ಪಕೋಡಾ ಮಾರಿ ₹200 ಗಳಿಸುವುದು ಉದ್ಯೋಗ ಅಲ್ಲ, ಅದು ಹೊಟ್ಟೆಪಾಡು!

7

ಪಕೋಡಾ ಮಾರಿ ₹200 ಗಳಿಸುವುದು ಉದ್ಯೋಗ ಅಲ್ಲ, ಅದು ಹೊಟ್ಟೆಪಾಡು!

Published:
Updated:
ಪಕೋಡಾ ಮಾರಿ ₹200 ಗಳಿಸುವುದು ಉದ್ಯೋಗ ಅಲ್ಲ, ಅದು ಹೊಟ್ಟೆಪಾಡು!

ನವದೆಹಲಿ: ಎರಡು ದಿನಗಳ ಹಿಂದೆ  ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ವ್ಯಕ್ತಿಯೊಬ್ಬ ಪ್ರತಿದಿನ ಪಕೋಡಾ ಮಾರಾಟ ಮಾಡಿ ₹200 ಗಳಿಸುತ್ತಾನೆ ಎಂದಾದರೆ ಅದನ್ನು ಉದ್ಯೋಗ ಎಂದು ಪರಿಗಣಿಸಬೇಕೆ? ಬೇಡವೆ?' ಎಂದು ಪ್ರಶ್ನಿಸಿದ್ದರು. ಮೋದಿಯವರು ಉಲ್ಲೇಖಿಸುತ್ತಿರುವ 'ಉದ್ಯೋಗ', ಸಂಪಾದನೆ ಮತ್ತು ಕೇಂದ್ರದ ಯೋಜನೆಗಳ ಬಗ್ಗೆ ದ ವೈರ್ ವೆಬ್‍ಸೈಟ್‍ನಲ್ಲಿ ಪ್ರಕಟವಾದ ಬರಹ ಇಲ್ಲಿದೆ.

ಒಬ್ಬ ನಿರುದ್ಯೋಗಿ ದಿನಕ್ಕೆ ₹200 ಸಂಪಾದನೆ ಮಾಡಿದರೂ ಅದು ಆ ವ್ಯಕ್ತಿಗೆ ಘನತೆಯಿಂದ ಬದುಕಲು ಸಾಕಾಗುವುದಿಲ್ಲ. ಆದಾಗ್ಯೂ, ಆಗಸ್ಟ್ 2017ರಲ್ಲಿ ಬಿಡುಗಡೆಯಾದ ನೀತಿ ಆಯೋಗದ ಮೂರು ವರ್ಷಗಳ ಕಾರ್ಯ ಯೋಜನೆ ಪ್ರಕಾರ ನಿರುದ್ಯೋಗ ಎಂಬುದು ದೊಡ್ಡ ಸಮಸ್ಯೆಯಾಗಿದೆ. ದೇಶ ಈಗ ಎದುರಿಸುತ್ತಿರುವ ಸಮಸ್ಯೆ ನಿರುದ್ಯೋಗ ಅಲ್ಲ, ಉದ್ಯೋಗದ ಕೊರತೆ ಎಂದು ಈ ಕಾರ್ಯ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಹೀಗಿರುವಾಗ ಹೆಚ್ಚು ಆದಾಯವುಂಟು ಮಾಡುವ ಮತ್ತು ಹೆಚ್ಚು ಸಂಬಳದ ಕೆಲಸವನ್ನು ಸೃಷ್ಟಿಸಬೇಕಾಗುತ್ತೆ. ಇತ್ತ ಪ್ರಧಾನಿಯವರು ನೀತಿ ಆಯೋಗಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅದನ್ನೇ ಯಶಸ್ವಿ ಎಂದು ಬಿಂಬಿಸುತ್ತಿದ್ದಾರೆ. ಅಂದಹಾಗೆ ನೀತಿ ಆಯೋಗದ ಅಧ್ಯಕ್ಷರೂ ಪ್ರಧಾನಿಯವರೇ ಆಗಿದ್ದಾರೆ.

ಇನ್ನು ಮುದ್ರಾ ಯೋಜನೆ ಬಗ್ಗೆ ಹೇಳುವುದಾದರೆ ದೇಶದ ಯುವ ಸಮುದಾಯದಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಮತ್ತು ಈಗಾಗಲೇ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.  ಬ್ಯಾಂಕ್, ಖಾಸಗಿ ಬ್ಯಾಂಕ್ ಮತ್ತು  ಮೈಕ್ರೋ ಫಿನಾನ್ಸ್ ಸಂಸ್ಥೆಗಳ ಸಾಲ ಯೋಜನೆ ಸಂಯುಕ್ತವಾಗಿರುವ ಈ ಯೋಜನೆಯಲ್ಲಿ ಸಾಲವನ್ನು ಮೂರು  ವಿಭಾಗಗಳಾಗಿ ವಿಭಜಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ  ₹10 ಕೋಟಿಗಿಂತಲೂ ಹೆಚ್ಚು ಫಲಾನುಭವಿಗಳಿಗೆ ಸಾಲ ನೀಡಲಾಗಿದ. ಆದರೆ ಇದರಲ್ಲಿರುವ  ಶೇ.90ರಷ್ಟು ಫಲಾನುಭವಿಗಳು ಶಿಶು ವಿಭಾಗದಲ್ಲಿ ಸಾಲ ಪಡೆದಿದ್ದಾರೆ. ಈ ವಿಭಾಗದಲ್ಲಿ ₹50,000ಕ್ಕಿಂತ ಕಡಿಮೆ ಮೊತ್ತದ ಸಾಲ ನೀಡಲಾಗುತ್ತದೆ. ₹9 ಕೋಟಿಗಿಂತಲೂ ಹೆಚ್ಚು ಮಂದಿಗೆ ಇಷ್ಟೊಂದು ಕಡಿಮೆ ಹೂಡಿಕೆ ನೀಡಿದರೆ ಇದರಲ್ಲಿ ಉದ್ಯೋಗವಕಾಶವೂ ಉತ್ಕೃಷ್ಟವಾಗಿರುವುದಿಲ್ಲ,

ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಮಾರ್ಚ್  2015-ಮಾರ್ಚ್ 2017ರ ನಡುವಿನ ಅವಧಿಯಲ್ಲಿ ಮರುಪಾವತಿಸದ ಶೈಕ್ಷಣಿಕ ಸಾಲದಲ್ಲಿ ಶೇ. 47ರಷ್ಟು ಹೆಚ್ಚಳವುಂಟಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿತ್ತು. ಕನಿಷ್ಠ 5 ಬ್ಯಾಂಕ್‍ಗಳಲ್ಲಿ ವಸೂಲಾಗದ ಸಾಲಗಳು ದುಪಟ್ಟು ಆಗಿವೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಒಳ್ಳೆಯ ಕೆಲಸ ಸಿಗದೇ ಇರುವುದು ಎಂಬ ಕಾರಣ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಸಾಲ ಮಾಡಿದರೂ ಯುವ ಜನಾಂಗಕ್ಕೆ ಸಾಲ ತೀರಿಸಲು ಅಸಾಧ್ಯವಾಗುತ್ತದೆ. ಉದ್ಯೋಗದ ಅಭಾವವೂ ಇದಕ್ಕೆ ಕಾರಣ .

ಅಂದ ಹಾಗೆ ಪದವಿ ಪಡೆದ ಎಷ್ಟು ಮಂದಿ ವಿಶೇಷವಾಗಿ ಶೈಕ್ಷಣಿಕ ಸಾಲ ಪಡೆದವರಲ್ಲಿ ಎಷ್ಟು ಜನ ಮುದ್ರಾ ಸಾಲದ ಫಲಾನುಭವಿಗಳಾಗಿದ್ದಾರೆ ಎಂದು ನೋಡಬೇಕಾಗಿದೆ. ದೇಶದಲ್ಲಿರುವ ಉದ್ಯೋಗದ ಕೊರತೆಯ ಅಂಕಿ ಅಂಶಗಳ ಮೇಲೆ ಸರ್ಕಾರವೂ ಗಮನ ಹರಿಸಬೇಕಿದೆ. ನೋಟು ರದ್ದತಿ ನಂತರ ಎಷ್ಟು ಮಂದಿ ಜೀವನ ನಿರ್ವಹಣೆಗಾಗಿ ಮುದ್ರಾ ಸಾಲ ಪಡೆದುಕೊಂಡರು ಎಂಬುದರ ಬಗ್ಗೆ ಸರ್ಕಾರ ಮಾಹಿತಿ ನೀಡಬೇಕು.

ಉದ್ಯೋಗದ ಈ ಕಾಲಘಟ್ಟದಲ್ಲಿ ಕಡಿಮೆ ಮೌಲ್ಯದ ಮುದ್ರಾ ಸಾಲದ ಬಟವಾಡೆ ಮಾಡಿರುವುದನ್ನೇ ಯಶಸ್ಸು ಎಂದು ತಿಳಿದುಕೊಂಡಿರುವ ಪ್ರಧಾನಿ ಉದ್ಯೋಗ ಸೃಷ್ಟಿ ಬಗ್ಗೆ ಗಮನ ನೀಡಬೇಕಾದ ಅಗತ್ಯವಿದೆ.

ಮಹತ್ವಾಕಾಂಕ್ಷೆಯ ಭಾರತಕ್ಕಾಗಿ ಹೆಚ್ಚಿನ ಮೌಲ್ಯದ ಉದ್ಯೋಗ ಸೃಷ್ಟಿ ಮಾಡುವುದರ ಬಗ್ಗೆ ಮೋದಿ ಸರ್ಕಾರ ಯೋಜನೆ ಸಿದ್ಧಪಡಿಸಿದೆ ಎಂದು ಹೇಳಲಾಗುತ್ತದೆ. ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಮಹತ್ವಾಕಾಂಕ್ಷೆಯ ಯೋಜನೆಗಳಾಗಿದ್ದವು. ಇನ್ನೇನು ಕೆಲವೇ ದಿನಗಳಲ್ಲಿ ಬಜೆಟ್ ಮಂಡನೆಯಾಗಲಿದ್ದು ಈ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿ ಉದ್ಯೋಗ ಸೃಷ್ಟಿ ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದೆ.

ಮೋದಿ ಸರ್ಕಾರ ಮಹೋನ್ನತ ಯೋಜನೆಯಾದ ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್‍ಗಳಿಗೆ ಬೆಂಬಲ ನೀಡುತ್ತಿದ್ದು,  ₹10,000 ಕೋಟಿ ನಿಧಿಯನ್ನು ಇದಕ್ಕಾಗಿ ಮೀಸಲಿರಿಸಿದೆ. ಆದರೆ ಇಲ್ಲಿಯವರೆಗೆ ಕೇವಲ 75 ಸ್ಟಾರ್ಟ್ ಅಪ್‍ಗಳು ಆರಂಭವಾಗಿದ್ದು ಇದಕ್ಕಾಗಿ ವ್ಯಯಿಸಿದ ಹಣ ಕೇವಲ ₹605 ಕೋಟಿ!

ಯುಪಿಎ ಆಡಳಿತಾವಧಿಯಲ್ಲಿ ಹಲವಾರು ಸ್ಟಾರ್ಟ್ ಅಪ್‍ಗಳು ಹುಟ್ಟಿಕೊಂಡಿದ್ದು ಮಾತ್ರವಲ್ಲದೆ ಅವು ಯಶಸ್ಸು ಗಳಿಸಿ ಮನೆ ಮಾತಾಗಿ ಬಿಟ್ಟಿವೆ. ಪೇಟಿಎಂ, ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್, ಅರ್ಬನ್ ಲ್ಯಾಡರ್, ಪಾಲಿಸಿ ಬಜಾರ್, ಜಸ್ಟ್ ಡಯಲ್, ಬಿಗ್ ಬಾಸ್ಕೆಟ್, ರೆಡ್ ಬಸ್ ಮತ್ತು ಜೊಮೇಟೋ ಮೊದಲಾದ ಸ್ಟಾರ್ಟ್ ಅಪ್ ಗಳು ಈ ಅವಧಿಯಲ್ಲಿ ಆರಂಭವಾದವುಗಳಾಗಿವೆ.

2015ರಲ್ಲಿ ಪ್ರಧಾನಿ ಘೋಷಿಸಿದ ಮಹತ್ವಾಕಾಂಕ್ಷೆಯ ಇನ್ನೊಂದು ಯೋಜನೆ ಸ್ಟ್ಯಾಂಡ್ ಅಪ್ ಇಂಡಿಯಾ (ಸ್ವಾವಲಂಬಿ ಭಾರತ).  ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವು ಸೇರಿದಂತೆ ಇತರ ಉತ್ತೇಜನ ನೀಡಲು ಆರಂಭಿಸಿದ ಯೋಜನೆಯಾಗಿದೆ ಇದು. ಇಲ್ಲಿ  ₹10ಲಕ್ಷದಿಂದ ₹1 ಕೋಟಿ ವರೆಗೆ ಸಾಲ ನೀಡಲಾಗುತ್ತದೆ. ಒಂದು ಲಕ್ಷಕ್ಕಿಂತಲೂ ಹೆಚ್ಚು ಬ್ಯಾಂಕ್ ಶಾಖೆ ಮತ್ತು ₹17,000ಕ್ಕಿಂತಲೂ ಹೆಚ್ಚು ಸಹಾಯ ಕೇಂದ್ರಗಳಲ್ಲಿ ಈ ಯೋಜನೆಗಾಗಿ ಸೌಕರ್ಯ ಒದಗಿಸಲಾಗಿತ್ತು. 2017 ಡಿಸೆಂಬರ್‍‍ವರೆಗಿನ ಮಾಹಿತಿ ಪ್ರಕಾರ  ಈ ಯೋಜನೆಯ ಫಲಾನುಭವಿಗಳ ಸಂಖ್ಯೆ 35,0000. ಇವರಿಗೆ ನೀಡಿದ ಸಾಲದ ಮೊತ್ತ ₹5,658 ಕೋಟಿ.  ಒಂದು ಬ್ಯಾಂಕ್ ಶಾಖೆಯಲ್ಲಿ ಕನಿಷ್ಠ ಒಬ್ಬ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಗೆ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು.

ದೇಶವನ್ನು 'ಜಾಗತಿಕ ಉತ್ಪಾದನಾ ಕೇಂದ್ರ'ವಾಗಿ ರೂಪಿಸುವುದು ಹಾಗೂ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಮೂಲಕ ಆಂತರಿಕ ಜಿಡಿಪಿಯನ್ನು ಹೆಚ್ಚಿಸುವ ಉದ್ದೇಶದಿಂದ ಆರಂಭಿಸಿದ ಯೋಜನೆಯಾಗಿದೆ ಮೇಕ್ ಇನ್ ಇಂಡಿಯಾ. ಖಾಸಗಿ ವಲಯ ಮತ್ತು ರಕ್ಷಣಾ ವಲಯದಲ್ಲಿ ಉದ್ಯೋಗ ಸೃಷ್ಟಿಯೂ ಈ ಯೋಜನೆಯ ಉದ್ದೇಶವಾಗಿತ್ತು ಆದರೆ ಸರ್ಕಾರ ಕೊನೆಯ ಆರ್ಥಿಕ  ವರ್ಷಕ್ಕೆ ಕಾಲಿಡುತ್ತಿದ್ದಂತೆ ಮೇಕ್ ಇನ್ ಇಂಡಿಯಾ ಯೋಜನೆ ಉದ್ದೇಶಿಸಿದ ಫಲ ನೀಡಲಿಲ್ಲ. ರಕ್ಷಣಾ ವಲಯದಲ್ಲಿ ಹಲವಾರು  ಪ್ರಾಜೆಕ್ಟ್ ಗಳು ನೆನೆಗುದಿಗೆ ಬಿದ್ದಿವೆ.  ₹3.5 ಲಕ್ಷ ಕೋಟಿ ಮೌಲ್ಯದ ಹಲವಾರು ಪ್ರಾಜೆಕ್ಟ್  ಗಳು ಇನ್ನೂ ಆರಂಭಿಕ ಹಂತವನ್ನೂ ಇನ್ನೂ ದಾಟಿಲ್ಲ.

 ಉತ್ಪಾದನಾ ವಲಯದಲ್ಲಿ  2017ರ ಎರಡನೇ ತ್ರೈಮಾಸಿಕದಲ್ಲಿ ₹5131.39 ಬಿಲಿಯನ್‍ ಇದ್ದ ಜಿಡಿಪಿ ಮೂರನೇ ತ್ರೈಮಾಸಿಕದಲ್ಲಿ  ₹5355.42 ಬಿಲಿಯನ್‍ಗೆ ಏರಿದೆ. ಅಂದರೆ ನಿರೀಕ್ಷಿತ ಜಿಡಿಪಿಗೆ ಹತ್ತಿರವಾಗಿ ಶೇ.25 ಆಗಿದೆ. ಇಂಡಿಯಾ ಬ್ರೀಫಿಂಗ್ ವರದಿ ಪ್ರಕಾರ ಸೆಪ್ಟೆಂಬರ್ 2017ರಲ್ಲಿ ಈ ಯೋಜನೆಯಡಿಯಲ್ಲಿ ವ್ಯಯಿಸಿದ ಮೊತ್ತ ₹13.22 ಟ್ರಿಲಿಯನ್ ಆಗಿದೆ. ನೋಟು ರದ್ದಿತಿ ಮತ್ತು ಜಿಎಸ್‍ಟಿಯ ಅನುಷ್ಠಾನವೂ ಉತ್ಪಾದನಾ ವಲಯದ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದರ ಬಗ್ಗೆಯೂ ಇಲ್ಲಿ ಅರಿಯಬೇಕಿದೆ.

ಈ ಎಲ್ಲ ಯೋಜನೆಗಳು ವಿಫಲಗೊಂಡಿರುವುದರಿಂದ ಪ್ರಧಾನಿ ಅವರು ತಮ್ಮ ಗುರಿಯನ್ನೂ ಬದಲಿಸಬೇಕಾದ ಅನಿವಾರ್ಯ ಬಂದೊದಗಿದೆ. ಮಹತ್ವಾಕಾಂಕ್ಷೆಯ ಭಾರತದ ಗುರಿ ನೆಟ್ಟಿದ್ದ ಸರ್ಕಾರ ಈಗ ಎರಡು ಹೊತ್ತಿನ ಊಟಕ್ಕೆ ಅಗತ್ಯವಾಗಿರುವ ಸಂಪಾದನೆಯನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಪಾಠ ಮಾಡುತ್ತಿದೆ. ನೋಟು ರದ್ದತಿ, ಜಾಗತಿಕ ಗಂಡಾಂತರ ಅಥವಾ ಉತ್ಪಾದನೆ ಮತ್ತು ಕೃಷಿ ವಲಯದಲ್ಲಿನ ಕುಂಠಿತ ಅಭಿವೃದ್ದಿಯಿಂದಾಗಿ ನಿರುದ್ಯೋಗಿಯಾಗಿದ್ದರೆ, ಒಪ್ಪೊತ್ತಿನ ಊಟವೇ ಇಲ್ಲಿ ನೆಮ್ಮದಿ ನೀಡುತ್ತದೆ. ಈ ವಿಷಯವನ್ನು ಪ್ರಧಾನಿ ಹೆಮ್ಮೆ ಎಂದು ಪರಿಗಣಿಸಬಾರದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry