ಖುರೇಷಿ ವಿಚಾರಣೆ: ದೆಹಲಿಗೆ ಬಂದ ವಿವಿಧ ರಾಜ್ಯಗಳ ಪೊಲೀಸರು

7

ಖುರೇಷಿ ವಿಚಾರಣೆ: ದೆಹಲಿಗೆ ಬಂದ ವಿವಿಧ ರಾಜ್ಯಗಳ ಪೊಲೀಸರು

Published:
Updated:

ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯ ಭಯೋತ್ಪಾದಕ ನಿಗ್ರಹ ವಿಶೇಷ ದಳ ಸೋಮವಾರ ಬಂಧಿಸಿದ್ದ ಇಂಡಿಯನ್ ಮುಜಾಹಿದ್ದೀನ್‌(ಐಎಂ) ಸಹ ಸ್ಥಾಪಕ ಅಬ್ದುಲ್ ಸುಭಾನ್ ಖುರೇಷಿಯನ್ನು ವಿಚಾರಣೆ ಮಾಡಲು ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ದೆಹಲಿಗೆ ಬಂದಿದ್ದಾರೆ.

2008ರಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟ ಗುಜರಾತ್ ಸರಣಿ ಬಾಂಬ್ ಸ್ಫೋಟದ ಶಂಕಿತ ಸಂಚುಕೋರ ಖುರೇಷಿ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಕೆಲ ರಾಜ್ಯಗಳ ಪೊಲೀಸರು ಆತನ ವಿಚಾರಣೆ ನಡೆಸಲು ದೆಹಲಿಗೆ ಬಂದಿದ್ದಾರೆ ಎಂದು ದೆಹಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘2015–2017ರ ಅವಧಿಯಲ್ಲಿ ಸೌದಿ ಅರೇಬಿಯಾದಲ್ಲಿದ್ದ ಖುರೇಷಿ, ಐಎಂಗಾಗಿ ನಿಧಿ ಸಂಗ್ರಹಣೆಯಲ್ಲಿ ತೊಡಗಿದ್ದ. ವಿಚಾರಣೆ ವೇಳೆ ತನಿಖಾಧಿಕಾರಗಳ ದಿಕ್ಕು ತಪ್ಪಿಸಲು ಇವನನ್ನು ತರಬೇತುಗೊಳಿಸಲಾಗಿದೆ. ನನಗೆ ಐಎಂ ಅಥವಾ ಸಿಮಿ ಜತೆ ಸಂಪರ್ಕವಿಲ್ಲ ಎಂದು ಖುರೇಷಿ ಹೇಳುತ್ತಿದ್ದರೂ, ಆತನಿಗೆ ಐಎಂ, ಸಿಮಿ ಸಂಘಟನೆಗಳ ಜತೆ ಒಡನಾಟವಿದೆ’ ಎಂದು ಅವರು ತಿಳಿಸಿದ್ದಾರೆ.

‘ವಿವಿಧ ರಾಜ್ಯಗಳಿಗೆ ಮಾತ್ರವಲ್ಲದೆ, 2007ರ ಡಿಸೆಂಬರ್‌ನಲ್ಲಿ ಕೇರಳದಲ್ಲಿ ನಡೆದ ವಾಗಾಮಣ್ ಸಿಮಿ ಶಸ್ತ್ರಾಸ್ತ್ರ ತರಬೇತಿ ಶಿಬಿರದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೂ ಈತ ಬೇಕಾಗಿದ್ದ. 2011ರ ಜುಲೈನಲ್ಲಿ ಮುಂಬೈನಲ್ಲಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರಿಗೂ ಇವನು ಬೇಕಾಗಿದ್ದ. ಈತನನ್ನು ಪತ್ತೆ ಹಚ್ಚಿದವರಿಗೆ ₹4 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಇವನ ಬಹುತೇಕ ಸಹಚರರೆಲ್ಲ ವಿದೇಶಿ ಸಂಪರ್ಕ ಹೊಂದಿರುವುದರಿಂದ ಇವನಿಗೆ ಐಎಸ್‌ ಸಂಪರ್ಕವೂ ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry