ಬೈಕಲ್ಲೆ ಭೂತಾನ್‌ ಸುತ್ತಿ ಬಂದೆವು

7

ಬೈಕಲ್ಲೆ ಭೂತಾನ್‌ ಸುತ್ತಿ ಬಂದೆವು

Published:
Updated:
ಬೈಕಲ್ಲೆ ಭೂತಾನ್‌ ಸುತ್ತಿ ಬಂದೆವು

‘ದೇಶ ಸುತ್ತು, ಕೋಶ ಓದು’ ಎಂಬ ಗಾದೆಮಾತಿನ ಮೊದಲಾರ್ಧವನ್ನು ತೀರಾ ಹಚ್ಚಿಕೊಂಡಿರುವ ಬೆಂಗಳೂರಿನ ಐ.ಟಿ. ಕಂಪನಿಗಳ ಈ ಏಳು ಗೆಳೆಯರ ಬಳಗ, ಇತ್ತೀಚೆಗೆ ಭೂತಾನ್‌ ದೇಶವನ್ನು ಬೈಕ್‌ಗಳಲ್ಲಿಯೇ ಸುತ್ತಿಬಂದಿದೆ. ಈ ಪ್ರವಾಸದಲ್ಲಿ ಅವರು ಕಂಡದ್ದು, ಕೇಳಿದ್ದು, ತಿಂದದ್ದು ಹಾಗೂ ಅನುಭವಿಸಿದ ಭಾವಗಳ ಕಥನವನ್ನು ಕಾಮನಬಿಲ್ಲಿನೊಂದಿಗೆ ಹಂಚಿಕೊಂಡಿದ್ದಾರೆ.

ಮೂವರು ಇಲ್ಲಿಂದ, ನಾಲ್ವರು ಅಲ್ಲಿಂದ

‘ನಮಗೆ ಭೂತಾನ್‌ ನೋಡುವ ಬಯಕೆಯಾಯಿತು. ಬೇಕಾದ ತಯಾರಿ ಮಾಡಿಕೊಂಡು, ಮೂರ್ನಾಲ್ಕು ಜತೆ ಬಟ್ಟೆ ಬ್ಯಾಗ್‌ಗೆ ಇಳಿಸಿ, ಒಂದಷ್ಟು ಹಣವನ್ನು ಜೇಬಿಗೆ ತುಂಬಿದೆವು. ಎರಡು ಕೆಟಿಎಂ ಡ್ಯೂಕ್‌ ಬೈಕ್‌ಗಳನ್ನು ಹತ್ತಿ ನಾನು, ಅಣ್ಣ ಸುಮಂತ್‌ ಸುವರ್ಣ ಹಾಗೂ ಗೆಳತಿ ಸೋನಲ್‌ ಬೆಂಗಳೂರಿನಿಂದ ಭೂತಾನ್‌ಗೆ ಪ್ರಯಾಣ ಬೆಳೆಸಿದೆವು. ನಾವು ರಾಜಮಂಡ್ರಿ, ವಿಜಯವಾಡ, ಕೋಲ್ಕತ್ತ ದಾಟಿಕೊಂಡು ಗುವಾಹಟಿ ತಲುಪುವ ವೇಳೆಗೆ, ಉಳಿದ ನಾಲ್ವರು ಗೆಳೆಯರು ಗುವಾಹಟಿಯವರೆಗೂ ವಿಮಾನದಲ್ಲಿ ಬಂದರು. ಅವರು ಮೂರು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಬಾಡಿಗೆ ಪಡೆದುಕೊಂಡು ಯಾನದಲ್ಲಿ ಜತೆಗೂಡಿದರು. ಅಲ್ಲಿಂದ ನಮ್ಮ ಬೈಕ್‌ಗಳನ್ನು ಭಾರತ–ಭೂತಾನ್‌ನ ಗಡಿ ಊರಾದ ಫ್ಯೂನ್‌ಸೊಲಿಂಗ್‌ ಕಡೆ ಓಡಿಸಿದೆವು’ ಎಂದು ಹೇಮಂತ್‌ ಸುವರ್ಣ ಆದಿಯ ಹಾದಿಯನ್ನು ನೆನೆದರು. ಈ ಗೆಳೆಯರ ಬಳಗದ ಸದಸ್ಯರು ಒಬ್ಬೊಬ್ಬರಾಗಿ ಪ್ರವಾಸದ ಕಥೆ ವಿವರಿಸುತ್ತಾ ಹೋದರು...

ಪ್ರವೇಶಕ್ಕೆ ಅನುಮತಿ ಕಡ್ಡಾಯ– ವಿನಯಮೂರ್ತಿ

ಫ್ಯೂನ್‌ಸೊಲಿಂಗ್‌ ತಲುಪಿದ ತಕ್ಷಣ, ನೇರವಾಗಿ ಇಮಿಗ್ರೇಷನ್‌ ಆಫೀಸ್‌ಗೆ ಹೋದೆವು. ಅಲ್ಲಿ ನಮ್ಮ ರೈಡ್‌ ಪ್ಲ್ಯಾನ್‌ ತೋರಿಸಿ ರೂಟ್‌ ಪರ್ಮಿಟ್‌ ಪಡೆದೆವು. ಭಾರತೀಯರಿಗೆ ಇಲ್ಲಿ ಹೆಚ್ಚಿನ ತಪಾಸಣೆ, ವಿಚಾರಣೆ ಮಾಡಲ್ಲ. ನಮ್ಮ ದೇಶದ ಓಟರ್‌ ಐಡಿ, ಡ್ರೈವಿಂಗ್‌ ಲೈಸನ್ಸ್‌ ತೋರಿಸಿದರೆ ಸಾಕು ಭೂತಾನ್‌ ದೇಶ ಪ್ರವೇಶಕ್ಕೆ ವೀಸಾ ಸಿಗುತ್ತದೆ. ನಮ್ಮ ಬೈಕ್‌ಗಳಿಗೆ ಪ್ರತಿದಿನಕ್ಕೆ ನೂರು ರೂಪಾಯಿ ಫೀಸ್‌ನಂತೆ ಏಳು ದಿನಗಳವರೆಗೆ ಅನುಮತಿ ಪತ್ರ ಪಡೆದೆವು. ಇಲ್ಲಿನ ಅಧಿಕಾರಿಗಳು ಡೌನ್‌ ಟು ಅರ್ಥ್ ಗುಣದವರು. ನಾವೆಷ್ಟೇ ಸಂದೇಹಗಳನ್ನು ಹೊಂದಿದ್ದರೂ ತಾಳ್ಮೆಯಿಂದ ಪ್ರತಿಕ್ರಿಯಿಸಿದರು. ದೇಶದ ಸಂಚಾರಿ ನಿಯಮಗಳ ಕುರಿತು ತಿಳಿಹೇಳಿ, ಶುಭಕೋರಿ ಬೀಳ್ಕೊಟ್ಟರು.

ಚಳಿ.. ಚಳಿ.. ಚಲಿಲಾ ಪಾಸ್‌– ಎಸ್‌. ಅಜಿತ್‌ ಶಂಕರ್‌

ಫ್ಯೂನ್‌ಸೊಲಿಂಗ್‌ನಿಂದ ನಮ್ಮ ಯಾನ ಪಾರೊ ಕಡೆಗೆ ಹೊರಟಿತು. ಇಲ್ಲಂತೂ ಬಹಳ ಚಳಿ. ಈ ದಾರಿಯಲ್ಲಿ ಹ್ಹಾ ಕಣಿವೆಯಿದೆ. ಇಲ್ಲಿಯೇ ಇರೋದು ಭೂತಾನ್‌ನ ಅತಿ ಎತ್ತರ ಪ್ರದೇಶದ ರಸ್ತೆ ಚಲಿಲಾ ಪಾಸ್‌. ಅದು ಸಮುದ್ರಮಟ್ಟದಿಂದ ಹದಿಮೂರು ಸಾವಿರ ಅಡಿ ಎತ್ತರವಿದೆಯಂತೆ. ಈ ಕಣಿವೆಯ ಮೌನವನ್ನು ಬೈಕ್‌ಗಳು ಡುಕ್‌...ಡುಕ್‌... ಶಬ್ದದಿಂದ ಸೀಳಿಕೊಂಡು ಹೋಗುವಾಗ ಸುತ್ತ ಕಾಣುತ್ತಿದ್ದ ಪ್ರಕೃತಿ ಸೌಂದರ್ಯದ ನೋಟ ಅವರ್ಣನೀಯ. ಆ ಬೆಟ್ಟಗಳ ಸಾಲು, ಮೋಡಗಳ ಚಲನೆ, ಕಣಿವೆಗಳ ಆಳವನ್ನು ನೋಡುವುದೇ ಒಂದು ಮಹದಾನಂದ. ಎದುರಿಗೆ ಬೀಸುವ ತಂಗಾಳಿಗೆ ಮೈಯೊಡ್ಡಿ, ಮಂಜಿನಲ್ಲಿ ಮಿಂದುಕೊಂಡು ಅಂಕುಡೊಂಕಿನ ರಸ್ತೆಯಲ್ಲಿ ಬೈಕ್‌ ಓಡಿಸುವ ಮಜವೇ ಬೇರೆ. ಆ ಕಣಿವೆಯಲ್ಲಿ ಇದ್ದಂಥ ಶುದ್ಧಗಾಳಿ, ನೀರು ಬೇರೆಲ್ಲೂ ಸಿಗುವುದಿಲ್ಲ. ಇಲ್ಲಿನ ಜನರಿಗೆ ಭಾರತೀಯರೆಂದರೆ ಬಹಳ ಬುದ್ಧಿವಂತರು ಎಂಬ ಅಭಿಪ್ರಾಯವಿದೆ. ನಾವು ಬೈಕ್‌ಗಳನ್ನು ನಿಲ್ಲಿಸಿದಲ್ಲಿ ಸ್ಥಳೀಯರು ನಗುಮೊಗದಿಂದ ಎದುರುಗೊಳ್ಳುತ್ತಿದ್ದರು.

ಪಾರೊ– ಭೂತಾನ್‌ನ ಪ್ರಮುಖ ನಗರ. ಅದು ಸರಿಸುಮಾರು ಬೆಂಗಳೂರಿನ ವಿಜಯನಗರದಷ್ಟಿದೆ. ಆ ಊರಿಗೆ ತಲುಪಿ, ವಿಶ್ರಾಂತಿ ಪಡೆದು, ಅಲ್ಲೆ ಹತ್ತಿರದ ಬೆಟ್ಟದ ಮೇಲಿದ್ದ ಟೈಗರ್‌ ನೆಸ್ಟ್‌ ದೇವಸ್ಥಾನಕ್ಕೆ ಟ್ರೆಕ್ಕಿಂಗ್‌ ಹೊರೆಟೆವು. ಅದು ಸರಿಸುಮಾರು 6 ಕಿ.ಮೀ. ಹತ್ತಿಳಿಯುವ ಸಾಹಸ. ಕಡಿದಾದ ಬೆಟ್ಟದಂಚಿನಲ್ಲಿ ಕಟ್ಟಿರುವ ಈ ದೇವಾಲಯದ ದರ್ಶನಕ್ಕೆ ಮೆಟ್ಟಿಲುಗಳ ಮೇಲೆ ಪಾದಯಾತ್ರೆ ಮಾಡಲೇಬೇಕು. ಇಲ್ಲಿನ ಆಲಯದ ಭಿತ್ತಿಗಳ ಮೇಲೆ ಯಾವುದೋ ಕಾಲದ ಚಿತ್ರಗಳ ಚಿತ್ತಾರವಿದೆ. ಗೋಪುರಗಳ ರಚನೆಗಳು ಸೊಗಸಾಗಿವೆ. ಬೆಟ್ಟ ಹತ್ತಿದ ಬಳಿಕ ಸಿಗುವ ಸಣ್ಣ ಜಲಧಾರೆ, ದೇವಾಲಯದ ಪ್ರಾಂಗಣದಿಂದ ಕಾಣುವ ಬೆಟ್ಟಗಳ ಹಸಿರಿನ ಹೊದಿಕೆ, ತಂಪಾದ ಗಾಳಿ, ಇಂಪಾದ ಪ್ರಾರ್ಥನೆ ಆಯಾಸ ಮರೆಸುತ್ತವೆ. ಇಲ್ಲಿನ ನೋಟಗಳ ಗುಂಗಿನಲ್ಲೆ ಬೆಟ್ಟವಿಳಿದು ಹೋಟೆಲ್‌ ಸೇರಿದೆವು.

ಮಾಲಿನ್ಯಮುಕ್ತ ಊರು– ಸುಮಂತ್‌ ಸುವರ್ಣ

ಪಾರೊದಿಂದ ನಾವು ಸಾಗಿದ್ದು ಭೂತಾನ್‌ನ ರಾಜಧಾನಿ ಥಿಂಪುವಿನೆಡೆಗೆ. ನಮ್ಮ ಒಟ್ಟಾರೆ ಟ್ರಿಪ್‌ನಲ್ಲಿ ಹೆಚ್ಚು ಜನರನ್ನು ಕಂಡ ಊರಿದು.ಇಲ್ಲಿ ಮಾಲಿನ್ಯದ ಮಾತೇ ಇಲ್ಲ. ನಗರವನ್ನು ಶುಚಿಯಾಗಿ ಕಾಪಾಡಿಕೊಂಡಿದ್ದಾರೆ. ಸಂಚಾರಿ ನಿಯಮಗಳನ್ನು ಚಾಲಕರು ಅಪ್ಪಿತಪ್ಪಿಯೂ ಉಲ್ಲಂಘಿಸುವುದಿಲ್ಲ. ರಸ್ತೆಯ ಎಡಭಾಗ ಎಷ್ಟೇ ಜಾಗ ಖಾಲಿ ಇದ್ದರೂ ಓವರ್‌ಟೇಕ್‌ ಮಾಡಲ್ಲ. ಪಾದಚಾರಿಗಳು ರಸ್ತೆದಾಟಲು ಮೊದಲ ಆದ್ಯತೆ. ಸ್ಥಳೀಯರು ಹೆಚ್ಚೆಂದರೆ ಪ್ರತಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ವಾಹನ ಓಡಿಸುತ್ತಾರೆ. ಇಲ್ಲಿ ಧಾವಂತದ ಬದುಕಿಲ್ಲ, ನಿಧಾನವೇ ಪ್ರಧಾನ.

ಭೂತಾನಿಯರ ಕರಕುಶಲ ವಸ್ತುಗಳನ್ನು ಕೊಳ್ಳಲು ಈ ಊರು ಸೂಕ್ತ. ಇಲ್ಲಿ ತರಹೇವಾರಿ ಬ್ಯಾಗ್‌, ಜಾಕೆಟ್‌, ಗೃಹಾಲಂಕಾರಿಕ ವಸ್ತು ಹಾಗೂ ಆಭರಣಗಳು ಸಿಗುತ್ತವೆ. ನಾವಿಲ್ಲಿ ಊರು ಸುತ್ತುವುದರೊಂದಿಗೆ ಈ ದೇಶ ಸುತ್ತಲು ತೆಗೆದುಕೊಂಡಿದ್ದ ಪರವಾನಗಿಯನ್ನು ಮತ್ತೊಂದಿಷ್ಟು ದಿನ ನವೀಕರಣ ಮಾಡಿಕೊಂಡೆವು. ಜತೆಗೆ ಇಲ್ಲಿನ ಬುದ್ಧ ಪಾಯಿಂಟ್‌ಗೆ ಭೇಟಿಯಿತ್ತೆವು. ಸಣ್ಣ ಬೆಟ್ಟದ ಮೇಲೆ ಧ್ಯಾನಸ್ಥನಾಗಿ ಕುಳಿತಿರುವ ಬುದ್ಧನ ಇಮಾರತ್‌ ನೋಡಿದೆವು. ಹಾಗೆಯೇ ಪ್ರಾಣಿ ಸಂಗ್ರಹಾಲಯವನ್ನು ಹೊಕ್ಕು ಅಲ್ಲಿನ ರಾಷ್ಟ್ರಪ್ರಾಣಿ ಟಾಕಿನ್‌ ಕಂಡೆವು.

ಈ ನಗರದ ಜನ ಬಹಳ ಶಾಂತ ಸ್ವಭಾವದವರು. ಇಲ್ಲಿನ ರಾಜನನ್ನು ದೈವದಂತೆ ಆರಾಧಿಸುತ್ತಾರೆ. ಪ್ರತಿ ಮನೆ, ಅಂಗಡಿಗಳಲ್ಲಿ ರಾಜ, ರಾಣಿ ಹಾಗೂ ರಾಜಕುಮಾರನ ಫೋಟೊಗಳು ಇದ್ದೇ ಇರುತ್ತವೆ. ಇಲ್ಲಿನ ಬಹುತೇಕರಿಗೆ ಹಿಂದಿ ಭಾಷೆ ಬರುವುದರಿಂದ ನಮಗೂ ಅನುಕೂಲವಾಯಿತು.

ಪುನಾಖಾವೆಂಬ ಹಸಿರಿನ ಹಂದರ– ರಝಾ ಮೊಹಮ್ಮದ್‌

ಥಿಂಪುವಿನಿಂದ ಪುನಾಖಾದ ಕಡೆ ಹೊರಟೆವು. ಈ ಊರುಗಳ ನಡುವೆ ಹೆದ್ದಾರಿ ಇದ್ದರಿಂದ ಪ್ರಯಾಣ ಪ್ರಯಾಸವೆನಿಸಲಿಲ್ಲ. ಊರು ತಲುಪುವಷ್ಟರಲ್ಲಿ ಕತ್ತಲಾಗುತ್ತಿತ್ತು. ಸ್ಥಳೀಯರನ್ನು ವಿಚಾರಿಸಿದೆವು, ಊರ ಹೊರವಲಯದಲ್ಲಿನ ಹೋಮ್‌ಸ್ಟೇನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಅಲ್ಲಿನ ಬಾಡಿಗೆ, ತಿನಿಸಿನ ಬೆಲೆಗಳು ಹೆಚ್ಚಿರಲಿಲ್ಲ. ಮರುದಿನ, ಸಮೀಪದಲ್ಲಿದ್ದ ಬೌದ್ಧ ದೇವಾಲಯಕ್ಕೆ ಹೋದೆವು. ಅಲ್ಲಿ ಎರಡೂ ಕಡೆ ನದಿ ಹರಿಯುತ್ತಿತ್ತು. ಮಧ್ಯೆ ದೇವಸ್ಥಾನವಿತ್ತು. ಬದಿಯಲ್ಲೊಂದು ರೂಪ್‌ ಬ್ರಿಜ್‌ ಇತ್ತು. ಇಲ್ಲೆಲ್ಲಾ ಕಡೆ ಸುತ್ತಿ ರೈಡ್‌ನ ಸುಸ್ತು ಇಳಿಸಿದೆವು. ಇಲ್ಲಿ ದೇವರಿಗೆ ಬೆಣ್ಣೆಯ ಕ್ಯಾಂಡಲ್‌, ತುಪ್ಪ, ನೂಡಲ್ಸ್‌ ಮತ್ತು ಜೂಸ್‌ಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ.

ಈ ದೇಶದಲ್ಲಿ ಶೇ65ರಷ್ಟು ಪ್ರದೇಶ ಅರಣ್ಯದಿಂದ ಕೂಡಿದೆಯಂತೆ. ಹಾಗಾಗಿ ಎಲ್ಲ ಊರುಗಳು ಎತ್ತರವಾಗಿ ಬೆಳೆಯುವ ಪೈನ್‌ ಮರಗಳು ಮಧ್ಯೆಯೇ ವಿಸ್ತರಿಸುತ್ತಿವೆ. ಪುನಾಖಾದಲ್ಲಿ ಹಚ್ಚಹಸಿರಿನ ನೋಟಗಳು ಕಾಣಸಿಗುತ್ತವೆ. ಇದು ನನಗೆ ಹಿಮಾಚಲವನ್ನು ನೆನಪಿಸಿತು. ಇಲ್ಲಿ ಆಧುನಿಕತೆಯ ಸ್ಪರ್ಶ ಕಡಿಮೆ. ಹಾಗಾಗಿ ಸ್ಥಳೀಯ ಸಂಸ್ಕೃತಿ ಶ್ರೀಮಂತವಾಗಿದೆ.

ತ್ರಾಂಗ್ಸಾದಲ್ಲಿ ಚೆಲುವೆಯರೇ ಹೆಚ್ಚು – ಸಿ. ಆರ್‌. ಅಶ್ವಿನ್‌ಗೌಡ

ಪುನಾಖಾದಿಂದ ಹೊರಟ ನಾವು ತ್ರಾಂಗ್ಸಾ ತಲುಪಿ ನಿದ್ರೆಗೆ ಜಾರಿದೆವು. ಟ್ರಿಪ್‌ನ ಮೊದಲ ದಿನವೇ ಸ್ಥಳೀಯ ಆಹಾರ ತಿಂದು, ಹೊಟ್ಟೆ ತೊಳೆಸಿಕೊಂಡಿದ್ದ ನಾವು, ಅದನ್ನು ಮುಟ್ಟಲಿಲ್ಲ. ಬರೀ ಬ್ರೆಡ್‌ ಆಮ್ಲೆಟ್‌, ನ್ಯೂಡಲ್ಸ್‌, ಪುರಿ ಹಾಗೂ ಅಪರೂಪಕ್ಕೆ ಸಿಗುವ ರೈಸ್‌–ದಾಲ್‌ನಿಂದಲೇ 20 ದಿನ ದೂಡಿದೆವು. ಇಲ್ಲಿನವರು ಹೆಚ್ಚಾಗಿ ಮಸಾಲೆ ಪದಾರ್ಥ ಬಳಸಲ್ಲ. ಚೀಸ್‌ ಮತ್ತು ಡಾಡ್ಸೆ ಎಂಬ ಮೆಣಸಿನಕಾಯಿ ಇವರ ಪ್ರತಿ ಅಡುಗೆಯಲ್ಲಿ ಇರುತ್ತೆ. ಹಂದಿ ಮಾಂಸ ಬೇಕಾದಲ್ಲಿ ಸಿಗುತ್ತೆ.

ತ್ರಾಂಗ್ಸಾದಲ್ಲಿ ಹೆಣ್ಮಕ್ಕಳ ಸಂಖ್ಯೆ ಜಾಸ್ತಿ. ಇಲ್ಲಿನ ಹೊಲ–ಗದ್ದೆ, ಅಂಗಡಿ–ಮುಂಗಟ್ಟು, ಹೋಟೆಲ್‌ಗಳಲ್ಲಿ ತರುಣಿಯರೇ ಕಾಣಸಿಗುತ್ತಾರೆ. ಅವರು ಬಹಳ ಸ್ನೇಹಮಯರು.

ಕೃಷಿ, ಪ್ರವಾಸೋದ್ಯಮ ಮತ್ತು ಕರಕುಶಲ ಕಲೆಗಳೇ ಇವರ ಜೀವನಾಧಾರ. ಈ ದೇಶದಲ್ಲಿ ಫ್ಯಾಕ್ಟರಿಗಳು ಕಾಣಸಿಗುವುದು ಬಲು ಅಪರೂಪ. ಭತ್ತದ ಗದ್ದೆಗಳು, ಹಣ್ಣಿನ ತೋಟಗಳು ಕಾಣುತ್ತವೆ.

ಸಾಗುವ ದಾರಿಯಲ್ಲಿ ಭತ್ತದಿಂದ ಮಾಡಿದ ‘ಹ್ಹಾರಾ’ ಎಂಬ ಲೋಕಲ್‌ ಡ್ರಿಂಕ್‌ ಕುಡಿದೆವು. ಅದು ಸ್ವಲ್ಪ ಕಹಿ ಕಷಾಯದಂತಿತ್ತು.

ಕಷ್ಟದ ಹಾದಿ, ಇಷ್ಟದ ನೋಟಗಳು– ಹೇಮಂತ್‌ ಸುವರ್ಣ

ನಾವು ತ್ರಾಂಗ್ಸಾದಿಂದ ಭೂಮ್‌ತಾಂಗ್‌ಗೆ ಹೋಗಬೇಕಿತ್ತು. ಅಲ್ಲಿನ ರಸ್ತೆಯನ್ನು ವಿಸ್ತರಣೆ ಮಾಡುತ್ತಿದ್ದರು. ಕಡಿದಾದ ಕಣಿವೆಯಲ್ಲಿ ನಡೆಯುತ್ತಿರುವ ಆಮೆಗತಿಯ ಕಾಮಗಾರಿಯಿಂದ ನಮ್ಮ ಪ್ರಯಾಣಕ್ಕೂ ಅರ್ಧಗಂಟೆಗೊಮ್ಮೆ ಬ್ರೇಕ್‌ ಬೀಳುತ್ತಿತ್ತು.

ಒಮ್ಮೆ ನಿಂತರೆ ರೋಡ್‌ನಿಂದ ಕಲ್ಲುಗಳು ಕ್ಲಿಯರ್‌ ಆಗಲೂ ಅರ್ಧಗಂಟೆ ಬೇಕಾಗುತ್ತಿತ್ತು. ಅದು ಮೊದಲೇ ಕಚ್ಚಾ ರಸ್ತೆ, ಪ್ರತಿ ನೂರು ಮೀಟರ್‌ಗೂ ಕೆಸರಿನ ಕೊಚ್ಚೆ. ಕೆಲವೆಡೆ ಕಲ್ಲು–ಮಣ್ಣಿನ ದಾರಿ ದೂಳುಮಯವಾಗಿತ್ತು. ಬೆಂಗಳೂರಿನ ರಸ್ತೆಗುಂಡಿಗಳನ್ನೇ ತಪ್ಪಿಸಿಕೊಂಡು ಬೈಕ್‌ ಓಡಿಸಿದ್ದ ನಮಗೆ, ಈ ರಸ್ತೆ ಸವಾಲು ಎನಿಸಲಿಲ್ಲ. ಊರು ತಲುಪುವುದರಲ್ಲಿ ಬೈಕ್‌ಗಳಿಗೆ ಕೆಸರಿನ ಅಭಿಷೇಕವಾಗಿತ್ತು.

ಬೆಟ್ಟದ ಮೇಲಿರುವ ಭೂಮ್‌ತಾಂಗ್‌ ಮಂಜಿನಲ್ಲಿ ಮುದುಡಿ ಕೂತಿತ್ತು. ಟೆಂಪರೇಚರ್‌ ಮೈನಸ್‌ ಡಿಗ್ರಿಗೆ ಇಳಿದಿತ್ತು. ಮಧ್ಯಾಹ್ನ 12 ಗಂಟೆಯಾಗಿದ್ದರೂ ಮೈ ನಡುಗುತ್ತಿತ್ತು. ಅಲ್ಲೊಂದು ಚೂವ್‌ ನದಿ ಹರಿಯುತ್ತಿತ್ತು. ಆ ನದಿ ದಂಡೆ ಮೇಲೆ ರಾಗಿಮುದ್ದೆ ಗಾತ್ರದ ಬಣ್ಣ ಬಣ್ಣಗಳ ಕಲ್ಲುಗಳು ರಾಶಿಯಿತ್ತು.

ಮೊಣಕಾಲು ಆಳದ ನದಿಯ ತಳ ಕಾಣುವಷ್ಟು ನೀರು ಶುದ್ಧವಾಗಿತ್ತು. ಆ ಸೌಂದರ್ಯ ನೋಡಲು ನಮ್ಮ ಮನದಲ್ಲೂ ಸಂತಸ ಮನೆಮಾಡಿತ್ತು. ಪಯಣದ ದಣಿವು ಕರಗಿತ್ತು.

ಬೈಕ್‌ ಹಿಂದೆ ಕೂತೇ ಭೂತಾನ್‌ ನೋಡಿದೆ– ಸೋನಲ್‌

ಈ ಟ್ರಿಪ್‌ನಲ್ಲಿ ಆರು ಗೆಳೆಯರ ಜತೆ ಇದ್ದವಳು ನಾನೊಬ್ಬಳೇ. ನನಗೆ ಬೈಕ್‌ ಓಡಿಸಲು ಬರಲ್ಲ. ಸ್ನೇಹಿತರ ಸಹಕಾರದಿಂದ ಬೈಕ್‌ ಹಿಂಬದಿಯಲ್ಲಿ ಕೂತೇ ಭೂತಾನ್‌ ಸುತ್ತಿದೆ. ಅಲ್ಲಿನ ವೇದರ್‌ ಇಷ್ಟವಾಯಿತು. ಕೆಲವು ಪ್ರದೇಶದಲ್ಲಿ ಮುಂಜಾನೆ ಮಂಜು, ಮಧ್ಯಾಹ್ನ ಬಿಸಿಲು, ಸಂಜೆ ಮಳೆ ಮತ್ತು ರಾತ್ರಿ ಹಿಮ ಬೀಳುತ್ತಿತ್ತು. ಹಿಮದ ರಾಶಿಯನ್ನು ಮೊದಲಿಗೆ ಅಲ್ಲಿ ಕಂಡೆ. ಈಗ ನನಗೂ ಬೈಕ್‌ ರೈಡಿಂಗ್‌ ಕಲಿಬೇಕು. ದೇಶ ಸುತ್ತಬೇಕು ಅನಿಸುತ್ತಿದೆ.

ಭೂಮ್‌ತಾಂಗ್‌–ತ್ರಾಸಿಗಂಗ್‌ನಿಂದ ಸಮ್‌ದ್ರೂಪ್‌ ಝೊಂಕರ್‌ಗೆ ಬಂದು, ಅಲ್ಲಿಂದ ಭಾರತ ಪ್ರವೇಶಿಸಬೇಕೆಂಬುದು ನಮ್ಮ ಪ್ಲ್ಯಾನ್‌ ಆಗಿತ್ತು. ತ್ರಾಸಿಗಂಗ್‌ ಪ್ರವೇಶಿಸಲು ಅನುಮತಿ ಪತ್ರ ಬೇಕಿಲ್ಲ ಎಂದು ಥಿಂಪುವಿನಲ್ಲಿ ಅಧಿಕಾರಿಗಳು ತಿಳಿಸಿದ್ದರು. ಹಾಗಾಗಿ ಪಡೆದಿರಲಿಲ್ಲ.

ಆದರೆ, ಇಲ್ಲಿನ ಅಧಿಕಾರಿಗಳು ನೀವು ಅನುಮತಿಯಿಲ್ಲದೆ ಪ್ರವೇಶ ಮಾಡಿದ್ದೀರಾ, ತಲಾ ಮೂರುಸಾವಿರ ದಂಡ ಕಟ್ಟಿ ಎಂದು ತಾಕೀತು ಮಾಡಿದರು. ಜೇಬಲ್ಲಿನ ಹಣದಿಂದ ದಂಡ ಕಟ್ಟಿದರೆ, ಮುಂದಿನ ಪ್ರಯಾಣಕ್ಕೆ ತೊಂದರೆ ಆಗುವುದೆಂದು ಎಟಿಎಂ ಹುಡುಕಿದೆವು. ಸಿಗಲಿಲ್ಲ. ಆತಂಕ ಆಯಿತು. ಅಧಿಕಾರಿಗಳಿಗೆ ಮನವೊಲಿಸಿ ಮುಂದಿನ ಚೆಕ್‌ಪೋಸ್ಟ್‌ನಲ್ಲಿ ದಂಡ ಕಟ್ಟುವುದಾಗಿ ಹೇಳಿ ಸಾಗಿದೆವು. ಅವರು ಸಂದೇಶ ರವಾನಿಸಿದರು. ಮುಂದೊಂದು ಊರಲ್ಲಿ ಬ್ಯಾಂಕ್‌ ಆಫ್‌ ಭೂತಾನ್‌ನಲ್ಲಿ ನಮ್ಮಲ್ಲಿದ್ದ ಸಿಟಿ ಬ್ಯಾಂಕ್‌ನ ಕಾರ್ಡ್‌ ಅಕ್ಸೆಪ್ಟ್‌ ಆಯಿತು. ದಂಡ ಕಟ್ಟಿ ಭೂತಾನ್‌ನಿಂದ ಹೊರಬಂದು ಭಾರತದ ಗುವಾಹಟಿ ಸೇರಿದೆವು. ಅಲ್ಲಿಂದ ಬೆಂಗಳೂರಿಗೆ ಬಂದೆವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry