ವಿದ್ಯಾರ್ಥಿಗಳಿಗೆ ಉಚಿತ ವೈಫೈ

7

ವಿದ್ಯಾರ್ಥಿಗಳಿಗೆ ಉಚಿತ ವೈಫೈ

Published:
Updated:
ವಿದ್ಯಾರ್ಥಿಗಳಿಗೆ ಉಚಿತ ವೈಫೈ

ನವದೆಹಲಿ: ಸರ್ಕಾರದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳಿಗೆ ಆಗಸ್ಟ್‌ 15ರೊಳಗೆ ಉಚಿತವಾಗಿ ಹೈಸ್ಪೀಡ್‌ ಅಂತರ್ಜಾಲ ಸಂಪರ್ಕ ಮತ್ತು ವೈಫೈ ಸೌಲಭ್ಯ ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಹೈಸ್ಪೀಡ್‌ ಅಂತರ್ಜಾಲ ಸಂಪರ್ಕ ಒದಗಿಸಲು ಕೆಲವು ದೂರಸಂಪರ್ಕ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಹೇಳಿದೆ.

‘ದೂರ ಸಂಪರ್ಕ ಕಂಪನಿಗಳು ಅಥವಾ ಅಂತರ್ಜಾಲ ಸೇವಾ ಕಂಪನಿಗಳು ತಮ್ಮದೇ ವೆಚ್ಚದಲ್ಲಿ ಸಂಪರ್ಕ ಒದಗಿಸಬೇಕು ಎಂಬ ನಿರೀಕ್ಷೆ ಇದೆ. ಹಾಗಾಗಿ ಈ ಯೋಜನೆ ಅನುಷ್ಠಾನದಿಂದ ಸಂಸ್ಥೆ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ ಎಂದು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎಚ್‌ಆರ್‌ಡಿ ಬರೆದ ಪತ್ರದಲ್ಲಿ ಹೇಳಲಾಗಿದೆ.

ಪರವಾನಗಿ ಹೊಂದಿರುವ ಅಂತರ್ಜಾಲ ಮತ್ತು ದೂರಸಂಪರ್ಕ ಸೇವಾ ಕಂಪನಿಗಳನ್ನು ಸಂಪರ್ಕಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಫೆಬ್ರುವರಿ 15ರೊಳಗೆ ಶಿಕ್ಷಣ ಸಂಸ್ಥೆಗಳು ಈ ಕಂಪನಿಗಳನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಈ ಕಂಪನಿಗಳು ಯಾವುವು ಎಂದು ಈ ಪತ್ರದಲ್ಲಿ ತಿಳಿಸಲಾಗಿಲ್ಲ.

ಉಚಿತವಾಗಿ ಅಂತರ್ಜಾಲ ಮತ್ತು ವೈಫೈ ಸೌಲಭ್ಯ ನೀಡಲು ಆಸಕ್ತಿ ತೋರಿದ ಕಂಪನಿಗಳಲ್ಲಿ ರಿಲಯನ್ಸ್‌ ಜಿಯೊ ಸೇರಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಮಕ್ಕಳು ಶಾಲೆಗೆ: ಶಾಲೆಯಿಂದ ಹೊರಗೆ ಇರುವ ಮಕ್ಕಳನ್ನು ಔಪಚಾರಿಕ ಶಿಕ್ಷಣ ವ್ಯವಸ್ಥೆಯೊಳಗೆ ತರುವುದಕ್ಕಾಗಿ ಸೆಪ್ಟೆಂಬರ್‌ನಲ್ಲಿ ವಿಶೇಷ ಅಭಿಯಾನ ನಡೆಸಲು ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ) ನಿರ್ಧರಿಸಿದೆ.

‘ಶಾಲೆಯಿಂದ ಹೊರಗೆ ಇರುವ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಸೇರಿಸುವ ಕ್ರಿಯಾ ಯೋಜನೆಸಿದ್ಧವಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು’ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ರಾಜ್ಯ ಸರ್ಕಾರಗಳ ಜತೆ ಸೇರಿ ಈ ಅಭಿಯಾನವನ್ನು ಅನುಷ್ಠಾನಕ್ಕೆ ತರಲಾಗುವುದು. ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಶಾಲೆಯಿಂದ ಹೊರಗೆ ಇರುವ ಮಕ್ಕಳ ಸಮೀಕ್ಷೆಯನ್ನು ಹಿಂದೆ ನಡೆಸಲಾಗಿತ್ತು ಮತ್ತು ಅದು ಕಾಗದದಲ್ಲಿಯೇ ಉಳಿದಿತ್ತು. ಆದರೆ ಈ ಬಾರಿ ಹಾಗಾಗುವುದಿಲ್ಲ. ಶಾಲೆಯಿಂದ ಹೊರಗೆ ಇರುವ ಮಕ್ಕಳ ಸಮೀಕ್ಷೆ ಮತ್ತು ಅವರು ಶಾಲೆಗೆ ಸೇರುವುದನ್ನು ಖಚಿತಪಡಿಸಿಕೊಳ್ಳಲು ಸಮುದಾಯದ ಸಕ್ರಿಯ ಸಹಭಾಗಿತ್ವವೂ ಅಭಿಯಾನದಲ್ಲಿ ಇರುತ್ತದೆ ಎಂದು ಜಾವಡೇಕರ್‌ ತಿಳಿಸಿದ್ದಾರೆ.

ದೇಶದಲ್ಲಿ 70ರಿಂದ 80 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ ಎಂದು ವಿವಿಧ ವರದಿಗಳು ಹೇಳಿವೆ. ಇವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದಲ್ಲಿಯೇ ಇದ್ದಾರೆ. ಇನ್ನಷ್ಟು ವ್ಯವಸ್ಥಿತವಾದ ಸಮೀಕ್ಷೆ ನಡೆಸಿದರೆ ಶಾಲೆಯಿಂದ ಹೊರಗೆ ಇರುವ ಮಕ್ಕಳ ನಿಖರವಾದ ಸಂಖ್ಯೆ ದೊರೆಯಬಹುದು. ಅದು ಈಗಿನ ಅಂದಾಜಿಗಿಂತ ಹೆಚ್ಚಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಶಿಕ್ಷಣ ಸಲಹಾ ಮಂಡಳಿಯ (ಸಿಎಬಿಇ) ಇತ್ತೀಚಿನ ಸಭೆಯಲ್ಲಿ ಈ ವಿಚಾರದ ಬಗ್ಗೆ ಆಳವಾದ ಚರ್ಚೆ ನಡೆದಿದೆ. ಶಾಲೆಯಿಂದ ಹೊರಗೆ ಇರುವ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಸೇರಿಸುವ ಅಭಿಯಾನದಲ್ಲಿ ಸಂಪೂರ್ಣ ಬೆಂಬಲ ನೀಡುವುದಾಗಿ ರಾಜ್ಯಗಳು ಭರವಸೆ ನೀಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಷರತ್ತುಗಳು

* ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಕನಿಷ್ಠ 1 ಜಿಬಿ ಡಾಟಾ

* ಒಪ್ಪಂದದ ಅವಧಿಯ ಕೊನೆಯವರೆಗೆ ಇದರ ಪಾಲನೆ

* ಡಾಟಾ ವೇಗ 4 ಎಂಬಿಪಿಎಸ್‌ಗಿಂತ ಕಡಿಮೆ ಇರುವಂತಿಲ್ಲ

* ಪ್ರತಿ ವಿದ್ಯಾರ್ಥಿ ಎರಡು ಸಾಧನಗಳಿಗೆ (ಲ್ಯಾಪ್‌ಟಾಪ್‌/ಮೊಬೈಲ್‌) ಸೌಲಭ್ಯ ಪಡೆಯಬಹುದು

* ಸರ್ಕಾರದ ನಿಯಮಗಳಿಗೆ ಕಂಪನಿಯು ಬದ್ಧವಾಗಿರಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry