ಪಿಚ್ಚರ್ ನೋಡಿ

7

ಪಿಚ್ಚರ್ ನೋಡಿ

Published:
Updated:
ಪಿಚ್ಚರ್ ನೋಡಿ

ಇರಾನ್‌ನ ಖ್ಯಾತ ನಿರ್ದೇಶಕ ಮಜೀದ್ ಮಜೀದಿ ನಿರ್ದೇಶನದ ಚಿತ್ರ ಚಿಲ್ಡ್ರನ್‌ ಆಫ್‌ ಹೆವನ್‌. ‘ದೊಡ್ಡವರ’ ವ್ಯಾವಹಾರಿಕ ಜಗತ್ತಿನ ಲೆಕ್ಕಾಚಾರಗಳಿಗೆ ಮಕ್ಕಳ ಮುಗ್ಧ ಜಗತ್ತು ನಲುಗುವ ಕಥೆಯನ್ನು ಅತ್ಯಂತ ನವಿರಾಗಿ ಹೇಳುವ ಸಿನಿಮಾ ಇದು.

ಅಲಿ ಏಳೆಂಟು ವರ್ಷದ ಪೋರ. ಅವನಿಗೆ ಜೆಹ್ರಾ ಎಂಬ ನಾಲ್ಕೈದು ವರ್ಷದ ಪುಟ್ಟ ತಂಗಿ ಇದ್ದಾಳೆ. ಮನೆ ಬಾಡಿಗೆ ಕಟ್ಟಲೂ ಹಣ ಇಲ್ಲದ ಬಡ ಕುಟುಂಬ ಅವರದು.

ಒಂದು ದಿನ ತಂಗಿಯ ಕೆಂಪು ಶೂಗಳನ್ನು ರಿಪೇರಿಗೆಂದು ತೆಗೆದುಕೊಂಡು ಹೋದ ಅಲಿ ಅದನ್ನು ಕಳೆದುಬಿಡುತ್ತಾನೆ. ಮನೆಯಲ್ಲಿ ಈ ವಿಷಯ ಗೊತ್ತಾದರೆ ಅಪ್ಪನಿಂದ ಏಟು ಬೀಳುವುದು ಖಚಿತ ಎಂದು ತಂಗಿಯ ಬಳಿ ಗುಟ್ಟು ಕಾಪಾಡುವಂತೆ ಕೇಳಿಕೊಳ್ಳುತ್ತಾನೆ. ಅವಳೂ ಒಪ್ಪಿಕೊಳ್ಳುತ್ತಾಳೆ.

ಹೀಗೆ ಕಳೆದು ಹೋದ ಒಂದು ಜೊತೆ ಶೂ ಸುತ್ತಲೇ ಮಕ್ಕಳಿಬ್ಬರ ಪ್ರಯಾಸದ ಕಥನವನ್ನು ಕಟ್ಟುತ್ತ ಹೋಗುತ್ತಾರೆ ನಿರ್ದೇಶಕರು. ಶೂ ಕಾಣೆಯಾಗಿರುವ ಸಂಗತಿಯನ್ನು ಮರೆಮಾಚಲು ಅಲಿಯ ಶೂವನ್ನೇ ತಂಗಿ ದಿನವು ಸಂಜೆ ಹಾಕಿಕೊಂಡು ಶಾಲೆಗೆ ಹೋಗುವುದು ಎಂದು ಒಪ್ಪಂದ ಮಾಡಿಕೊಳ್ಳುತ್ತಾರೆ.

ಮಕ್ಕಳ ಎಳೆ ಮನಸ್ಸಲ್ಲಿನ ತಾಜಾ ಕನಸುಗಳು ಬಡತನದ ಬೇಗೆಗೆ ಬಾಡುವುದನ್ನು ಮಜೀದ್‌ ಈ ಸಿನಿಮಾದಲ್ಲಿ ಎಲ್ಲೂ ಗೋಳು ಅನಿಸದ ಹಾಗೆಯೇ ಹೇಳಿದ್ದಾರೆ. ಕಾಣೆಯಾಗಿರುವ ಶೂ, ಜಗತ್ತಿನ ಎಲ್ಲ ಮಕ್ಕಳ ಭಗ್ನಕನಸಿನ ಪ್ರತೀಕವಾಗಿ, ಇಲ್ಲದವರ ಬದುಕಿನ ದಾರುಣತೆಯ ಸಂಕೇತವಾಗಿ ಮನಸ್ಸಲ್ಲಿ ಕೂತು ಬಿಡುತ್ತದೆ.  ಈ ಸಿನಿಮಾದ ಕೊನೆಯೂ ಅಷ್ಟೇ ಅರ್ಥಪೂರ್ಣವಾಗಿದೆ. 

ನಾಲ್ಕು ಕಿ.ಮೀ. ದೂರದ ಓಟದ ಸ್ಪರ್ಧೆಯೊಂದರಲ್ಲಿ ಮೂರನೇ ಬಹುಮಾನ ಬಂದವರಿಗೆ ಒಂದು ಜೊತೆ ಶೂ ಬಹುಮಾನ ಇರುತ್ತದೆ. ಇದನ್ನು ಕೇಳಿಸಿಕೊಂಡ ಅಲಿ, ತನ್ನ ತಂಗಿಗೆ ಆ ಶೂವನ್ನು ಗೆದ್ದುಕೊಡಲು ಬರಿಗಾಲಿನಲ್ಲಿ ಓಡುತ್ತಾನೆ. ಅವನಿಗೆ ಮೊದಲನೇ ಸ್ಥಾನ ಬರುವ ಇಚ್ಛೆ ಇಲ್ಲ. ಎರಡನೇ ಸ್ಥಾನದತ್ತಲೂ ಗಮನ ಇಲ್ಲ. ಮೂರನೇ ಸ್ಥಾನವೇ ಬರಬೇಕು. ಆದರೆ ಅಚಾನಕ್ಕಾಗಿ ಅಲಿ ಮೊದಲಿಗನಾಗಿಬಿಡುತ್ತಾನೆ. ಅಲ್ಲಿಯೂ ಅವನಿಗೆ ಶೂ ತಪ್ಪಿಹೋಗುತ್ತದೆ. ಹಾಗೆಯೇ ಮೊದಲ ಬಹುಮಾನ ಬಂದದ್ದು ಅವನಲ್ಲಿ ಖುಷಿಗಿಂತ ದುಃಖವನ್ನೇ ಹೆಚ್ಚಾಗಿ ತರುತ್ತದೆ.

ಹೀಗೆ ಮಕ್ಕಳ ಬದುಕಿನ ಕಥೆ ಹೇಳುತ್ತಲೇ ನಿರ್ದೇಶಕರು ದೊಡ್ಡವರಿಗೂ ಹಲವು ಮಾನವೀಯ ಪಾಠಗಳನ್ನು ಪಾಠ ಎನಿಸದ ರೀತಿಯಲ್ಲಿ ಹೇಳಿದ್ದಾರೆ.

https://goo.gl/JDMrqE ಕೊಂಡಿ ಬಳಸಿ ಅಂತರ್ಜಾಲದಲ್ಲಿ ಈ ಚಿತ್ರ ವೀಕ್ಷಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry