ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವು ಚೆಲುವೆಲ್ಲ ನಂದೆಂದಿತು

Last Updated 24 ಜನವರಿ 2018, 7:20 IST
ಅಕ್ಷರ ಗಾತ್ರ

ತುಮಕೂರು: ಹೂವೇ ಹೂವೇ ಹೂವೇ ಹೂವೇ ನಿನ್ನೀ ನಗುವಿಗೇ ಕಾರಣವೇನೇ ಸೂರ್ಯನ ನಿಯಮಾನೇ.. ಓಹೋ...ಚಂದ್ರನ ನೆನಪೇನೇ... ಹೀಗೆ ಹೂವಿನ ಚೆಲುವು ಮತ್ತು ನಗುವನ್ನು ಜ.26ರಿಂದ 28ರವರೆಗೆ ನಾಗರಿಕರು ಭರಪೂರ ಕಣ್ತುಂಬಿಕೊಳ್ಳಲು ಸದಾವಕಾಶ ದೊರೆಯಲಿದೆ. ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆಯಲಿರುವ ಫಲ‍ಪುಷ್ಪ ಪ್ರದರ್ಶನ ನಾಗರಿಕರಿಗೆ ಈ ಸುವರ್ಣಾವಕಾಶ ಒದಗಿಸಿದೆ.

ಪ್ರದರ್ಶನಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಜರ್ಬೆರಾ, ಮಾರಿಗೋಲ್ಡ್, ಕೋಲಿಯಸ್, ಆರ್ಕಿಡ್‌ ಸೆಲೇಷಿಯಾ, ಗುಲಾಬಿ, ಚೆಂಡು ಹೂ ಹೀಗೆ 20ಕ್ಕೂ ಹೆಚ್ಚು ನಮೂನೆಯ ಹೂಗಳು ಪ್ರದರ್ಶನದಲ್ಲಿ ಸಹೃದಯಿಗಳ ಕಣ್ಣಿಗೆ ಮತ್ತು ಮನಕ್ಕೆ ಮುದ ನೀಡಲಿವೆ. ಇಲಾಖೆ ಅಂಗಳದಲ್ಲಿ ಒಂದು ಕಡೆ ಹೂ ಕುಂಡಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಮತ್ತೊಂದು ಕಡೆ ಕಣ್ಣು ಕೋರೈಸುವಂತೆ ಜೋಡಿಸಿಡಲಾಗುತ್ತಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮದುವೆ ಮನೆಯ ಸಂಭ್ರಮ.

ಕುಂಡದಲ್ಲಿ ಬೆಳೆಸಿದ ಅಲಂಕಾರಿಕ ಗಿಡಗಳು, ತರಕಾರಿಗಳು, ಹಣ್ಣುಗಳ ಸ್ಪರ್ಧೆ, ಇಕೆಬಾನ ಸ್ಪರ್ಧೆ, ಪುಷ್ಪಭಾರತಿ (ಹೂವುಗಳಲ್ಲಿ ರಂಗೋಲಿ ಸಿದ್ಧಪಡಿಸಿರುವುದು), ಬೋನ್ಸಾಯ್, ತರಕಾರಿ, ಕಟ್ ಫ್ಲವರ್ ಜೋಡಣೆ, ಪುಷ್ಪ ಕೇಶಾಲಂಕಾರ ಸ್ಪರ್ಧೆಗಳನ್ನು ಬುಧವಾರದಿಂದ (ಜ.24) ಸರದಿ ಪ್ರಕಾರ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೂವು, ತರಕಾರಿ, ರೈತರ ಬೆಳೆ, ಆಲಂಕಾರಿಕ ತೋಟ ಹೀಗೆ ನಾನಾ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 110 ಮಂದಿಗೆ ಪ್ರಥಮ ಮತ್ತು 110 ಮಂದಿಗೆ ದ್ವಿತೀಯ ಬಹುಮಾನದ ಸದಾವಕಾಶವೂ ಇದೆ.

ರೈತರಿಗೆ ಮತ್ತು ನಾಗರಿಕರಿಗೆ ಮಾಹಿತಿ ನೀಡಲು ವಿವಿಧ ಇಲಾಖೆಗಳ ಮಳಿಗೆಗಳನ್ನು ತೆರೆಯಲಿವೆ. ಸಿರಿಧಾನ್ಯ, ಹಲಸಿನ ಖಾದ್ಯಗಳ, ಸಂಘ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳು ಸಹ ಕಾಣುವ ಅವಕಾಶ ನಾಗರಿಕರಿಗೆ ಒದಗಿ ಬರಲಿದೆ.  ತೋವಿನಕೆರೆಯ ಹಳ್ಳಿಸಿರಿ ಸ್ವಸಹಾಯ ಸಂಘದ ಮಹಿಳೆಯರ ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಳಿಗೆ ಆರಂಭಿಸುವ ಮುಂಚೂಣಿಯಲ್ಲಿ ಇವೆ.

‘ಕೈ ತೋಟ, ಮನೆ ಅಲಂಕಾರ ತೋಟ, ರಾಕ್ ಗಾರ್ಡನ್... ಹೀಗೆ ತೋಟ ಮತ್ತು ಉದ್ಯಾನದ ಸ್ಪರ್ಧೆಗಳಿಗೆ 19 ಮಂದಿ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಮಧುಗಿರಿಯ ಕಾರ್ಡಿಯಲ್ ಶಾಲೆಯೂ ಸೇರಿದೆ. ಹೆಸರು ನೋಂದಾಯಿಸಿರುವವರ ಮನೆಗಳಿಗೆ ನಮ್ಮ ಇಲಾಖೆಯ ತೀರ್ಪುಗಾರರ ತಂಡ ಭೇಟಿ ನೀಡಿ ವೀಕ್ಷಿಸಿದೆ. ಅತ್ಯುತ್ತಮ ತೋಟಕ್ಕೆ ಬಹುಮಾನ ನೀಡಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುವರು. ಪ್ರತಿ ತಾಲ್ಲೂಕಿನಿಂದ ಬರುವ ಪ್ರದರ್ಶಿಕೆಗಳಲ್ಲಿ ಉತ್ತಮವಾದ ಎರಡನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತದೆ.

ತೋಟಗಾರಿಕೆ ಇಲಾಖೆಯ ಆವರಣವನ್ನು ಒಮ್ಮೆ ಸುತ್ತಿ ಬಂದರೆ ಸಾಕು ಪ್ರದರ್ಶನ ಕಳೆಯನ್ನು ಊಹಿಸಬಹುದು. ಪ್ರದರ್ಶನದ ಜತೆ ಜತೆಯಲ್ಲಿಯೇ ಸಾಂಸ್ಕೃತಿಕ ರಸದೌತಣವನ್ನೂ ಸವಿಯಬಹುದು. ನಿತ್ಯ ಸಂಜೆ ಸಂಗೀತ, ಸಾಂಸ್ಕೃತಿಕ, ಜಾದೂ, ರಸಮಂಜರಿ ಕಾರ್ಯಕ್ರಮ ಪ್ರದರ್ಶನದ ಸೊಬಗನ್ನು ಇಮ್ಮಡಿಗೊಳಿಸಲಿವೆ. ಅಂದಹಾಗೆ ಈ ಪ್ರದರ್ಶನಕ್ಕೆ ಎಲ್ಲರಿಗೂ ಉಚಿತ ಪ್ರವೇಶ.

ಬರಸೆಳೆಯುವ ಸಿದ್ಧರ‌ ಬೆಟ್ಟ

ಪ್ರದರ್ಶನದ ಪ್ರಮುಖ ಆಕರ್ಷಣೆ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟ. ಸಿದ್ಧರ ಬೆಟ್ಟದ ಮಾದರಿಯನ್ನು ಮೂರು ದಿನಗಳಿಂದ ಮೈಸೂರಿನ ಕಲಾವಿದರು ಸಿದ್ಧಗೊಳಿಸುತ್ತಿದ್ದಾರೆ. 13 ಅಡಿ ಎತ್ತರ 30 ಅಡಿ ಅಗಲದಲ್ಲಿ ಬೆಟ್ಟದ ಮಾದರಿ ರೂಪು ಪಡೆಯುತ್ತಿದೆ. ಇಲ್ಲಿ ನಾಲ್ಕೂವರೆ ಅಡಿ ಎತ್ತರದ ಶಿವಲಿಂಗ ಮತ್ತು ಗುಹೆ ಇರಲಿವೆ. ಕಳೆದ ಬಾರಿಯ ಎಡೆಯೂರು ಸಿದ್ಧಲಿಂಗೇಶ್ವರರು ಮತ್ತು ಹುತ್ತದ ಮಾದರಿ ಪ್ರದರ್ಶನದಲ್ಲಿ ಇತ್ತು. ಮಾದರಿ ನಿರ್ಮಾಣಕ್ಕೆ ಡೈರಿ ಡೇ ಪ್ರಾಯೋಜಕತ್ವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT