ಎನ್‌ಎಂಸಿ ಮಸೂದೆ: ತಿದ್ದುಪಡಿಗೆ ವೈದ್ಯರ ಒತ್ತಾಯ

7

ಎನ್‌ಎಂಸಿ ಮಸೂದೆ: ತಿದ್ದುಪಡಿಗೆ ವೈದ್ಯರ ಒತ್ತಾಯ

Published:
Updated:
ಎನ್‌ಎಂಸಿ ಮಸೂದೆ: ತಿದ್ದುಪಡಿಗೆ ವೈದ್ಯರ ಒತ್ತಾಯ

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ– 2017 ಸಮಗ್ರವಾಗಿಲ್ಲ, ದೇಶದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾದರೆ ಇದರಲ್ಲಿ ಕೆಲವೊಂದು ಮಾರ್ಪಾಡು ಮಾಡಬೇಕು ಎಂದು ನಗರದ ತಜ್ಞ ವೈದ್ಯರು ಒತ್ತಾಯಿಸಿದರು.

‘ಹಳೆಯ ತಪ್ಪುಗಳಿಂದ ನಾವು ಪಾಠ ಕಲಿಯಬೇಕು. ಆದರೆ, ಈ ಹೊಸ ಮಸೂದೆ ಭ್ರಷ್ಟಾಚಾರದ ಬಾಗಿಲುಗಳನ್ನು ಹಾಗೆಯೇ ತೆರೆದಿಟ್ಟಿದೆ. ಆಯುಷ್‌ ಮತ್ತು ಅಲೋಪಥಿ ಚಿಕಿತ್ಸೆ ಸಮ್ಮಿಳಿತಗೊಳಿಸುವುದು ಕೂಡ ಅವೈಜ್ಞಾನಿಕ’ ಎಂದು ಅಸೋಸಿಯೇಷನ್‌ ಆಫ್‌ ಹೆಲ್ತ್‌ಕೇರ್‌ ಪ್ರೊವೈಡರ್ಸ್‌ ಇಂಡಿಯಾ (ಎಎಚ್‌ಪಿಐ) ಅಧ್ಯಕ್ಷ ಡಾ. ಬಿ.ಎಸ್‌.ಅಜಯ ಕುಮಾರ್‌ ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತಾವಿತ ಮಸೂದೆಯಲ್ಲಿ ಆಯೋಗಕ್ಕೆ ಸರ್ಕಾರದಿಂದ ನಾಮನಿರ್ದೇಶನಗೊಳ್ಳುವವರ ಸಂಖ್ಯೆ ಶೇ 80ರಷ್ಟು ಇರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿದ್ದುಕೊಂಡು ಚುನಾಯಿತ ಪ್ರತಿನಿಧಿಗಳಾಗುವವರಿಗೆ ಶೇ 20ರಷ್ಟು ಅವಕಾಶ ನೀಡಲಾಗಿದೆ. ಇದು ಪ್ರಜಾತಂತ್ರದ ಆಶಯಗಳಿಗೆ ವಿರುದ್ಧ ಎಂದು ದೂರಿದರು.

‘ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಣಕ್ಕೆ ಪರವಾನಗಿ ನೀಡುವುದು, ಗುಣಮಟ್ಟ ಪರಿಶೀಲನೆ, ಮಾನ್ಯತೆ, ಆಡಳಿತ ಮತ್ತು ನಿಗಾ ವಹಿಸಲು ತಕ್ಷಣಕ್ಕೆ ಸ್ವಾಯತ್ತ ಸಂಸ್ಥೆ ನೇಮಕ ಮಾಡುವ ಅಗತ್ಯವಿದೆ. ಅದರಲ್ಲಿ ಸರ್ಕಾರದ ಕನಿಷ್ಠ ಮಟ್ಟದ ಪಾಲ್ಗೊಳ್ಳುವಿಕೆ ಇರಬೇಕು. ಆರೋಗ್ಯ ಕ್ಷೇತ್ರದಲ್ಲಿರುವವರ ಪ್ರಾತಿನಿಧ್ಯ ಹೆಚ್ಚು ಇರಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಈಗಾಗಲೇ ವೈದ್ಯರ ಕೊರತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ನಮ್ಮ ದೇಶದಲ್ಲಿ ಆರೋಗ್ಯ ವ್ಯವಸ್ಥೆ ತೀರಾ ಕೆಳಮಟ್ಟದಲ್ಲಿದೆ. ಬಾಂಗ್ಲಾ ದೇಶ, ಇರಾಕ್‌, ಇರಾನ್‌ಗಿಂತಲೂ ನಾವು ಕೆಳಮಟ್ಟದಲ್ಲಿದ್ದೇವೆ. ಇದು ತಲೆತಗ್ಗಿಸುವ ಸಂಗತಿ. ಇನ್ನು 5ರಿಂದ 10 ವರ್ಷಗಳೊಳಗೆ ನಮ್ಮ ದೇಶ ಜಗತ್ತಿನ ಅಗ್ರಸ್ಥಾನ ಅಥವಾ ಎರಡನೇ ಸ್ಥಾನಕ್ಕೆ ಏರಲು ಎನ್‌ಎಂಸಿ ಮಸೂದೆ ಪೂರಕವಾಗಿರಬೇಕು' ಎಂದು ಹೃದ್ರೋಗ ತಜ್ಞ, ಎಎಚ್‌ಪಿಐ ಸಂಸ್ಥಾ

ಪಕ ಸದಸ್ಯ ಡಾ. ದೇವಿಶೆಟ್ಟಿ ಹೇಳಿದರು.

‘ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ರಕ್ಷಣಾ ಕ್ಷೇತ್ರದ ಅಗತ್ಯಗಳ ನಡುವೆ ಅಜಗಜಾಂತರ ಇದೆ. ಈ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಎನ್‌ಎಂಸಿ ಕಾರ್ಯನಿರ್ವಹಿಸಬೇಕಾದರೆ ಸಮಗ್ರ ಕಾಯ್ದೆಯ ಅಗತ್ಯವಿದೆ. ಎಂ.ಡಿ, ಎಂ.ಎಸ್‌ ಮತ್ತು ಎನ್‌.ಬಿ.ಇಗಳನ್ನು ಸಮಾನವಾಗಿ ಕಾಣುವ ಕಾನೂನು ಬೇಕು’ ಎಂದು ರಾಷ್ಟ್ರೀಯ ಮಂಡಳಿಯಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಸಂಘದ (ಎಎನ್‌ಬಿಎಐ) ಅಧ್ಯಕ್ಷ ಡಾ. ವೆಂಕಟೇಶ ಕೃಷ್ಣಮೂರ್ತಿ ಆಗ್ರಹಿಸಿದರು.

ವೈದ್ಯಕೀಯ ಸಂಸ್ಥೆಗಳಲ್ಲಿ ಗುಣಮಟ್ಟದ ಪರಿಶೀಲನೆಗಾಗಿ ಎನ್‌ಎಂಸಿ ಮಸೂದೆಯನ್ನು ತರುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ಸದ್ಯ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಬೋಧಕರ ಕೊರತೆಯೂ ಹೆಚ್ಚಿದೆ. ಆದರೆ, ಯಾವುದೇ ರಾಜಿ ಮಾಡಿಕೊಳ್ಳಲು ಅವಕಾಶವಿರದಂತೆ ಗುಣಮಟ್ಟದ ವೈದ್ಯಕೀಯ ಪದವೀಧರರನ್ನು ತಯಾರಿಸುವುದಕ್ಕೂ ಈ ಮಸೂದೆ ಒತ್ತುಕೊಡಬೇಕು ಎಂದು ಮಾನ್ಯತೆ ಪಡೆದ ಆರೋಗ್ಯ ಸೇವಾ ಸಂಘಟನೆಗಳ ಒಕ್ಕೂಟದ  (ಸಿಎಎಚ್‌ಒ) ಜಂಟಿ ಕಾರ್ಯದರ್ಶಿ ಡಾ. ವಿ.ನಾಗೇಂದ್ರನಾಥ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry