ್ಸ್‌ಫಮ್‌ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ಆರಂಭಕ್ಕೂ ಮುನ್ನ ಈ ಸಮೀಕ್ಷೆ ಬಿಡುಗಡೆ ಮಾಡಲಾಗಿದೆ.

ಈ ಸಂಪತ್ತಿನ ಅಸಮಾನತೆಯ ಜಾಗತಿಕ ಚಿತ್ರಣವು ಹೆಚ್ಚು ಕಳವಳಕಾರಿಯಾಗಿದೆ. ವಿಶ್ವದಾದ್ಯಂತ ಸೃಷ್ಟಿಯಾದ ಸಂಪತ್ತಿನ ಶೇ 82ರಷ್ಟು ಪ್ರಮಾಣವು ಕೇವಲ ಶೇ 1ರಷ್ಟು ಜನರಲ್ಲಿ ಹಂಚಿಕೆಯಾಗಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಅತ್ಯಂತ ಬಡವರ (370 ಕೋಟಿ) ಸಂಪತ್ತಿನಲ್ಲಿ ಯಾವುದೇ ಹೆಚ್ಚಳ ದಾಖಲಾಗಿಲ್ಲ.

ಪ್ರತಿ ವರ್ಷ ನಡೆಸುವ ಆಕ್ಸ್‌ಫಮ್‌ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ವಿವರವಾಗಿ ಚರ್ಚಿಸಲಾಗುವುದು.

ಭಾರತದ ಒಟ್ಟು ಸಂಪತ್ತಿನ ಶೇ 58ರಷ್ಟು, ಶೇ 1ರಷ್ಟಿರುವ ಶ್ರೀಮಂತರಿಗೆ ಸೇರಿದೆ ಎಂದು ಕಳೆದ ವರ್ಷದ ಸಮೀಕ್ಷೆಯಲ್ಲಿ ತಿಳಿಸಲಾಗಿತ್ತು. ಇದು ಜಾಗತಿಕ ಮಟ್ಟಕ್ಕಿಂತ (ಶೇ 50) ಹೆಚ್ಚಿಗೆ ಇತ್ತು. 2017ರಲ್ಲಿ ಶೇ 1ರಷ್ಟಿರುವ ಸಿರಿವಂತರ ಸಂಪತ್ತು ₹ 20.9 ಲಕ್ಷ ಕೋಟಿಗಿಂತ ಹೆಚ್ಚಾಗಿದೆ.

ಜಾಗತಿಕವಾಗಿ 2017ರಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳಗೊಂಡಿದೆ. ಪ್ರತಿ ಎರಡು ದಿನಗಳಿಗೆ ಒಬ್ಬ ಕೋಟ್ಯಧಿಪತಿ ಹೊಸದಾಗಿ ಸೇರ್ಪಡೆಯಾಗಿದ್ದಾನೆ. 2010ರಿಂದೀಚೆಗೆ ಕೋಟ್ಯಧಿಪತಿಗಳ ಸಂಪತ್ತು ಪ್ರತಿ ವರ್ಷ ಸರಾಸರಿ ಶೇ 13ರಷ್ಟು ಏರಿಕೆ ಕಾಣುತ್ತಿದೆ. ಇದು ಸಾಮಾನ್ಯ ಕೆಲಸಗಾರರ ವೇತನಕ್ಕಿಂತ ಆರು ಪಟ್ಟುಗಳಷ್ಟು ವೇಗವಾಗಿ ಹೆಚ್ಚಳ ದಾಖಲಿಸಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry