ಅಂದ ನೋಡದೆ ‘ಅಂಧ’ಗಾತಿಯ ವರಿಸಿದ ಯುವಕ

7

ಅಂದ ನೋಡದೆ ‘ಅಂಧ’ಗಾತಿಯ ವರಿಸಿದ ಯುವಕ

Published:
Updated:
ಅಂದ ನೋಡದೆ ‘ಅಂಧ’ಗಾತಿಯ ವರಿಸಿದ ಯುವಕ

ಕೋಲಾರ: ಇದು ಅಂದ ನೋಡದೆ ‘ಅಂಧ’ಗಾತಿಯ ವರಿಸಿದ ಯುವಕನ ಕತೆ. ಬಾಗಲಕೋಟೆ ಜಿಲ್ಲೆ ಗಲಗಲಿ ಗ್ರಾಮದ ಯುವಕ ಸಂಗಮೇಶ್‌ ಅವರು ಜಿಲ್ಲೆಯ ಮಾಲೂರು ತಾಲ್ಲೂಕಿನ ಅರಳೇರಿ ಗ್ರಾಮದ ಅಂಧೆ ಎನ್‌.ರುದ್ರಮ್ಮ ಜತೆ ನಗರದಲ್ಲಿ ಸೋಮವಾರ ಸಪ್ತಪದಿ ತುಳಿಯುವ ಮೂಲಕ ಅಂಧೆಯ ಬಾಳಿಗೆ ಕಣ್ಣಾದರು.

ಹುಟ್ಟಿನಿಂದಲೇ ದೃಷ್ಟಿ ದೋಷ ಎದುರಿಸುತ್ತಿರುವ ರುದ್ರಮ್ಮ ಬೆಂಗಳೂರಿನ ಅಂಧರ ವಸತಿನಿಲಯದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಹಾಗೂ ಸಂಗೀತ ಅಭ್ಯಾಸ ಮಾಡಿದ್ದರು. ಅವರಿಗೆ ಬಸವರಾಜು ಎಂಬುವರ ಮೂಲಕ ಸಂಗಮೇಶ್‌ರ ಪರಿಚಯವಾಗಿತ್ತು.

ಬೆಂಗಳೂರಿನ ಗೆಳೆಯರ ಬಳಗದ ಮುಖ್ಯಸ್ಥ ರವಿ ಅವರ ನೆರವಿನಿಂದ ಮಾಲೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರುದ್ರಮ್ಮ ಸಂಗೀತ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಆ ಕೆಲಸ ಬಿಟ್ಟು ಕೋಲಾರದ ವಿಮಾ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು.

ರುದ್ರಮ್ಮರನ್ನು ಮದುವೆಯಾಗಲು ನಿರ್ಧರಿಸಿದ ಸಂಗಮೇಶ್‌ ಆ ಸಂಗತಿಯನ್ನು ಸಂಬಂಧಿ ಬಸವರಾಜುಗೆ ತಿಳಿಸಿದ್ದರು. ಬಳಿಕ ಬಸವರಾಜು ಗೆಳೆಯರ ಬಳಗದ ರವಿ ಜತೆ ಈವಿಷಯ ಪ್ರಸ್ತಾಪಿಸಿದ್ದರು. ನಂತರ ರವಿ ಅವರು ಮಾಲೂರು ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರೊಂದಿಗೆ ಚರ್ಚಿಸಿ ರುದ್ರಮ್ಮರ ಪೋಷಕರನ್ನು ಭೇಟಿಯಾಗಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದರು.

ಆ ನಂತರ ರುದ್ರಮ್ಮ ಮತ್ತು ಸಂಗಮೇಶ್‌ ಕುಟುಂಬ ವರ್ಗದವರು ಪರಸ್ಪರ ಭೇಟಿಯಾಗಿ ಮದುವೆ ನಿಶ್ಚಯ ಮಾಡಿದ್ದರು. ಅದರಂತೆ ನಗರದ ಬಯಲು ಬಸವೇಶ್ವರ ದೇವಾಲಯದಲ್ಲಿ ರುದ್ರಮ್ಮ ಮತ್ತು ಸಂಗಮೇಶ್‌ ಸೋಮವಾರ ಸರಳ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಬಿ.ಎ ಪದವೀಧರರು.

‘ಬಾಲ್ಯದಿಂದಲೂ ಅಂಗವಿಕಲೆಯನ್ನು ಮದುವೆಯಾಗಿ ಬಾಳು ಕೊಡಬೇಕೆಂದು ನಿರ್ಧರಿಸಿದ್ದೆ. ಅದರಂತೆ ರುದ್ರಮ್ಮರನ್ನು ಮದುವೆಯಾಗಿದ್ದೇನೆ. ಬಾಗಲಕೋಟೆಯಲ್ಲಿ ಹಾಲಿನ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇನೆ. ಮುಂದೆ ಪತ್ನಿಯ ತವರೂರು ಮಾಲೂರಿನಲ್ಲೇ ನೆಲೆ ಕಂಡುಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಸಂಗಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry