ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಸಡಗರದ ಅಂತರಘಟ್ಟಮ್ಮ ರಥೋತ್ಸವ

Last Updated 24 ಜನವರಿ 2018, 10:56 IST
ಅಕ್ಷರ ಗಾತ್ರ

ಬೀರೂರು: 'ಜನ-ಜಾನುವಾರುಗಳ ರಕ್ಷಕಿ' ಎಂಬ ಅಭಿದಾನದ ಗ್ರಾಮದೇವತೆ ಅಂತರಘಟ್ಟಮ್ಮನವರ ರಥೋತ್ಸವವು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರದಿಂದ ನೆರವೇರಿತು.

ಸಂಪ್ರದಾಯದಂತೆ ಮಾಘ ಶುದ್ಧ ಹುಣ್ಣಿಮೆಗೆ ಮೊದಲು ಬರುವ ಮಂಗಳವಾರ ನಡೆಯುವ ಅಮ್ಮನ ಹಬ್ಬದ ಅಂಗವಾಗಿ ಭಾನುವಾರ ಧ್ವಜಾರೋಹಣ ಮತ್ತು ತವರುಮನೆ ಕಂಕಣ ಧಾರಣೆ ಮೂಲಕ ಚಾಲನೆಗೊಂಡ ರಥೋತ್ಸವದಲ್ಲಿ, ಸೋಮವಾರ ದುಗ್ಗಳ ಸೇವೆ ಮತ್ತು ಬ್ರಹ್ಮರಥಾರೋಣ ನಡೆದರೆ, ಮಂಗಳವಾರ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ರಥೋತ್ಸವ ಮತ್ತು ಪಾನಕದ ಬಂಡಿಗಳ ಓಟ ನಡೆಯಿತು.

ಮಂಗಳವಾರ ಕರಗಲ್ ಬೀದಿಯಲ್ಲಿರುವ ಅಮ್ಮನವರ ದೇವಾಲಯದಲ್ಲಿ ವಿಶೇಷ ಅಲಂಕಾರ, ಬೇವಿನಸೀರೆ ಸೇವೆ ಸಲ್ಲಿಸಿದ ಬಳಿಕ ಹರಕೆ ಹೊತ್ತ ಮಕ್ಕಳಿಗೆ ರಥದ ಸುತ್ತ ದಿಂಡುರುಳು ಸೇವೆ ನಡೆಸಲಾಯಿತು. ಭಕ್ತರು ’ಅಮ್ಮನ ಹಬ್ಬದ' ವಿಶೇಷವಾಗಿ ಮನೆಗಳಲ್ಲಿ ತಯಾರಿಸಿದ್ದ ‘ಬಾಡೂಟ' ಮತ್ತು ಹೋಳಿಗೆ ನೈವೇದ್ಯಗಳನ್ನು ದೇವಿಗೆ ಸಮರ್ಪಿಸಿದ ಬಳಿಕ ಮನೆಗೆ ಬಂದ ನೆಂಟರಿಷ್ಟರಿಗೆ ವಿಶೇಷ ಆತಿಥ್ಯ ನೀಡಲಾಗಿತ್ತು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೋಮನ ಕುಣಿತ, ಅಸಾದಿ ಮೇಳ, ಜಾನಪದ ವಾದ್ಯಗಳು, ನಾಸಿಕ್ ಬ್ಯಾಂಡ್‍ನ ಅಬ್ಬರದ ನಡುವೆ ಹೊಸ ಬಟ್ಟೆ ಧರಿಸಿ ಹಬ್ಬದ ಗುಂಗಿನಲ್ಲಿ ನರ್ತಿಸುತ್ತಿದ್ದ ಯುವಕರ ಪಡೆಯೊಂದಿಗೆ ಕರಗಲ್ ಬೀದಿಯಲ್ಲಿ ಸಾಗಿಬಂದ ರಥವು ಹಳೇಪೇಟೆಯ ಸಂಪಿಗೆ ಸಿದ್ದೇಶ್ವರ ದೇವಾಲಯದ ಬಳಿ ಸರಿದು ನಿಂತು ಪಾನಕದ ಬಂಡಿಗಳ ಓಟಕ್ಕೆ ಅನುವು ಮಾಡಿಕೊಟ್ಟಿತು. ವಿಶೇಷವಾಗಿ ಅಲಂಕರಿಸಿದ್ದ ಎತ್ತಿನ ಬಂಡಿಗಳು ಮತ್ತು ಎತ್ತಿನ ಜೊತೆಗಳು ನೂರಾರು ಜನರ ಕೇಕೆ ಸದ್ದಿನ ನಡುವೆ ಶರವೇಗದಲ್ಲಿ ಮಹಾನವಮಿ ಬಯಲಿನ ಕಡೆಗೆ ಧಾವಿಸಿದವು.

ಪುರಸಭೆ ಮತ್ತು ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್‍ಗಳ ಇಕ್ಕೆಲಗಳಲ್ಲಿ ನಿಂತಿದ್ದ ಜನರ ಪ್ರೋತ್ಸಾಹ ಬಂಡಿಗಳ ಓಟವನ್ನು ಪ್ರೇರೇಪಿಸುತ್ತಿತ್ತು, ಮಹಾನವಮಿ ಬಯಲು ತಲುಪಿದ ಪಾನಕದ ಬಂಡಿಗಳು ಅಲ್ಲಿದ್ದ ಭಕ್ತರಿಗೆ ಪಾನಕ ವಿತರಿಸಿದವು. ಹಲವು ಭಕ್ತರು ಬಂಡಿಗಳ ಪಾನಕದ ಕೊಡಗಳಿಗೆ ಬೆಲ್ಲ ಸಮರ್ಪಿಸಿದರು. ಎತ್ತಿನ ಬಂಡಿಗಳ ಓಟ ಮುಗಿದ ಬಳಿಕ ಮಹಾನವಮಿ ಬಯಲಿನವರೆಗೆ ಸಾಗಿದ ರಥಕ್ಕೆ ಭಕ್ತರು ಹಣ್ಣು-ಕಾಯಿ ಅರ್ಪಿಸಿ ಭಕ್ತಿಭಾವ ಮೆರೆದರು.

ಬುಧವಾರ ಬೆಳಿಗ್ಗೆ ಓಕುಳಿಸೇವೆ, ಮುಖಾರ್ಚನೆ, ಸಾಯಂಕಾಲ ರಾಜಬೀದಿ ಉತ್ಸವದ ರಥೋತ್ಸವಕ್ಕೆ ತೆರೆ ಬೀಳಲಿದ್ದು ಮೂಲ ದೇವಾಲಯ ಇರುವ ಕಡೂರು ತಾಲ್ಲೂಕಿನ ಗಡಿಗ್ರಾಮ ಅಂತರಘಟ್ಟೆಯಲ್ಲಿ ಶನಿವಾರ ಬೆಳಗಿನ ಜಾವ ನಡೆಯುವ ರಥೋತ್ಸವಕ್ಕೆ ಭಕ್ತರು ಸಜ್ಜುಗೊಳ್ಳಲಿದ್ದಾರೆ.

ಆದಿಸುಬ್ರಮಣ್ಯ: ವಿಜೃಂಭಣೆಯ ರಥೋತ್ಸವ

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಗ್ರಾಮದ ಅಗ್ರಹಾರದಲ್ಲಿರುವ ಇತಿಹಾಸ ಪ್ರಸಿದ್ಧ ಆದಿಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.

ಗ್ರಾಮದಲ್ಲಿರುವ ಆದಿಸುಬ್ರಮಣ್ಯ ದೇವಾಲಯವು ಐತಿಹಾಸಿಕ ದೇವಾಲಯವಾಗಿದ್ದು, ಪ್ರತಿ ವರ್ಷದ ಕುಮಾರ ಷಷ್ಠಿಯಂದು ವಾರ್ಷಿಕ ಜಾತ್ರೆ ನಡೆಸಲಾಗುತ್ತಿದೆ. ಮೂರು ದಿನ ನಡೆಯುವ ಮಹೋತ್ಸವದಲ್ಲಿ ಪಂಚಮಿಯಂದು ಹೋಮ ಹವನಗಳನ್ನು ನಡೆಸಿ, ಷಷ್ಠಿಯಂದು ರಥೋತ್ಸವ ನಡೆಸಲಾಗುತ್ತದೆ ಸಪ್ತಮಿ ದಿನದಂದು ಶುದ್ದೋದಕ ಪೂಜೆ ಹಾಗೂ ನೀರೋಕಳಿ ನಡೆಸಿ ಪೂಜೆ ಸಲ್ಲಿಸಲಾಗುತ್ತದೆ.

ಮುಂಜಾನೆಯಿಂದಲೇ ಆದಿಶೇಷನಿಗೆ ವಿವಿಧ ಅಭಿಷೇಕ ನಡೆಸಿ, ಹೂವಿನ ಅಲಂಕಾರ ಮಾಡಲಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಹೇಮಾವತಿ ನದಿಯಲ್ಲಿ ಪರಿಶುದ್ದರಾಗಿ, ನಾಗದೇವತೆಗಳಿಗೆ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.

ಮುಜರಾಯಿ ಇಲಾಖೆ ವತಿಯಿಂದ ರಥೋತ್ಸವಕ್ಕೆ ತಹಶೀಲ್ದಾರ್‌ ಸಿ.ಪಿ.ನಂದಕುಮಾರ್‌ ಚಾಲನೆ ನೀಡಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಭಕ್ತರು ಕಾಳು ಮೆಣಸು, ಕಾಫಿ, ಏಲಕ್ಕಿ, ಬಾಳೆ, ಅಕ್ಕಿ ಸೇರಿದಂತೆ ವಿವಿಧ ಬೆಳೆಯ ಮೊದಲ ಫಸಲನ್ನು ರಥಕ್ಕೆ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಶಾಸಕರಾದ ಬಿ.ಬಿ.ನಿಂಗಯ್ಯ, ವಿಧಾನ ಪರಿಷತ್‌ ಸದಸ್ಯರಾದ ಮೋಟಮ್ಮ, ಎಂ.ಕೆ.ಪ್ರಾಣೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್‌ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ವಿಜೃಂಭಣೆಯ ಬಾನಸೇವೆ

ಕಡೂರು: ತಾಲ್ಲೂಕಿನ ಅಂತರಘಟ್ಟೆ ದುರ್ಗಂಬಾ ದೇವಿಯ ರಥೋತ್ಸವದ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಬಾನಸೇವೆ (ಅಮ್ಮನಹಬ್ಬ) ವಿಜೃಭಂಣೆಯಿಂದ ನಡೆಯಿತು.

ಮಂಗಳವಾರ ತಮ್ಮ ಎತ್ತಿನ ಗಾಡಿಗಳನ್ನು ಸಿಂಗಾರಗೊಳಿಸಿದ ರೈತರ ಮಕ್ಕಳು ಗಾಡಿಯೊಳಗೆ ಪಾನಕದ ಹಂಡೆಯನ್ನಿಟ್ಟು  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಲಾಗಿ ಹೊರಟು ಛತ್ರದ ಬೀದಿಯಲ್ಲಿರುವ ಗ್ರಾಮ ದೇವತೆ ಕೆಂಚಾಂಬ ದೇವಿಗೆ ಪಾನಕದ ನೈವೇದ್ಯ ಅರ್ಪಿಸಿದರು. ನಂತರ ಅಲ್ಲಿಂದ ಸ್ವಲ್ಪದೂರದಲ್ಲಿರುವ ವೀರಭಧ್ರಸ್ವಾಮಿ ದೇಗುಲದವರೆಗೆ ಗಾಡಿಗಳನ್ನು ಓಡಿಸಿಕೊಂಡು ಹೋಗುವ ದೃಶ್ಯ ನಯನ ಮನೋಹರವಾಗಿತ್ತು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು, ಸದಸ್ಯ ಶರತ್ ಕೃಷ್ಣಮೂರ್ತಿ, ಪುರಸಭಾ ಸದಸ್ಯರಾದ ಕೆ.ಎಂ.ಮೋಹನ್ ಕುಮಾರ್(ಮುದ್ದ), ಎಂ.ಸೋಮಶೇಖರ್ ಸೇರಿ ನೂರಾರು ಮಂದಿ ಈ ಸಂಭ್ರಮದಲ್ಲಿ ಪಾಲ್ಗೊಂಡರು. ಪಟ್ಟಣದ ಬೀದಿಗಳಲ್ಲಿ ಗಾಡಿಗಳು ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ 2 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT