ಈ ವರ್ಷ ಇದೇ ನನ್ನ ನಿರ್ಧಾರ

7

ಈ ವರ್ಷ ಇದೇ ನನ್ನ ನಿರ್ಧಾರ

Published:
Updated:
ಈ ವರ್ಷ ಇದೇ ನನ್ನ ನಿರ್ಧಾರ

ಸಾಮಾಜಿಕ ಹಿತ ನನ್ನ ಹೊಣೆ

ವೈಯಕ್ತಿಕ ಆಸೆ, ಕನಸುಗಳೊಂದಿಗೆ ಒಂದಷ್ಟು ಸಮಷ್ಟಿಯ ಹಿತಕ್ಕೂ ಮನಸ್ಸು ಮಾಡಿದರೆ ಸಂತೃಪ್ತಿ ಸಿಗುತ್ತದೆ ಎಂದು ನಂಬಿದವನು ನಾನು. ಅದೇ ಈ ವರ್ಷದ ಗುರಿ ಕೂಡ.

ಇಡೀ ವಿಶ್ವವೇ ಅಂಗೈಯಲ್ಲಿರುವ ಕಾಲ ಇದು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದಿರುವ ಹಾಗೆ ಮೂಲಭೂತ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ನಮ್ಮದು ಆಮೆಯ ನಡಿಗೆಯೆಂದುಕೊಳ್ಳಬೇಕೇನೊ? ಇನ್ನು ಜನಸಂಖ್ಯಾ ಸ್ಫೋಟ ಎಲ್ಲ ಸಮಸ್ಯೆಗಳಿಗೆ ತಾಯಿ. ಬಯಲು ಮುಕ್ತ ಶೌಚಾಲಯ, ಪರಿಸರ ರಕ್ಷಣೆಗೆ ಮಿತವಾದ ವಾಹನ ಬಳಕೆಯ ಅನುಸರಣೆಯಿಂದ ಪರಿಸರಸ್ನೇಹಿಯಾಗಿ ಬದುಕುವ ಹೊಣೆಗಾರಿಕೆ ನಮ್ಮ ಮೇಲಿದೆ.

ಇದೇ ನನ್ನ ಈ ವರ್ಷದ ಮೊದಲ ಆದ್ಯತೆ. ಈ ಹಾದಿಯಲ್ಲಿ ನಡೆಯುವ, ಅದನ್ನು ಈಡೇರಿಸುವ ಪ್ರಯತ್ನವನ್ನು ಮಾಡುವ ಎರಡು ಆಶಯಗಳನ್ನು ವರ್ಷದುದ್ದಕ್ಕೂ ಕಟ್ಟಿಕೊಂಡು ಸಾಗಿ, ಸಣ್ಣ ಪ್ರಮಾಣದಲ್ಲಿಯಾದರೂ ಈಡೇರಿಸುವೆ.

–ಎಂ.ಜೆ ರುದ್ರಮೂರ್ತಿ ಚಿತ್ರದುರ್ಗ

***

ಕಳೆಯಬೇಕು ಕತ್ತಲೆ

ನೂರು ಕಷ್ಟಗಳು ಬಂದರೂ ಅವುಗಳನ್ನೆಲ್ಲ ಹುಗ್ಗಿಯಂತೆ ಸಿಹಿಯಾಗಿಸಿಕೊಳ್ಳಬೇಕೆಂಬ ಅದಮ್ಯ ಉತ್ಸಾಹ, ಜೀವನಪ್ರೀತಿ ರೂಢಿಸಿಕೊಳ್ಳುವ ನಿರ್ಧಾರ ಈ ವರ್ಷದ್ದು. ನನ್ನಲ್ಲಿಯ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿಕೊಂಡು ನಿಸರ್ಗದಂತೆ ಸದಾ ಚೈತನ್ಯಶೀಲವಾಗಿರಬೇಕೆಂಬ ಆಶಯ ಮನಸ್ಸು ತುಂಬಿದೆ.

ನಾನೊಬ್ಬ ಕನ್ನಡ ಉಪನ್ಯಾಸಕಿ. ನನ್ನ ಬಳಿ ಕಲಿಯಲು ಬಂದ ಮಕ್ಕಳ ಬದುಕಲ್ಲಿ ಜ್ಞಾನದೀವಿಗೆಯಾಗಿ ಅವರ ಏಳಿಗೆಗೆ ಒತ್ತಾಸೆಯಾಗಿ ನಿಲ್ಲಬೇಕೆಂಬ ಹಂಬಲ ನನ್ನದು. ಕಲಿಕೆಯಲ್ಲಿ ಅವರಿಗೆ ಪ್ರೀತಿ ಹುಟ್ಟುವಂತೆ ಮಾಡಿ ವಿದ್ಯಾರ್ಥಿಗಳ ಯಶಸ್ಸಿಗೆ ಮಾರ್ಗ ತೋರಬೇಕು, ಬಡತನದಲ್ಲಿ ಬೆಂದು ಬಂದ ಮಕ್ಕಳೆದೆಗೆ ಅಕ್ಷರ ಕಲಿಸಿ ಈ ವರ್ಷವನ್ನು ಸಾರ್ಥಕ ಸಾಧನೆಯ ವರ್ಷವಾಗಿಸಿಕೊಳ್ಳಬೇಕೆಂಬ ನಿರ್ಧಾರವನ್ನು ಕೈಗೊಂಡಿರುವೆ.⇒

–ಗೀತಾ ಶೇಖರ ಸಜ್ಜನ ಹುಬ್ಬಳ್ಳಿ

***

ಆಹಾರ ಪದ್ಧತಿ ಬದಲಿಸುವೆ

‘ಕತ್ತೆ ತರಹ ದುಡಿಯಬೇಕು, ಆನೆ ತರಹ ತಿನ್ನಬೇಕು, ಹೆಬ್ಬಾವು ಮಲಗಿದಂತೆ ಮಲಗಬೇಕು’ ಎಂಬ ಗಾದೆ ಮಾತೊಂದಿದೆ. ನಾನು ಬರೀ ಕತ್ತೆ ಪಾಲಿಸೀನ ಪಾಲಿಸಿದ್ರೆ ಸರಿಯಾಗಲ್ಲ. ಪೂರ್ತಿ ನಿಯಮವನ್ನೇ ಈ ಹೊಸ ವರ್ಷ ಪಾಲಿಸಿದರೆ ಎಲ್ಲಾ ಆಯಾಮಗಳಿಂದ ನನಗೆ ಒಳಿತಾಗುವುದು ಎಂದು ನನಗೇ ಅನ್ನಿಸುತ್ತಿದೆ. ಈಗ ಕೆಲಸದ ಜೊತೆಗೆ ಆರೋಗ್ಯಕ್ಕೂ ಮಹತ್ವ ಕೊಡಬೇಕಾದ ಜರೂರತ್ತಿದೆ ನೋಡಿ. ಈ ಬಾರಿ ಆಹಾರ ಆರೋಗ್ಯಕ್ಕಾಗಿ ಸರಳ ಸೂತ್ರ ಅಳವಡಿಸಿಕೊಂಡು, ಹೇರಳವಾಗಿ ನೀರು ಕುಡಿದು, ಹಸಿ ತರಕಾರಿ, ಸೊಪ್ಪು, ಹಣ್ಣು, ಸಿರಿಧಾನ್ಯಗಳು ಇತ್ಯಾದಿಯನ್ನು ತಿಂದು ಆರೋಗ್ಯವಾಗಿರಬೇಕೆಂದುಕೊಂಡಿದ್ದೇನೆ.

ಸಣ್ಣವಳಿದ್ದಾಗ ಹೇಗಿದ್ದೆ ಆರೋಗ್ಯವಂತಳಾಗಿ ನಾನು ಎಂದು ನೆನೆಸಿಕೊಂಡರೆ ಸಾಕು, ಹುಣಸೆಹಣ್ಣು, ಬೋರೆಹಣ್ಣು, ಸೀಬೆಕಾಯಿ, ಪರಂಗಿಹಣ್ಣು, ಬಾಳೆಹಣ್ಣು ಎಲ್ಲಾವು ನೆನಪಿನ ಬುತ್ತಿ ಬಿಚ್ಚಿಡುತ್ತವೆ.

ಆರೋಗ್ಯ ಕೆಡಿಸಿಕೊಂಡು ಆಸ್ಪತ್ರೆ ಕಟ್ಟೋಕ್ಕೆ ನೆರವು ನೀಡುತ್ತಿರುವುದನ್ನು ನಿಲ್ಲಿಸಿ ಪೋಷಕಾಂಶಭರಿತ ಆಹಾರ ಸೇವನೆ ಮಾಡಬೇಕೆಂಬುದೇ ನನ್ನ ಗುರಿ. ಅದಕ್ಕೆ ತಕ್ಕಂತೆ ದೈಹಿಕ ದಂಡನೆ, ಸರಳ ನಡಿಗೆ, ಧ್ಯಾನ, ಚಿಂತನೆ ಇವಕ್ಕೂ ಮಹತ್ವ ನೀಡುವವಳಿದ್ದೇನೆ. ನುಗ್ಗೇಸೊಪ್ಪು, ಚಕ್ರಮುನಿ ಸೊಪ್ಪು, ಕರಿಬೇವಿನ ಸೊಪ್ಪಿಗೆ ಈ ವರ್ಷದ ರಾಯಭಾರತ್ವ ನೀಡಿದ್ದೇನೆ. ಹೊರಗಿನ ತಿಂಡಿ ತಿನಿಸುಗಳನ್ನು ನಿಷಿದ್ಧ ಮಾಡುವ ಯೋಚನೆಯೂ ಇದೆ. ಏನಂತಿರಿ? ನನ್ನ ಹೊಸ ವರ್ಷದ ತೀರ್ಮಾನಕ್ಕೆ?

–ಜ್ಯೋತಿ. ಬಿ.ಪಿ. ತುಮಕೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry