ಅಜಿತಾಬ್‌ ನಾಪತ್ತೆ ಪ್ರಕರಣ: ನಿತ್ಯ ವರದಿ ಪಡೆಯಲು ನಿರ್ದೇಶನ

6

ಅಜಿತಾಬ್‌ ನಾಪತ್ತೆ ಪ್ರಕರಣ: ನಿತ್ಯ ವರದಿ ಪಡೆಯಲು ನಿರ್ದೇಶನ

Published:
Updated:

ಬೆಂಗಳೂರು: ‘ಸಾಫ್ಟ್‌ವೇರ್ ಎಂಜಿನಿಯರ್ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ದಿನನಿತ್ಯ ವರದಿ ತರಿಸಿಕೊಳ್ಳಬೇಕು’ ಎಂದು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.

‘ನನ್ನ ಮಗನ ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಕೋರಿ ಅಜಿತಾಬ್‌ ತಂದೆ ಅಶೋಕ್‌ ಕುಮಾರ್ ಸಿನ್ಹಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಜಿ.ಶಿವಣ್ಣ, ‘ಪ್ರಕರಣದ ತನಿಖೆಗೆ ಈಗಾಗಲೇ ವಿಶೇಷ ತನಿಖಾ ತಂಡ ರಚಿಸಲಾಗಿದೆ’ ಎಂದು ತಿಳಿಸಿದರಲ್ಲದೆ ಈ ಕುರಿತಂತೆ ಜ್ಞಾಪನಾ ಪತ್ರ ಸಲ್ಲಿಸಿದರು.

ಅರ್ಜಿದಾರರ ಪರ ವಕೀಲರು, ‘ತನಿಖಾ ತಂಡದಲ್ಲಿ ಗುಪ್ತದಳದ ಹಿರಿಯ ಅಧಿಕಾರಿಗಳನ್ನೂ ಸೇರ್ಪಡೆ ಮಾಡಬೇಕು’ ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ಅಂತಹ ಅವಶ್ಯಕತೆ ಕಂಡು ಬರುತ್ತಿಲ್ಲ’ ಎಂಬ ಅಭಿಪ್ರಾಯದೊಂದಿಗೆ, ‘ತನಿಖೆಯ ಪ್ರಗತಿ ವರದಿಯನ್ನು ಇದೇ 29ರಂದು ಕೋರ್ಟ್‌ಗೆ ಸಲ್ಲಿಸಿ’ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ಬ್ರಿಟಿಷ್ ಟೆಲಿಕಾಂ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಕುಮಾರ್ ಅಜಿತಾಬ್ 2017ರ ಡಿ.18ರ ಸಂಜೆ 6.30ಕ್ಕೆ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಮಾರ್ ತಂದೆ ವೈಟ್‌ಫೀಲ್ಡ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಡಿ.20ರಂದು ಹಾಗೂ 29ರಂದು ಎರಡು ಎಫ್‌ಐಆರ್ ದಾಖಲಿಸಿದ್ದರು.

ಏತನ್ಮಧ್ಯೆ  ಅಶೋಕ್ ಕುಮಾರ್ ಸಿನ್ಹಾ, ‘ಪೊಲೀಸರು ಈವರೆಗೂ ನನ್ನ ಮಗನನ್ನು ಪತ್ತೆ ಹಚ್ಚಿಲ್ಲ. ಆದ್ದರಿಂದ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry