ಪರವಾನಗಿ ಇಲ್ಲದ ವಿದ್ಯಾರ್ಥಿಗಳಿಗೆ ಬೈಕ್‌ ನೀಡದಿರಿ

7

ಪರವಾನಗಿ ಇಲ್ಲದ ವಿದ್ಯಾರ್ಥಿಗಳಿಗೆ ಬೈಕ್‌ ನೀಡದಿರಿ

Published:
Updated:

ಕೆಜಿಎಫ್‌: ‘ಪರವಾನಗಿ ಇಲ್ಲದ ವಿದ್ಯಾರ್ಥಿಗಳಿಗೆ ಪೋಷಕರು ಬೈಕ್‌ ಮತ್ತಿತರ ವಾಹನ ನೀಡಬಾರದು’ ಎಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ.ಜಗದೀಶ್ವರ ಹೇಳಿದರು.

ರಾಬರ್ಟಸನ್‌ಪೇಟೆಯ ಭಗವಾನ್‌ ಮಹಾವೀರ ಜೈನ್‌ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮಕ್ಕಳು ಮಾಡುವ ತಪ್ಪಿಗೆ ಪೋಷಕರು ಬೆಲೆ ತೆರಬೇಕು. ವಾಹನ ಪರವಾನಗಿ ಇಲ್ಲದಿದ್ದರೆ ಇನ್ಸೂರೆನ್ಸ್ ಕಂಪನಿಗಳು ಪರಿಹಾರ ನೀಡುವುದಿಲ್ಲ ಎಂದರು.

ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿದ ಪ್ರಕರಣವೊಂದರಲ್ಲಿ ಬಾಲಕನ ತಂದೆ ₹ 14 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯವೊಂದು ಆದೇಶ ನೀಡಿತ್ತು. ಪರಿಹಾರ ನೀಡಬೇಕಾದರೆ ಮನೆ ಕೂಡ ಜಪ್ತಿ ಮಾಡಬೇಕಾಯಿತು. ಮಗು ಮಾಡಿದ ತಪ್ಪಿಗೆ ದೊಡ್ಡ ಅನಾಹುತ ಸಂಭವಿಸಿತು. ಇಂತಹ ಪ್ರಕರಣಗಳು ಸಾಕಷ್ಟಿವೆ ಎಂದರು.

ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು ಎಂದು ಮೂರು ವರ್ಷದ ಹಿಂದೆಯೇ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಹೆಚ್ಚು ಹಣ ನೀಡಿ ಬೈಕ್ ಖರೀದಿ ಮಾಡುವವರು ಸಣ್ಣ ಮೊತ್ತ ನೀಡಿ ಹೆಲ್ಮೆಟ್‌ ಖರೀದಿಸಲು ಹಿಂಜರಿಯಬಾರದು. ಐಎಸ್‌ಐ ಗುರುತಿನ ಹೆಲ್ಮೆಟ್ ಧರಿಸಿದರೆ ಇನ್ಸೂರೆನ್ಸ್ ಕಂಪನಿಗಳು ವಿಮಾ ಹಣ ಕೂಡ ನೀಡುತ್ತವೆ ಎಂಬುದನ್ನು ಗಮನಿಸಬೇಕು ಎಂದರು.

ಡಿವೈಎಸ್ಪಿ ಬಿ.ಎಲ್‌.ಶ್ರೀನಿವಾಸಮೂರ್ತಿ ಮಾತನಾಡಿ, ರಸ್ತೆ ಅಪಘಾತದಲ್ಲಿ ಹೆಚ್ಚು ಜನ ಪ್ರಾಣ ಬಿಡುತ್ತಿರುವುದು ಹೆಲ್ಮೆಟ್‌ ಧರಿಸದೆ ಇರುವುದೇ ಕಾರಣವಾಗಿದೆ. ಸ್ಟೈಲ್‌ ಮಾಡಲು ಬಿಟ್ಟು, ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಫುಟ್‌ಪಾತ್‌ನಲ್ಲಿ ಹೆಲ್ಮೆಟ್‌ ಖರೀದಿ ಮಾಡದೆ, ಐಎಸ್‌ಐ ಗುರುತು ಇರುವ ಹೆಲ್ಮೆಟ್ ಖರೀದಿಸಬೇಕು ಎಂದರು.

ನ್ಯಾಯಾಧೀಶರಾದ ದಯಾನಂದ, ಎಚ್‌.ಆರ್.ರವಿಕುಮಾರ್‌, ರೂಪಾ, ಲೋಕೇಶ್‌, ನಾಗೇಶ್‌ ನಾಯಕ್‌, ವಕೀಲರ ಸಂಘದ ಅಧ್ಯಕ್ಷ ಹರಿನಾಥ್, ಪ್ರಾಂಶುಪಾಲೆ ಡಾ.ರೇಖಾ ಸೇಥಿ, ರೋಟರಿ ಸಂಸ್ಥೆಯ ಡಾ.ಚಕ್ರವರ್ತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry